ಮಂಡ್ಯ ಮಿಮ್ಸ್ ಆವರಣದಲ್ಲಿ ಮಂಡ್ಯ ವಿಧಿವೈದ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಕೊಠಡಿ ಹಾಗೂ ಶವಾಗಾರ ಕಟ್ಟಡದ ಕಾಮಗಾರಿಗೆ ಸರ್ಕಾರದಿಂದ ಒಟ್ಟು 4 ಕೋಟಿ ರೂ ಹಣ ಮಂಜೂರಾಗಿದೆ ಎಂದು ಕೃಷಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಮಂಡ್ಯ ಮಿಮ್ಸ್ ಆವರಣದಲ್ಲಿ ಇಂದು ಮಂಡ್ಯ ವಿಧಿವೈದ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಕೊಠಡಿ ಹಾಗೂ ಶವಾಗಾರ ಕಟ್ಟಡದ ಕಾಮಗಾರಿಗಳಿಗೆ ಗುದ್ಧಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಮಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಬಹಳ ಅಭಿವೃದ್ಧಿ ಕಾರ್ಯಗಳು ಬಾಕಿ ಇದ್ದು, ಲೋಕಸಭಾ ಚುನಾವಣೆಯ ನಂತರ ಅದನ್ನು ಸಂಪೂರ್ಣಗೊಳಿಸಲಾಗುವುದು. ಅರ್ಧದಲ್ಲೇ ನಿಂತಿದ್ದ ಕ್ಯಾನ್ಸರ್ ಆಸ್ಪತ್ರೆಯನ್ನು 5 ಕೋಟಿ ರೂ ವೆಚ್ಚದಲ್ಲಿ 12 ತಿಂಗಳೊಳಗೆ ಮರು ಪ್ರಾರಂಭ ಮಾಡಲಾಗುವುದು. ಒಂದು ವರ್ಷದೊಳಗಾಗಿ ಮೆಡಿಕಲ್ ಕಾಲೇಜು ಹಾಗೂ ಆಧುನಿಕ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗುವುದು ಎಂದರು.
ಜಿಲ್ಲಾಧಿಕಾರಿಗಳು ಸಿ.ಎಸ್.ಆರ್ ಅನುದಾನದಡಿ ಸುಲಭ ಶೌಚಾಲಯ ಮತ್ತು ಡಾರ್ಮೆಟರಿ ನಿರ್ಮಿಸಲು ಯೋಜನೆ ರೂಪಿಸಿದ್ದಾರೆ. ಸಾರ್ವಜನಿಕ ಆಸ್ಪತ್ರೆ ಹಿಂದಿರುವ ರಸ್ತೆಯು ಹಾಳಾಗಿದ್ದು, ಶಾಸಕರಾದ ಪಿ. ರವಿಕುಮಾರ್ ಅವರು ಎರಡು ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದಾರೆ ಎಂದರು.
ಸರ್ಕಾರದ ಆದೇಶ ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತಿ ಸಿಇಓ ಅವರು ಬಹಳ ಸಹಕಾರಯುತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಮಂಡ್ಯ ಶಾಸಕ ಪಿ. ರವಿಕುಮಾರ್ ಮಾತನಾಡಿ, ಕೃಷಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರ ನೇತೃತ್ವದಲ್ಲಿ ಮಂಡ್ಯ ವಿಧಿವೈದ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಕೊಠಡಿ ಹಾಗೂ ಶವಾಗಾರ ಕಟ್ಟಡದ ಕಾಮಗಾರಿಗೆ 4 ಕೋಟಿ ರೂ ವೆಚ್ಚದಲ್ಲಿ ಗುದ್ದಲಿ ಪೂಜೆಯನ್ನು ನೆರವೇರಿಸಲಾಗುತ್ತಿದೆ. ಮಂಡ್ಯ ನಗರವನ್ನು ಸೌಂದರ್ಯಗೊಳಿಸಲು ಹಾಗೂ ನಗರಕ್ಕೆ ಕಳೆ ಬರಲು ಹೈಟೆಕ್ ಸ್ಟೀಲ್ ನಾಮಫಲಕವನ್ನು ಅಳವಡಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಶೇಕ್ ತನ್ವೀರ್ ಆಸಿಫ್, ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಅಧೀಕ್ಷಕ ಡಾ. ಶ್ರೀಧರ್, ಮಿಮ್ಸ್ ಪ್ರಾಂಶುಪಾಲ ತಮ್ಮಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.




