ಮಂಡ್ಯ ಜಿಲ್ಲೆಯಲ್ಲಿ ಕನ್ನಡ ನಾಮ ಫಲಕಗಳನ್ನು ಖಾಸಗಿ ವಾಣಿಜ್ಯ ಕಟ್ಟಡ ಮತ್ತು ಅಂಗಡಿಗಳಲ್ಲಿ ಅಳವಡಿಸಲು ಸಂಬಂಧಪಟ್ಟ ಮಾಲೀಕರಿಗೆ ಸೂಕ್ತ ಮಾರ್ಗದರ್ಶನ ಮಾಡಲು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಂಡ್ಯನಗರದಲ್ಲಿ ಮಂಗಳವಾರಜನ ಜಾಗೃತಿ ಆಂದೋಲನ ನಡೆಸಿದರು.
ಕಳೆದ ಡಿ.27ರಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ವಾಣಿಜ್ಯ ಕಟ್ಟಡಗಳು, ಅಂಗಡಿಗಳಲ್ಲಿ ಕನ್ನಡ ನಾಮಫಲಕ ಅಭಿಯಾನವನ್ನು ಕೈಗೊಂಡಿದೆವು. ನಮ್ಮ ಒತ್ತಾಸೆಗೆ ಮಣಿದ ರಾಜ್ಯ ಸರ್ಕಾರವು ಫೆ.28, 2024 ರೊಳಗೆ ಎಲ್ಲಾ ರಾಜ್ಯದ ವಾಣಿಜ್ಯ ಕಟ್ಟಡಗಳು, ಅಂಗಡಿಗಳಲ್ಲಿ ಕನ್ನಡ ನಾಮ ಫಲಕಗಳನ್ನು 60% ಇರುವಂತೆ ಆದೇಶ ಮಾಡಿತ್ತು. ಆದರೆ, ವಾಣಿಜ್ಯ ಕಟ್ಟಡಗಳು, ಅಂಗಡಿ ಮಾಲೀಕರು ಕನ್ನಡ ನಾಮಫಲಕ ಅಳವಡಿಸಲು ನಿರಾಸಕ್ತಿ ತೋರಿದ್ದರಿಂದ ಮತ್ತೆ ಎರಡು ವಾರಗಳ ಗಡುವನ್ನು ಸರ್ಕಾರ ವಿಸ್ತರಣೆ ಮಾಡಿದೆ. ಆದ್ದರಿಂದ ಕನ್ನಡ ನಾಮ ಫಲಕ ಅಳವಡಿಸಲು ನಿರಾಸಕ್ತಿ ಮಾಡಿರುವ ವಾಣಿಜ್ಯ ಕಟ್ಟಡಗಳು, ಅಂಗಡಿ ಮಾಲೀಕರನ್ನು ಮನವೊಲಿಸಲು ಮಂಡ್ಯ ನಗರ ವ್ಯಾಪ್ತಿಯಲ್ಲಿ ಕನ್ನಡ ನಾಮ ಫಲಕ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.
ಮಂಡ್ಯ ಜಿಲ್ಲಾಡಳಿತವು ತನ್ನ ವ್ಯಾಪ್ತಿಯ ವಾಣಿಜ್ಯ ಕಟ್ಟಡಗಳು, ಅಂಗಡಿ ಮಾಲೀಕರಿಗೆ ಕನ್ನಡ ನಾಮಫಲಕ ಅಳವಡಿಸಲು ಸೂಕ್ತ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರವೇ ಮುಖಂಡರಾದ ಎಸ್.ಡಿ.ವೇಣು, ಚಿದಂಬರ್, ಅಶೋಕ್, ಕಾಂತರಾಜು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.




