Thursday, November 19, 2026

ಪ್ರಾಯೋಗಿಕ ಆವೃತ್ತಿ

ಕೆ.ಆರ್.ನಗರ| ಒಕ್ಕಲಿಗ ಸಮಾಜದ ಬೆಂಬಲ ಕೋರಿದ ಸ್ಟಾರ್ ಚಂದ್ರು

ಎಲ್ಲಾ ಸಮುದಾಯದವರನ್ನು ಒಟ್ಟಿಗೆ ಕರೆದೊಯ್ಯುವ ಪಕ್ಷ ಕಾಂಗ್ರೆಸ್. ಈ ಚುನಾವಣೆಯಲ್ಲಿ ನಾನಾ ಸಮುದಾಯದ ಮುಖಂಡರು ನನ್ನನ್ನು ಬೆಂಬಲಿಸುತ್ತಿದ್ದು ಒಕ್ಕಲಿಗ ಸಮಾಜ ಕೂಡ ನನ್ನನ್ನು ಬೆಂಬಲಿಸಿ ಆಶೀವರ್ದಿಸಬೇಕೆಂದು ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರು ಮನವಿ ಮಾಡಿದರು.

ಕೆ.ಆರ್.ನಗರ ಪಟ್ಟಣದ ಕೆ.ಆರ್.ನಗರ ಬ್ಲಾಕ್ ಕಾಂಗ್ರೆಸ್ ಹಾಗೂ ಸಾಲಿಗ್ರಾಮ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಒಕ್ಕಲಿಗ ಸಮಾಜದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ನಾನು ಮಂಡ್ಯ ಜಿಲ್ಲೆಯ ರೈತನ ಮಗ. ನಿಮ್ಮ ಸೇವೆ ಮಾಡಲು ಬಂದಿದ್ದೇನೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ರವಿಶಂಕರ್ ಅವರನ್ನು ಬೆಂಬಲಿಸಿ ಆಶೀವರ್ದಿಸಿದಂತೆ ಈ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ಕೇಳಿಕೊಂಡರು.

ಒಕ್ಕಲಿಗರಿಗೆ 8 ಬಿ.ಫಾರಂ

ವಿಧಾನಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ ಮಾತನಾಡಿ, ಮಂಡ್ಯ ಲೋಕಸಭಾ ಚುನಾವಣೆ ದೇಶದ ಗಮನ ಸೆಳೆದಿದೆ. ಒಕ್ಕಲಿಗ ಸಮಾಜಕ್ಕೆ 8 ಸ್ಥಾನಗಳನ್ನು ಕೊಡುವ ಮೂಲಕ ಈ ಸಮಾಜಕ್ಕೆ ಶಕ್ತಿ ತುಂಬುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ ಎಂದರು.

ವಿಧಾನಸಭಾ ಚುನಾವಣೆಯಲ್ಲಿ ರವಿಶಂಕರ್ ಅವರಿಗೆ ಒಕ್ಕಲಿಗರು ಬೆಂಬಲ ನೀಡಿದಂತೆ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಒಕ್ಕಲಿಗ ಸಮಾಜ ಕೈ ಹಿಡಿಯಬೇಕು. ಒಕ್ಕಲಿಗ ಸಮಾಜದ ಜೊತೆಗೆ ಇತರೆ ಸಮುದಾಯಗಳು ಕೂಡ ಕಾಂಗ್ರೆಸ್ ಅನ್ನು ಬೆಂಬಲಿಸಬೇಕು ಎಂದು ಕರೆಕೊಟ್ಟರು.

ಕೆ.ಆರ್.ನಗರ ಕ್ಷೇತ್ರದ ಅಭಿವೃದ್ಧಿಗೆ ರವಿಶಂಕರ್ ಅವರು ಸರ್ಕಾರದಿಂದ 200 ಕೋಟಿ ಅನುದಾನವನ್ನು ತಂದಿದ್ದಾರೆ. 1000 ಕೋಟಿ ರೂ. ಅನುದಾನ ಬಿಡುಗಡೆಗೆ ಪ್ರಸ್ತಾವನೆ ಕೂಡ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರೂ ಅಭಿವೃದ್ಧಿಗೆ ಕೈಜೋಡಿಸಲಿದ್ದಾರೆ. ಅವರು ಹಣ ಮಾಡಲು ರಾಜಕೀಯಕ್ಕೆ ಬಂದಿಲ್ಲ. ಕೇಂದ್ರ ಸರ್ಕಾರದಿಂದ ಅನುದಾನ ತರುವುದು ಹೇಗೆಂದು ಬಲ್ಲರು. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಬೆಂಬಲಿಸಿ ಎಂದರು.

ಒಕ್ಕಲಿಗರ ಬೆಂಬಲ

ಶಾಸಕ ರವಿಶಂಕರ್ ಮಾತನಾಡಿ, ಒಕ್ಕಲಿಗ ಸಮಾಜ ಕಾಂಗ್ರೆಸ್ ಬೆಂಬಲಿಸಿದ್ದರಿಂದ ಶಾಸಕನಾಗಿ ಆಯ್ಕೆಯಾದೆ. ವಿಧಾನಸಭೆಯಲ್ಲಿ ಬೆಂಬಲಿಸಿದಂತೆ ಲೋಕಸಭಾ ಚುನಾವಣೆಯಲ್ಲಿ ಸ್ಟಾರ್ ಚಂದ್ರು ಅವರನ್ನು ಬೆಂಬಲಿಸಬೇಕು. ಸರಳ ವ್ಯಕ್ತಿ, ರೈತ ಕುಟುಂಬದಿಂದ ಬಂದವರು ಎಂದು ಹೇಳಿದರು.

ವಿಧಾನಪರಿಷತ್ ಮಾಜಿ ಸದಸ್ಯರಾದ ಮರಿತಿಬ್ಬೇಗೌಡ ಮಾತನಾಡಿದರು. ಕೆಪಿಸಿಸಿ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ದೊಡ್ಡಸ್ವಾಮೇಗೌಡ ಸೇರಿದಂತೆ ಒಕ್ಕಲಿಗ ಸಮಾಜದ ಮುಖಂಡರು ಕಾರ್ಯಕರ್ತರು ಸಭೆಯಲ್ಲಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ