Monday, November 23, 2026

ಪ್ರಾಯೋಗಿಕ ಆವೃತ್ತಿ

ಇಡ್ಲಿ ಮೇಲಿನ ಪ್ರೀತಿಯೂ….. ಕ್ಯಾನ್ಸರ್ ಕಾರಕ ಅಂಶವೂ….!

ಬಿ.ಟಿ. ವಿಶ್ವನಾಥ್

ಇಡ್ಲಿ ಅಂದ್ರೆ ನಂಗೆ ಬಾಳ ಪ್ರೀತಿ. ನಾನು ನನ್ನ ಗೆಳೆಯ ಹೀಗೆ ಬಿಸಿಬಿಸಿ ಇಡ್ಲಿ ಹುಡುಕ್ಕೊಂಡು ಹೋಗ್ತಿದ್ನ ಯಾರೋ ಫೇಸ್ಬುಕ್ಗೂ ಹಾಕಿ ನನ್ನ ಇಡ್ಲಿ ಪ್ರೀತಿಯನ್ನು ಸಾರ್ವಜನಿಕವಾಗಿ ಹರಾಜು ಹಾಕಿದ್ದರು. ಒಮ್ಮೆ ನನ್ ಹೆಂಡ್ತಿ ಊರಿಗೆ ಮಂಡ್ಯದಿಂದ ಹೊತ್ನಂತೆ ಹೊರಡ್ಬೇಕಾದ ಸಂದರ್ಭ ಬಂದಿತ್ತು. ಹೋಗುವಾಗ ಅಲ್ಲೇ ಎಲ್ಲಾದರೂ ಬೀದಿಬದಿಯ ಸಣ್ಣ ಹೋಟೆಲುಗಳಲ್ಲಿ ಬಿಸಿ ಇಡ್ಲಿ ತಿಂದರಾಯ್ತು ಅಂದ್ಕೊಂಡು ಅಲ್ಲಲ್ಲೇ ಕಾರು ನಿಲ್ಲಿಸಿ, ಕೆ ಆರ್ ಪೇಟೆ ದಾಟುವವರೆಗೆ ಸಿಕ್ಕಸಿಕ್ಕ ಹೋಟೆಲುಗಳಲ್ಲಿ ವಿಚಾರಿಸಿದ್ದೇ ವಿಚಾರಿಸಿದ್ದು ಎಲ್ಲಿಯೂ ಪ್ಲಾಸ್ಟಿಕ್ ಹಾಳೆ ಮುಕ್ತ ಇಡ್ಲಿ ಸಿಗಲೆ ಇಲ್ಲ.

ಹಂಗೆ ಹಸ್ಕೊಂಡು ಪ್ರಯಾಣ ಮುಂದುವರಿಸಬೇಕಾಯ್ತು. ಈ ಹೋಟೆಲಿನ ಜನ ತಮ್ಮ ಹೊಟ್ಟೆಪಾಡಿಗಾಗಿ ಬೇರೆಯವರ ಹೊಟ್ಟೆಗಳಿಗೆ ಈ ವಿಷಕಾರಕ ಕ್ಯಾನ್ಸರ್ ಕಾರಕ ಪ್ಲಾಸ್ಟಿಕ್ ಅನ್ನು ತುಂಬಿಸುವ ಕೆಲಸವನ್ನು ಈಗಲೂ ಮುಂದುವರೆಸಿದ್ದಾರೆ. ಪ್ಲಾಸ್ಟಿಕ್ ಹಾಳೆಗಳ ಮೇಲೆ ಇಡ್ಲಿ ಮಾಡುವ ಅಪಾಯದ ಕುರಿತು ನುಡಿಕರ್ನಾಟಕ.ಕಾಂ ಮಾಡಿದ ಸುದ್ದಿ ಓದಿ ಇವೆಲ್ಲ ನೆನಪಾಯಿತು.

ಅಂದಹಾಗೆ ಒಂದೈದು ವರ್ಷಗಳ ಹಿಂದೆ ನಾನು ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ) ನ್ಯಾಯ ಪ್ರಾಧಿಕಾರದ ಸದಸ್ಯನಾಗಿದ್ದಾಗ ಮಂಡ್ಯದ ಪೌರಕಾರ್ಮಿಕರು ಶಾಲೆಗೆ ಹೋಗುವ ತಮ್ಮ ಮಕ್ಕಳಿಗೆ ಊಟದ ಬುತ್ತಿಗೆ ರಸ್ತೆ ಬದಿಯ ಗಾಡಿ ಹೋಟೆಲ್ ಗಳಲ್ಲಿ ಪ್ಲಾಸ್ಟಿಕ್ ಹಾಳೆಗಳ ಮೇಲೆ ಮಾಡಿದ ಇಡ್ಲಿ ಕೊಂಡು ಹಾಕುತ್ತಿದ್ದನ್ನು ನೋಡಿ ನೋವಾಗಿ ನಾನೇ ಸ್ವಯಂ ಅಂದರೆ ಸುಮೋಟೊ ಕಂಪ್ಲೇಂಟ್ ದಾಖಲಿಸಿ ಮಂಡ್ಯ ಜಿಲ್ಲೆಯಾದ್ಯಂತ ಪ್ಲಾಸ್ಟಿಕ್ ಹಾಳೆಗಳ ಮೇಲೆ ಇಡ್ಲಿ ಮಾಡಿ ಮಾರುವುದನ್ನು ನಿಷೇಧಿಸಿ, ಹಾಗೆ ಮಾಡಿದವರಿಗೆ ₹10,000 ದಂಡ ವಿಧಿಸಲು ಆದೇಶ ಮಾಡಿದ್ದು ನೆನಪಾಯಿತು.

ನಗರಸಭೆ, ಪುರಸಭೆ ಮಂಡ್ಯ ಜಿಲ್ಲಾ ಆರೋಗ್ಯ ರಕ್ಷಣಾ ಸಮಿತಿ ಮುಂತಾದವು ಈ ಆದೇಶವನ್ನು ಜಾರಿ ಮಾಡಬೇಕಿತ್ತು. ಆದರೆ ವಿಷಾದವೆಂದರೆ ಅವು ಈಗಲೂ ಈ ಆದೇಶ ಜಾರಿ ಮಾಡುತ್ತಿಲ್ಲ. ಕ್ಯಾನ್ಸರ್ ಕಾರಕ ಪ್ಲಾಸ್ಟಿಕ್ ಬಳಕೆ ಮತ್ತಷ್ಟು ಹೆಚ್ಚಾಗಿದೆ. ಸಣ್ಣ ಪುಟ್ಟ ಹೋಟೆಲ್ ನವರು ಬಿಸಿಸಾರು, ಅನ್ನ, ಮುದ್ದೆಗಳನ್ನು ಈಗಲೂ ಪ್ಲಾಸ್ಟಿಕ್ ಕವರ್ ಗಳಲ್ಲಿ ತುಂಬಿ ಕೊಡುವ ಪರಿಪಾಠ ಇನ್ನೂ ನಿಲ್ಲಿಸಿಲ್ಲ. ನಮ್ಮ ಅಧಿಕಾರ ಅವಧಿಯಲ್ಲಿ ಸಿಡಬ್ಲ್ಯೂಸಿಯಿಂದ ಮಂಡ್ಯ ಜಿಲ್ಲೆಯಾದ್ಯಂತ ಅಂಗಡಿ ಮುಂಗಟ್ಟು ಮಾಲುಗಳಲ್ಲಿ ಸಣ್ಣ ವಯಸ್ಸಿನ ಮಕ್ಕಳಿಗೆ ಸಾಫ್ಟ್ ಡ್ರಿಂಕುಗಳನ್ನು, ಅಂದರೆ ಪೆಪ್ಸಿ, ಕೋಲಾ ಇತ್ಯಾದಿ ಹೆಸರಿನ ಪೇಯಗಳನ್ನು ಮಾರದಂತೆ ನಿಷೇಧಿಸಿ ಮಾಡಿದಲ್ಲಿ ದಂಡ ಹಾಕುವಂತೆ ಆದೇಶ ಪಾಸು ಮಾಡಿದ್ದು ಕೂಡ ನೆನಪಾಯಿತು .

ಅಂತಹ ಆದೇಶ ಮಾಡಿದ್ದಕ್ಕೆ ನನಗಾಗ ಬೆದರಿಕೆ ಕರೆಗಳು ಬಂದಿದ್ದವು. ಆ ಕರೆಗಳ ಹಿಂದೆ ಇಲಾಖೆಯ ಕೆಲವು ಭ್ರಷ್ಟ ನೌಕರರು ಇದ್ದರು. ಭ್ರಷ್ಟರೆಲ್ಲ ಒಂದಾಗಿ ನಾನು ಮತ್ತೆ ಸಿಡಬ್ಲ್ಯೂಸಿ ಗೆ ಬರದಂತೆ ನೋಡಿಕೊಂಡರು. ಆನೆ ಹೋದದ್ದೇ ದಾರಿ ಎಂಬಂತೆ ಸಿಕ್ಕ ಪುಟ್ಟ ಅಧಿಕಾರವನ್ನು ಬಳಸಿಕೊಂಡು ಸಾಮಾಜಿಕ ನ್ಯಾಯ ದೊರಕಿಸಿ ಕೊಡುವ ಆದೇಶಗಳನ್ನು ನಾನು ಎಗ್ಗುಸಿಗ್ಗಿಲ್ಲದೆ ಬರೆದು ಬಿಡುತ್ತಿದ್ದೆ. ನಾನು ಅಂದು ಮಾಡುತ್ತಿದ್ದ ಇಂತಹ ಆದೇಶಗಳನ್ನು ಬಳಸಿಕೊಂಡು ಗೆಳೆಯ ವೆಂಕಟೇಶ್ ಅವರ ಮ್ಯಾಗ್ಜಿನ್ ನಲ್ಲಿ ಕೊಟ್ಟ ಕುದುರೆಯನ್ನು ಏರಲಾರದವನು ವೀರನು ಅಲ್ಲ ಶೂರನೂ ಅಲ್ಲ ಅನ್ನುವ ಶೀರ್ಷಿಕೆಯ ಒಂದು ಕಾಲಂ ಅನ್ನೇ ಸೃಷ್ಟಿಸಿ ಸರಣಿಯಲ್ಲಿ ಬರೆದರು.

ಅಂದಂಗೆ ಮಂಡ್ಯದ ಪೇಟೆ ಬೀದಿಯ ಮಂಜಣ್ಣನ ಹೋಟೆಲ್ ನಲ್ಲಿ ಮೊನ್ನೆ ಬಟ್ಟೆ ಹಾಕಿ ಮಾಡುವ ಬಿಸಿಬಿಸಿ ಹಬೆಯಾಡುವ ಇಡ್ಲಿಯನ್ನು ನಾನು ಮತ್ತು ಗೆಳೆಯ ಧನಂಜಯ್ ಬೆಣ್ಣೆ ಹಾಕಿಸಿಕೊಂಡು ಬಾರಿಸಿದ್ದೇ ಬಾರಿಸಿದ್ದು. ಅಲ್ಲೇ ಪಕ್ಕದ ನಾಗೇಂದ್ರ ಹೋಟಲಿನಲ್ಲಿ ಶುಂಠಿ ಹಾಕಿದ ಬಿಸಿ ಬೆಲ್ಲದ ಟೀ ಸವಿದು ಮನೆಯ ಕಡೆ ಹೆಜ್ಜೆ ಹಾಕುತ್ತಿದ್ದಾಗ ದಾರಿಯಲ್ಲಿ ಸಿಕ್ಕ ನನ್ನ ಪ್ರೀತಿಯ ಹಾರುವ ಗೆಳೆಯನೊಬ್ಬ ಏನಪ್ಪಾ ಬಾಡೂಟದ ಚಳುವಳಿಯ ಮುಂದಾಳು ಹುಲಿ ಹುಲ್ಲು ಹುಡ್ಕೊಂಡು ಬಂದಂಗೆ ಇಡ್ಲಿ ಹುಡಿಕ್ಕಂಡ್ ಬಂದಿದ್ದೀಯಾ ಅಂತ ಕಿಚಾಯಿಸಿದ……..

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ