ಹಲವಾರು ಸಂಸ್ಥೆಗಳು ಸಮಾಜದ ಎಲ್ಲಾ ಮಕ್ಕಳಿಗೂ ಶಿಕ್ಷಣವನ್ನು ನೀಡುತ್ತಿದೆ, ಆದರೇ ಆದಿಚುಂಚನಗಿರಿ ಮಠದ ವತಿಯಿಂದ ನೀಡಲಾಗುತ್ತಿರುವ ಶಿಕ್ಷಣದಲ್ಲಿ ಆಧಾತ್ಮಿಕ ಶಿಕ್ಷಣವೂ ಸೇರಿದೆ, ಗ್ರಾಮೀಣ ಪ್ರದೇಶದಲ್ಲಿ ಆರಂಭಿಸಿರುವ ಶಾಲೆಯನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀನಿರ್ಮಲಾನಂದನಾಥ ಮಹಾಸ್ವಾಮೀಜಿ ಸಲಹೆ ನೀಡಿದರು.
ಮಳವಳ್ಳಿ ತಾಲ್ಲೂಕಿನ ಮಾರೇಹಳ್ಳಿಯಲ್ಲಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ವತಿಯಿಂದ ನೂತನವಾಗಿ ಆರಂಭಿಸಿರುವ ಬಿಜಿಎಸ್ ಪಬ್ಲಿಕ್ ಸ್ಕೂಲ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಶಿಕ್ಷಣವೊಂದೇ ಆಗಿದೆ. ಡಾ. ಬಿ.ಆರ್ ಅಂಬೇಡ್ಕರ್‌ರವರು ಆಸ್ಪೃಶ್ಯತೆಯ ಜಗತ್ತಿನಲ್ಲಿ ವಿಚಿತ್ರವಾದ ಕಷ್ಟಗಳನ್ನು ಎದುರಿಸಿದರೂ ಕೂಡ ವಿದ್ಯೆಯನ್ನು ಸಂಪಾದಿಸಿದರು. ಜೊತೆಗೆ ಎಲ್ಲಾ ದೇಶದ ಸಂವಿಧಾನಗಳನ್ನು ಓದಿ ಸ್ವತಂತ್ರ ಬಂದ ಭಾರತ ದೇಶಕ್ಕೆ ಆಗತ್ಯವಾದ ಸಂವಿಧಾನವನ್ನು ಕೊಟ್ಟರು. ಸಂವಿಧಾನ ಬರೆಯಲು ಅವರು ಕಲಿತ ವಿದ್ಯೆಯೇ ಕಾರಣವಾಗಿದ್ದು, ಪ್ರತಿಯೊಬ್ಬರು ಶಿಕ್ಷಣವಂತರಾಗಬೇಕು, ಪೋಷಕರು ಕೂಡ ತಮ್ಮ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಕೊಡಿಸಲು ಮುಂದಾಗಬೇಕೆಂದು ಕರೆ ನೀಡಿದರು.
ಅನ್ನದಾನ ಮಹಾದಾನ, ಆದರೇ ವಿದ್ಯೆಯನ್ನು ನೀಡುವುದು ಎಲ್ಲಾಕ್ಕಿಂತಲೂ ಶ್ರೇಷ್ಟವಾದದ್ದು, ಅನ್ನ ಕೊಟ್ಟರೇ ಬದುಕಿನ ಪೂರ್ಣ ಸಮಸ್ಯೆ ಬಗೆಹರಿಯುವುದಿಲ್ಲ, ಆದರೇ ವಿದ್ಯೆಯನ್ನು ನೀಡಿದರೇ ಎಲ್ಲವನ್ನು ಪಡೆದುಕೊಳ್ಳುತ್ತಾರೆ, ಗ್ರಾಮೀಣ ಪ್ರದೇಶದಲ್ಲಿ ಆರಂಭಿಸಿರುವ ಶಾಲೆಯನ್ನು ಇಲ್ಲಿನ ನಿವಾಸಿಗಳು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವುದರ ಮೂಲಕ ಪ್ರಯೋಜನ ಪಡೆದುಕೊಳ್ಳಬೇಕೆಂದು ಹೇಳಿದರು.
ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರನ್ನು ಮಾರೇಹಳ್ಳಿ ಜನರು ಆತ್ಮೀಯವಾಗಿ ಅಭಿನಂದಿಸಿ ಗೌರವಿಸಿದರು. ಕಾರ್ಯಕ್ರಮಕ್ಕೂ ಮುನ್ನ ಸ್ವಾಮೀಜಿ ಅವರನ್ನು ನಾದಸ್ವರ ಪೂರ್ಣಕುಂಭ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು.
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಕೊಮ್ಮೇರಹಳ್ಳಿ ವಿಶ್ವಮಾನದ ಮಠದ ಪುರುಷೋತ್ತಮನಂದನಾಥಸ್ವಾಮೀಜಿ, ಸೌಮ್ಯನಾಥ ಸ್ವಾಮೀಜಿ, ಒಕ್ಕಲಿಗರಸಂಘದ ಅಧ್ಯಕ್ಷ ವಿ.ಪಿ ನಾಗೇಶ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ದ್ಯಾಪೇಗೌಡ, ಪುರಸಭೆ ಸದಸ್ಯ ಸಿದ್ದರಾಜು, ಸಾವಯವ ಕೃಷಿಕ ಸಂಘದ ಅಧ್ಯಕ್ಷ ಮಹೇಶ್‌ಕುಮಾರ್, ಮುಖಂಡರಾದ ಮಾರ್ಕಾಂಡಯ್ಯ, ದೇವರಾಜು, ಮೋಹನ್‌ಕುಮಾರ್ ಸೇರಿದಂತೆ ಇತರರು ಇದ್ದರು.




