Friday, November 20, 2026

ಪ್ರಾಯೋಗಿಕ ಆವೃತ್ತಿ

ಭಾರತಕ್ಕೆ ಶೂದ್ರಪ್ರಜ್ಞೆ ಸಾರಿದ ದಾರ್ಶನಿಕ ಕುವೆಂಪು: ಬಂಜೆಗೆರೆ ಜಯಪ್ರಕಾಶ್

ಕುವೆಂಪು ಕೇವಲ ಮಂಡ್ಯ, ಶಿವಮೊಗ್ಗಕ್ಕೆ ಸೀಮಿತರಲ್ಲ. ಇಡೀ ಭಾರತದಲ್ಲಿ ಶೂದ್ರ ಪ್ರಜ್ಞೆಯನ್ನು ಸಾರಿದ ದಾರ್ಶನಿಕ, ಯುಗಕವಿಯಾಗಿದ್ದಾರೆ ಎಂದು ಸಾಹಿತಿ ಬಂಜಗೆರೆ ಜಯಪ್ರಕಾಶ್ ಹೇಳಿದರು.

ಜಾಗೃತ ಕರ್ನಾಟಕ ಸಂಘಟನೆ ಮಂಡ್ಯದ ರೈತ ಸಂಭಾಂಗಣದಲ್ಲಿ ಆಯೋಜಿಸಿದ್ದ ‘ಕುವೆಂಪು ಕ್ರಾಂತಿ ಕಹಳೆ 50’, ಮಂಡ್ಯ ಅಸ್ಮಿತೆ-85 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಪಂಪ ಮನುಷ್ಯ ಕುಲಂ ತಾನೊಂದೆ ವಲಂ ಎಂದರು. ಕುವೆಂಪು ವಿಶ್ವಪಥ ಮನುಜಮತ ಎಂದರು. ಕುವೆಂಪುರವರ ದೃಷ್ಟಿಯಲ್ಲಿ ಮನುಷ್ಯರಾಗಿರುವುದು ಎಂದರೆ ವಿಚಾರವುಳ್ಳವರಾಗಿರುವುದು ಎಂದರ್ಥ ಎಂದು ಅಭಿಪ್ರಾಯಪಟ್ಟರು.

ಯುವಜನರಿಗೆ ನಿರಂಕುಶಮತಿಗಳಾಗಿ ಕುವೆಂಪು ಅವರುಕರೆ ನೀಡಿದರು. ಯಂತ್ರ ನಾಗರೀಕತೆ ಹೇರಿದ, ಇಂಗ್ಲಿಷ್ ತಂದ ನಾವು ಅದಕ್ಕೆ ಬೇಕಾದ ವೈಚಾರಿಕತೆ ಕಟ್ಟಿಕೊಂಡಿದ್ದೇವೆಯೇ ಎಂದು ಪ್ರಶ್ನಿಸಿದರು. ಅದೆಲ್ಲದರ ಪರಿಣಾಮವೇ ಅಂತರಿಕ್ಷಕ್ಕೆ ಗಗನನೌಕೆ ಹಾರಿಸುವ ಮೊದಲು ಪೂಜೆ ಮಾಡುವುದಾಗಿದೆ. ವೈಚಾರಿಕತೆ ಇಲ್ಲದ ಸಮಾಜ ಮುಂದೆ ಹೋಗಲು ಸಾಧ್ಯವಿಲ್ಲ ಎಂದರು.

ಆಧ್ಯಾತ್ಮಿಕತೆ ಎಂದರೆ ಮತ ಅಲ್ಲ

ಆಧ್ಯಾತ್ಮಿಕತೆ ಎಂದರೆ ಮತ ಅಲ್ಲ. ಮೌಢ್ಯ ಕಂದಾಚಾರವಂತೂ ಅಲ್ಲವೇ ಅಲ್ಲ.. ವಿಶ್ವನಿಯಮಗಳನ್ನು ಅರಿಯುವುದು ಎಂದರೆ ಪ್ರಕೃತಿ ಶಕ್ತಿಯನ್ನು ಅರಿತು ಗೌರವಿಸುವುದು. ಯಾವುದು ಮಾಡಿದರೆ ಎಲ್ಲರಿಗೂ ಒಳಿತಾಗುತ್ತದೆ ಎಂಬುದನ್ನು ಅರಿಯಲು ಮತಿಯನ್ನು ಬಳಸಿ ಎಂದು ಕುವೆಂಪು ಹೇಳಿದ್ದಾರೆ ಎಂದರು.

ನೀರಿನಲ್ಲಿ ಮುಳುಗುತ್ತಿರುವವರನ್ನು ಬದುಕಿಸಲು, ಹಸಿದವನಿಗೆ ಅನ್ನ ಬಡಿಸುವುದಕ್ಕೆ ಜಾತಿ, ಧರ್ಮ ಅಡ್ಡ ಬರಬಾರದು. ಅದೊಂದು ವಿವೇಕ. ಅದಕ್ಕೆ ಕುವೆಂಪು ಯಾವ ಕಾಲದ ಶಾಸ್ತ್ರ ಏನು ಹೇಳಿದರೇನು, ಎದೆಯ ದನಿಗೂ ಮಿಗಿಲು ಶಾಸ್ತ್ತವಿಹುದೇನು ಎಂದರು. ನಮ್ಮ ಆತ್ಮಸಾಕ್ಷಿಗೆ ಅನುಸಾರವಾಗಿ ಬದುಕಬೇಕೆ ಹೊರತು, ಮತ ಮೌಢ್ಯಗಳಿಗೆ ಜೋತು ಬೀಳಬಾರದು ಎಂಬುದನ್ನು ಮರೆಯದಿರೋಣ ಎಂದರು.

ಯೋಗಿಗಳು ಮಾಡುವ ತಪಸ್ಸು ಕೇವಲ ತನ್ನ ಒಳಿತಿಗೆ, ತನ್ನ ಮೋಕ್ಷಕ್ಕಾಗಿ ಮಾಡುತ್ತಾರೆ. ಆದರೆ ನೇಗಿಲಯೋಗಿ ಮಾಡುವುದು ಎಲ್ಲರ ಅನ್ನಮೋಕ್ಷಕ್ಕಾಗಿ.. ಯಾರು ಮೇಲು ಎಂದು ನೀವೆ ನಿರ್ಧರಿಸಬೇಕು ಎಂದರು. ವೈಚಾರಿಕ ಮನೋಭಾವ, ವೈಜ್ಞಾನಿಕ ದೃ಼ಷ್ಟಿಯೇ ಸರ್ವೋದಯ ತತ್ವ.. ವಿಶ್ವದಲ್ಲಿ ಏನು ನಡೆಯುತ್ತಿದೆ ಎಂಬುದು ನಮ್ಮ ಅರಿವಿನಲ್ಲಿರಬೇಕು. ಪುರೋಹಿತಶಾಹಿಯ ಅಪಾಯಗಳನ್ನು ಅರಿತಿರಬೇಕು. ಅದು ದೇವರ ನಿಜಸಾಕ್ಷಾತ್ಕಾರಕ್ಕೆ ಇರುವ ಅಡ್ಡಿಯಾಗಿದೆ. ಹಾಗಾಗಿ ನಾವು ಮನುಜಮತ ವಿಶ್ವಪಥ ಅನುಸರಿಸಬೇಕು ಎಂದು ಬಂಜಗೆರೆ ಹೇಳಿದರು.

ನವಕರ್ನಾಟಕತ್ವ ಎಂದರೆ ಜಾತಿ ಮತಗಳ ಗಡಿಗಳಾಚೆ ಮನುಷ್ಯ ಸಂಸ್ಕೃತಿಯನ್ನು ಸೃಷ್ಟಿಸುವುದಾಗಿದೆ. ಬಡವನ ಬೆವರಿನ ದುಡಿವಿಲ್ಲದೇ ನಿನ್ನ ಸಂಪತ್ತು ಎಲ್ಲಿಂದ ಬಂತು ಎಂದು ಪ್ರಶ್ನಿಸಿದ ಕುವೆಂಪುರವರ ಆಶಯಗಳನ್ನು ಮುನ್ನಡೆಸೋಣ ಎಂದರು.

ಜಾಗೃತ ಕರ್ನಾಟಕ ಸಂಘಟನೆ ಮಂಡ್ಯದ ರೈತ ಸಂಭಾಂಗಣದಲ್ಲಿ ಆಯೋಜಿಸಿದ್ದ ‘ಕುವೆಂಪು ಕ್ರಾಂತಿ ಕಹಳೆ 50′ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನಗೆ ಮತೀಯವಾದದ ಅಮಲು ಹೆಚ್ಚಾದಾಗ ನನ್ನ ಗುರುಗಳು ನನಗೆ ಹುಳಿ ಹೆಂಡ ಕುಡಿಸಿ ಬುದ್ದಿವಾದ ಹೇಳಿ ಹೊರತಂದರು’ ಹಾಗಾಗಿ ಮನುಷ್ಯನಾಗಿದ್ದೇನೆ. ನನ್ನ ರೀತಿ ಯಾರೂ ಸಹ ಮತೀಯವಾದಕ್ಕೆ ಬಲಿಯಾಗುವುದು ಬೇಡ ಎಂದರು.

ವೇದಿಕೆಯಲ್ಲಿ ಎಂ.ಜಿ.ಹೆಗಡೆ, ಸುಧೀರ್ ಕುಮಾರ್ ಮುರೋಳಿ, ಲೇಖಕಿ ಸೌಮ್ಯ ಕೋಡೂರು, ಕವಿ ರಾಜೇಂದ್ರ ಪ್ರಸಾದ್, ಹೋರಾಟಗಾರ್ತಿಯರಾದ ಸಿ.ಕುಮಾರಿ, ಪೂರ್ಣಿಮಾ, ತೇಜ ಯಾಲಕ್ಕಯ್ಯ ಮಾತನಾಡಿದರು. ದಸಸಂ ಸಂಚಾಲಕರಾದ ಗುರುಪ್ರಸಾದ್ ಕೆರಗೋಡುರವರು ಅಧ್ಯಕ್ಷತೆ ವಹಿಸಿದ್ದರು. ಎನ್.ನಾಗೇಶ್ ಸ್ವಾಗತಿಸಿದರು. ಡಾ.ಬಿ.ಸಿ.ಬಸವರಾಜು ಪ್ರಾಸ್ತಾವಿಕ ಭಾಷಣ ಮಾಡಿದರು ಹಾಗೂ ರಮೇಶ್ ಗೌಡ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಕಾರ್ಯಕ್ರಮಕ್ಕೂ ಮುನ್ನ ಮಂಡ್ಯನಗರದ ಸಂಜಯ ವೃತ್ತದಲ್ಲಿ ತ್ರಿವರ್ಣ ಧ್ವಜ ಹಾಗೂ ಕನ್ನಡ ಧ್ವಜಗಳನ್ನು ಹಿಡಿದು ನೂರಾರು ಜನರು ಮಾನವ ಸರಪಳಿ ನಿರ್ಮಿಸಿ ಸೌಹಾರ್ದತೆಯ ಸಂದೇಶ ಸಾರಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ