Thursday, November 19, 2026

ಪ್ರಾಯೋಗಿಕ ಆವೃತ್ತಿ

ಸಿಎಂ ವಿಡಿಯೋ ಸಂವಾದ| ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಲು ಸೂಚನೆ

ಈ ಬಾರಿ ಬರದ ಪ್ರಮಾಣ ಹೆಚ್ಚಿದ್ದು, ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು. ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್ಚರಿಕೆ ನೀಡಿದರು.

ಬೆಂಗಳೂರಿನ ಗೃಹ ಕಛೇರಿ ಕೃಷ್ಣಾದಿಂದ ವೀಡಿಯೋ ಸಂವಾದದ ಮೂಲಕ ರಾಜ್ಯದಲ್ಲಿ ಬರದ ಹಿನ್ನಲೆಯಲ್ಲಿ ಕುಡಿಯುವ ನೀರು, ಬರ ನಿರ್ವಹಣೆ, ಜಾನುವಾರು ಮೇವು, ಉದ್ಯೋಗ ಹಾಗೂ ಕೃಷಿ ವಿಷಯಗಳ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ಜರುಗಿಸಿ ಅವರು ಮಾತನಾಡಿದರು.

ಬರ ಪರಿಸ್ಥಿತಿ ಹಿನ್ನಲೆ ರೈತರು ಬೆಳೆದಿದ್ದ ಸುಮಾರು 48 ಲಕ್ಷ ಹೆಕ್ಟೇರ್ ಬೆಳೆ ಹಾನಿ ಆಗಿದೆ. ಇನ್ನೂ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬರ ಪರಿಸ್ಥಿತಿ ಎದುರಿಸಬೇಕು. ಮೈಸೂರು ಭಾಗದ ಜಿಲ್ಲೆಗಳಲ್ಲಿ ಸ್ವಲ್ಪ ಮಟ್ಟಿಗೆ ಮುಂಗಾರು ಪೂರ್ವ ಮಳೆ ಬರುವ ಸಾಧ್ಯತೆ ಇದೆ.  ಅದಕ್ಕಾಗಿ ಅಧಿಕಾರಿಗಳು ಈಗಿನ ಪರಿಸ್ಥಿಯನ್ನು ಸಮರ್ಥವಾಗಿ ಎದುರಿಸಲು ಮತ್ತು ಮುಂದಿನ ಪರಿಸ್ಥಿಯನ್ನು ಸಮಸ್ಯೆಗಳಿಲ್ಲದೆ ನಿಭಾಯಿಸಲು  ಯೋಜನೆಗಳನ್ನು ರೂಪಿಸಿ, ಕಾರ್ಯಪ್ರವೃತ್ತರಾಗಬೇಕೆಂದು ಅವರು  ಸೂಚಿಸಿದರು.

ಜನ ಕೆಲಸ ಸಿಕ್ಕಿಲ್ಲ ಅಂತಾ ಗುಳೆ ಹೋಗಬಾರದು. ವಾರಕ್ಕೊಮ್ಮೆ  ಜಿಲ್ಲಾಧಿಕಾರಿಗಳು, ಸಿಇಓ ಗಳು ತಮ್ಮ ಜಿಲ್ಲೆಯ ತಹಶಿಲ್ದಾರ, ಆರ್ ಐ, ವಿ.ಎ ಮತ್ತು ಪಿಡಿಓ ಗಳ ಜೊತೆ ಸಭೆ ಜರುಗಿಸಬೇಕು. ಕ್ಷೇತ್ರಮಟ್ಟದ ಸಮಸ್ಯೆಗಳನ್ನು ಸ್ವತಃ ತಿಳಿದು ಕಾರ್ಯಪ್ರವೃತ್ತರಾಗಬೇಕು ಎಂದು ಮುಖ್ಯಮಂತ್ರಿಗಳು ನಿರ್ದೇಶನ ನೀಡಿದರು.

ಪ್ರತಿ ತಾಲೂಕಿನಲ್ಲಿ ಕಂಟ್ರೊಲ್ ರೂಮ್ ಆರಂಭಿಸಿ, ದಿನದ 24 ಗಂಟೆ ಜನರ ಅಹವಾಲು ಆಲಿಸುವ ಮತ್ತು ಪರಿಹಾರ ಕೈಗೊಳ್ಳುವ ಕೆಲಸವಾಗಬೇಕು ಎಂದು ಮಾನ್ಯ ಮುಖ್ಯಮಂತ್ರಿಗಳು ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಡಾ.ಕುಮಾರ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿ, ಜಿಲ್ಲೆಯಲ್ಲಿ ಎರಡು ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಹಾಗೂ 9 ಗ್ರಾಮಗಳಿಗೆ ಖಾಸಗಿ ಬೋರ್ ವೆಲ್ ಮೂಲಕ ನೀರು ನೀಡಲಾಗುತ್ತಿದೆ ಎಂದರು.

370 ಗ್ರಾಮಗಳಲ್ಲಿ ಮುಂದಿನ ದಿನದಲ್ಲಿ ಕುಡಿಯುವ ನೀರಿನ ತೊಂದರೆ ಉಂಟಾಗಬಹುದು ಎಂದು ಅಂದಾಜಿಸಿ ಕ್ರಿಯಾ ಯೋಜನೆ ಸಿದ್ಧಪಡಿಸಿಕೊಳ್ಳಲಾಗಿದೆ. ಈ ಗ್ರಾಮಗಳಿಗೆ ಜಲ್ ಜೀವನ್ ಮಿಷನ್ ಯೋಜನೆಯಡಿ ಹೊಸ ಬೋರ್ ವೆಲ್ ವ್ಯವಸ್ಥೆ ಮಾಡಲು ಹಾಗೂ 160 ಖಾಸಗಿ ಬೋರ್ ವೆಲ್ ಗಳನ್ನು ಸಹ ಗುರುತಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ 517939 ಟನ್ ಮೇವು ಲಭ್ಯವಿದ್ದು, 23 ವಾರಗಳ ಕಾಲ ಮೇವಿನ ಕೊರತೆ ಉಂಟಾಗುವುದಿಲ್ಲ ಮುನ್ನಚ್ಚರಿಕಾ ಕ್ರಮವಾಗಿ ಮೇವಿನ ಖರೀದಿಗೆ ಟೆಂಡರ್ ಸಹ ಕರೆಯಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಕಂಟ್ರೋಲ್  ರೂಂ ತೆರೆದು  ಸಿಬ್ಬಂದಿ ನಿಯೋಜಿಸಬೇಕು. ಕುಡಿಯುವ ನೀರಿನ ಸಮಸ್ಯೆಗಳನ್ನು 24 ಗಂಟೆಯೊಳಗಾಗಿ ಪರಿಹರಿಸಬೇಕು ಎಂದರು.

ಎಸ್ ಡಿ ಆರ್ ಎಫ್ ಅನುದಾನದ ಅಡಿಯಲ್ಲಿ ಪಶು ಸಂಗೋಪನೆ ಇಲಾಖೆಯಿಂದ ಜಿಲ್ಲೆಗೆ ಒಟ್ಟು 18,525  ಮಿನಿ ಮೇವಿನ ಕಿಟ್ ನೀಡಿದ್ದು, ಅರ್ಹ ರೈತರಿಗೆ 17,668 ಮಿನಿ ಮೇವಿನ ಕಿಟ್ ಅನ್ನು ವಿತರಣೆ ಮಾಡಲಾಗಿದೆ ಎಂದರು.

ಜಿಲ್ಲಾಧಿಕಾರಿಗಳ ಡಿ ಡಿ ಆರ್ ಎಫ್ ಹಾಗೂ ತಹಶೀಲ್ದಾರ್ ರವರ ಪಿ ಡಿ ಖಾತೆಯಲ್ಲಿ ಒಟ್ಟು 2179.65 ಲಕ್ಷ ರೂ ಅನುದಾನವಿದೆ.  ಕುಡಿಯುವ ನೀರನ್ನು ಒದಗಿಸಲು ಅನುದಾನದ ಕೊರತೆಯಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಶೇಕ್ ತನ್ವಿರ್ ಆಸೀಫ್, ಕಾವೇರಿ ನೀರಾವರಿ ನಿಗಮದ ಚೀಫ್ ಇಂಜಿನಿಯರ್ ಮಹೇಶ್, ಜಿಲ್ಲಾ ಪಂಚಾಯತ್ ಯೋಜನಾ ಅಧಿಕಾರಿ ಸಂಜೀವಪ್ಪ, ಉಪವಿಭಾಗಾಧಿಕಾರಿ ಮಹೇಶ್, ಪಶು ಸಂಗೋಪನ ಇಲಾಖೆಯ ಉಪನಿರ್ದೇಶಕ ಡಾ. ಸುರೇಶ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ವಿ.ಎಸ್. ಅಶೋಕ್, ಕಾವೇರಿ ನೀರಾವರಿ ನಿಗಮದ ಎಸ್. ಇ.ರಘುರಾಮ್ ,   ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮೋಹನ್, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕಿ ರೂಪಶ್ರೀ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ