Monday, November 23, 2026

ಪ್ರಾಯೋಗಿಕ ಆವೃತ್ತಿ

ಡಿಆರ್ ಐ ನಿಂದ 51 ಕೋಟಿ ಮೌಲ್ಯದ ಚಿನ್ನ ವಶ


  • ಚಿನ್ನವನ್ನು  ಪೇಸ್ಟ್ ರೂಪದಲ್ಲಿ ಭಾರತ-ನೇಪಾಳ ಗಡಿಯ ಮೂಲಕ ಪಾಟ್ನಾಗೆ ಕಳ್ಳಸಾಗಣೆ

  • ಬಂಧಿತರಲ್ಲಿ ಏಳು ಸುಡಾನ್ ಪ್ರಜೆಗಳು ಮತ್ತು ಮೂವರು ಭಾರತೀಯರು

ಭಾರತ-ನೇಪಾಳದ ಗಡಿಯಲ್ಲಿ ಚಿನ್ನದ ಕಳ್ಳಸಾಗಣೆ ನಡೆಸುತ್ತಿದ್ದ ಸೂಡಾನ್ ಪ್ರಜೆಗಳ ಗ್ಯಾಂಗ್‌ ಅನ್ನು ಭಾರತೀಯ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಭೇದಿಸಿದೆ ಮತ್ತು ಸುಮಾರು 51 ಕೋಟಿ ರೂಪಾಯಿ ಮೌಲ್ಯದ 101.7 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದೆ. ಈ ಸಂಬಂಧ ಹತ್ತು ಖದೀಮರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ

ಪಾಟ್ನಾ, ಪುಣೆ ಮತ್ತು ಮುಂಬೈನಲ್ಲಿ ಕಳ್ಳಸಾಗಣೆ ತಡೆಹಿಡಿದ ನಂತರ ಕಳ್ಳಸಾಗಣೆ ಮಾಡುತ್ತಿದ್ದ ಚಿನ್ನವನ್ನು ವಶಪಡಿಸಿ ಕೊಳ್ಳಲಾಗಿದೆ. ಈ ಗ್ಯಾಂಗ್ ಕನಿಷ್ಠ ಹತ್ತು ಜನರ ತಂಡವಾಗಿದ್ದು – ಏಳು ಸುಡಾನ್ ಪ್ರಜೆಗಳು ಮತ್ತು ಮೂವರು ಭಾರತೀಯರಾಗಿದ್ದಾರೆ. ಈ ಕಾರ್ಯಚರಣೆಯನ್ನು ‘ಆಪರೇಷನ್ ಗೋಲ್ಡನ್ ಡಾನ್’ ಎಂಬ ಹೆಸರಿನಲ್ಲಿ ನಡೆಸಿ ಬಂಧಿಸಲಾಗಿದೆ ಎಂದು ಅವರು ಹೇಳಿದರು.

ಡಿಆರ್‌ಐ ಈ ಕಾರ್ಯಚರಣೆಯ ವೇಳೆ 1.35 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಭಾರತೀಯ ಮತ್ತು ವಿದೇಶಿ ಕರೆನ್ಸಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಶಪಡಿಸಿಕೊಂಡ ಚಿನ್ನವನ್ನು ಹೆಚ್ಚಾಗಿ ಪೇಸ್ಟ್ ರೂಪದಲ್ಲಿ ಭಾರತ-ನೇಪಾಳ ಗಡಿಯ ಮೂಲಕ ಪಾಟ್ನಾಗೆ ಸಾಗಿಸಲಾಗುತ್ತಿತ್ತು. ನಂತರ ರೈಲುಗಳ ಮೂಲಕ ಅಥವಾ ದೇಶದ ವಿವಿಧ ಭಾಗಗಳಿಗೆ ವಿಮಾನದ ಮೂಲಕ ಹೆಚ್ಚಾಗಿ ಮುಂಬೈಗೆ ಸಾಗಿಸಲಾಗುತ್ತಿತ್ತು ಎಂದು ಅಧಿಕಾರಿಯೊಬ್ಬರು‌ ತಿಳಿಸಿದ್ದಾರೆ.

ನಿರ್ದಿಷ್ಟ ಮಾಹಿತಿಯ ಮೇರೆಗೆ ಡಿಆರ್‌ಐ ಅಧಿಕಾರಿಗಳು ಭಾನುವಾರ ತಡರಾತ್ರಿ ಮೂವರು ಸೂಡಾನ್ ಪ್ರಜೆಗಳನ್ನು ಪಾಟ್ನಾ ರೈಲು ನಿಲ್ದಾಣದಲ್ಲಿ ಮುಂಬೈಗೆ ಹೋಗುವ ರೈಲಿನಲ್ಲಿ ಹತ್ತುತ್ತಿದ್ದಾಗ ಅವರನ್ನು ತನಿಖೆಗೊಳಪಡಿಸಿದ್ದಾರೆ‌

37.126 ಕೆಜಿ ತೂಕದ ಮತ್ತು 40 ಪ್ಯಾಕೆಟ್‌ಗಳಲ್ಲಿ ಬಚ್ಚಿಟ್ಟ ಚಿನ್ನವನ್ನು ಇಬ್ಬರು ಸೂಡಾನ್ ಪ್ರಜೆಗಳಿಂದ ವಶಪಡಿಸಿಕೊಳ್ಳಲಾಗಿದೆ, ಈ ಚಿನ್ನವು‌ ಚಿನ್ನದ ಲೇಪನ ಹೊಂದಿದ ಪೇಸ್ಟ್ ರೀತಿಯಲ್ಲಿತ್ತು. ಅವರು ಹಾಕಿಕೊಂಡಿದ್ದ ತೋಳಿಲ್ಲದ, ಜಾಕೆಟ್ ಗಳಲ್ಲಿ  ಅಮೂಲ್ಯವಾದ ಲೋಹವನ್ನು ಚತುರವಾಗಿ ಬಚ್ಚಿಟ್ಟಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಬಂಧನಕ್ಕೊಳಗಾದ ಇನ್ನೊಬ್ಬ  ವಿದೇಶಿ ಪ್ರಜೆಯು ಗಡಿ ಪ್ರದೇಶಗಳಲ್ಲಿ ಕಳ್ಳಸಾಗಣೆ ಚಟುವಟಿಕೆಯನ್ನು ಸಂಘಟಿಸುವ ಮತ್ತು ಕಳ್ಳಸಾಗಣೆ ಮಾಡಿದ ಚಿನ್ನದ ಸಾಗಣೆಗೆ ಸಹಕರಿಸುವ ಡೀಲರ್  ಆಗಿದ್ದಾನೆ ಎಂದು ಅವರು ಹೇಳಿದರು.

5.615 ಕೆಜಿ ಕಳ್ಳಸಾಗಣೆ ಚಿನ್ನದೊಂದಿಗೆ ಹೈದರಾಬಾದ್‌ನಿಂದ ಮುಂಬೈಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಸೂಡಾನ್ ಮಹಿಳೆಯರ ಇನ್ನೊಂದು‌ ಗುಂಪನ್ನು ಸೋಮವಾರ ಪುಣೆಯಲ್ಲಿ ಬಂಧಿಸಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಶಪಡಿಸಿಕೊಂಡ ಚಿನ್ನವು ವಿವಿಧ ರೂಪದಲ್ಲಿದ್ದು ಮತ್ತು ಕೈಚೀಲದಲ್ಲಿ ಬಚ್ಚಿಡಲಾಗಿತ್ತು ಎಂದು ಅವರು ಹೇಳಿದರು.

ಪಾಟ್ನಾದಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ಇಬ್ಬರು ಸೂಡಾನ್ ಪ್ರಜೆಗಳ ಮತ್ತೊಂದು ಗುಂಪನ್ನು ಸೋಮವಾರ ಆರ್ಥಿಕ ರಾಜಧಾನಿಯ ರೈಲ್ವೆ ನಿಲ್ದಾಣದಲ್ಲಿ ತಡೆಹಿಡಿಯಲಾಯಿತು. ಅವರಿಂದ 40 ಪ್ಯಾಕೆಟ್‌ಗಳಲ್ಲಿ ಬಚ್ಚಿಟ್ಟಿದ್ದ 38.76 ಕೆಜಿ ತೂಕದ ಚಿನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟಾರೆಯಾಗಿ, ಡಿಆರ್‌ಐ 51 ಕೋಟಿ ರೂಪಾಯಿ ಅಂದಾಜು ಮೌಲ್ಯದ  101.7 ಕೆಜಿ ಚಿನ್ನ ಮತ್ತು 74 ಲಕ್ಷ ರೂಪಾಯಿ ಮೌಲ್ಯದ ವಿದೇಶಿ ಕರೆನ್ಸಿ ಮತ್ತು 63 ಲಕ್ಷ ರೂಪಾಯಿ ಭಾರತೀಯ ನೋಟುಗಳನ್ನು ವಶಪಡಿಸಿಕೊಂಡಿದೆ,

ಈ ಬಗ್ಗೆ ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ