ಮಳವಳ್ಳಿ ತಾಲ್ಲೂಕಿನಲ್ಲಿ ಪಾಳೇಗಾರರ ಆಳ್ವಿಕೆ ಹಿಂದೆ ನಡೆದಿದೆ, ಪಾಳೇಗಾರ ಎಂದರೇ ನಾಯಕ, ಸ್ವಾಭಿಮಾನಿ ಎಂಬ ಅರ್ಥ ಬರುತ್ತದೆ, ಶಾಸಕ ಪಿ.ಎಂ ನರೇಂದ್ರಸ್ವಾಮಿ ಅವರು ಕ್ಷೇತ್ರದ ಅಭಿವೃದ್ದಿ ಹಾಗೂ ಮೀಸಲಾತಿಗಾಗಿ ಪಾಳೇಗಾರರಂತೆ ಹೋರಾಟ ಮಾಡುತ್ತಿದ್ದಾರೆ ಎಂದು ವಕೀಲ ಜಗದೀಶ್ ಹೇಳಿದರು.
ಮದ್ದೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಶಾಸಕ ಪಿ.ಎಂ ನರೇಂದ್ರಸ್ವಾಮಿ ಮೀಸಲಾತಿಗಾಗಿ ಪಾಳೇಗಾರನಂತೆ ಹೋರಾಟ ಮಾಡುತ್ತಿದ್ದೇನೆಂದು ಹೇಳಿದ್ದಾರೆ, ಅವರು ಕ್ಷೇತ್ರದಲ್ಲಿ ಅಭಿವೃದ್ದಿಯ ಪಾಳೇಗಾರರು ಎನ್ನುವುದನ್ನು ಜನರೇ ಹೇಳುತ್ತಾರೆ. ಅವರು ಮಳವಳ್ಳಿ ದಲಿತ ಸಮುದಾಯ ಬುದ್ದಿವಂತರು ಎನ್ನುವುದು ರಾಜ್ಯಕ್ಕೆ ಗೊತ್ತು, ಕೆಲವರು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ, ಆದರೆ ಜನರಿಗೆ ಯಾವುದು ಸರಿ ಎಂದು ನಿರ್ಧರಿಸುವ ಶಕ್ತಿ ಇದೆ ಎಂದು ಹೇಳಿದರು.
ಎಸ್ಸಿಎಸ್ಟಿ ವಿಭಾಗದ ತಾಲ್ಲೂಕು ಅಧ್ಯಕ್ಷ ಶಾಂತರಾಜು ಮಾತನಾಡಿ, ಸಮಾವೇಶದ ಯಶಸ್ವಿಯನ್ನು ಸಹಿಸಿಕೊಳ್ಳಲು ಸಾಧ್ಯವಾಗದ ಮಾಜಿ ಶಾಸಕರು, ಸಾಮಾಜಿಕ ಜಾಲತಾಣದಲ್ಲಿಅಪಪ್ರಚಾರದಲ್ಲಿ ತೊಡಗಿದ್ದಾರೆ, ಶಾಸಕ ಪಿ.ಎಂ ನರೇಂದ್ರಸ್ವಾಮಿ ಅವರು ಸಾವಿರಾರು ಕೋಟಿ ಅನುದಾನ ತಂದು ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ದಿ ಪಡಿಸುವುದರ ಜೊತೆಗೆ ದಲಿತ ಸಮುದಾಯಕ್ಕೆ ಶಾಸನ ಬದ್ದ ಹಕ್ಕನ್ನು ಕೊಡಿಸಿದ್ದಾರೆ, ಅಭಿವೃದ್ದಿ ಪಡಿಸಲಾಗದೇ ಹಾಗೂ ದಲಿತ ಸಮುದಾಯಕ್ಕೆ ಯಾವುದೇ ಕೊಡುಗೆಯನ್ನು ನೀಡದ ಮಾಜಿ ಶಾಸಕರು, ಸಲ್ಲದ ಆರೋಪಗಳನ್ನು ಮಾಡುತ್ತಿದ್ದು, ಇದೇ ರೀತಿ ಮುಂದುವರೆದರೇ ತಕ್ಕ ಉತ್ತರವನ್ನು ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ತಾ.ಪಂ ಮಾಜಿ ಉಪಾಧ್ಯಕ್ಷ ಸಿ.ಮಾಧು ಮಾತನಾಡಿ, ಸಂವಿಧಾನ ಪ್ರಚಾರ ರಥಯಾತ್ರೆಗೆ ಗೌರವ ಸಲ್ಲಿಸದ ಮಾಜಿ ಶಾಸಕ ಅನ್ನದಾನಿ, ಅಂಬೇಡ್ಕರ್ವರ ಬಗ್ಗೆ ಮಾತನಾಡುತ್ತಿರುವುದು ನಾಚಿಗೇಡಿನ ಸಂಗತಿಯಾಗಿದೆ, ಅಂಬೇಡ್ಕರ್ ಕಾಲೇಜಿನವರು ಅಂಬೇಡ್ಕರ್ ಪುತ್ಥಳಿಯನ್ನು ಕೊಟ್ಟರೂ ಕೂಡ ಉದ್ಘಾಟನೆಗೆ ಕಾಲೇಜಿನವರನ್ನು ಕರೆಯದೇ ಅನ್ನದಾನಿ ಅಪಮಾನ ಮಾಡಿದ್ದಾರೆ. ಸಂವಿಧಾನ ಬದಲಾವಣೆ ಮಾಡುತ್ತೇವೆ ಎನ್ನುವ ಪಕ್ಷವನ್ನು ಸೇರಿಕೊಂಡು ಮಳವಳ್ಳಿ ತಾಲ್ಲೂಕಿನಲ್ಲಿ ದಲಿತರನ್ನು ಒಡೆಯುವ ಪ್ರಯತ್ನ ಮಾಡಿದರೇ ಕ್ಷೇತ್ರದ ಜನರು ಬುದ್ದಿ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಾಂಗ್ರೆಸ್ ಹಿರಿಯ ಮುಖಂಡ ಸಾಗ್ಯ ಕೆಂಪಯ್ಯ ಮಾತನಾಡಿ, ಡಾ. ಬಿ.ಆರ್ ಅಂಬೇಡ್ಕರ್ ಕಾಲೇಜಿನವರು ನೀಡಿದ ಅಂಬೇಡ್ಕರ್ ಪುತ್ಥಳಿಯನ್ನು ತಾನು ತಂದಿರುವುದಾಗಿ ಕ್ಷೇತ್ರದ ಜನರಿಗೆ ಅನ್ನದಾನಿ ಸುಳ್ಳು ಹೇಳಿದ್ದಾರೆ, ಅಂಬೇಡ್ಕರ್ ಪುತ್ಥಳಿ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಚಪ್ಪಲಿ ಹಾಕಿಕೊಂಡು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪನೆ ಮಾಡುವುದರ ಮೂಲಕ ಅಪಮಾನ ಮಾಡಿರುವುದನ್ನು ಪ್ರಶ್ನಿಸಲು ಸಾಧ್ಯವಾಗದವರು ಕ್ಷೇತ್ರದಲ್ಲಿ ದಲಿತರ ಭಾವನೆಗಳ ಮೇಲೆ ಚೆಲ್ಲಾಟವಾಡಲು ಮುಂದಾಗುತ್ತಿದ್ದಾರೆಂದು ಕಿಡಿಕಾರಿದರು.
ಜಿಲ್ಲಾ ಪರಿಷತ್ ಮಾಜಿ ಸದಸ್ಯ ಜಯರಾಜು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಾ.ಬಿ.ಆರ್ ಅಂಬೇಡ್ಕರ್ರವರ ಮೇಲೆ ಅಪಾರವಾದ ಅಭಿಮಾನ ಇರುವುದರಿಂದಲೇ ಸರ್ಕಾರದಿಂದ ರಾಜ್ಯಾದ್ಯಂತ ಸಂವಿಧಾನ ಜಾಗೃತಿ ಅಭಿಯಾನಕ್ಕೆ ಚಾಲನೆ ಕೊಟ್ಟಿದ್ದಾರೆ, ಪಟ್ಟಣಕ್ಕೆ ಬಂದಾಗಲೂ ಕಾರ್ಯಕ್ರಮದಲ್ಲಿಯೇ ಅಂಬೇಡ್ಕರ್ ಪುತ್ಥಳಿಗೆ ಪುಷ್ಪಾರ್ಚನೆ ನೆರೆವೇರಿಸಿ ಗೌರವ ಸಲ್ಲಿಸಿದ್ದಾರೆ, ಆದರೇ ಮಾಜಿ ಶಾಸಕರು, ಪ್ರವಾಸಿ ಮಂದಿರದ ಮುಂದೆ ಮಾಲಾರ್ಪಣೆ ಮಾಡಿಲ್ಲ ಎಂದು ಆರೋಪಿಸುವುದು ಸರಿಯಲ್ಲ, ಒಬ್ಬ ಯುವಕನಿಂದ ಸಾಮಾಜಿಕ ಜಾಲತಾಣದಲ್ಲಿ ಸಲ್ಲದ ಆರೋಪ ಮಾಡಿಸುವುದು ಮಾಜಿ ಶಾಸಕರಿಗೆ ಶೋಭೆ ತರುವುದಿಲ್ಲ, ನೆನ್ನೆ ನಡೆದ ವಿಧಾನಸಭಾ ಅಧಿವೇಶನದಲ್ಲಿ ಸಹಕಾರ ಸಂಘದಲ್ಲಿ ಮೀಸಲಾತಿ ಕಲ್ಪಿಸಿರುವುದು ನರೇಂದ್ರಸ್ವಾಮಿ ಅವರ ಕಾರ್ಯದಕ್ಷತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.
ಗೋಷ್ಠಿಯಲ್ಲಿ ಮುಖಂಡರಾದ ಮಹದೇವಯ್ಯ, ರವೀಂದ್ರ, ಕಿರಣ್, ಶಂಕರ್, ಶಿವಕುಮಾರ್, ಪ್ರಕಾಶ್, ರಘು, ಮಹೇಶ್, ಕುಮಾರ್, ಸತೀಶ್, ಪುಟ್ಟಸ್ವಾಮಿ, ಪ್ರಸಾದ್, ಚೇತನ್, ದೇವು, ಸುರೇಶ್, ಮುದ್ದರಾಜ್ ಹಾಗೂ ಚಿಕ್ಕಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.




