ಕೋಮುವಾದಿ ಸಂಘಟನೆಯಾದ ಹಿಂದೂ ಜಾಗರಣಾ ವೇದಿಕೆಯವರು ಶ್ರೀರಂಗಪಟ್ಟಣದಲ್ಲಿ ಇದೇ ಡಿ.17ರಿಂದ ಡಿ.24ರವರೆಗೆ ಹನುಮ ಮಾಲೆ ಮತ್ತು ಸಂಕೀರ್ತನಾ’ ಯಾತ್ರೆಯನ್ನು ಆಯೋಜಿಸಿದ್ದು, ಈ ಯಾತ್ರೆಯ ಮೂಲಕ ಮುಸಲ್ಮಾನರ ಅಂಗಡಿ ಮತ್ತು ಮನೆಗಳ ಮೇಲೆ ದಾಳಿಗೆ ಸಂಚು ರೂಪಿಸಿ ನಗರದಲ್ಲಿ ಶಾಂತಿ ಭಂಗ ಮಾಡಲು ಯೋಜನೆ ರೂಪಿಸಿದ್ದಾರೆ ಎಂದು ಸೋಶಿಯಲ್ ಡೆಮಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ಆರೋಪಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಇದೇ ಹಿಂದೂ ಜಾಗರಣಾ ವೇದಿಕೆ ಇದೇ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಿ ಮುಸ್ಲಿಂ ಒಬ್ಬರ ಮನೆ ಮೇಲೆ ದಾಳಿ ಮಾಡಿತ್ತು ಮತ್ತು ಜಾಮಿಯಾ ಮಸೀದಿಗೆ ನುಗ್ಗಲು ಆ ಸಂಘಟನೆಯ ಕಿಡಿಗೇಡಿಗಳು ಪ್ರಯತ್ನಿಸಿದ್ದೇ ಅಲ್ಲದೆ ಜಾಮಿಯಾ ಮಸೀದಿಯನ್ನು ಕೆಡವಿ ಮೂಡಲ ಬಾಗಿಲ ಆಂಜನೇಯ ದೇವಸ್ಥಾನ ಮಾಡುತ್ತೇವೆಂದು ಬಹಿರಂಗವಾಗಿ ಘೋಷಣೆಯನ್ನು ಮಾಡಿದ್ದರು. ಅಲ್ಲದೇ ಅಶ್ಲೀಲ ಮತ್ತು ಅವಾಚ್ಯ ಭಾಷೆಯಲ್ಲಿ ಮುಸಲ್ಮಾನರ ಮಾನ, ಪ್ರಾಣ ಹರಣ ಮಾಡುವ ಪ್ರಚೋದನೆಯ ಘೋಷಣೆಗಳನ್ನು ಸಾರ್ವಜನಿಕವಾಗಿ ಕೂಗಲಾಯ್ತು. ಅದರ ಪರಿಣಾಮವಾಗಿ ಮುಸಲ್ಮಾನರ ಅಂಗಡಿ ಮುಗ್ಗಟ್ಟು ಮತ್ತು ಮನೆಗಳ ಮೇಲೆ ಅನಿಯಂತ್ರಿತ ದಾಳಿಗಳಾದವು. ಪೂಜಾ ಸ್ಥಳಗಳ ಸಂರಕ್ಷಣಾ ಕಾಯ್ದೆ 1991 ರ ಪ್ರಕಾರ ಇದೆಲ್ಲವೂ ಕಾನೂನು ಬಾಹಿರ ಮತ್ತು ಶಿಕ್ಷಾರ್ಹ ಅಪರಾಧವಾಗಿರುತ್ತದೆ ಎಂದು ವಿವರಿಸಿದರು.
ಸೌಹಾರ್ದತೆ ಹಾಳು ಮಾಡುವ ಯತ್ನ
ಈ ಬಾರಿಯು ಹನುಮ ಜಯಂತಿ ಆಚರಣೆಯ ಸಂದರ್ಭದಲ್ಲೂ, ಹಿಂದೂ ಜಾಗರಣಾ ವೇದಿಕೆಯು ಮಸೀದಿಯನ್ನು ಕೆಡಹುವ ಮಂದಿರ ಕಟ್ಟುವ ಘೋಷಣೆಯೊಂದಿಗೆ ಮಾಲಾಧಾರಣೆ-2023 ಕಾರ್ಯಕ್ರಮವನ್ನು ಆಯೋಜಿಸಿದೆ ಅವರ ಕರಪತ್ರದಲ್ಲಿಯೇ “ಮತಾಂಧ ಟಿಪ್ಪುವಿನ ಆಕ್ರಮಣಕ್ಕೆ ಒಳಗಾದ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನದ ಪುನರ್ ನಿರ್ಮಾಣ ಸಂಕಲ್ಪಕ್ಕೆ ನಡೆಯುವ ಈ ಜನಾಂದೋಲನದಲ್ಲಿ ಭಾಗವಹಿಸಿ” ಎಂದು ಜನರಿಗೆ ಕರೆ ಕೊಡುತ್ತಾ ಶಾಂತವಾಗಿರುವ ಶ್ರೀರಂಗಪಟ್ಟಣ ಮತ್ತು ರಾಜ್ಯದಲ್ಲಿ ಸೌಹಾರ್ದತೆಯನ್ನು ಹಾಳು ಮಾಡುವ ಹಾಗೂ ಜನಾಂಗೀಯ ಗಲಭೆ ಹೆಚ್ಚಿಸುವ ಪ್ರಯತ್ನಗಳನ್ನು ಹಿಂದೂ ಜಾಗರಣಾ ವೇದಿಕೆಯು ಮಾಡುತ್ತಿದೆ ಎಂದು ದೂರಿದರು.
ಹಣಕೊಟ್ಟು ಜನರನ್ನು ಕರೆತರುತ್ತಿದ್ದಾರೆ
ಶ್ರೀರಂಗಪಟ್ಟಣ ಹಾಗೂ ರಾಜ್ಯದಲ್ಲಿ ಕೋಮುಗಲಭೆ ಸೃಷ್ಟಿ ಮಾಡುವುದು ಇವರ ಉದ್ದೇಶವಾಗಿದೆ. ಮಸೀದಿಯನ್ನು ಕೆಡವಿ ಶಾಂತಿ ಸುವ್ಯವಸ್ಥೆಯನ್ನು ಹಾಳುಮಾಡಲು ಉದ್ದೇಶದಿಂದ ಬೇರೆ ಜಿಲ್ಲೆಗಳಿಂದ ಹಣ ಕೊಟ್ಟು ಜನರನ್ನು ಕರೆಸಿ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ. ಆದ್ದರಿಂದ ಹಿಂದೂ ಜಾಗರಣಾ ವೇದಿಕೆಯ ಶ್ರೀರಂಗಪಟ್ಟಣದ ಡಿಸೆಂಬರ್ 24 ರ ಕಾರ್ಯಕ್ರಮಕ್ಕೆ ಅವಕಾಶ ನೀಡದೆ, ಈ ಸಂಘಟನೆಯ ಮೇಲೆ ಹಾಗೂ ಅವರ ಚಟುವಟಿಕೆಗಳ ಮೇಲೆ ನಿಷೇಧ ಹೇರಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ನಾವು ಸರ್ಕಾರ ಮತ್ತು ಜಿಲ್ಲಾಡಳಿತವನ್ನು ಈ ಮೂಲಕ ಅಗ್ರಹಿಸುತ್ತೇವೆ ಎಂದರು.
ಈಗಾಗಲೇ ಕೋಮು ಸಂಘರ್ಷದ ಉದ್ದೇಶದಿಂದಲೇ ಪ್ರಚೋದನಕಾರಿ ಹೇಳಿಕೆ, ಕರಪತ್ರ, ವಾಟ್ಸಾಪ್ ಸಂದೇಶ, ಫೇಸ್ ಬುಕ್ ಪ್ರಚಾರ, ಮೊಬೈಲ್ ಮೆಸೇಜ್ ಗಳು ಮತ್ತು ಮುಸ್ಲಿಂ ದ್ವೇಷದ ಘೋಷಣೆ ಹಾಗೂ ಭಾಷಣಗಳನ್ನು ಮಾಡುತ್ತಿರುವ ಮತ್ತು ಈ ಕಾರ್ಯಕ್ರಮದ ನೆಪದಲ್ಲಿ ಇದೆಲ್ಲವನ್ನು ಮಾಡಲಿರುವವರ ಮೇಲೆ ರಾಜ್ಯದ ಶಾಂತಿ ಸುವ್ಯವಸ್ಥೆ ಕದಡುವುದು ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಹಲ್ಲೆ, ಕೊಲೆ, ಅತ್ಯಾಚಾರಗಳ ಬೆದರಿಕೆ ಹಾಕುವುದು, ಧಾರ್ಮಿಕ ಕೇಂದ್ರಗಳ ಮೇಲೆ ದಾಳಿ, ಆ ಮೂಲಕ ದೇಶದ ಆಂತರಿಕ ಭದ್ರತೆಗೆ ಆತಂಕವನ್ನುಂಟು ಮಾಡುವ ಭಯೋತ್ಪಾದಕ ಕೃತ್ಯಗಳನ್ನು ಈಗಾಗಲೇ ಮಾಡಿರುವ ಮತ್ತು ಈ ಕಾರ್ಯಕ್ರಮದ ನೆಪದಲ್ಲಿ ಮಾಡಲಿರುವವರನ್ನು ಪತ್ತೆ ಹಚ್ಚಿ ಅವರ ಮೇಲೆ ದೂರು ದಾಖಲಿಸಿಕೊಂಡು, ಅವರನ್ನು ಬಂಧಿಸಬೇಕೆಂದು ಅಪರ ಪೊಲೀಸ್ ಮಹಾನಿರ್ದೇಶಕರಲ್ಲಿ ದೂರು ನೀಡಿದ್ದೇವೆ, ಜನಸಾಮಾನ್ಯರು ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಹನುಮ ಜಯಂತಿ ಮಾಡಲು ಸೂಕ್ತ ನಿಬಂಧನೆಗಳೊಂದಿಗೆ ಆಚರಣೆಗೆ ಅವಕಾಶ ಮಾಡಿಕೊಡಬೇಕೆಂದು ಕೂಡ ಅವರಲ್ಲಿ ಮನವಿ ಮಾಡಿದ್ದೇವೆ ಎಂದರು.
ಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ, ಮುಖಂಡರಾದ ಅಮ್ಜದ್ ಖಾನ್, ಸಾದತ್ ಪಾಷ, ಮುಕ್ತರ್ ಅಹಮದ್, ಮಹಮದ್ ತಾಹೀರ್ ಉಪಸ್ಥಿತರಿದ್ದರು.




