Thursday, June 13, 2024

ಪ್ರಾಯೋಗಿಕ ಆವೃತ್ತಿ

ಪ್ರಜ್ವಲ್ ರೇವಣ್ಣ ಮಾಡಿದಂತ ಅಪರಾಧವನ್ನು ಸಾಮಾನ್ಯ ವ್ಯಕ್ತಿ ಮಾಡಿದ್ದರೆ ಏನಾಗುತ್ತಿತ್ತು… ?

✍️ ವಿವೇಕಾನಂದ ಎಚ್.ಕೆ

ಪ್ರಜ್ವಲ್ ರೇವಣ್ಣ…….

ಒಂದು ವೇಳೆ ನಾನು (ಸಾಮಾನ್ಯ ವ್ಯಕ್ತಿ) ಪ್ರಜ್ವಲ್ ರೇವಣ್ಣ ಮಾಡಿದಂತೆ ಅಪರಾಧವನ್ನು ಮಾಡಿದಿದ್ದರೆ ಏನಾಗುತ್ತಿತ್ತು………. ಈ ರೀತಿ ಆಗಿದೆ ಎಂಬ ಸುಳಿವಿನ ಪೆನ್ ಡ್ರೈವ್ ಸಿಗುತ್ತಿದ್ದಂತೆ ಪೊಲೀಸರು ಮನೆಗೆ ಬರುತ್ತಿದ್ದರು. ತೊಟ್ಟ ಬಟ್ಟೆಯಲ್ಲೇ ನನ್ನನ್ನು ಎಳೆದುಕೊಂಡು, ಕೆಟ್ಟ ಮಾತುಗಳಲ್ಲಿ ನಿಂದಿಸುತ್ತಾ, ಬೀದಿಯಲ್ಲಿ ಮೆರವಣಿಗೆ ಮಾಡುತ್ತಾ, ಲಾಟಿಯಲ್ಲಿ ಬಾರಿಸುತ್ತಾ, ನಾಲ್ಕಾರು ಹೆಣ್ಣು ಮಕ್ಕಳ ಕೈಯಲ್ಲಿ ಚಪ್ಪಲಿ, ಪೊರಕೆಯಲ್ಲಿ ಹೊಡೆಸುತ್ತಾ, ಥೂ – ಛೀ ಎಂದು ಉಗಿಸುತ್ತಾ ಸ್ಟೇಷನ್ ಗೆ ಕರೆದುಕೊಂಡು ಹೋಗುತ್ತಿದ್ದರು………

ಅನಂತರದಲ್ಲಿ, ಇಷ್ಟೆಲ್ಲಾ ದೊಡ್ಡ ಸಂಖ್ಯೆಯ ಮಹಿಳೆಯರಿಗೆ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ ಮಾಡಿದ್ದು ಬಯಲಾಗುತ್ತಿದ್ದಂತೆ ಬಹುತೇಕ ಎನ್ಕೌಂಟರ್ ಮಾಡುವ ಸಾಧ್ಯತೆ ಇತ್ತು. ಮಾಧ್ಯಮಗಳು ನನ್ನನ್ನು ಅತ್ಯಂತ ನೀಚನಂತೆ, ದುಷ್ಟ ಕ್ರಿಮಿಯಂತೆ, ಇಷ್ಟು ಕೆಳಮಟ್ಟದ ಮನುಷ್ಯ ಇಲ್ಲವೇನೋ ಎಂಬಂತೆ ಚಿತ್ರಿಸುತ್ತಿದ್ದರು. ರಾಜಕಾರಣಿಗಳು ಇದರಲ್ಲಿ ಯಾವುದೇ ರಾಜಕೀಯವಿದೆ ಎಂದು ಯಾರನ್ನೂ ದೂರುತ್ತಿರಲಿಲ್ಲ, ಪೆನ್ ಡ್ರೈವ್ ರೆಕಾರ್ಡ್ ಮಾಡಿದ್ದು ಯಾರು ? ಅದನ್ನು ಹಂಚಿದ್ದು ಯಾರು ? ಅದರಿಂದ ಯಾವ ಪಕ್ಷಕ್ಕೆ ಲಾಭವಾಗುತ್ತದೆ ? ಯಾರಿಗೆ ಹಾನಿಯಾಗುತ್ತದೆ ? ಎಂಬುದನ್ನು ಯಾರೂ ಚರ್ಚಿಸಲು ಹೋಗುತ್ತಿರಲಿಲ್ಲ……

ಇನ್ನು ನಮ್ಮ ಇಡೀ ಕುಟುಂಬವನ್ನು ಅತ್ಯಂತ ಹೀನಾಯ ಸ್ಥಿತಿಗೆ ತೆಗೆದುಕೊಂಡು ಹೋಗಿ, ಎಲ್ಲರೂ ಊರಿನಿಂದ ಪರಾರಿ ಆಗಬೇಕು ಅಥವಾ ಆತ್ಮಹತ್ಯೆ ಮಾಡಿಕೊಳ್ಳಬೇಕು, ಹಾಗೆ ಮಾಡುತ್ತಿದ್ದರು. ಸಾಮಾನ್ಯ ಜನ ಸಹ ನನ್ನನ್ನು ಇಡೀ ವಿಶ್ವ ಕಂಡ ನಟೋರಿಯಸ್ ಕೀಚಕನಂತೆ, ಕಿರಾತಕನಂತೆ ಮಾತನಾಡಿಕೊಳ್ಳುತ್ತಿದ್ದರು. ನನಗೆ ದಿಢೀರ್ ಸಾವು ಬೇಡ, ಕಲ್ಲಿನಿಂದ ಹೊಡೆದು ಜೀವನಪರ್ಯಂತ ನರಳುತ್ತಾ, ನರಳುತ್ತಾ ಸಾಯುವಂತೆ ಮಾಡಬೇಕು ಎಂದು ಹೇಳಿಕೊಳ್ಳುತ್ತಿದ್ದರು. ಕೆಲವು ಸಂಘಟನೆಗಳವರು ನಮ್ಮ ಮನೆಗೆ ಬಂದು ಕಲ್ಲು ಹೊಡೆದು ಇಡೀ ಮನೆಯನ್ನು ಚೆಲ್ಲಾಪಿಲ್ಲಿ ಮಾಡಿ ಸುಟ್ಟಾಕುತ್ತಿದ್ದರು……

ಏಕೆಂದರೆ, ನಾನೊಬ್ಬ ಸಾಮಾನ್ಯ ಮನುಷ್ಯ. ನಾನು ಅಷ್ಟೊಂದು ಹೆಣ್ಣುಮಕ್ಕಳ ಜೊತೆ ಸುಖ ಅನುಭವಿಸಿದ್ದನ್ನು ಇವರು ಸಹಿಸುತ್ತಿರಲಿಲ್ಲ ಅಥವಾ ಆ ಗೌರವಾನ್ವಿತ ಹೆಣ್ಣು ಮಕ್ಕಳನ್ನು ಸಾಮಾನ್ಯನೊಬ್ಬ ಅನುಭವಿಸುವುದನ್ನು ಅವರು ಉಹಿಸಿಕೊಳ್ಳಲು ಸಾಧ್ಯವಿಲ್ಲ. ಅಷ್ಟು ಹೊಟ್ಟೆ ಉರಿ. ಅದಕ್ಕಾಗಿಯೇ ಎಷ್ಟೋ ಬಾರಿ ಅನಿಸುತ್ತದೆ, ಭಾರತದಲ್ಲಿ ಹುಟ್ಟಿದರೆ ಶ್ರೀಮಂತ, ಪ್ರಭಾವಶಾಲಿ, ರಾಜಕೀಯ ಮನೆತನದಲ್ಲಿಯೇ ಹುಟ್ಟಬೇಕು, ಇಲ್ಲದಿದ್ದರೆ ಕನಿಷ್ಠ ಒಳ್ಳೆಯ ತಳಿ ನಾಯಿಯಾಗಿಯಾದರೂ ಹುಟ್ಟಬೇಕು ಎನಿಸುತ್ತದೆ…..

ಶ್ರೀಮಂತರಾದರೆ ನಾವು ವಿದೇಶಕ್ಕೆ ತಪ್ಪಿಸಿಕೊಂಡು ಹೋಗುವ ಸಾಧ್ಯತೆ ಆದರೂ ಇರುತ್ತದೆ. ಒಳ್ಳೆಯ ವಕೀಲರನ್ನು ನೇಮಿಸುವ ಸಾಮರ್ಥ್ಯವೂ ಇರುತ್ತದೆ. ಜೊತೆಗೆ ಆ ಹೆಣ್ಣು ಮಕ್ಕಳೇ ಸರಿ ಇಲ್ಲ, ಅವರ ನಡತೆಯೂ ಸರಿ ಇಲ್ಲ ಎಂದು ಆರೋಪಿಸುವ ಸ್ವಾತಂತ್ರ್ಯವೂ ಇರುತ್ತದೆ, ಮಾಧ್ಯಮಗಳು ಸಹ ಪೆನ್ ಡ್ರೈವ್ ಅನ್ನು ಹಂಚಿದವನು ಯಾರು, ಅದರ ರಾಜಕೀಯ ಲಾಭ, ಷಡ್ಯಂತ್ರಗಳ ಬಗ್ಗೆ ಮಾತನಾಡುತ್ತಾ, ಅಪರಾಧಿಗೆ ಪರೋಕ್ಷವಾಗಿ ಸಹಾಯವನ್ನು ಮಾಡುತ್ತಾರೆ. ಮುಂದೆ ಸಾಕ್ಷಿಗಳನ್ನು ಹೆದರಿಸುವ, ಆಮಿಷ ಒಡ್ಡುವ ಸಾಧ್ಯತೆಯೂ ಶ್ರೀಮಂತರಿಗೆ ಇರುತ್ತದೆ. ಬಡವನಾದರೆ ಕೇವಲ ಒಂದು ಅತ್ಯಾಚಾರಕ್ಕೆ ಎನ್ಕೌಂಟರ್ ಗೆ ಬಲಿಯಾಗಬೇಕಾಗುತ್ತದೆ….

ಹಾಗೆಂದು ಇಲ್ಲಿ ನಾನು ಅತ್ಯಾಚಾರವನ್ನು ಬೆಂಬಲಿಸುತ್ತಿಲ್ಲ. ಅತ್ಯಾಚಾರಿಗಳಿಗೆ ಜೀವಾವಧಿ ಶಿಕ್ಷೆಯಾಗಲಿ. ಆದರೆ ನ್ಯಾಯದ ಅಸಮಾನತೆಯನ್ನು ಮುಖ್ಯ ಅಂಶವಾಗಿ ಇಟ್ಟುಕೊಂಡು ಪ್ರಸ್ತಾಪಿಸುತ್ತಿದ್ದೇನೆ. ಪ್ರಜಾಪ್ರಭುತ್ವ ದೇಶದಲ್ಲಿ ಎಲ್ಲರಿಗೂ ಒಂದೇ ರೀತಿಯ ನ್ಯಾಯ. ಅದರಲ್ಲೂ ಕ್ರಿಮಿನಲ್ ಅಪರಾಧಗಳಿಗೆ ಒಂದೇ ಕ್ರಿಮಿನಲ್ ಕೋಡ್ ಇದೆ. ಆದರೂ ಬಹುದೊಡ್ಡ ಅತ್ಯಾಚಾರ, ಕೊಲೆ ಬೆದರಿಕೆ, ಕಿಡ್ನಾಪ್ ಮುಂತಾದ ಘಟನೆಗಳಲ್ಲಿ ಭಾಗಿಯಾದ ನಂತರವೂ ಗೌರವಾನ್ವಿತವಾಗಿ ನೋಟಿಸ್ ನೀಡಿ, ಅವರಂತೆ ನನ್ನನ್ನು ಸ್ವಾಗತಿಸಿ, ವಿಚಾರಣೆ ಮಾಡುವ ವ್ಯಕ್ತಿಯಾಗಿ ನಾನು ಉಳಿದಿಲ್ಲವಲ್ಲ ಎಂಬ ಕೊರಗು ಕಾಡುತ್ತಿದೆ……

ಕೇವಲ ಹೆಲ್ಮೆಟ್ ಹಾಕದಿದ್ದಕ್ಕೆ ಅಥವಾ ಇತರ ಯಾವುದೋ ಸಣ್ಣ ಆಕಸ್ಮಿಕ ಅಪಘಾತದಲ್ಲಿ ಭಾಗಿಯಾಗಿದ್ದಕ್ಕೆ ಪೊಲೀಸರು ಇನ್ನು ಈ ಜೀವನ ಸಾಕು ಎಂಬಂತೆ ನನ್ನೊಂದಿಗೆ ವರ್ತಿಸುತ್ತಾರೆ. ಆದರೆ ಪ್ರಭಾವಶಾಲಿಗಳ ಒಂದೊಂದೇ ಹಗರಣಗಳು ಹೊರಗೆ ಬರುತ್ತಿರುವಾಗಲು ಇನ್ನೂ ಅಪರಾಧಗಳ ಬಗ್ಗೆ ಚರ್ಚೆಗಳು, ತನಿಖೆಗಳು ನಡೆಯುತ್ತಲೇ ಇದೆ, ಬಂಧನವಾಗಿಲ್ಲ. ಆದರೆ ನನ್ನಂಥ ಸಾಮಾನ್ಯನ ವಿಷಯದಲ್ಲಿ ಚರ್ಚೆಗಳಿಗೆ ಅವಕಾಶವೇ ಇರುವುದಿಲ್ಲ….

ಬಸವಣ್ಣನವರ ಸಮ ಸಮಾಜದ ಆಶಯ, ಮಹಾತ್ಮ ಗಾಂಧಿಯವರ ನೈತಿಕ ಮೌಲ್ಯಗಳ ಜೀವನ ವಿಧಾನ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮಾನ ಹಕ್ಕು ಮತ್ತು ಕರ್ತವ್ಯಗಳು ಇಂದು ನೆನಪಾಗುತ್ತಿದೆ……

ಒಂದು ಸಣ್ಣ ಅನಿವಾರ್ಯ ತಪ್ಪು ಮಾಡಲು ಮನಸ್ಸು ನೂರಾರು ಬಾರಿ ಯೋಚಿಸುತ್ತದೆ, ಭಯವಾಗುತ್ತದೆ, ಊಟ ಸೇರುವುದಿಲ್ಲ, ನಿದ್ದೆ ಬರುವುದಿಲ್ಲ, ಯಾರಾದರೂ ನೋಡಿಬಿಟ್ಟರೆ ಎಂಬ ಭಯ ಕಾಡುತ್ತಿರುತ್ತದೆ. ಪೊಲೀಸರಿಗೆ ಸಿಕ್ಕಿಬಿದ್ದರೆ, ನಾನು ಬದುಕುವುದಾದರೂ ಹೇಗೆ ಎಂದು ಸಣ್ಣ ಅನಿವಾರ್ಯ ತಪ್ಪಿಗಾಗಿ ಸಾಕಷ್ಟು ಸಲ ಯೋಚನೆ ಮಾಡುತ್ತಿರುತ್ತೇನೆ. ಏಕೆಂದರೆ ತಪ್ಪು ಸರಿಗಳ ಬಗ್ಗೆ ತಿಳುವಳಿಕೆ ಇದೆ. ಅದರಲ್ಲಿ ತಪ್ಪು ಮಾಡುವಾಗ ಆಗುವ ಮಾನಸಿಕ ಕ್ಷೋಭೆ ಸಹಿಸಲಸಾಧ್ಯವಾಗಿರುತ್ತದೆ. ಆದರೆ ಒಂದು ಉನ್ನತ ಸ್ಥಾನಕ್ಕೇರಿಯು, 30 ವರ್ಷಗಳ ವಯಸ್ಸಾದ ನಂತರವೂ, ಸಾರ್ವಜನಿಕ ಜೀವನದಲ್ಲಿ ನಿರಂತರವಾಗಿ, ಅತ್ಯಂತ ಭಯಂಕರ, ಅಮಾನವೀಯ ತಪ್ಪುಗಳನ್ನು ಮಾಡುವ ಮನಸ್ಥಿತಿ ನನ್ನಂಥವರಿಗೆ ಹೇಗೆ ಬರಲು ಸಾಧ್ಯ. ಈ ಸಮಾಜ ನನ್ನಂಥವನನ್ನು ಸಹಿಸಿಕೊಳ್ಳುವುದಾದರೂ ಹೇಗೆ……

ಆದರೆ ಶ್ರೀಮಂತರ ಈ ವಿಕೃತಗಳನ್ನು ಸಮಾಜ ಸಹಿಸಿಕೊಳ್ಳುತ್ತದೆ ಅಥವಾ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಅವರ ಪರವಾಗಿ ಮಾತನಾಡುವವರು ಸಾಕಷ್ಟು ಜನರಿದ್ದಾರೆ. ಅದು ಸಹಜ ಎಂಬಂತೆ ಸ್ವೀಕರಿಸುತ್ತಾರೆ. ಅನೇಕ ಸಂದರ್ಭಗಳು ಅವರಿಗೆ ಅನುಕೂಲಕರವಾಗಿಯೇ ಇರುತ್ತದೆ. ಬಹುಶಃ ಪ್ರಜ್ವಲ್ ರೇವಣ್ಣನಿಗೆ ಶಿಕ್ಷೆಯಾಗುವ ಸಾಧ್ಯತೆಯೂ ಕಡಿಮೆ. ಈಗ ತಾತ್ಕಾಲಿಕವಾಗಿ ಬಂಧನವಾಗಬಹುದು. ಕೆಲವು ದಿನ ಜೈಲಿಗೆ ಹೋಗಬಹುದು. ಆದರೆ ಮುಂದೆ ಸಾಕ್ಷಿಗಳ ಕೊರತೆ, ಸಾಕ್ಷ್ಯಗಳ ತಿರುಗು ಬಾಣ ಮುಂತಾದ ಕಾರಣಗಳಿಂದ, ಅತ್ಯುತ್ತಮ ವಕೀಲರ ನೆರವಿನಿಂದ ನಿರಪರಾಧಿಯಾಗಿ ಹೊರಬರುವ ಸಾಧ್ಯತೆಯೇ ಹೆಚ್ಚಾಗಿದೆ. ಆದರೆ ಇಂತಹ ಘಟನೆಯಲ್ಲಿ ಕೇವಲ 10% ಭಾಗಿಯಾಗಿದ್ದರು ನಾನು ಜೀವಂತ ಉಳಿಯುವ ಸಾಧ್ಯತೆಯೇ ಇರಲಿಲ್ಲ. ಅದಕ್ಕೆ ಹೇಳಿದ್ದು ಪ್ರಜ್ವಲ್ ರೇವಣ್ಣನ ರೀತಿಯ ಕುಟುಂಬದಲ್ಲಿ ನಾನು ಹುಟ್ಟಬಾರದಿತ್ತೆ ಎಂದು ಮನಸ್ಸು ಹೇಳುತ್ತದೆ…..

ಬದುಕಲೇ ಇಡೀ ಜೀವನವನ್ನ ಕಳೆಯುತ್ತಿರುವಾಗ, ನಮ್ಮ ಮೂಲಭೂತ ಅವಶ್ಯಕತೆಗಳ ಪೂರೈಕೆಗಾಗಿ ಬದುಕುತ್ತಿರುವಾಗ, ನನಗಿಂತ ಸಾವಿರಾರು ಪಟ್ಟು ಅಕ್ರಮ ಸಂಪತ್ತನ್ನು ಹೊಂದಿರುವ ವ್ಯಕ್ತಿಗಳ ಬಗ್ಗೆ ಈ ಸಮಾಜ ಎಷ್ಟೊಂದು ಮಲತಾಯಿ ಧೋರಣೆ ತೋರುತ್ತದೆ. ಕನಿಷ್ಠ ನನ್ನನ್ನು ಬಿಡಿ, ಅತ್ಯಾಚಾರಕ್ಕೆ, ದೌರ್ಜನ್ಯಕ್ಕೆ ಒಳಗಾಗಿರುವ ಹೆಣ್ಣುಗಳು ನಮ್ಮ ಅಕ್ಕ ತಂಗಿ ತಾಯಿ ಹೆಂಡತಿ ಪ್ರೇಯಸಿ ಇರಬಹುದು, ಕಾರಣಗಳೇನೇ ಇರಲಿ, ರಾಜಕೀಯವೇನೇ ಇರಲಿ, ಕುತಂತ್ರಗಳೇನೇ ಇರಲಿ, ಅವರ ಪರವಾಗಿ ಒಂದು ಗಟ್ಟಿ ಧ್ವನಿಯನ್ನು ಈ ಸಮಾಜ ತೋರುತ್ತಿಲ್ಲ. ಮಾಧ್ಯಮಗಳ ಪಕ್ಷಪಾತದ ಕೂಗಾಟ ಬಿಟ್ಟರೆ ಸಾಮಾನ್ಯ ಜನ ಆ ಬಗ್ಗೆ ಹೆಚ್ಚು ಮಾತನಾಡುತ್ತಿಲ್ಲ…..

ಮಾತನಾಡಿದರೂ ನಟೋರಿಯಸ್ ಕ್ರಿಮಿನಲ್ ಚಟುವಟಿಕೆಯಲ್ಲೂ, ಇನ್ನೂ ಚರ್ಚೆಗೆ ಅವಕಾಶವಿದೆ ಎಂದರೆ ಪ್ರಜಾಪ್ರಭುತ್ವದ ಆ ಚರ್ಚೆಗೆ ಅವಮಾನವಾದಂತೆ. ಅಭಿವ್ಯಕ್ತಿ ಸ್ವಾತಂತ್ರ್ಯ ಸ್ವೇಚ್ಛೆಯಾಗುವುದರ ಲಕ್ಷಣ ಇದಾಗಿರುತ್ತದೆ. ಕಣ್ಣಿಗೆ ಕಾಣುವ ಅಪರಾಧಗಳಿಗೆ ಕನಿಷ್ಠ ಕೋರ್ಟ್ ಅನ್ನು ಹೊರತುಪಡಿಸಿ ನಮ್ಮ ಆತ್ಮ ಸಾಕ್ಷಿಯಾದರು ಪ್ರತಿಭಟಿಸಬೇಕಾಗುತ್ತದೆ, ವಿರುದ್ಧ ಮಾತನಾಡಬೇಕಾಗುತ್ತದೆ. ಕೆಲವರು ಆ ಹೆಣ್ಣು ಮಕ್ಕಳ ನಡತೆಯ ಬಗ್ಗೆ ಕೂಡ ಮಾತನಾಡುತ್ತಾರೆ. ಅಷ್ಟು ಬಾಲಿಶವಾಗಿದೆ ನಮ್ಮ ಮನಸ್ಥಿತಿ…….

2024ರ ಈ ಸಮಯದಲ್ಲೂ, ಸ್ವತಂತ್ರ ಬಂದು ಪ್ರಜಾಪ್ರಭುತ್ವ ಜಾರಿಯಾಗಿ 75 ವರ್ಷಗಳ ನಂತರವೂ, ಬಹುತೇಕ ಮಹಿಳೆಯರಿಗೆ ಈ ರೀತಿಯ ಹಿಂಸೆಯಾದರೆ, ಇನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಮಹಿಳೆಯರಿಗೆ ಇನ್ನೆಂತಹ ಘೋರ ಅತ್ಯಾಚಾರಗಳಾಗಿರಬಹುದು. ಇದು ಬಯಲಿಗೆ ಬಂದ ಒಂದು ಘಟನೆಯಾದರೆ, ಬಯಲಿಗೆ ಬಾರದ ಇನ್ನೆಷ್ಟು ಘಟನೆಗಳು ಹಾಗೆ ಮುಚ್ಚಿ ಹೋಗಿರುತ್ತವೆ…..

ಯೋಚಿಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿ ಮತ್ತು ನಾವೆಲ್ಲರೂ ಕಾರ್ಯೋನ್ಮುಖರಾಗೋಣ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ
ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!