Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ ಜಿಲ್ಲೆಯ ಸಾಮಾನ್ಯ ರೈತನ ಮಗನನ್ನು ಗೆಲ್ಲಿಸಿ ಸಂಸತ್ತಿಗೆ ಕಳುಹಿಸಿ: ಸ್ಟಾರ್ ಚಂದ್ರು

‘ನನಗೆ ರಾಜಕೀಯ ಹೊಸದಲ್ಲ. ಇಷ್ಟು ದಿನ ರಾಜಕೀಯದ ಹಿಂದೆ ನಿಂತಿದ್ದೆ, ಈಗ ಮುಂದೆ ಬಂದಿದ್ದೇನೆ. ನಾನು ಜನರ ಮಧ್ಯೆ ಇರುವವನು. ಸಂಸತ್ತಿನಲ್ಲಿ ನಿಮ್ಮ ದನಿಯಾಗುತ್ತೇನೆ’ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಹೇಳಿದರು.

ಮಳವಳ್ಳಿ ಪಟ್ಟಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ರೈತನ ಮಗ. ರೈತರ ಕಷ್ಟನಷ್ಟಗಳ ಬಗ್ಗೆ ನನಗೆ ಗೊತ್ತಿದೆ. ನಾನು ನಾಗಮಂಗಲ ತಾಲೂಕಿನವನೇ ಆಗಿದ್ದು ಮಂಡ್ಯ ಜಿಲ್ಲೆಯ ಸ್ಥಿಗತಿಗಳ ಬಗ್ಗೆ ನನಗೆ ಸಾಕಷ್ಟು ಅರಿವಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ನನ್ನನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

ಜನರ ಮಧ್ಯೆ ಇರುವವರು ಸ್ಟಾರ್ ಚಂದ್ರು

nudikarnataka.com Venkataramane Gowda (Star Chandru)

ಉಳುವವನನ್ನು ಭೂಮಿಯ ಒಡೆಯನನ್ನಾಗಿ ಮಾಡಿದ್ದು, ವೃದ್ದಾಪ್ಯ ವೇತನ ನೀಡಿದ್ದು, ಬಡಕುಟುಂಬಕ್ಕೆ ಶಕ್ತಿ ತುಂಬಿದ್ದು ಕಾಂಗ್ರೆಸ್. ದುಡುಕಿನ ನಿರ್ಧಾರ ಜಿಲ್ಲೆಯನ್ನು ನೂರು ವರ್ಷದಷ್ಟು ಹಿಂದಕ್ಕೆ ಕರೆದೊಯ್ಯುತ್ತದೆ.‌ ರಾಜಕೀಯ ತೀರ್ಮಾನ ನಿಮ್ಮ ಕೈಯಲ್ಲಿದೆ, ನಾವು ಜಿಲ್ಲೆಯ ಉಳಿವಿಗಾಗಿ ಹೋರಾಟ ಮಾಡುತ್ತಿದ್ದೇವೆ, ನಮ್ಮೊಂದಿಗೆ ಕೈ ಜೋಡಿಸಿ ಎಂದು ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಮನವಿ ಮಾಡಿದರು.

ಸೋಲು ಕುಮಾರಸ್ವಾಮಿ ಅವರಿಗೆ ಹೊಸದಲ್ಲ

ಲೋಕಸಭೆ ಸೋಲು ಕುಮಾರಸ್ವಾಮಿ ಅವರಿಗೆ ಹೊಸದಲ್ಲ. ಅವರ ಸೋಲಿನಿಂದ ಏನೂ ಆಗಲ್ಲ. ಜನರು ಕರೆದಾಗ ಬರುವವರು ಸ್ಟಾರ್ ಚಂದ್ರು ಅವರೇ ಹೊರತು ಕುಮಾರಸ್ವಾಮಿ ಬರ್ತಾರ? ಅವರ ಪಕ್ಷದ ಅಸ್ತಿತ್ವಕ್ಕೆ ಜಿಲ್ಲೆಯನ್ನೇಕೆ ಬಲಿ ಕೊಡಬೇಕು ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಜಾತಿ ವಿರೋಧಿ ಅಲ್ಲ. ದೇವೇಗೌಡರ ಮೇಲೆ ಗೌರವ ಇದೆ. ಹಿಂದೆ ಎಸ್.ಎಂಕೃಷ್ಣ, ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಗೆ ಬರುವಂತೆ ಆಹ್ವಾನ ನೀಡಿದರೂ ನಿಮ್ಮ ಜೊತೆ ನಿಂತೆ.
ಕುಮಾರಸ್ವಾಮಿ ಅವರನ್ನು ಸಿಎಂ ಮಾಡಲು ಸಾಕಷ್ಟು ಶ್ರಮಿಸಿದ್ದೆವು, ಒಂದು ರೂಪಾಯಿ ಪಡೆದಿರಲಿಲ್ಲ. ಜಿಲ್ಲೆಯಲ್ಲಿ ಜಾತಿಯನ್ನು ಏಕೆ ತರುತ್ತೀರಿ ವಿರೋಧಿಗಳಿಗೆ ತಿರುಗೇಟು ನೀಡಿದರು.

ಹುಚ್ಚೇಗೌಡರ ಸೊಸೆಗೆ ಅತಿ ಹೆಚ್ಚು ಲೀಡ್ ಕೊಟ್ಟಿದ್ದು ಮಳವಳ್ಳಿ

ಶಾಸಕ ನರೇಂದ್ರಸ್ವಾಮಿ ಮಾತನಾಡಿ, ಜನರ ಜೊತೆ ಜವಾಬ್ದಾರಿಯಿಂದ ಯಾರು ಇರ್ತಾರೆ ಅವರ ಕೈ ಬಲಪಡಿಸಬೇಕು. ಐದು ವರ್ಷ ಶಾಸಕರಾಗಿದ್ದವರು ಮಳವಳ್ಳಿಗೆ ಒಂದು ಯೋಜನೆ ತರಲಿಲ್ಲ, ಗೆಸ್ಟ್ ಹೌಸ್ ನಲ್ಲಿ ನಿದ್ದೆ ಮಾಡುತಿದ್ದರು ಎಂದು ಮಾಜಿ ಶಾಸಕ ಅನ್ನದಾನಿ ವಿರುದ್ದ ಕಿಡಿಕಾರಿದರು.

ಮಳವಳ್ಳಿ ಕುಡಿಯುವ ನೀರಿನ ಯೋಜನೆಗಳನ್ನು ಸಿದ್ದರಾಮಯ್ಯ ಅವರಿಂದ ತರಲಾಗಿದೆ. ನಮ್ಮ ಕಾರ್ಯಕರ್ತರು, ಜನರ ಸೇವೆಗೆ ತೊಡಕಾಗದಂತೆ ನೋಡಿಕೊಳ್ಳುತ್ತಿದ್ದಾರೆ. ನಾನು ಜೆಡಿಎಸ್ ಗೆ ಕೆಲಸ ಮಾಡಲ್ಲ ಎಂದು 2019ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರಿಗೆ ಹೇಳಿದ್ದೆ. ಮಳವಳ್ಳಿ ಹುಚ್ಚೇಗೌಡರ ಸೊಸೆಗೆ ಅತಿ ಹೆಚ್ಚು ಲೀಡ್ ಕೊಟ್ಟಿದ್ದು ಮಳವಳ್ಳಿ ಕ್ಷೇತ್ರ. ಮಳವಳ್ಳಿ ಗೆ ಅವಮಾನ ಆಗದಂತೆ ನಿಮ್ಮ ನಡೆ ಇರಲಿ ಜನರಲ್ಲಿ ಮನವಿ ಮಾಡಿದರು.

ಸಂವಿಧಾನ ಬದಲಿಸುತ್ತೇವೆ ಎಂದವರ ಜೊತೆ ಹೋಗಿದ್ದೀರಿ

ರಾಮನಗರ, ಕನಕಪುರ, ಸಾತನೂರು, ಚಿಕ್ಕಬಳ್ಳಾಪುರ ಟೂರಿಂಗ್‌ ಟಾಕಿಸ್ ಬಗ್ಗೆ ಮಾತನಾಡಲ್ಲ.‌ ಕಳೆದ ಚುನಾವಣೆಯಲ್ಲಿ ಮೋದಿಯನ್ನು ಟೀಕಿಸಿದರು. ಮೋದಿ ಅಧಿಕಾರಕ್ಕೆ ಬಂದ್ರೆ ದೇಶ ಬಿಡ್ತಿನಿ ಎಂದು ಹೇಳಿದ್ದೀರಿ. ಮೂರು ಸೀಟಿಗಾಗಿ ಅವರ ಜೊತೆ ಹೋಗಿದ್ದೀರಿ. ನಿಮ್ಮ ಪಕ್ಷದ ಬಗ್ಗೆ ಮಾತನಾಡಲ್ಲ, ಆದರೆ ಸಂವಿಧಾನ ಬದಲಿಸುತ್ತೇವೆ ಎಂದವರ ಜೊತೆ ಹೋಗಿದ್ದೀರಿ. ನಿಮಗೆ ಜಾತ್ಯತೀತ ತತ್ವ ಇದೆಯೇ? ಮೊದಲು ಜಾತ್ಯತೀತ ಪದ ತೆಗೆಯಿರಿ ಎಂದು ಜೆಡಿಎಸ್ ನಾಯಕರ ವಿರುದ್ದ ಕಿಡಿಕಾರಿದರು.

ಸಮಾವೇಶದಲ್ಲಿ ಶಾಸಕರಾದ ರಮೇಶ್ ಬಾಬು ಬಂಡಿಸಿದ್ದೇಗೌಡ, ಗಣಿಗ ರವಿಕುಮಾರ್, ವಿಧಾನಪರಿಷತ್ ಮಾಜಿ ಸದಸ್ಯರಾದ ಮರಿತಿಬ್ಬೇಗೌಡ, ರಾಮಕೃಷ್ಣ, ಕಾಂಗ್ರೆಸ್ ಮುಖಂಡರಾದ ದೊಡ್ಡಯ್ಯ, ರಾಜೀವ್, ಅಂಜನ ಶ್ರೀಕಾಂತ್, ಡಾ. ಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ