1908 ರಲ್ಲಿ ನಡೆದಂತಹ ಎಲ್ಲಾ ಮಹಿಳಾ ಚಳವಳಿಗೆ ಉತ್ತರವಾಗಿ ವಿಶ್ವಸಂಸ್ಥೆಯು ಮಹಿಳಾ ದಿನಾಚರಣೆಯನ್ನು ಘೋಷಿಸಿತು. 19ನೇ ಶತಮಾನದ ಆದಿಯಿಂದ ಮಹಿಳಾ ದಿನವನ್ನು ಆಚರಿಸುತ್ತಾ ಬಂದಿದ್ದು, ಹತ್ತನೇ ಶತಮಾನದಲ್ಲಿ ರಾಣಿ ಅತ್ತಿಮಬ್ಬೆ ಒಳ್ಳೆಯ ರಾಜ್ಯಭಾರವನ್ನು ಮಾಡಿದವರು. ಜೈನ ಸಾಹಿತ್ಯವನ್ನು ರಚಿಸಿ ಉತ್ತಮ ಕೀರ್ತಿಯನ್ನು ಪಡೆದರು. ಅಂದಿನ ಕಾಲದ ಮಹಿಳೆಯರಿಗೆ ಮಾದರಿಯಾಗಿ ನಿಂತರು ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷೆ ಮೀರಾ ಶಿವಲಿಂಗಯ್ಯ ತಿಳಿಸಿದರು.
ಮಂಡ್ಯನಗರದ ಯತ್ತಗದಹಳ್ಳಿಯ ಎಂ.ಓ.ಬಿ ಸಮುದಾಯ ಭವನದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ- 2024 ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ಮತ್ತೊಬ್ಬ ಮಹಿಳೆಯಾದ ಅಕ್ಕಮಹಾದೇವಿಯು ಆಧ್ಯಾತ್ಮ ಚಿಂತನೆಯನ್ನು ತನ್ನ ಗುರಿಯನ್ನಾಗಿ ಮಾಡಿಕೊಂಡು ಚೆನ್ನಮಲ್ಲಿಕಾರ್ಜುನನಲ್ಲಿ ಐಕ್ಯವಾದವರು. ಇಂದಿನ ಸಮಾಜದ ಮಹಿಳೆಯರು ಅಕ್ಕಮಹಾದೇವಿಯಂತಹ ದೃಢ ಸಂಕಲ್ಪವನ್ನು ಇಟ್ಟುಕೊಳ್ಳಬೇಕು ಎಂದರು.
ವೇದಗಳ ಕಾಲದಲ್ಲಿಯೇ ಮಹಿಳೆಯರು ವಿದ್ಯೆಗೆ ಹೆಸರಾಗಿದ್ದವರು. ಋಗ್ವೇದದಲ್ಲಿ ಅನೇಕ ಶ್ಲೋಕಗಳನ್ನು ಮಹಿಳೆಯರು ರಚಿಸಿರುವುದು ಗ್ರಂಥಗಳಲ್ಲಿ ತಿಳಿದು ಬರುತ್ತದೆ. ಅಂದಿನ ಕಾಲದಲ್ಲಿಯೇ ಮಹಿಳೆಯರು ಉತ್ತಮ ಸಾಧನೆಗೈದಿದ್ದಾರೆ ಎಂದರು.
21ನೇ ಶತಮಾನದಲ್ಲೂ ಕೂಡ ಪ್ರತಿಯೊಬ್ಬ ಮಹಿಳೆಯರು ವಿದ್ಯಾಭ್ಯಾಸವನ್ನು ಕಲಿತು, ಉದ್ಯಮಗಳಲ್ಲಿ ಹೆಚ್ಚು ಕಾರ್ಯ ನಿರತರಾಗಿದ್ದಾರೆ. ಸಾಕಷ್ಟು ಮಹಿಳೆಯರು ಸಂಸಾರಿಕ ಜೀವನದಲ್ಲಿ ಸಿಲುಕಿ ಹೊಂದಾಣಿಕೆ ಮಾಡಿಕೊಳ್ಳುವುದರಲ್ಲಿಯೇ ಜೀವನವನ್ನು ಕಳೆದುಬಿಡುತ್ತಾ, ತಮ್ಮ ಗುರಿಗಳನ್ನು ಈಡೇರಿಸಿಕೊಳ್ಳುವುದರಲ್ಲಿ ಹಿಂದೆ ಉಳಿಯುತ್ತಾರೆ. ಅಂತಹ ಮಹಿಳೆಯರು ದೃಢಸಂಕಲ್ಪ ಮಾಡಿ ತಮ್ಮ ಗುರಿಗಳತ್ತ ನಡೆಯಬೇಕು ಎಂದರು.
ಪ್ರಸ್ತುತ ದಿನದ ಉನ್ನತ ಹುದ್ದೆಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಕಡಿಮೆ ಇದೆ. ಐ.ಎ.ಎಸ್ ನಲ್ಲಿ ಶೇ.14, ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರಾಗಿ ಶೇ. 7 ರಷ್ಟು ಮಹಿಳೆಯರು, ಹೈ ಕೋರ್ಟ್ ನಲ್ಲಿ ಶೇ. 9 ರಷ್ಟು, ಬ್ಯಾಂಕ್ ನಲ್ಲಿ ಶೇ.17 ರಷ್ಟು ಮಹಿಳೆಯರು ಇದ್ದಾರೆ. ಮಹಿಳೆಯರು ಉನ್ನತ ಹುದ್ದೆಗಳನ್ನು ಅಲಂಕರಿಸಿದಾಗ, ಉತ್ತಮ ವಾತಾವರಣವನ್ನು ಕಲ್ಪಿಸಲಾಗುತ್ತದೆ. ಆದ್ದರಿಂದ ಮಹಿಳೆಯರು ಹೆಚ್ಚು ಹೆಚ್ಚು ಅಧಿಕಾರವನ್ನು ಹೊಂದಬೇಕು. ದೇಶದಲ್ಲಿ ವಿಶೇಷ ಪ್ರೋತ್ಸಾಹ ದೊರೆಯಬೇಕು ಎಂದರು.
ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ಎಂ. ಎನ್. ಆಶಾಲತಾ ಮಾತನಾಡಿ, ಗರ್ಭಿಣಿ ಮಹಿಳೆಯರು ಹೆರಿಗೆಯ ಸಂದರ್ಭದಲ್ಲಿ ಮಾನಸಿಕವಾಗಿ ಶಕ್ತಿಯುತವಾಗಿರಬೇಕು. ಮಗು ಗಂಡಾಗಲಿ ಅಥವಾ ಹೆಣ್ಣಾಗಲಿ ಸಮಾನವಾಗಿ ಸ್ವೀಕರಿಸಬೇಕು. ಯಾವುದೇ ಕಾರಣಕ್ಕೂ ಭ್ರೂಣ ಹತ್ಯೆ ಮಾಡಬಾರದು ಎಂದರು.
ಕಾರ್ಯಕ್ರಮದಲ್ಲಿ ಯತ್ತಗದಹಳ್ಳಿ ಬಾಲ ಯೇಸುವಿನ ದೇವಾಲಯದ ಧರ್ಮಗುರು ಆಂಟನಿ ಫ್ರಾನ್ಸಿಸ್, ಗುತ್ತಲು ಗ್ರಾಮಾಡಳಿತ ಅಧಿಕಾರಿ ಸುಷ್ಮಾ ಪಿ.ಕೆ, ಎಂ. ಓ. ಬಿ. ಗ್ರಾಮೀಣ ಆರೋಗ್ಯ ಕೇಂದ್ರ ಸಂಸ್ಥಾಪಕರು ಸಿಸ್ಟರ್ ಲೀಲಾ, ಅಧ್ಯಕ್ಷ ಸಿಸ್ಟರ್ ಜೋಳಿ, ನಿರ್ದೇಶಕರು ಸಿಸ್ಟರ್ ಪ್ರಿಂಟೋ ಮ್ಯಾತ್ಯು, ಚಿಲುಮೆ ಮಹಿಳಾ ಮಹಾ ಒಕ್ಕೂಟದ ಅಧ್ಯಕ್ಷೆ ಚಿಕ್ಕತಾಯಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.




