ತೀವ್ರ ಬಿಸಿಲಿನ ಝಳದಿಂದ ಕಾವೇರಿ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬರಗಾಲ ಕಾಣಿಸಿಕೊಂಡಿದ್ದು, ಜಾನುವಾರುಗಳ ಕುಡಿಯುವ ನೀರು ಹಾಗೂ ಅಡಿಗೆ, ತೆಂಗು ಸೇರಿದಂತೆ ತೋಟಗಾರಿಕೆಗಳ ಬೆಳೆಗಳ ರಕ್ಷಣೆಗಾಗಿ ಕೆಆರ್’ಎಸ್ ನಿಂದ ಒಂದು ಕಟ್ಟು ನೀರು ಹರಿಸಬೇಕೆಂದು ಮಂಡ್ಯ ವಿಧಾನಸಭಾ ಕ್ಷೇತ್ರ ಜೆಡಿಎಸ್ ಮುಖಂಡ ಬಿ.ಆರ್.ರಾಮಚಂದ್ರು ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ವರ್ಷಗಳಲ್ಲಿ ಕೆಆರ್’ಎಸ್ ನೀರಿನ ಮಟ್ಟ 78 ಅಡಿಗೆ ತಲುಪಿದ ಸಂದರ್ಭದಲ್ಲಿಯೂ ನಾಲೆಗಳಿಗೆ ನೀರು ಹರಿಸಲಾಗಿದೆ, ಪ್ರಸ್ತುತ ಕನ್ನಂಬಾಡಿಯ ನೀರಿನ ಮಟ್ಟ 90 ಅಡಿಯಿದ್ದು 15 ದಿನಗಳ ಕಾಲ ಒಂದು ಕಟ್ಟುನೀರು ಕೊಡುವ ಮೂಲಕ ಕೆರೆಕಟ್ಟೆಗಳಿಗೆ ನೀರು ತುಂಬಿಸಬೇಕು, ಇದರಿಂದ ಬೋರ್ ವೆಲ್ ಗಳಲ್ಲಿಯೂ ಕೂಡ ನೀರಿನ ಲಭ್ಯತೆ ಸಾಧ್ಯವಾಗಲಿದೆ, ಪ್ರಸ್ತುತ ದಿನಗಳಲ್ಲಿ ಬೋರ್ ವೆಲ್ ಗಳಲ್ಲೂ ನೀರು ಸಿಗದಂತ ಬರದ ಛಾಯೆ ಆವರಿಸಿದ್ದು, ಒಂದು ಕಟ್ಟು ನೀರು ಬಿಡಬೇಕೆಂದರು.
ವಿ.ಸಿ.ನಾಲೆಗಳ ದುರಸ್ತಿ ಕಾರ್ಯ ನಡೆಯುತ್ತಿದ್ದರೆ, ಅದನ್ನು ಕೆಲವು ದಿನಗಳ ಕಾಲ ಸ್ಥಗಿತಗೊಳಿಸಿ ನೀರು ಹರಿಸಬೇಕು, ಒಂದು ವಾರದಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳದಿದ್ದರೆ ಜೆಡಿಎಸ್ ವತಿಯಿಂದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗೋಷ್ಠಿಯಲ್ಲಿ ಮನ್ ಮುಲ್ ಉಪಾಧ್ಯಕ್ಷ ರಘುನಂದನ್, ನಗರಸಭಾ ಸದಸ್ಯ ನಾಗೇಶ್, ಜೆಡಿಎಸ್ ಮುಖಂಡರಾದ ಸಾತನೂರು ಜಯರಾಂ, ಬೂದನೂರು ಸ್ವಾಮಿ, ಮಹಮ್ಮದ್ ಉಪಸ್ಥಿತರಿದ್ದರು.




