Wednesday, November 18, 2026

ಪ್ರಾಯೋಗಿಕ ಆವೃತ್ತಿ

ದೇವೇಗೌಡರು ಇಳಿ ವಯಸ್ಸಿನಲ್ಲಿ ಇಂತಹದ್ದನ್ನೆಲ್ಲ ನೋಡಬೇಕಿತ್ತೇ ; ಶಿವರಾಮೇಗೌಡ

ಈ ಹಿಂದೆ ನಾಗಮಂಗಲದ ಗಂಗಾಧರಸ್ವಾಮಿ ಪ್ರಕರಣದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ನನ್ನ ವಿರುದ್ಧ ಆತನ ಫೋಟೋ ತಲೆ ಮೇಲೆ ಇಟ್ಟುಕೊಂಡು ಪ್ರತಿಭಟನೆ ಮಾಡಿದ್ದರು. ಆದರೆ ಇಂದು ಇಂತಹ ಇಳಿ ವಯಸ್ಸಿನಲ್ಲಿ ತನ್ನ ಮನೆಯಲ್ಲೇ ದೊಡ್ಡ ಘಟನೆ (ಪ್ರಜ್ವಲ್ ಲೈಂಗಿಕ ದೌರ್ಜನ್ಯ ಪ್ರಕರಣ) ನಡೆದು ಹೋಗಿದೆ. ಇಂತಹುದ್ದನ್ನು ಈ ವಯಸ್ಸಿನಲ್ಲಿ ನೋಡಬೇಕಾದ ದುಸ್ಥಿತಿ ಬಂದಿತ್ತೇ ಎಂದು ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ವಿಷಾದ ವ್ಯಕ್ತಪಡಿಸಿದರು.

ಮಂಡ್ಯದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗಂಗಾಧರಮೂರ್ತಿ ಕೊಲೆ ಪ್ರಕರಣದಲ್ಲಿ ನನ್ನ ಪಾತ್ರವೇನೂ ಇರಲಿಲ್ಲ. ಆದರೂ ನನ್ನನ್ನು ಬಂಧಿಸುವಂತೆ ಹೋರಾಟ ಮಾಡಿದ್ದರು. ನ್ಯಾಯಾಲಯ ನನಗೆ ಕ್ಲೀನ್‌ಚಿಟ್ ನೀಡಿತ್ತು. ಆ ಪ್ರಕರಣದಲ್ಲಿ ನಾನೂ ಕೂಡ ಸಂತಸ್ತನಾಗಿದ್ದೇನೆ ಜೆಡಿಎಸ್‌ನಲ್ಲಿದ್ದ ಎಷ್ಟೋ ಮಂದಿ ನನ್ನಂತೆಯೇ ಒಂದಲ್ಲ ಒಂದು ಕಾರಣಕ್ಕೆ ಸಂತ್ರಸ್ಥರಾಗಿದ್ದಾರೆ ಎಂದು ದೂರಿದರು.

ಅಂತರಾಷ್ಟ್ರೀಯ ಮಟ್ಟದಲ್ಲಿ ಕುಖ್ಯಾತಿ

ಹಾಸನದ ಪ್ರಜ್ವಲ್ ರೇವಣ್ಣ ಪ್ರಕರಣ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕುಖ್ಯಾತಿ ಪಡೆದಿದ್ದು, ಈ ಪ್ರಕರಣದಿಂದ ಮೈತ್ರಿ ಪಕ್ಷಕ್ಕೆ ತೀವ್ರ ಮುಜುಗರ ಉಂಟು ಮಾಡಿರುವ ಕಾರಣ ಮೈತ್ರಿಯಿಂದ ಜೆಡಿಎಸ್‌ ಅನ್ನು ದೂರ ಇಡಬೇಕು. ಇದು ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಗಳಿದ್ದು, ತಕ್ಷಣ ಜೆಡಿಎಸ್‌ನಿಂದ ಮೈತ್ರಿ ಹೊರಬರಬೇಕು ಎಂದು ಆಗ್ರಹಿಸಿದರು.

ಈ ಪ್ರಕರಣದ ಮುಜುಗರ ತಪ್ಪಿಸುವ ಸಲುವಾಗಿ ವರಿಷ್ಠರು ಈಗಾಗಲೇ ಜೆಡಿಎಸ್‌ನಿಂದ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿದ್ದಾರೆ. ಹಾಗಾಗಿ ಬಿಜೆಪಿ ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.

ನೆರವಿಗೆ ಧಾವಿಸಲಿ

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಅಬಲೆಯರ ನೆರವಿಗೆ ಧಾವಿಸಬೇಕು. ಈ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಶಿಕ್ಷೆ ಆಗುವಂತೆ ಹೋರಾಟ ರೂಪಿಸಬೇಕು. ಅದರಲ್ಲಿ ನಾವೂ ಪಾಲ್ಗೊಳ್ಳುತ್ತೇವೆ ಎಂದು ತಿಳಿಸಿದರು.

ಯಾವುದೇ ವಿಚಾರವಾದರೂ ಕುಮಾರಸ್ವಾಮಿಯವರು ದಿಢೀರನೇ ಹೋರಾಟಕ್ಕೆ ಇಳಿಯುತ್ತಾರೆ. ಆದರೆ ಹಾಸನದ ಪ್ರಕರಣದಲ್ಲಿ ಕೇವಲ ವಿಪಕ್ಷಗಳ ವಿರುದ್ಧ ಟೀಕೆಗಳನ್ನು ಮಾಡುತ್ತಿದ್ದಾರೆ. ಇಂತಹ ಮಿಥ್ಯಾರೋಪವನ್ನು ಬಿಟ್ಟು ನೈಜ ಹೋರಾಟಕ್ಕೆ ಇಳಿಯಲಿ ಎಂದು ಆಗ್ರಹಿಸಿದರು.

ಒಕ್ಕಲಿಗರ ತುಳಿತ

ದೇವೇಗೌಡರ ಕುಟುಂಬದಿಂದ ಒಕ್ಕಲಿಗ ನಾಯಕರು ತುಳಿತಕ್ಕೆ ಒಳಗಾಗಿದ್ದಾರೆ. ಹಾಸನದಲ್ಲಿ ಈ ಕುಟುಂಬದ ಸದಸ್ಯನಿಂದ ಹೆಣ್ಣು ಮಕ್ಕಳು ಹೇಗೆ ನೊಂದಿದ್ದಾರೋ ಅದೇ ರೀತಿ ನಾವೂ ನೊಂದಿದ್ದೇವೆ. ಕಾರಣ ಕುಮಾರಸ್ವಾಮಿಯವರು ಆ ನೊಂದ ಮಹಿಳೆಯರಿಗೆ ಸಾಂತ್ವನ ಹೇಳುವ ಕೆಲಸ ಮಾಡಬೇಕು ಎಂದು ಹೇಳಿದರು.

ಚುನಾವಣೆಗೂ ಮುನ್ನ ಹಾಸನದಲ್ಲಿ ಪ್ರಚಾರ ಮಾಡುವ ವೇಳೆ ಪ್ರಜ್ವಲ್ ನನ್ನ ಮಗನಿದ್ದಂತೆ ಆತ ಏನೇ ಮಾಡಿರಲಿ, ನಾನು ಸರಿಪಡಿಸುತ್ತೇನೆ. ಅವನಿಗೆ ಆಶೀರ್ವಾದ ಮಾಡಿ ಎಂದು ಕುಮಾರಸ್ವಾಮಿ ಕೇಳಿದ್ದರು. ಆದರೆ ಲೈಂಗಿಕ ಹಗರಣ ಹೊರ ಬಂದ ನಂತರ ರೇವಣ್ಣ ಕುಟುಂಬಕ್ಕೂ ನಮಗೂ ಸಂಬಂಧವಿಲ್ಲ ಎಂದು ಹೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಅಪಮಾನ ಮಾಡಿಸಿಕೊಂಡಂತಾಗಿದೆ

ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೊಡುವುದು ಬೇಡ ಎಂದು ಅಮಿತ್‌ ಶಾ ಹೇಳಿದ್ದರು. ಆದರೆ ಮೋದಿಯವರು ಕೇಳಲಿಲ್ಲ. ಈತನನ್ನು ನಂಬಿ ಟಿಕೆಟ್ ಕೊಟ್ಟು ಅಪಮಾನ ಮಾಡಿಸಿಕೊಂಡಂತಾಗಿದೆ ಎಂದು ಜರಿದರು.

ಜೆಡಿಎಸ್‌ಗಾಗಿ ನಾನೂ ಸೇರಿದಂತೆ ಹಲವರು ದುಡಿದಿದ್ದೇವೆ. ಕೋಟ್ಯಾಂತರ ರೂ.ಗಳನ್ನು ಕಳೆದುಕೊಂಡಿದ್ದೇನೆ. ವಿಧಾನ ಸಭಾ ಚುನಾವಣೆಯಲ್ಲಿ ನನಗೆ ಟಿಕೆಟ್ ನೀಡದೇ ಸುರೇಶ್‌ಗೌಡರಿಗೆ ನೀಡಿದರು. ನಂತರ ಕೇವಲ 5 ತಿಂಗಳ ಅವಧಿಗೆ ಸಂಸದನಾದೆ. ನಂತರ ತಮ್ಮ ಮಗನಿಗೆ ಟಿಕೆಟ್ ಕೊಟ್ಟರು. ನನಗೇನೂ ಕೊಟ್ಟರು ? ಕೇವಲ ಬಾಯಿಮಾತಿಯಿಂದ ಆಡಿದ ಸಣ್ಣ ತಪ್ಪುನ್ನು ಗಮನಿಸಿ ಅರ್ಧ ಗಂಟೆಯಲ್ಲೇ ನನ್ನನ್ನು ಪಕ್ಷದಿಂದ ಹೊರ ಹಾಕಿದರು. ಇಂತಹ ದೊಡ್ಡ ಪ್ರಕರಣದಲ್ಲಿ ಭಾಗಿಯಾಗಿರುವ ಪ್ರಜ್ವಲ್ ಅಮಾನತ್ತಿಗೆ ಸಭೆ ಮಾಡಿ ನಂತರ ತೀರ್ಮಾನ ಮಾಡಿದ್ದಾರೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಘಟನೆಗೆ ಕಾರಣನಾದ ಆರೋಪಿ, ಪೆನ್‌ಡ್ರೈವ್ ಮೂಲಕ ಹೊರಜಗತ್ತಿಗೆ ತಂದವರು, ಇದರಲ್ಲಿ ಯರ‍್ಯಾರು ಶಾಮೀಲಾಗಿದ್ದಾರೋ ಎಲ್ಲರಿಗೂ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಹೇಮಂತರಾಜು, ಚೇತನ, ಕೊಪ್ಪ ರಮೇಶ್, ನಾಗರಾಜು, ವಕೀಲ ಉಮೇಶ್ ಗೋಷ್ಠಿಯಲ್ಲಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ