ಹಳೇ ಮೈಸೂರು ಪ್ರಾಂತ್ಯದಲ್ಲಿ ಜೆಡಿಎಸ್ ಪಕ್ಷದ ಪ್ರಾಬಲ್ಯವಿದ್ದು ಇಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಾಂಪ್ರದಾಯಿಕ ಎದುರಾಳಿಗಳಾಗಿದ್ದವು, ಈಗ ಜೆಡಿಎಸ್ ಕುಟುಂಬದ ಪ್ರಜ್ವಲ್ ರೇವಣ್ಣ ಎನ್ನುವ ಕೂಸು ಮಾಡಿರುವ ಪೆನ್ ಡ್ರೈವ್ ಹಗರಣದಿಂದ ಜೆಡಿಎಸ್ ರಾಜಕೀಯ ಪಕ್ಷವಾಗಿ ಮುಕ್ತಾಯವಾಗುವುದು ಶತಸಿದ್ಧ.
ಈ ರೀತಿ ನಿರ್ನಾಮವಾಗುವ ಜೆಡಿಎಸ್ ಪಕ್ಷದ ಲಕ್ಷಾಂತರ ಕಾರ್ಯಕರ್ತರಿಗೆ ಕಾಂಗ್ರೆಸ್ ಪಕ್ಷ ಪರ್ಯಾಯ ಆಯ್ಕೆ ಆಗಿರುವುದಿಲ್ಲ. ಬದಲಾಗಿ ಅವರ ಆಯ್ಕೆ ಬಿಜೆಪಿ ಆಗಿದ್ದು, ಮುಂದಿನ ಕರ್ನಾಟಕದ ರಾಜಕೀಯ ಚದುರಂಗದ ಆಟ ಕಾಂಗ್ರೆಸ್ V/S ಬಿಜೆಪಿ ಆಗಿರಲಿದೆ ಎಂಬುದು ಸತ್ಯ ಸಂಗತಿ.
ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಪಕ್ಷದ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಾಗಲೇ ಜೆಡಿಎಸ್ ಹಲವು ಶಾಸಕರು, ಮುಖಂಡರು ಇಂತಹ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಏಕೆಂದರೆ ಹಲವು ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿಗೆ ಕೋಮುವಾದಿ ಬಿಜೆಪಿ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವುದು ಜನಾದೇಶಕ್ಕೆ ವಿರುದ್ಧವಾದ ನಡೆ ಎಂಬ ಅಭಿಪ್ರಾಯವಿತ್ತು. ಆದರೆ ಕುಟುಂಬ ರಾಜಕಾರಣಕ್ಕೆ ಒತ್ತು ಕೊಡುವ ಜೆಡಿಎಸ್ ವರಿಷ್ಠರಾದ ದೇವೇಗೌಡ ಮತ್ತು ಕುಮಾರಸ್ವಾಮಿ ತನ್ನ ಪಕ್ಷದ ಶಾಸಕರ ಮಾತು ಆಲಿಸದೆ ಮೈತ್ರಿ ಮಾಡಿಕೊಂಡರು.
ಹಳೇ ಮೈಸೂರು ಭಾಗದಲ್ಲಿ ಮುಂದೆ ಈ ಮೈತ್ರಿ ಯಾವೆಲ್ಲ ಅವಾಂತರ ಸೃಷ್ಟಿಸಲಿದೆ ಎಂಬುದನ್ನು ಮುಂದಿನ ವಿಧಾನಸಭಾ ಚುನಾವಣೆಯ ವೇಳೆಗೆ ಕಾಣಬಹುದು. ಆದರೆ ಅಲ್ಲಿಯವರೆಗೆ ಜೆಡಿಎಸ್ ಪಕ್ಷ ಇದೇ ಜೋಶ್ ನಲ್ಲಿ ಇರುತ್ತಾ ಗೊತ್ತಿಲ್ಲ.
ಒಕ್ಕಲಿಗರ ಭದ್ರಕೋಟೆಯಲ್ಲಿ 25-30 ಸ್ಥಾನ ಪಡೆದುಕೊಂಡು ಅತಂತ್ರ ಸರ್ಕಾರ ರಚನೆಯಾದರೆ ಸಿಎಂ ಸ್ಥಾನದ ಜೊತೆಗೆ ಅರ್ಧದಷ್ಟು ಸಚಿವ ಸ್ಥಾನ ಗಳಿಸುತ್ತಿದ್ದ ಜೆಡಿಎಸ್ ಎಂಬ ಪ್ರಾದೇಶಿಕ ಪಕ್ಷದ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡದ್ದೇ ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ಭದ್ರವಾದ ಬುನಾದಿ ಹಾಕಲು. ಏಕೆಂದರೆ ಏಕ ಕಾಲದಲ್ಲಿ ಹಳೇ ಮೈಸೂರು ಭಾಗದಲ್ಲಿರುವ ಒಕ್ಕಲಿಗರನ್ನು ಸೆಳೆದು, ಜೆಡಿಎಸ್ ಪಕ್ಷವನ್ನು ನಿಧಾನವಾಗಿ ಅಂತ್ಯಗೊಳಿಸುವುದು ಬಿಜೆಪಿ ಅಜೆಂಡಾವಾಗಿದೆ.
ಈಗಾಗಲೇ ದೇಶದಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಶಿರೋಮಣಿ ಅಕಾಲಿದಳ, ಜೆಡಿಯು, ಶಿವಸೇನೆ ಸೇರಿದಂತೆ ಹಲವು ಪಕ್ಷಗಳು ನಿಧಾನವಾಗಿ ಪ್ರಾದೇಶಿಕ ಅಸ್ಮಿತೆ ಕಳೆದುಕೊಂಡು ನಿಧಾನವಾಗಿ ಕುಸಿಯುತ್ತಿವೆ. ಮೈತ್ರಿ ಮಾಡಿಕೊಂಡು ಆನಂತರ ಅವರ ಪಕ್ಷದ ಮುಖಂಡರನ್ನು ಆಮಿಷವೊಡ್ಡಿ ತನ್ನಡೆಗೆ ಸೆಳೆಯುವುದು ಬಿಜೆಪಿ ಕುತಂತ್ರ. ಅದೇ ತಂತ್ರವನ್ನು ಜೆಡಿಎಸ್ ಪಕ್ಷದ ಜೊತೆ ಮೋದಿ ಮತ್ತು ಶಾ ಮಾಡಿದ್ದಾರೆ. ಇದೆಲ್ಲ ಗೊತ್ತಿಲ್ಲದವರಷ್ಟು ದೇವೇಗೌಡ ಹಾಗೂ ಕುಮಾರಸ್ವಾಮಿ ದಡ್ಡರಲ್ಲ. ಆದರೆ ಯಾವ ಉದ್ದೇಶದಿಂದ ಈ ಮೈತ್ರಿ ಆಗಿದೆಯೋ ಎಂಬುದು ಅಪ್ಪ-ಮಗನಿಗಷ್ಟೇ ಗೊತ್ತು.
ಈಗ ಜೆಡಿಎಸ್ ಎಂಬ ಪಕ್ಷ ತನ್ನ ಕುಟುಂಬದ ಪ್ರಜ್ವಲ್ ರೇವಣ್ಣನ ಲೈಂಗಿಕ ಹಗರಣದ ಆರೋಪ ಹೊತ್ತು ಕರ್ನಾಟಕದ ರಾಜಕೀಯ ರಣರಂಗದಿಂದ ನಿರ್ಗಮಿಸಬೇಕಿರುವುದು ದುರದೃಷ್ಟಕರ ವಿಚಾರವಾಗಿದೆ !!




