Sunday, November 22, 2026

ಪ್ರಾಯೋಗಿಕ ಆವೃತ್ತಿ

ಮತಗಟ್ಟೆಗಳಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳಿ: ನೀರಜ್ ಕುಮಾರ್

ಸಾರ್ವಜನಿಕರು ಮತದಾನ ಮಾಡಲು ಮತಗಟ್ಟೆಗೆ ಆಗಮಿಸಿದಾಗ ಅವರಿಗೆ ತೊಂದರೆಯಾಗದಂತೆ ಕುಡಿಯುವ ನೀರು, ಶೌಚಾಲಯ, ರ‍್ಯಾಂಪ್ ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ವ್ಯವಸ್ಥೆಗಳು ಇರಬೇಕು. ಈ ಕುರಿತಂತೆ ಸಹಾಯಕ ಚುನಾವಣಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮತಗಟ್ಟೆಗಳನ್ನು ಪರಿಶೀಲಿಸಿಕೊಳ್ಳಬೇಕು ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಸಾಮಾನ್ಯ ಚುನಾವಣಾ ವೀಕ್ಷಕ ನೀರಜ್ ಕುಮಾರ್ ತಿಳಿಸಿದರು.

ಮಂಡ್ಯ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಇಂದು ಆಯೋಜಿಸಲಾಗಿದ್ದ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಯಬೇಕು. ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

85 ವರ್ಷ ಮೇಲ್ಪಟ್ಟ ಹಾಗೂ ವಿಕಲಚೇತನರಿಗೆ ಮನೆಯಿಂದ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಅರ್ಹರಿಗೆ ಫಾರಂ 12 ಡಿ ನೀಡಿ ಸಮ್ಮತಿ ಪಡೆದಿರುವ ಬಗ್ಗೆ, ಮತದಾನಕ್ಕೆ ಮಾಡಿಕೊಂಡಿರುವ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದುಕೊಂಡ ವೀಕ್ಷಕರು. ಜಿಲ್ಲೆಯಲ್ಲಿ ಹೆಚ್ಚು ಮತದಾನ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿ, ಸಾರ್ವಜನಿಕರಿಗೆ ಮತದಾನದ ಮಹತ್ವದ ಬಗ್ಗೆ ತಿಳಿಸಿ ಎಂದರು.

ಅಭ್ಯರ್ಥಿಗಳ ಚುನಾವಣಾ ವೆಚ್ಚಗಳ ಪರಿಶೀಲನೆ

ಮಂಡ್ಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಚುನಾವಣಾ ಪ್ರಚಾರದ ಅವಧಿಯಲ್ಲಿ ( ನಾಮಪತ್ರ ಸಲ್ಲಿಕೆ ದಿನಾಂಕದಿಂದ ಫಲಿತಾಂಶ ಘೋಷಣೆ ದಿನಾಂಕದವರೆಗೆ) ಮಾಡುವ ವೆಚ್ಚಗಳ ವಿವರಗಳನ್ನು ನಾಮಪತ್ರ ಸಲ್ಲಿಕೆ ದಿನಾಂಕದಂದು ಒದಗಿಸಿರುವ ಭಾಗ ಎ, ಬಿ ಮತ್ತು ಸಿ ವಹಿಗಳಲ್ಲಿ ನಿರ್ವಹಿಸಿ 3 ಬಾರಿ ಚುನಾವಣಾ ಆಯೋಗದಿಂದ ನೇಮಿಸಲ್ಪಟ್ಟಿರುವ ಚುನಾವಣಾ ವೆಚ್ಚದ ವೀಕ್ಷಕರ ಪರಿಶೀಲನೆಗೆ ಒಳಪಡಿಸಬೇಕಾಗಿರುತ್ತದೆ.

ಅಭ್ಯರ್ಥಿಗಳು ನಿರ್ವಹಿಸಿರುವ ಚುನಾವಣಾ ವೆಚ್ಚ ವಿವರದ ವಹಿಗಳನ್ನು ಚುನಾವಣಾ ವೆಚ್ಚ ವೀಕ್ಷಕರುಗಳಾದ ರೋಹಿತ್ ಅಸ್ಸುದಾನಿ ಹಾಗೂ ಕುಮಾರ್ ಪ್ರಿಯತಮ್ ಅಶೋಕ್ ಅವರು ಏಪ್ರಿಲ್ 10 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮೊದಲನೇ ಪರಿಶೀಲನೆ, ಏಪ್ರಿಲ್ 16 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಎರಡನೇ ಪರಿಶೀಲನೆ ಮತ್ತು ಏಪ್ರಿಲ್ 23 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮೂರನೇ ಪರಿಶೀಲನೆಯನ್ನು ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಕೊಠಡಿ ಸಂಖ್ಯೆ 22 ರಲ್ಲಿ ನಡೆಸಲಿದ್ದಾರೆ.

ಸದರಿ ದಿನಾಂಕಗಳಂದು ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಭಾಗ ಎ,ಬಿ ಮತ್ತು ಸಿ ನಲ್ಲಿ ನಿರ್ವಹಿಸಿರುವ ವೆಚ್ಚ ವಹಿಗಳನ್ನು ತಪ್ಪದೇ ಚುನಾವಣಾ ವೆಚ್ಚ ವೀಕ್ಷಕರ ಪರಿಶೀಲನೆಗೆ ಹಾಜರುಪಡಿಸಲು ತಿಳಿಸಿದೆ. ತಪ್ಪಿದಲ್ಲಿ ನಿಯಮನುಸಾರ ಕ್ರಮ ವಹಿಸುವುದರ ಜೊತೆಗೆ ನೀಡಲಾಗಿರುವ ವಿವಿಧ ವಾಹನ ಅನುಮತಿಗಳನ್ನು ಹಿಂಪಡೆಯಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿಗಳಾದ ಡಾ. ಕುಮಾರ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚುನಾವಣೆಯಲ್ಲಿ ನಡೆಯುವ ಅಕ್ರಮಗಳ ಬಗ್ಗೆ ಸಾರ್ವಜನಿಕರು ಸಿ.ವಿಜಿಲ್ ಆ್ಯಪ್ ಮೂಲಕ ದೂರುಗಳನ್ನು ಸಲ್ಲಿಸಬಹುದಾಗಿದ್ದು, ಬರುವ ದೂರುಗಳನ್ನು 100 ನಿಮಿಷದಲ್ಲಿ ವಿಲೇವಾರಿ ಮಾಡಬೇಕು. ಯಾವುದೇ ಚುನಾವಣಾ ಅಕ್ರಮಗಳಿಗೆ ಅವಕಾಶ ನೀಡದಂತೆ ಚುನಾವಣಾ ಪ್ರಚಾರಗಳಿಗೆ ಬಳಸುವ ವಸ್ತುಗಳನ್ನು ಸರಿಯಾಗಿ ಲೆಕ್ಕ ಮಾಡಿ ವರದಿಯನ್ನು ವೆಚ್ಚವೀಕ್ಷಕರಿಗೆ ಒದಗಿಸಿ ಎಂದರು.

ದೊಡ್ಡ ರ‍್ಯಾಲಿಗಳು, ಚುನಾವಣಾ ಪ್ರಚಾರ ಸಮಾರಂಭಗಳು ನಡೆಯುವ ಸಂದರ್ಭದಲ್ಲಿ ಸ್ಥಳದ ವ್ಯಾಪ್ತಿಗೆ ನಿಯೋಜನೆಗೊಂಡಿರುವ ಎಫ್.ಎಸ್.ಟಿ ಹಾಗೂ ವಿವಿಟಿ ತಂಡದವರು ಪೂರ್ಣಪ್ರಮಾಣದಲ್ಲಿ ನಿಗಾ ಇಡಲು ಸಾಧ್ಯವಾಗುವುದಿಲ್ಲ. ಹೆಚ್ಚಿನ ಎಫ್.ಎಸ್.ಟಿ ಹಾಗೂ ವಿವಿಟಿ ತಂಡದವರನ್ನು ನಿಯೋಜಿಸುವಂತೆ ಚುನಾವಣಾ ವೆಚ್ಚ ವೀಕ್ಷಕರಾದ ರೋಹಿತ್ ಅಸುದಾನಿ ಅವರು ತಿಳಿಸಿದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ವೀಕ್ಷಕರುಗಳಿಗೆ ಚುನಾವಣೆಗೆ ಸಂಬಂಧಿಸಿದಂತೆ ವಿವಿಧ ನೋಡಲ್ ಅಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳ ನೇಮಕ, ಮತದಾರರ ಸಂಖ್ಯೆ, ಮತಗಟ್ಟೆಗಳು, ಸೂಕ್ಷ ಮತಗಟ್ಟೆ, ಚೆಕ್ ಪೋಸ್ಟ್, 85 ವರ್ಷ ಮೇಲ್ಪಟ್ಟ ಹಾಗೂ ವಿಕಲಚೇತನರಿಗೆ ಮನೆಯಿಂದ ಮತದಾನ ಮಾಡಲು ಮಾಡಿರುವ ವ್ಯವಸ್ಥೆಗಳ ಬಗ್ಗೆ ವಿವರಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್ ಮಾತನಾಡಿ, ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಸ್ವೀಪ್ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಮುಖ್ಯವಾಗಿ ನಗರ ಪ್ರದೇಶದಲ್ಲಿ ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದಾಗಿ ತಿಳಿಸಿದರು.

ಸಭೆಯಲ್ಲಿ ಚುನಾವಣಾ ವೆಚ್ಚ ವೀಕ್ಷಕರಾದ ಕುಮಾರ್ ಪ್ರಿಯತಮ್ ಅಶೋಕ್, ಪೊಲೀಸ್ ವೆಚ್ಚ ವೀಕ್ಷಕರಾದ ದೀಪ ಸತ್ಯನ್, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಸಂಜೀವಪ್ಪ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಸಭೆಯ ನಂತರ ಸಾಮಾನ್ಯ ಚುನಾವಣಾ ವೀಕ್ಷಕರಾದ ನೀರಾಜ್ ಕುಮಾರ್, ಚುನಾವಣಾ ವೆಚ್ಚ ವೀಕ್ಷಕರಾದ ರೋಹಿತ್ ಅಸುದಾನಿ, ಕುಮಾರ್ ಪ್ರಿಯತಮ್ ಅಶೋಕ್, ಪೊಲೀಸ್ ವೆಚ್ಚ ವೀಕ್ಷಕರಾದ ದೀಪ ಅವರು ಮಸ್ಟರಿಂಗ್ ಹಾಗೂ ಡಿ ಮಸ್ಟರಿಂಗ್ ನಡೆಯುವ ಮಂಡ್ಯ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ