ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಗಳು ನನ್ನ ಗೆಲುವಿಗೆ ಪೂರಕವಾಗಿದೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಹೇಳಿದರು.
ಕೆ.ಆರ್.ನಗರ ತಾಲೂಕಿನ ನಾನಾ ಗ್ರಾಮ ಪಂಚಾಯತ್ ಗಳಲ್ಲಿ ಚುನಾವಣಾ ಪ್ರಚಾರ ನಡೆಸಿದ ಸಂದರ್ಭದಲ್ಲಿ ಮಾತನಾಡಿ, ಸರ್ಕಾರದ ಜನಪರ ಆಡಳಿತ ಜಿಲ್ಲೆಯ ಎಲ್ಲಾ ನಾಯಕರ ಸಂಘಟಿತ ಪ್ರಚಾರದ ಜೊತೆಗೆ ಜಿಲ್ಲೆಯ ಜನರು ನನ್ನ ಮೇಲೆ ತೋರಿಸುತ್ತಿರುವ ಪ್ರೀತಿ ವಿಶ್ವಾಸ ಗೆಲುವಿನ ವಿಶ್ವಾಸವನ್ನು ಹೆಚ್ಚಿಸಿದೆ ಎಂದರು.
ಬಹುತೇಕ ಜಿಲ್ಲೆಯ ಎಲ್ಲಾ ಹಳ್ಳಿಗಳಿಗೆ ಭೇಟಿ ನೀಡಿ ಗ್ರಾಮೀಣ ಜನತೆಯ ನಾಡಿಮೀಡಿತ ತಿಳಿದಿದ್ದೇನೆ. ಅವರೊಂದಿಗೆ ಟೀ ಕುಡಿದು, ಊಟ ಮಾಡಿ ಅವರ ಕಷ್ಟನಷ್ಟಗಳನ್ನು ಆಲಿಸಿದ್ದೇನೆ. ಅವರ ಬೇಕುಬೇಡಗಳ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡಿದ್ದು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ವಿಶೇಷವಾಗಿ ಯೋಜನೆಯೊಂದನ್ನು ರೂಪಿಸಿ ಅನುಷ್ಠಾನ ಗೊಳಿಸುತ್ತೇನೆ ಎಂದರು.
ಅಭಿವೃದ್ಧಿಯೊಂದೇ ನನ್ನ ಅಜೆಂಡಾ. ಜನಸೇವೆಯೇ ನನ್ನ ಗುರಿ. ಚುನಾವಣೆಗೆ ಹೊಸಬನಿರಬಹುದು. ಆದರೆ ರಾಜಕೀಯಕ್ಕೆ ಅಲ್ಲ. ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ನಾನು ಮತಯಾಚಿಸುತ್ತಿದ್ದೇನೆ. ಮಹಿಳೆಯರು, ಯುವಕರಾದಿಯಾಗಿ ಎಲ್ಲರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ನನ್ನ ಗೆಲುವು ನಿಶ್ಚಿತ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.
ರೈತರ ಕಲ್ಯಾಣಕ್ಕೆ, ಮಹಿಳೆಯರ ಸಬಲೀಕರಣಕ್ಕೆ, ಸಂವಿಧಾನದ ಉಳಿವಿಗಾಗಿ, ಜನಸಾಮಾನ್ಯರ ಜೀವನಮಟ್ಟ ಸುಧಾರಣೆಗೆ ಕಾಂಗ್ರೆಸ್ 25 ಭರವಸೆಗಳನ್ನು ಘೋಷಿಸಿದೆ. ಈ ಘೋಷಣೆಗಳು ನನ್ನ ಗೆಲುವಿಗೆ ವರದಾನವಾಗಲಿದೆ ಎಂದು ಹೇಳಿದರು.
ಶಾಸಕ ರವಿಶಂಕರ್, ಕಾಂಗ್ರೆಸ್ ವಕ್ತಾರೆ ಭವ್ಯ ನರಸಿಂಹಮೂರ್ತಿ, ಜಿಪಂ ಮಾಜಿ ಸದಸ್ಯರಾದ ಸಿ.ಪಿ.ರಮೇಶ್ ಸೇರಿದಂತೆ ಸ್ಥಳೀಯ ಮುಖಂಡರು ಕಾರ್ಯಕರ್ತರು ಇದ್ದರು.




