Friday, October 25, 2024

ಪ್ರಾಯೋಗಿಕ ಆವೃತ್ತಿ

ಸಂವಿಧಾನ ಬದಲಾವಣೆ ಹೇಳಿಕೆ| ಅನಂತಕುಮಾರ ಹೆಗಡೆಗೆ ಬಿಜೆಪಿ ಟಿಕೆಟ್ ಸಿಗೋದೆ ಡೌಟು….

ಮೂರ್ನಾಲ್ಕು ವರ್ಷಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆಯವರು, ಚುನಾವಣೆ ಸಮೀಪಿಸುತ್ತಿದ್ದಂತೆ ಮತ್ತೆ ಹೊರಗೆ ಬಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷದ ಬಗ್ಗೆ ನಾಲಿಗೆ ಹರಿಬಿಟ್ಟು ವಿವಾದ ಮಾಡಿಕೊಂಡಿದ್ದ ಹೆಗಡೆ, ಇದೀಗ ಪುನಃ ಸಂವಿಧಾನ ಬದಲಾವಣೆಯ ಮಾತನಾಡಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

‘ಸಂವಿಧಾನವನ್ನು ಬದಲಾಯಿಸಲು’ ಪಕ್ಷಕ್ಕೆ 400 ಸ್ಥಾನಗಳು ಬೇಕು ಎಂದು ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಇತ್ತೀಚೆಗೆ ನೀಡಿರು ಹೇಳಿಕೆಯು ಅವರಿಗೆ ದುಬಾರಿ ಆಗಲಿದೆಯಾ ಎಂಬ ಮಾತುಗಳು ಕೇಳಿಬರುತ್ತಿವೆ. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಸಿಗುವುದು ಅನುಮಾನ ಎಂದು ರಾಜ್ಯ ಮತ್ತು ರಾಷ್ಟ್ರೀಯ ಮಾಧ್ಯಮಗಳು ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿವೆ. ಉತ್ತರ ಕನ್ನಡ ಸಂಸದರ ‘ಸಂವಿಧಾನ ಬದಲಾವಣೆ’ ಹೇಳಿಕೆಗಳಿಂದ ಬಿಜೆಪಿ ನಾಯಕರು ಅಂತರ ಕಾಯ್ದುಕೊಂಡಿದ್ದು, ಅದು ಅವರ ವೈಯಕ್ತಿಕ ಅಭಿಪ್ರಾಯಗಳನ್ನು ಪ್ರತಿಬಿಂಬಿಸುತ್ತದೆಯೇ ಹೊರತು ಪಕ್ಷದ ನಿಲುವು ಅಲ್ಲ ಎಂದು ಹೇಳಿದೆ. ಐದು ಬಾರಿ ಬಿಜೆಪಿ ಸಂಸದರಾಗಿರುವ ಅವರಿಂದ ಪಕ್ಷ ವಿವರಣೆ ಕೇಳಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಅಲ್ಪಸಂಖ್ಯಾತರು ಮತ್ತು ಪ್ರಗತಿಪರರ ಕುರಿತು ತನ್ನ ದ್ವೇಷ ಭಾಷಣಗಳನ್ನು ಪುನರಾವರ್ತಿಸುತ್ತಿರುವ ಹೆಗಡೆ, ಬಿಜೆಪಿ ನಾಯಕತ್ವವನ್ನು ಇಕ್ಕಟ್ಟಿಗೆ ಸಿಲುಕಿಸುವ ರೀತಿ ಹಲವಾರು ಟೀಕೆಗಳನ್ನು ಮಾಡಿದ್ದಾರೆ. ಲೋಕಸಭಾ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಬಿಜೆಪಿ ವರಿಷ್ಠರು ಕಸರತ್ತು ನಡೆಸುತ್ತಿರುವ ಈ ಹೊತ್ತಿನಲ್ಲಿ, ಹೆಗಡೆ ನೀಡಿರುವ ಹೇಳಿಕೆಗಳು ಅವರ ಟಿಕೆಟ್ ಮೇಲೆ ಪರಿಣಾಮ ಬೀರಬಹುದು ಎಂದು ಪಕ್ಷದ ಮೂಲಗಳು ಹೇಳಿವೆ. ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಹೆಗಡೆ ತೀವ್ರ ಲಾಬಿ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಈಗಾಗಲೇ ಬಿಜೆಪಿಯ 195 ಸ್ಥಾನಗಳ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಪ್ರಜ್ಞಾ ಸಿಂಗ್ ಠಾಕೂರ್ ಸೇರಿದಂತೆ, ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಹಲವಾರು ಸಂಸದರನ್ನು ಬದಲಾಯಿಸಲಾಗಿದೆ. ಇವರಲ್ಲಿ ದೆಹಲಿ ಸಂಸದರಾದ ರಮೇಶ್ ಬಿಧುರಿ, ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ ಕೂಡ ಸೇರಿದ್ದಾರೆ.

‘ನಾವು ಗೆಲ್ಲುವುದು ಮುಖ್ಯ; ಆದರೆ, ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ನಾಯಕತ್ವವನ್ನು ಮುಜುಗರಕ್ಕೀಡು ಮಾಡಿದ ಅಭ್ಯರ್ಥಿಗಳನ್ನು ಪಕ್ಷವು ಸೂಕ್ಷ್ಮವಾಗಿ ಗಮನಿಸುತ್ತಿದೆ’ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.

ಅವರಿಗೆ ಟಿಕೆಟ್ ನಿರಾಕರಿಸುವ ಮೂಲಕ ಸಾರ್ವಜನಿಕ ಜೀವನದಲ್ಲಿ ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕು ಎಂಬ ಸಂದೇಶವನ್ನು ರವಾನಿಸುತ್ತದೆ. ಈ ಹಿಂದೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಬಾರದು ಎಂದು ಪ್ರಧಾನಿ ಹಲವು ಸಂದರ್ಭಗಳಲ್ಲಿ ಪಕ್ಷದ ಮುಖಂಡರಿಗೆ ಎಚ್ಚರಿಕೆ ನೀಡಿದ್ದರು ಎಂದು ಬಿಜೆಪಿ ನಾಯಕ ಹೇಳಿದ್ದಾರೆ.

ಹೆಗ್ಡೆಯವರು ಸಂವಿಧಾನದ ಬದಲಾವಣೆಗೆ ಕರೆ ನೀಡಿದ್ದಾರೆ; ಇದನ್ನು ಜಾರಿಗೆ ತರಲು 543 ಸದಸ್ಯ ಬಲದ ಲೋಕಸಭೆಯಲ್ಲಿ ಬಿಜೆಪಿ 400 ಸ್ಥಾನಗಳನ್ನು ಗೆಲ್ಲಬೇಕು ಎಂದು ಹೇಳಿದರು. ‘ಹಿಂದೂಗಳನ್ನು ಹತ್ತಿಕ್ಕಲು’ ಕಾಂಗ್ರೆಸ್‌ ಸಂವಿಧಾನವನ್ನು ಬದಲಾಯಿಸಿದೆ ಎಂದು ಆರೋಪಿಸಿದರು.

‘ಕಾಂಗ್ರೆಸ್ ಮೂಲಭೂತವಾಗಿ ಸಂವಿಧಾನದಲ್ಲಿ ಅನಗತ್ಯವಾದ ವಿಷಯಗಳನ್ನು ತುಂಬುವ ಮೂಲಕ ಸಂವಿಧಾನವನ್ನು ವಿರೂಪಗೊಳಿಸಿದೆ. ವಿಶೇಷವಾಗಿ ಹಿಂದೂ ಸಮಾಜವನ್ನು ಹತ್ತಿಕ್ಕುವ ಉದ್ದೇಶದಿಂದ ಕಾನೂನುಗಳನ್ನು ತರುವ ಮೂಲಕ; ಇವೆಲ್ಲವನ್ನೂ ಬದಲಾಯಿಸಬೇಕಾದರೆ, ಸಂವಿಧಾನವನ್ನು ತಿದ್ದುಪಡಿ ಮಾಡಬೇಕಾದರೆ ಈ (ಪ್ರಸ್ತುತ) ಬಹುಮತದಿಂದ ಸಾಧ್ಯವಿಲ್ಲ’ ಎಂದು ಬಿಜೆಪಿ ಸಂಸದರು ಶನಿವಾರ ಬಿಜೆಪಿ ಸಭೆಯಲ್ಲಿ ತಿಳಿಸಿದರು.

ಬಿಜೆಪಿ ನಾಯಕ ಗೌರವ್ ಭಾಟಿಯಾ ಕೂಡ ಹೆಗ್ಡೆಯವರ ಮಾತುಗಳು ಅವರ ವೈಯಕ್ತಿಕ ಅಭಿಪ್ರಾಯಗಳನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿದ್ದಾರೆ. “ಪಕ್ಷವು ಈ ಹೇಳಿಕೆಯನ್ನು ಗಮನಿಸಿದೆ ಮತ್ತು ಸ್ಪಷ್ಟೀಕರಣವನ್ನು ಕೇಳಿದೆ” ಎಂದು ಭಾಟಿಯಾ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಸೀಟು ಹಂಚಿಕೆ

ಬಿಜೆಪಿಯು ತನ್ನ ಮಿತ್ರ ಪಕ್ಷವಾದ ಜನತಾ ದಳ (ಜಾತ್ಯತೀತ) ಜೊತೆ ಕರ್ನಾಟಕದಲ್ಲಿ ಸೀಟು ಹಂಚಿಕೆಯನ್ನು ಅಂತಿಮಗೊಳಿಸಲು ಚರ್ಚೆ ನಡೆಸುತ್ತಿರುವ ಸಮಯದಲ್ಲಿ ಹೆಗ್ಡೆಯವರ ಹೇಳಿಕೆಗಳು ಬಂದಿವೆ. 28ರಲ್ಲಿ ನಾಲ್ಕು ಲೋಕಸಭಾ ಸ್ಥಾನಗಳನ್ನು ಜೆಡಿಎಸ್ ಕೇಳಿದ್ದರೆ, ಮೂರಕ್ಕಿಂತ ಹೆಚ್ಚು ಸ್ಥಾನ ನೀಡಲು ಬಿಜೆಪಿ ಮನಸ್ಸು ಮಾಡುತ್ತಿಲ್ಲ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಬಿಜೆಪಿ ತನ್ನ ಎರಡನೇ ಪಟ್ಟಿಯಲ್ಲಿ ಕರ್ನಾಟಕದ ಸುಮಾರು 20 ಸ್ಥಾನಗಳಿಗೆ ಹೆಸರುಗಳನ್ನು ಪ್ರಕಟಿಸಬಹುದು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಪಟ್ಟಿಯಲ್ಲಿ ಸ್ಥಾನ ಪಡೆಯಬಹುದು. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅಥವಾ ಅವರ ಕುಟುಂಬದ ಸದಸ್ಯರೊಬ್ಬರಿಗೆ ಅಭ್ಯರ್ಥಿಗಳ ಪಟ್ಟಿಯಲ್ಲಿ ಸ್ಥಾನ ಸಿಗಬಹುದು. ಬಿಜೆಪಿ, ಕರ್ನಾಟಕದಲ್ಲಿ 8-10 ಹೊಸ ಮುಖಗಳನ್ನು ಕಣಕ್ಕಿಳಿಸಬಹುದು ಎಂದು ಮೂಲಗಳು ತಿಳಿಸಿವೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!