ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾ.16ರಿಂದ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಅಕ್ರಮ ಚುನಾವಣಾ ಚಟುವಟಿಕೆಗಳನ್ನು ತಡೆಯಲು ಕಟ್ಟುನಿಟ್ಟಿನ ಆಗತ್ಯಕ್ರಮ ಕೈಗೊಳ್ಳಲಾಗಿದೆ ಎಂದು ಸಹಾಯಕ ಚುನಾವಣಾ ಅಧಿಕಾರಿ ನಹೀದಾ ಜಮ್ಜಮ್ ತಿಳಿಸಿದರು.
ಮಳವಳ್ಳಿ ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.26ರಂದು ನಡೆಯಲಿರುವ ಚುನಾವಣೆಗೆ ಮಾ.16ರಿಂದ ನೀತಿಸಂಹಿತೆ ಜಾರಿಯಾಗಿದ್ದು, ಮಾ.28ರಂದು ಚುನಾವಣಾ ಅಧಿಸೂಚನೆ ಹೊರಬೀಳಲಿದೆ, ಏ.4ರಂದು ನಾಮಪತ್ರ ಕೊನೆಯ ದಿನಾಂಕವಾಗಿದೆ, ಜೂನ್ 4ರಂದು ಮತ ಎಣಿಕೆ ನಡೆಯಲಿದ್ದು, ಜೂನ್ 6ರಂದು ಚುನಾವಣಾ ನೀತಿ ಸಂಹಿತೆ ಮುಕ್ತಾಯವಾಗಲಿದೆ ಎಂದು ಹೇಳಿದರು.
ಮಳವಳ್ಳಿ ತಾಲ್ಲೂಕಿನಲ್ಲಿ 3 ಸೂಕ್ಷ್ಮ ಮತಗಟ್ಟೆಗಳು , 24 ಅತಿ ಸೂಕ್ಷ್ಮ ಮತಗಟ್ಟೆಗಳಿವೆ, ಸಂಪರ್ಕದಿಂದ ದೂರ ಉಳಿದ ಮತಗಟ್ಟೆ 2 ಎಂದು ಗುರುತಿಸಲಾಗಿದೆ, ಚುನಾವಣೆಯಲ್ಲಿ ಅಕ್ರಮ ಚಟುವಟಿಕೆ ತಡೆಯಲು 18 ಅಧಿಕಾರಿಗಳ ತಂಡವನ್ನು ರಚನೆ ಮಾಡಿ ತಾಲ್ಲೂಕಿನಾದ್ಯಂತ 5 ಚೆಕ್ ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ, ಅಲ್ಲದೇ ತಾಲ್ಲೂಕು ಕಚೇರಿಯಲ್ಲಿ ಚುನಾವಣಾ ಕಂಟ್ರೋಲ್ ರೂಂ ಸ್ಥಾಪಿಸಲಾಗಿದ್ದು, ಸಾರ್ವಜನಿಕರು ದೂರವಾಣಿ ಸಂಖ್ಯೆ 08231-242277 ಮೂಲಕ ದೂರ ಸಲ್ಲಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.
186 ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 125470 ಪುರುಷರು, 126665 ಮಹಿಳೆಯರು, 23 ಇತರೆ ಸೇರಿದಂತೆ ಒಟ್ಟು 252158 ಮತದಾರರು ಇದ್ದಾರೆ, ಪಟ್ಟಣದಲ್ಲಿ 30 ಬೂತ್ ಗಳು, ಗ್ರಾಮೀಣದಲ್ಲಿ 242 ಬೂತ್ ಸೇರಿದಂತೆ ಒಟ್ಟು 272 ಬೂತ್ಗಳಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಲಿದೆ, 26 ಬೂತ್ ಮೇಲ್ವಿಚಾರಕರನ್ನು ನೇಮಿಸಲಾಗಿದೆ ಎಂದರು.
ಹೆಚ್ಚಿನ ಪರಿಣಾಮಕಾರಿಯಾಗಿ ಮಾದರಿ ನೀತಿ ಸಂಹಿತೆ ಜಾರಿ ಮಾಡಲು ಭಾರತ ಚುನಾವಣಾ ಆಯೋಗದ ತಂತ್ರಾಂಶವಾದ ಸಿ-ವಿಐಜಿಐಎಲ್ ಮೂಲಕ ದೂರುಗಳನ್ನು ಸಹ ಸಾರ್ವಜನಿಕರು ಸಲ್ಲಿಸಬಹುದಾಗಿದೆ, ಮಳವಳ್ಳಿ ತಾಲ್ಲೂಕಿನ ಬೆಂಡರವಾಡಿ, ಕುಂತೂರು, ದೇವಿರಹಳ್ಳಿ, ಸತ್ತೇಗಾಲ, ಚಿಕ್ಕಬಾಗಿಲು ಗ್ರಾಮಗಳಲ್ಲಿ ಚೆಕ್ ಪೊಸ್ಟ್ ನಿರ್ಮಿಸಲಾಗಿದೆ, ತನಿಖೆಗೆ ಸಾರ್ವಜನಿಕರು ಸಹಕರಿಸಬೇಕೆಂದು ಕೋರಿದರು.
ಮಳವಳ್ಳಿ ಪಟ್ಟಣದ ಶಾಂತಿ ಪದವಿಪೂರ್ವ ಕಾಲೇಜಿನಲ್ಲಿ ಸಿಬ್ಬಂದಿಗಳಿಗೆ ತರಬೇತಿ ನೀಡುವುದರ ಜೊತೆಗೆ ಮಸ್ಟರಿಂಗ್ ಮತ್ತು ಡಿ.ಮಸ್ಟರಿಂಗ್ ಕೇಂದ್ರವನ್ನು ಸ್ಥಾಪಿಸಲಾಗಿದೆ, ಸಾರ್ವಜನಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು, 50 ಸಾವಿರ ಮೇಲ್ಪಟ್ಟು ಹಣ ಸಾಗಿಸುವಂತಿಲ್ಲ, ಹಣ ಸಾಗಿಸುವಂತಿದ್ದರೇ ಸಂಬಂಧಿಸಿದ ದಾಖಲೆಗಳನ್ನು ಹಾಜರು ಪಡಿಸಬೇಕು, ಚುನಾವಣೆಯಲ್ಲಿ ಹೆಚ್ಚು ಮತದಾನವಾಗಲು ಚುನಾವಣಾ ಆಯೋಗ ಹಾಗೂ ತಾಲ್ಲೂಕು ಆಡಳಿತದ ವತಿಯಿಂದ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಕೆ.ಎನ್ ಲೊಕೇಶ್, ಇನ್ಸ್ಪೇಕ್ಟರ್ ರವಿಕುಮಾರ್ ಇದ್ದರು.




