ಮಂಡ್ಯದ ಕೆ.ವಿ. ಶಂಕರ ಗೌಡ ಹಾಗೂ ಚಿಕ್ಕಮಗಳೂರಿನ ಎಚ್.ಜಿ. ಗೋವಿಂದೇಗೌಡರು ರಾಜಕಾರಣದಲ್ಲಿದ್ದು ಮಾಡಿದ ಸೇವೆಯನ್ನು ರಾಜ್ಯದ ಜನರು ಇನ್ನೂ ನೆನಪು ಮಾಡಿಕೊಳ್ಳುತ್ತಿರುವುದು ಸಂತಸದ ವಿಷಯ ಎಂದು ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಶ್ಲಾಘಿಸಿದರು.
ಮಂಡ್ಯದ ಡಾ.ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಹನಕೆರೆ ಎಂ. ಶ್ರೀನಿವಾಸ್ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಎಂ. ಶ್ರೀನಿವಾಸ್ 73 ಅರಸಮ್ಮ ಮೆಣಸೇಗೌಡ ಕೃಷಿ ಪ್ರಶಸ್ತಿ ಮತ್ತು ಎಂ.ಶ್ರೀನಿವಾಸ್ ಸಮಾಜ ಸೇವಾ ಪ್ರಶಸ್ತಿ ಪ್ರದಾನ ನೆರವೇರಿಸಿ ಅವರು ಮಾತನಾಡಿದರು.
ನಾನು ಶಿಕ್ಷಣ ಕ್ಷೇತ್ರದ ಸ್ಕೌಟ್ ಮತ್ತು ಗೈಡ್ಸ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ನಾನು ಬೀದರ್, ಬೆಳಗಾಂ, ಮಂಗಳೂರು, ಚಾಮರಾಜನಗರ ಸೇರಿದಂತೆ ರಾಜ್ಯದ ಎಲ್ಲೆಡೆ ಹೋದರೂ ಜನರು ನಿತ್ಯ ಸಚಿವ ಕೆ.ವಿ. ಶಂಕರಗೌಡ ಹಾಗೂ ಮಾಜಿ ಶಿಕ್ಷಣ ಸಚಿವ ಎಚ್.ಜಿ.ಗೋವಿಂದೇಗೌಡರ ಹೆಸರನ್ನು ಈಗಲೂ ನೆನಪಿಸಿ ಕೊಳ್ಳುತ್ತಾರೆ. ಮಂಡ್ಯ ಜನರು ಎಂದಿಗೂ ಸತ್ಯದ ಪರ. ಅವರು ಹಣ,ಜಾತಿ ಹಿಂದೆ ಹೋದವರಲ್ಲ. ಸುಮಲತಾ ಅಂಬರೀಶ್ ರವರು ಈ ಕ್ಷೇತ್ರದಿಂದ ಸಂಸದರಾಗಿದ್ದು,ಮಂಡ್ಯದ ಜನರು ಅವರು ಯಾವ ಜಾತಿ ಎಂದು ತಿಳಿದು ಆಯ್ಕೆ ಮಾಡಲಿಲ್ಲ ಎಂದರು.
ಜಯಪ್ರಕಾಶ್ ಗೌಡರವರು ಹಳ್ಳಿಯ ಸೊಗಡಿನ ವಾತಾವರಣದಲ್ಲಿ ಬೆಳೆದವರು. ತಮ್ಮ ವ್ಯಕ್ತಿತ್ವದಿಂದ ಉತ್ತಮ ಹೆಸರನ್ನು ಸಂಪಾದನೆ ಮಾಡಿದ್ದಾರೆ. ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರೆ, ಅದರ ಸ್ಥಾನ ಮತ್ತಷ್ಟು ಎತ್ತರಕ್ಕೆ ಏರುತ್ತಿತ್ತು .ಎಂ ಶ್ರೀನಿವಾಸ್ ರವರಿಗೆ 73 ವರ್ಷ ವಯಸ್ಸಾಗಿದ್ದು, ಅವರದು ಧರ್ಮರಾಯನ ರೀತಿಯ ನಡೆ. ಈ ದಿನದ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲೆಡೆಯಿಂದ ಗಣ್ಯ ವ್ಯಕ್ತಿಗಳೂ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನರು ಬಂದಿದ್ದಾರೆ. ಇವರೆಲ್ಲ ಶ್ರೀನಿವಾಸ್ ರವರು ಸಂಪಾದಿಸಿರುವ ಆಸ್ತಿ ಎಂದರು.
ಮಂಡ್ಯದ ಜನರು ಎಂ. ಶ್ರೀನಿವಾಸ್ ಅವರಂತಹ ಸಜ್ಜನ ರಾಜಕಾರಣಿಯನ್ನು ರಾಜಕೀಯ ಕ್ಷೇತ್ರಕ್ಕೆ ನೀಡಿದ್ದಾರೆ. ಸಜ್ಜನ ರಾಜಕಾರಣಿಗಳಾದ ಬಂದೀಗೌಡ, ಎಸ್.ಎಂ. ಲಿಂಗಪ್ಪ, ಕೆ.ವಿ. ಶಂಕರಗೌಡ, ಎಚ್.ಡಿ. ಚೌಡಯ್ಯ ಮೊದಲಾದ ಮಹಾನ್ ನಾಯಕರ ಜೊತೆ ಕೆಲಸ ಮಾಡುವ ಅವಕಾಶ ನನಗೆ ಲಭಿಸಿದ್ದು ಪುಣ್ಯ. ಮಂಡ್ಯದಲ್ಲಿ ಧರಣಿ ನಡೆಯುತ್ತಿದೆ ಎಂದರೆ ಇಡೀ ದೇಶವೇ ಮಂಡ್ಯದ ಕಡೆ ಗಮನ ಹರಿಸುತ್ತಿತ್ತು. ಮಂಡ್ಯ ಜಿಲ್ಲೆ ವಿವೇಕ ಬೆಳೆಸಿಕೊಳ್ಳುವ ಜನರಿಗೆ ನಾಯಕತ್ವ ಕೊಡುತ್ತಾರೆ. ಚಲುವರಾಯಸ್ವಾಮಿ ಅವರ ಬಗ್ಗೆ ನನಗೆ ಭರವಸೆ ಇದೆ ಎಂದರು.
ಚಲುವರಾಯಸ್ವಾಮಿ ಅವರು ಜಿಲ್ಲಾ ಪಂಚಾಯತ್ ಸದಸ್ಯರಾಗಿ ಬಹಳ ಕಷ್ಟದಿಂದ ರಾಜಕಾರಣ ಆರಂಭಿಸಿದರು. ಎಸ್.ಡಿ. ಜಯರಾಮ್ ಅವರಂತಹ ಒಳ್ಳೆಯ ಸ್ನೇಹಿತರು ಅವರಿಗೆ ಸಿಕ್ಕಿದ್ದರು. ಎಂ ಶ್ರೀನಿವಾಸ ಅವರು ನಿಮ್ಮಗಳ ಕೃಪೆಯಿಂದ ವಿಧಾನಸೌಧದ ಮೆಟ್ಟಿಲೇರಿದ್ದರು. ಜಿ ಮಾದೇಗೌಡರು ಸುಪ್ರೀಂಕೋರ್ಟ್ ಕಾವೇರಿ ವಿಚಾರದಲ್ಲಿ ಯಾವುದೇ ತೀರ್ಪು ನೀಡಿದರೂ ಅವರು ಕಾವೇರಿ ವಿಚಾರದಲ್ಲಿ ಎಂದಿಗೂ ರಾಜಿ ಆಗಲೇ ಇಲ್ಲ ಎಂದರು.
ರಾಜ್ಯದಲ್ಲಿ ಎಲ್ಲೆಡೆ ಜಾತಿ ಇದೆ ಎಂದು ಹೇಳುತ್ತಾರೆ. ಕನಕಪುರ ವಿಧಾನಸಭಾ ಕ್ಷೇತ್ರದಿಂದ ಆರು ಬಾರಿ ಜನರು ನನ್ನನ್ನು ಆರಿಸಿ ಕಳುಹಿಸಿದರು. ಕನಕಪುರದಲ್ಲಿ ನನ್ನ ಜಾತಿಯ 25-30 ಮನೆ ಇರಬಹುದು. ಆದರೆ ನನ್ನನ್ನು ಆರು ಬಾರಿ ಪ್ರೀತಿಯಿಂದ ಆರಿಸಿ ಕಳಿಸಿದರು ಎಂದರೆ ಜಾತಿ ಎಲ್ಲಿದೆ ಎಂಬುದನ್ನು ನೀವು ತಿಳಿಯಬೇಕು. ನಮ್ಮ ಜನರು ಒಳಗೊಂದು ಹೊರಗೊಂದು ಮಾಡುವವರಲ್ಲ. ಆದರೆ ಇಂದಿನ ರಾಜಕಾರಣಿಗಳು ಬೆಳಿಗ್ಗೆ ಒಂದು ಪಕ್ಷ ಸಾಯಂಕಾಲ ಒಂದು ಪಕ್ಷ ಏಕೆ ಬದಲಾವಣೆ ಮಾಡುತ್ತಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ. ಪ್ರೊ. ನಂಜುಂಡಸ್ವಾಮಿ ಅವರು ವಿಧಾನ ಸಭೆಯಲ್ಲಿ ಮಾತನಾಡುವಾಗ ಮುಖ್ಯಮಂತ್ರಿ ಸೇರಿದಂತೆ ಎಲ್ಲಾ ಸಚಿವರು ಅವರ ಮಾತನ್ನು ಆಲಿಸುತ್ತಿದ್ದರು.ಇಂದು ರೈತ ಸಂಘದ ಮಾರ್ಗದರ್ಶನ ಹಿಂದೆಂದಿಗಿಂತಲೂ ಈಗ ಪ್ರಸ್ತುತವಾಗಿದೆ ಎಂದರು.
ರೈತ ಸಂಘದ ಕೆ.ಆರ್.ಪೇಟೆಯ ರಾಜೇಗೌಡ ಅವರಿಗೆ ಅರಸಮ್ಮ ಮೆಣಸೇಗೌಡ ಕೃಷಿ ಪ್ರಶಸ್ತಿ ಹಾಗೂ ಮೈಸೂರಿನ ತಲಕಾವೇರಿ ಮಹಿಳಾ ಶಿಕ್ಷಣ ಸಂಸ್ಥೆಯ ನಳಿನಿ ತಿಮ್ಮಯ್ಯ ಅವರಿಗೆ ಎಂ.ಶ್ರೀನಿವಾಸ ಸೇವಾ ಪ್ರಶಸ್ತಿ ನೀಡಿರುವುದು ಪ್ರಶಸ್ತಿಯ ಮೌಲ್ಯವನ್ನು ಹೆಚ್ಚಳ ಮಾಡಿದ್ದು, ಮಂದೆ ಇವರಿಬ್ಬರಿಗೂ ಪದ್ಮಶ್ರೀ ಪ್ರಶಸ್ತಿ ಲಭಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ನೆರವೇರಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ರಾಮಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಗಣಿಗ ರವಿಕುಮಾರ್,ಮಾಜಿ ಶಾಸಕ ಎಂ. ಶ್ರೀನಿವಾಸ್ ಪ್ರೊ. ಜಯಪ್ರಕಾಶ್ ಗೌಡ, ಜನತಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ಎಸ್. ವಿಜಯ್ ಆನಂದ್,ಎಂ. ಶ್ರೀನಿವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಿ.ಶಿವರಾಜು, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ, ಮಿತ್ರ ಫೌಂಡೇಶನ್ ಅಧ್ಯಕ್ಷ ಬೂಕನಕೆರೆ ವಿಜಯ್ ರಾಮೇಗೌಡ, ಜಿ.ಪಂ.ಮಾಜಿ ಸದಸ್ಯ ಯೋಗೇಶ್ ಮತ್ತಿತರರಿದ್ದರು.




