Friday, November 20, 2026

ಪ್ರಾಯೋಗಿಕ ಆವೃತ್ತಿ

ಬಸವಣ್ಣನ ಆದರ್ಶ – ಚಿಂತನೆ ಅಳವಡಿಸಿಕೊಳ್ಳುವುದು ಅಗತ್ಯ : ಡಾ.ಕುಮಾರ

ಜಗಜ್ಯೋತಿ ಬಸವಣ್ಣನವರ ಕೊಡುಗೆ ಸಮಾಜಕ್ಕೆ ಅನನ್ಯವಾಗಿದೆ. ಅವರ ಮೌಲ್ಯ ಮತ್ತು ಚಿಂತನೆಗಳು ಸಾರ್ವತ್ರಿಕವಾಗಿ ಒಪ್ಪಿಕೊಳ್ಳುವಂತಹದ್ದಾಗಿದ್ದು, ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಬಸವಣ್ಣನವರ ಚಿಂತನೆ ಹಾಗೂ ಮೌಲ್ಯಾದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಕುಮಾರ ತಿಳಿಸಿದರು.

ಮಂಡ್ಯ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಕರ್ನಾಟಕ ಸಾಂಸ್ಕೃತಿಕ ನಾಯಕರಾದ ಶ್ರೀ ಜಗಜ್ಯೋತಿ ಬಸವಣ್ಣನವರ ಭಾವಚಿತ್ರವನ್ನು ಅನಾವರಣಗೊಳಿಸಿ, ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಸರ್ಕಾರದ ಆದೇಶದಂತೆ ಜಿಲ್ಲಾದ್ಯಂತ ಎಲ್ಲಾ ಸರ್ಕಾರಿ ಕಚೇರಿಯಲ್ಲಿ ವಿಶ್ವಗುರು ಹಾಗೂ ಕರ್ನಾಟಕದ ಸಾಂಸ್ಕೃತಿಕ ನಾಯಕರಾದ ಶ್ರೀ ಜಗಜ್ಯೋತಿ ಬಸವಣ್ಣನವರ ಭಾವಚಿತ್ರವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂದರು.

“ಕಾಯಕವೇ ಕೈಲಾಸ” ಎಂಬ ಬಸವಣ್ಣನವರ ನುಡಿಯಂತೆ ಕಾಯಕದ ಮಹತ್ವವನ್ನು ಅರಿತು ಪ್ರತಿಯೊಬ್ಬರು ಶ್ರಮಜೀವಿಯಾಗಿ ಸಮಾಜದ ಅಭಿವೃದ್ಧಿಗೆ ಕಾರಣಕರ್ತರಾಗಬೇಕು. ಕಾಯಕ ಮಾಡುವಾಗ ಪಾರದರ್ಶಕತೆ ಹಾಗೂ ಪ್ರಾಮಾಣಿಕತೆಯಿಂದಿರಬೇಕು ಎಂಬುದು ಇದರ ಉದ್ದೇಶವಾಗಿದೆ ಎಂದರು.

12 ನೇ ಶತಮಾನದಲ್ಲಿ ಮೂಢನಂಬಿಕೆಗಳನ್ನು ಹೋಗಲಾಡಿಸಲು ಹಾಗೂ ಜಾತಿರಹಿತ ಸಮಾಜವನ್ನು ನಿರ್ಮಾಣ ಮಾಡಲು ಬಸವಣ್ಣನವರು ಶ್ರಮಿಸಿದರು. ಜಾತಿಪದ್ಧತಿಯನ್ನು ಹೋಗಲಾಡಿಸಿ ಸಮಾನ ಸಮಾಜವನ್ನು ನಿರ್ಮಿಸಲು ಅಂತರ್ಜಾತಿ ವಿವಾಹಗಳ ಮೂಲಕ ಕಲ್ಯಾಣ ಕ್ರಾಂತಿಯನ್ನು ಉಂಟು ಮಾಡಿದರು. ಇಂತಹ ಮಹಾನ್ ವ್ಯಕ್ತಿಯ ವಚನಗಳನ್ನು ಸ್ಮರಿಸಬೇಕು ಎಂದು ತಿಳಿಸಿದರು.

ವ್ಯಕ್ತಿಯು ಹೇಗಿರಬೇಕು ಹಾಗೂ ವ್ಯಕ್ತಿತ್ವವನ್ನು ಹೇಗೆ ಸರ್ವಾಂಗೀಣವಾಗಿ ರೂಪಿಸಿಕೊಳ್ಳಬೇಕು ಎಂಬ ಬಗೆಯನ್ನು ಬಸವಣ್ಣನವರು ತಮ್ಮ ಪ್ರಮುಖ ವಚನಗಳಲ್ಲಿ ತಿಳಿಸಿದ್ದಾರೆ. “ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ, ಇದೇ ಅಂತರಂಗಶುದ್ದಿ, ಇದೇ ಬಹಿರಂಗ ಶುದ್ಧಿ, ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ” ಎಂಬ ವಚನದಲ್ಲಿರುವ ಸಪ್ತಸೂತ್ರವನ್ನು ಜನರು ಅಳವಡಿಸಿಕೊಳ್ಳಬೇಕು ಎಂದರು.

ಅಶ್ವರೂಢ ಬಸವೇಶ್ವರ ಪ್ರತಿಮೆ ಸ್ಥಾಪನೆಗೆ ಆಗ್ರಹ

ಮಂಡ್ಯ ಜಿಲ್ಲಾಧಿಕಾರಿ ಕಚೇರಿಯ ಕಾವೇರಿ ಉದ್ಯಾನದಲ್ಲಿ ಬಹುವರ್ಷಗಳ ಬೇಡಿಕೆಯಾಗಿರುವ ಅಶ್ವರೂಢ ಬಸವೇಶ್ವರ ಪ್ರತಿಮೆ ನಿರ್ಮಾಣ ಆಗಬೇಕಿದೆ ಎಂದು ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಮಂಜುನಾಥ್‌ ಬೆಟ್ಟಹಳ್ಳಿ ಒತ್ತಾಯಿಸಿದರು.

ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವೇಶ್ವರ ಭಾವಚಿತ್ರಗಳನ್ನು ಅಳವಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇನ್ನಾದರೂ ರಾಜ್ಯ ಸರ್ಕಾರಕ್ಕೆ ಜಿಲ್ಲಾಡಳಿತ ಮೂಲಕ ಒತ್ತಡ ಹೇರಿ, ಅಶ್ವಾರೂಢ ಬಸವೇಶ್ವರರ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಲಿ ಎಂದರು.

ಸಮಾಜವನ್ನು ಬೇಧ ಭಾವ ಮಾಡದೆ ಯಾವ ರೀತಿ ಕಾಣಬೇಕು ಎಂಬ ವೈಖರಿಯನ್ನು ಬಸವಣ್ಣನವರು “ದಯವಿಲ್ಲದ ಧರ್ಮವಾವುದಯ್ಯ? ದಯವೇ ಬೇಕು ಸರ್ವ ಪ್ರಾಣಿಗಳೆಲ್ಲರಲ್ಲಿ! ದಯವೇ ಧರ್ಮದ ಮೂಲವಯ್ಯ. ಕೂಡಲಸಂಗಯ್ಯನಂತಲ್ಲದೊಲ್ಲ ಕಂಡಯ್ಯ” ಹಾಗೂ “ಇವನಾರವ ಇವನಾರವ ಇವನಾರವನೆಂದೆನಿಸದೆನಯ್ಯ, ಇವನಮ್ಮವ ಇವನಮ್ಮವ ಇವನಮ್ಮವನೆಂದೆನಿಸಯ್ಯ” ಎಂಬ ವಚನಗಳ ಮೂಲಕ ಎಲ್ಲರೂ ನಮ್ಮವರೇ ಎಂದು ತಿಳಿಯಬೇಕು ಎಂದಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಡಾ. ಬಿ. ಆರ್. ಅಂಬೇಡ್ಕರ್ ರವರು ರಚಿಸಿರುವ ಹಾಗೂ ಪ್ರಸ್ತುತ ಭಾರತ ಸಂವಿಧಾನದಲ್ಲಿರುವ ಸಾಮಾಜಿಕ ನ್ಯಾಯವನ್ನು ಬಸವಣ್ಣನವರು ಅವರ ಕಾಲದಲ್ಲಿಯೇ ತಮ್ಮ ವಚನಗಳ ಮೂಲಕ ಸಮಾಜಕ್ಕೆ ತಿಳಿಸಿದ್ದಾರೆ ಎಂದು ಹೇಳಿದರು.

ಬಸವಣ್ಣನವರ ಮೌಲ್ಯಗಳು, ಚಿಂತನೆಗಳು ಸೂರ್ಯ ಚಂದ್ರ ಇರುವವರೆಗೂ ಹಾಗೂ ಸರ್ವಕಾಲಕ್ಕೂ ದಾರಿದೀಪವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಪಠ್ಯ ಪುಸ್ತಕದ ಹೊರತಾಗಿ, ಪ್ರತಿ ಮನೆಗಳಲ್ಲೂ ಬಸವಣ್ಣನ ವಿಚಾರಧಾರೆಗಳನ್ನು ತಿಳಿಸುವ ಕಾರ್ಯ ಮಾಡಬೇಕು ಎಂದರು.

ನಮ್ಮ ನಾಡಿನ ಕಲೆ, ಸಂಸ್ಕೃತಿಯನ್ನು ಉಳಿಸುವಂತಹ ಕಾರ್ಯವನ್ನು ಬಸವಣ್ಣನವರು ತಮ್ಮ ವಚನಗಳ ಮೂಲಕ ಮಾಡಿದ್ದಾರೆ. ಬಸವಣ್ಣನವರ ಭಾವಚಿತ್ರವನ್ನು ಕೇವಲ ಗೋಡೆಗೆ ಸೀಮಿತವಾಗಿಸದೆ ಪ್ರತಿಯೊಬ್ಬರು ತಮ್ಮ ಆತ್ಮ ಮತ್ತು ಮನಸ್ಸಿನಲ್ಲಿ ಅವರ ವ್ಯಕ್ತಿತ್ವವನ್ನು ಅಳವಡಿಸಿಕೊಳ್ಳೋಣ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಹೆಚ್.ಎಲ್. ನಾಗರಾಜು ಮಾತನಾಡಿ, ರಾಜ್ಯ ಸರ್ಕಾರವು ಜಗಜ್ಯೋತಿ ಬಸವೇಶ್ವರರನ್ನು ಸಾಂಸ್ಕೃತಿಕ ರಾಯಭಾರಿ ಎಂದು ಜಗತ್ತಿಗೆ ಘೋಷಣೆ ಮಾಡುವುದರ ಮುಖಾಂತರ ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರವನ್ನು ಅಳವಡಿಸಿಕೊಂಡು ಪ್ರಜ್ಞಾಪೂರ್ವಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು.

ಪ್ರಸ್ತುತ ಸಂವಿಧಾನದಲ್ಲಿರುವ ಮೂಲತತ್ವಗಳನ್ನು ಬಸವಣ್ಣನವರು 12 ನೇ ಶತಮಾನದಲ್ಲಿಯೇ ವೈಜ್ಞಾನಿಕ ಚಿಂತನೆ ನಡೆಸಿ, ಅನುಭವ ಮಂಟಪವನ್ನು ಸ್ಥಾಪಿಸಿ ತಮ್ಮ ವಚನಗಳ ಮೂಲಕ ಇಡೀ ನಾಡಿಗೆ ಪ್ರಕಟ ಮಾಡಿ ದಿಟ್ಟ ಹೋರಾಟ ನಡೆಸಿದ್ದಾರೆ. ಪ್ರತಿನಿತ್ಯವೂ ಅವರ ತತ್ವಗಳನ್ನು ಸ್ಮರಣೆ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ. ಶೇಖ್ ತನ್ವಿರ್ ಆಸೀಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್, ಎಸ್.ಬಿ.ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಮೀರಾಶಿವಲಿಂಗಯ್ಯ, ದೇವರಾಜ ಅರಸು ಹಿಂದುಳಿತ ವೇದಿಕೆಯ ಎಲ್.ಸಂದೇಶ್, ಕಾಯಕಯೋಗಿ ಪೌಂಢೇ‍ಷನ್ ಅಧ್ಯಕ್ಷ ಎಂ.ಶಿವಕುಮಾರ್, ವಕೀಲ ಗುರುಪ್ರಸಾದ್, ದಸಂಸ ಮುಖಂಡ ವೆಂಕಟಗಿರಿಯಯ್ಯ, ಶರಣರ ಸಂಘದ ನಂದೀಶ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ