ಮಂಡ್ಯ, ಹಾಸನ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟು ಕೊಟ್ಟಿದ್ದೇವೆ ಎಂದು ಬಿಜೆಪಿ ಸ್ಪಷ್ಟಪಡಿಸುವುದರೊಂದಿಗೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಬಿಜೆಪಿ ಟಿಕೆಟ್ ಕೈ ತಪ್ಪಿದೆ. ಬಿಜೆಪಿ ನಾಯಕರ ಬಗ್ಗೆ ನನಗೆ ವಿಶ್ವಾಸವಿದೆ. ಮಂಡ್ಯ ಕ್ಷೇತ್ರದ ಬಿಜೆಪಿ ಟಿಕೆಟ್ ನನಗೆ ಸಿಗಲಿದೆ ಎಂದು ಹೇಳುತ್ತಿದ್ದ ಸುಮಲತಾ ಅಂಬರೀಶ್ ರಾಜಕೀಯ ಭವಿಷ್ಯ ಅತಂತ್ರವಾಗಿದೆ. ಬಿಜೆಪಿ ನಂಬಿ ಸುಮಲತಾ ಅಂಬರೀಶ್ ಮೋಸ ಹೋಗಿದ್ದಾರೆ.
ಬಿಜೆಪಿ ನಾಯಕರು ಸುಮಲತಾ ಅವರಿಗೆ ಕೈ ಕೊಟ್ಟಿರುವುದರಿಂದ ಅವರ ಮುಂದಿನ ನಡೆ ಏನು ಎಂಬುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಕಳೆದ ಬಾರಿಯಂತೆ ಈ ಬಾರಿಯೂ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರಾ ಅಥವಾ ರಾಜಕಾರಣದಿಂದ ದೂರ ಇರುತ್ತಾರಾ, ಇಲ್ಲ ಬಿಜೆಪಿ ಪಕ್ಷದೊಂದಿಗೆ ಗುರುತಿಸಿಕೊಂಡು ಮೈತ್ರಿ ಅಭ್ಯರ್ಥಿ ಪರ ನಿಲ್ಲುತ್ತಾರಾ ಎಂಬ ಚರ್ಚೆ ಹುಟ್ಟು ಹಾಕಿದೆ.
ಮಂಡ್ಯ ಕ್ಷೇತ್ರ ಜೆಡಿಎಸ್ ಪಾಲು
ಮಂಡ್ಯ ಲೋಕಸಭಾ ಕ್ಷೇತ್ರದಿಂದ ಎನ್ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಆಸೆ ಸುಮಲತಾ ಅವರಿಗೆ ಇತ್ತು. ಆದರೆ ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರು ನಿನ್ನೆ ನೀಡಿರುವ ಹೇಳಿಕೆಯಿಂದ ಮಂಡ್ಯ ಕ್ಷೇತ್ರ ಜೆಡಿಎಸ್ ಪಾಲಾಗಿದ್ದು, ಜೆಡಿಎಸ್ ಪಕ್ಷದ ನಾಯಕರೇ ಕಣಕ್ಕಿಳಿಯಲಿದ್ದಾರೆ. ಅಲ್ಲಿಗೆ ಮಂಡ್ಯದಿಂದ ಎನ್ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸುಮಲತಾ ಅಂಬರೀಶ್ ರವರ ಆಸೆ ಕಮರಿ ಹೋಗಿದೆ.

ಸಂಸದೆ ಸುಮಲತಾ ಅವರ ಈ ದುಸ್ಥಿತಿಗೆ ಅವರೇ ಕಾರಣವೆಂದರೆ ತಪ್ಪಾಗಲಾರದು. ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್ ಅವರ ಆಯ್ಕೆಗೆ ಕಾಂಗ್ರೆಸ್ ಪಕ್ಷದ ನಾಯಕರೇ ಕಾರಣರಾಗಿದ್ದರು.
2018ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋತು, ಜೆಡಿಎಸ್ ಅಭ್ಯರ್ಥಿಗಳು ಗೆದ್ದಿದ್ದರು. ನಂತರ ನಡೆದ ರಾಜಕೀಯ ಬದಲಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜೆಡಿಎಸ್ ಗೆ ಬೆಂಬಲ ನೀಡಿ ಎಚ್.ಡಿ. ಕುಮಾರಸ್ವಾಮಿ ಎರಡನೇ ಬಾರಿಗೆ ಮುಖ್ಯಮಂತ್ರಿ ಆಗಿದ್ದರು. ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲು ಕಂಡಿದ್ದರಿಂದ ಆ ಪಕ್ಷದ ನಾಯಕರು ಕುದಿಯುತ್ತಿದ್ದ ಸಂದರ್ಭದಲ್ಲಿಯೇ 2019 ರ ಲೋಕಸಭಾ ಚುನಾವಣೆ ಬಂದಿತ್ತು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲಾಗಿತ್ತು. ನಿಖಿಲ್ ಕುಮಾರಸ್ವಾಮಿ ಪರ ಕೆಲಸ ಮಾಡಲು ಒಲ್ಲದ ಜಿಲ್ಲಾ ಕಾಂಗ್ರೆಸ್ ನಾಯಕರು ಸುಮಲತಾ ಅಂಬರೀಶ್ ಅವರಿಗೆ ಮತ ಹಾಕಿಸಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಸೇಡು ತೀರಿಸಿಕೊಂಡಿದ್ದರು. ಅತ್ತ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸೋಲಿಗೂ ಅಲ್ಲಿನ ಕಾಂಗ್ರೆಸ್ ನಾಯಕರು ಕಾರಣರಾಗಿದ್ದರು.
ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್, ಬಿಜೆಪಿ,ರೈತಸಂಘ ಎಲ್ಲರೂ ಸೇರಿ ಸುಮಲತಾ ಅಂಬರೀಶ್ ಅವರಿಗೆ ಮತ ಹಾಕಿಸಿದ್ದರಿಂದ ಸುಮಲತಾ ಅವರು 1,25,000 ಕ್ಕೂ ಅಧಿಕ ಮತಗಳಿಂದ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಿ ಸಂಸದೆಯಾಗಿ ಆಯ್ಕೆಯಾದರು.

ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಲಿಲ್ಲ
ಇದಾದ ನಂತರ ಸುಮಲತಾ ಅಂಬರೀಶ್ ತನ್ನ ಗೆಲುವಿಗೆ ಕಾರಣರಾದ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಲಿಲ್ಲ. ಇತ್ತ ಪಕ್ಷೇತರ ಸಂಸದೆಯಾಗಿ ಮಂಡ್ಯ ಕ್ಷೇತ್ರಕ್ಕೆ ದೊಡ್ಡ ಮಟ್ಟದಲ್ಲಿ ಗುರುತರವಾದ ಅಭಿವೃದ್ಧಿ ಕೆಲಸಗಳನ್ನು ಮಾಡಲಿಲ್ಲ. ಮಾಡಿದ್ದರೆ ಕಾಂಗ್ರೆಸ್-ಬಿಜೆಪಿ ಪಕ್ಷಗಳ ನಾಯಕರು ಹಾಗೂ ಕ್ಷೇತ್ರದ ಜನರೇ ದೊಡ್ಡ ಮಟ್ಟದಲ್ಲಿ ಸುಮಲತಾ ಪರ ದನಿ ಎತ್ತುತ್ತಿದ್ದರು. ಆದರೆ ಈ ರೀತಿಯ ವಾತಾವರಣವನ್ನು ಅವರು ಸೃಷ್ಟಿ ಮಾಡಿಕೊಳ್ಳಲಿಲ್ಲ.
ಮಂಡ್ಯದಲ್ಲಿ ನೆಪಮಾತ್ರಕ್ಕೆ ಮನೆ ಮಾಡಿ ಬೆಂಗಳೂರಿನ ತಮ್ಮ ಜೆ.ಪಿ.ನಗರ ನಿವಾಸದಿಂದಲೇ ಕಾರ್ಯಭಾರ ಆರಂಭಿಸಿದ ಸುಮಲತಾ ಅವರು ಮಂಡ್ಯ ಜನರ ಕೈಗೆ ಸಿಗದೆ ಗಗನ ಕುಸುಮರಾದರು. ಅವರ ಹಿಂದಿದ್ದ ಮೂರ್ನಾಲ್ಕು ಜನರನ್ನು ಭೇಟಿ ಮಾಡಲು ಹಿರಿಯ ನಾಯಕರು ನಿರಾಕರಿಸಿದರೆ, ಜನರೂ ಕೂಡ ಸುಮಲತಾ ಅವರು ನಮ್ಮ ಕೈಗೆ ಸಿಗುವ ನಾಯಕಿ ಅಲ್ಲವೆಂದು ತೀರ್ಮಾನಕ್ಕೆ ಬಂದರು. ಗಣಿಗಾರಿಕೆ ವಿಷಯವಾಗಿ ಜೆಡಿಎಸ್ ಸ್ಥಳೀಯ ನಾಯಕರೊಂದಿಗೆ ಮಾತಿನ ಸಮರ ಇಟ್ಟುಕೊಂಡ ಕಾರಣಕ್ಕೆ ಸುದ್ದಿ ಮಾಡಿದರೂ ಇದರಿಂದ ಕ್ಷೇತ್ರದ ಜನರಿಗೆ ಏನು ಲಾಭವಿಲ್ಲ ಎಂದು ಜನರು ಭಾವಿಸಿದರು. ಕೇಂದ್ರೀಯ ವಿದ್ಯಾಲಯಕ್ಕೆ ಅನುದಾನ ತಂದಿದ್ದು, ಲೋಕಸಭಾ ಅನುದಾನದಲ್ಲಿ ಕೆಲವೊಂದು ಅಭಿವೃದ್ಧಿ ಕೆಲಸ ಮಾಡಿದ್ದು, ದಿಶಾ ಸಭೆ ನಡೆಸಿದ್ದು ಕೂಡ ಜನರ ಗಮನ ಸೆಳೆಯಲಿಲ್ಲ.
ಬಿಜೆಪಿ ಪಕ್ಷಕ್ಕೆ ಬೆಂಬಲ
ಅತ್ತ ರಾಷ್ಟ್ರಮಟ್ಟದ ಬಿಜೆಪಿ ನಾಯಕರೊಂದಿಗೆ ಉತ್ತಮ ಸಂಪರ್ಕವನ್ನು ಇಟ್ಟುಕೊಂಡಿದ್ದ ಸುಮಲತಾ ತಮ್ಮ ಕ್ಷೇತ್ರಕ್ಕೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದಿತ್ತು. ಆದರೆ ಜನರು ಗುರುತಿಸುವಂತಹ ಯಾವ ಅಭಿವೃದ್ಧಿ ಕಾರ್ಯಗಳನ್ನು ಮಾಡಲಿಲ್ಲ. ಇದರಿಂದ ಕ್ಷೇತ್ರದ ಜನರು ಕೂಡ ಇವರ ಪರ ವಿಶ್ವಾಸವನ್ನು ಕಳೆದುಕೊಂಡರು. 2023ರ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ಪಕ್ಷಕ್ಕೆ ತನ್ನ ಬೆಂಬಲವನ್ನು ಸುಮಲತಾ ಅಂಬರೀಶ್ ಘೋಷಿಸಿದರು. ಮಂಡ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಬಂದಾಗ ವೇದಿಕೆಯಲ್ಲಿ ಕಾಣಿಸಿಕೊಂಡರು. ಆದರೆ ಅಧಿಕೃತವಾಗಿ ಬಿಜೆಪಿ ಪಕ್ಷವನ್ನು ಸೇರಲಿಲ್ಲ. ಬಿಜೆಪಿ ನಾಯಕರು ಕೂಡ ಇವರ ಬಗ್ಗೆ ವಿಶೇಷವಾದ ಆಸಕ್ತಿಯನ್ನೂ ತೋರಿಸಲಿಲ್ಲ. ತಮ್ಮ ಗೊಂದಲದ ರಾಜಕೀಯ ನಿರ್ಧಾರಗಳಿಂದ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಕ್ಕೆ ಅಧಿಕೃತವಾಗಿ ಸೇರದೆ ಕಾಲ ಕಳೆದರು. ಕೊನೆಗೆ ಮಂಡ್ಯದಿಂದ ಬಿಜೆಪಿ ಟಿಕೆಟ್ ಮೇಲೆ ಸ್ಪರ್ಧೆ ಮಾಡುತ್ತೇನೆ ಎಂದು ಹೇಳುತ್ತಾ ಬಿಜೆಪಿ ರಾಷ್ಟ್ರಮಟ್ಟದ ನಾಯಕರಾದ ನರೇಂದ್ರ ಮೋದಿ, ಅಮಿತ್ ಷಾ, ಜೆ.ಪಿ. ನಡ್ದಾ, ಬಿ.ಎಲ್. ಸಂತೋಷ್ ಅವರನ್ನು ಭೇಟಿ ಮಾಡಿ ಟಿಕೆಟ್ ನೀಡುವಂತೆ ಕೇಳಿಕೊಂಡರೂ ಅವರು ಸ್ಪಂದಿಸಲೇ ಇಲ್ಲ.
ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಜೆಡಿಎಸ್ ಪಕ್ಷಕ್ಕೆ ಮಂಡ್ಯ ಲೋಕಸಭಾ ಕ್ಷೇತ್ರ ನೀಡಲಾಗಿದೆ. ಇದರಿಂದ ಬೇಸರಗೊಂಡಿರುವ ಸುಮಲತಾ ಅವರ ಮುಂದಿನ ರಾಜಕೀಯ ನಡೆ ಏನು ಎಂಬುದು ಕುತೂಹಲ ಮೂಡಿಸಿದೆ. ಕಳೆದ ಚುನಾವಣೆಯಂತೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಗೆಲ್ಲುವ ವಾತಾವರಣವೂ ಈ ಬಾರಿ ಇಲ್ಲ. ಜಿಲ್ಲೆಯ ಕಾಂಗ್ರೆಸ್ ನಾಯಕರ ಕಾರಣದಿಂದಲೇ
ಗೆದ್ದಿದ್ದ ಸುಮಲತಾ ಅವರು ಮೈತ್ರಿ ಸರ್ಕಾರ ಬಿದ್ದ ನಂತರವಾದರೂ ಕಾಂಗ್ರೆಸ್ ಪಕ್ಷ ಸೇರಿದ್ದರೆ ಇವತ್ತಿನ ಸ್ಥಿತಿ ಅವರಿಗೆ ಬರುತ್ತಿರಲಿಲ್ಲ. ಬಿಜೆಪಿ ರಾಷ್ಟ್ರ ನಾಯಕರೊಂದಿಗಿನ ಒಡನಾಟ ಬಿಜೆಪಿ ಟಿಕೆಟ್ ಕೊಡಿಸುತ್ತದೆ ಎಂದು ನಂಬಿದ್ದರು. ಈಗ ಅವರನ್ನು ಬಿಜೆಪಿ ಪಕ್ಷ ನಡುನೀರಿನಲ್ಲಿ ಕೈ ಬಿಟ್ಟಿದೆ. ಟಿಕೆಟ್ ಸಿಗದೆ ಬೇಸರಗೊಂಡಿರುವ ಅವರ ಮುಂದಿನ ನಿಲುವೇನು ಎಂಬುದು ಕೆಲದಿನಗಳಲ್ಲಿ ಗೊತ್ತಾಗಲಿದೆ. ಅಲ್ಲಿಯವರೆಗೂ ಕೂತೂಹಲವಷ್ಟೇ ಉಳಿದಿರೋದು.




