Sunday, May 19, 2024

ಪ್ರಾಯೋಗಿಕ ಆವೃತ್ತಿ

ಮೇಲುಕೋಟೆ ಕ್ಷೇತ್ರ: ಅಚ್ಚರಿ ತಂದ ಸಚಿನ್ ಮೀಗಾ ಅರ್ಜಿ…!

ಮೇಲುಕೋಟೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಬಯಸಿ ಕೆಪಿಸಿಸಿ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮೀಗಾ ಅರ್ಜಿ ಸಲ್ಲಿಸಿ ಎಲ್ಲರಲ್ಲಿ ಅಚ್ಚರಿ ಮೂಡಿಸಿದ್ದಾರೆ.

ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮೀಗಾ ಗ್ರಾಮದ ಸಚಿನ್ ಮೀಗಾ ಪಾಂಡವಪುರ ತಾಲ್ಲೂಕಿನ ಮೇಲುಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಬಿ.ಫಾರಂ ಕೊಡಿ ಎಂದು ಅರ್ಜಿ ಸಲ್ಲಿಸಿರುವುದು ಎಲ್ಲರ ಗಮನ ಸೆಳೆಯುವಂತೆ ಮಾಡಿದೆ. ಇವರು ಚಿಕ್ಕಮಗಳೂರು ಹಾಗೂ ಶೃಂಗೇರಿ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಹಾಗೂ ಬಿಜಾಪುರದ ದೇವರ ಹಿಪ್ಪರಗಿ ಕ್ಷೇತ್ರದಿಂದಲೂ ಅರ್ಜಿ ಹಾಕಿದ್ದಾರೆ.

ತಮ್ಮ ಸ್ಪರ್ಧೆ ಬಗ್ಗೆ ನುಡಿ ಕರ್ನಾಟಕ. ಕಾಮ್ ಜೊತೆ ಮಾತನಾಡಿದ ಸಚಿನ್ ಮೀಗಾ ಅವರು,
ಮೇಲುಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ರೈತ ಸಂಘದ ಮಧ್ಯೆ ಇದುವರೆಗೂ ಹೊಂದಾಣಿಕೆಯಿದೆ. ಅದರಲ್ಲಿಯೂ ರೈತ ಸಂಘಕ್ಕೆ ಹೆಚ್ಚಿನ ಸಲ ಕಾಂಗ್ರೆಸ್ ಬೆಂಬಲ ನೀಡಿದೆ. ಪಾಂಡವಪುರ ತಾಲೂಕಿನಲ್ಲಿ ಕಾಂಗ್ರೆಸ್ ಕಿಸಾನ್ ಘಟಕ ಸಂಘಟನೆ ಚೆನ್ನಾಗಿದೆ. ಈ ಹಿನ್ನಲೆಯಲ್ಲಿ ಈ ಬಾರಿ ಕಿಸಾನ್ ಘಟಕಕ್ಕೆ ಒಂದು ಅವಕಾಶ ನೀಡಿ ಎಂದು ಎಐಸಿಸಿ ಹಾಗೂ ಕೆಪಿಸಿಸಿ ನಾಯಕರಿಗೆ ಮನವಿ ಮಾಡಿದ್ದೇವೆ. ವರಿಷ್ಠರು ಅವಕಾಶ ನೀಡಿದರೆ ಸ್ಪರ್ಧೆ ಮಾಡುವುದಾಗಿ ತಿಳಿಸಿದರು.

ಹಾಗೆಯೇ ಶಿವಮೊಗ್ಗದ ತೀರ್ಥಹಳ್ಳಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಆರ್.ಎಂ.ಮಂಜುನಾಥ ಗೌಡ ಅವರು ಪ್ರಯತ್ನ ಮಾಡಿದ್ದಾರೆ. ಇಬ್ಬರೂ ಸ್ಪರ್ಧೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ಹೊಂದಾಣಿಕೆಯ ಅಭ್ಯರ್ಥಿಯಾಗಿ ಮೂರನೆಯವನಾದ ನನಗೆ ಒಂದು ಅವಕಾಶ ಕೊಡಬಹುದೆಂದು ನಿರೀಕ್ಷೆ ಮಾಡಿ ಅರ್ಜಿ ಹಾಕಿದ್ದೇನೆ. ಶೃಂಗೇರಿ, ದೇವರ ಹಿಪ್ಪರಗಿ ಹಾಗೂ ಚಿಕ್ಕಮಗಳೂರು ಕ್ಷೇತ್ರದ ಬಿ.ಫಾರಂ ಬಯಸಿ ಅರ್ಜಿ ಹಾಕಿದ್ದು,ವರಿಷ್ಠರ ತೀರ್ಮಾನಕ್ಕೆ ಬದ್ಧನಾಗಿದ್ದೇನೆ ಎಂದು ತಿಳಿಸಿದರು.

ಈಗಾಗಲೇ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಎಚ್.ಎನ್.ರವೀಂದ್ರ, ಜಿ.ಪಂ. ಮಾಜಿ ಸದಸ್ಯ ಎಚ್.ತ್ಯಾಗರಾಜ್, ನಿವೃತ್ತ ನ್ಯಾಯಾಧೀಶ ಶಿವಪ್ಪ ಅವರ ಸಹೋದರ ನಾಗಭೂಷಣ್, ಉದ್ಯಮಿ ಆನಂದಕುಮಾರ್, ಕೆಪಿಸಿಸಿ ಮಾಜಿ ಸದಸ್ಯ ಎಲ್.ಡಿ.ರವಿ ಕಾಂಗ್ರೆಸ್ ಬಿ.ಫಾರಂಗಾಗಿ ಅರ್ಜಿ ಹಾಕಿದ್ದು,ಯಾರ ‘ಕೈ’ ಗೆ ಬಿ.ಫಾರಂ ಸಿಗುವುದೋ ಎಂಬುದು ಕುತೂಹಲ ಮೂಡಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!