Friday, May 17, 2024

ಪ್ರಾಯೋಗಿಕ ಆವೃತ್ತಿ

ಮೈಸೂರು ಸಂಸ್ಥಾನದ ಮೂಲ ಬೇರು ಮಂಡ್ಯದಲ್ಲಿ ಗಟ್ಟಿಯಾಗಿ ತಳವೂರಿದೆ: ಯದುವೀರ ಒಡೆಯರ್

ಮಂಡ್ಯ ಜಿಲ್ಲೆಗೂ ಮೈಸೂರು ಸಂಸ್ಥಾನಕ್ಕೂ ನಿಕಟವಾದ ಸಂಬಂಧವಿದೆ. ಮೈಸೂರು ಸಂಸ್ಥಾನದ ಮೂಲ ಬೇರು ಮಂಡ್ಯ ಜಿಲ್ಲೆಯಲ್ಲಿ ಗಟ್ಟಿಯಾಗಿ ತಳವೂರಿದೆ ಎಂದು ಮೈಸೂರು ಅರಸು ಮನೆತನದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಮಂಡ್ಯ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಮೀರಾ ಶಿವಲಿಂಗಯ್ಯ ಅವರು ರಚಿಸಿರುವ ‘ಮರೆಯಲಾಗದ ಮಹಾನುಭಾವ ನಾಲ್ವಡಿ ಕೃಷ್ಣರಾಜ ಒಡೆಯರ್’ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಮೈಸೂರು ಸಂಸ್ಥಾನದ ಬಗ್ಗೆ ಹೆಚ್ಚಿನ ಕುತೂಹಲ ಇರುವುದು, ಹಲವಾರು ಕೃತಿಗಳು, ಪುಸ್ತಕಗಳು ಬಿಡುಗಡೆಯಾಗಿರುವುದು ಮಂಡ್ಯ ಜಿಲ್ಲೆಯಲ್ಲಿಯೇ. ಅಂದಿನ ಮೈಸೂರು ಅರಸರ ಆಳ್ವಿಕೆಯ ರಾಜಧಾನಿ ಶ್ರೀರಂಗಪಟ್ಟಣ ಇರುವುದು ಇಲ್ಲಿಯೇ. ನಮ್ಮ ಹಿರಿಯರಾದ ಮುಮ್ಮಡಿ ಕೃಷ್ಣರಾಜ ಒಡೆಯರ್, ಚಿಕ್ಕದೇವರಾಜ ಒಡೆಯರ್,ರಾಜ ಒಡೆಯರ್ ಸೇರಿದಂತೆ ಹಲವರು ಜನಿಸಿ ಆಳ್ವಿಕೆ ನಡೆಸಿದ್ದು ಶ್ರೀರಂಗಪಟ್ಟಣದಲ್ಲಿ.ಆದ್ದರಿಂದ ಮಂಡ್ಯ ಜಿಲ್ಲೆಯೊಂದಿಗೆ ನಮಗೆ ನಿಕಟ ಬಾಂಧವ್ಯವಿದೆ ಎಂದು ಬಣ್ಣಿಸಿದರು.

ಮೈಸೂರು ಅಂದ ತಕ್ಷಣ ಅರಮನೆ ನೆನಪಿಗೆ ಬರುತ್ತದೆ. ಹಾಗೆಯೇ ಕೃಷ್ಣರಾಜ ಸಾಗರ ಜಲಾಶಯ ಇರುವುದು ಶ್ರೀರಂಗಪಟ್ಟಣದಲ್ಲಿ.ಮೈಸೂರಿನಲ್ಲಿ ಹಲವು ಕೈಗಾರಿಕೆಗಳು ಸ್ಥಾಪನೆಯಾದರೆ, ಮಂಡ್ಯದಲ್ಲಿ ಮೈಷುಗರ್ ಕಾರ್ಖಾನೆ, ಶಿಂಷಾದಲ್ಲಿ ದೇಶದ ಪ್ರಪ್ರಥಮ ಜಲವಿದ್ಯಾದಾಗಾರ ಇರುವುದು ಮಂಡ್ಯದಲ್ಲಿಯೇ.ಆದ ಕಾರಣ ಮಂಡ್ಯದಲ್ಲಿ ಮೈಸೂರು ಸಂಸ್ಥಾನದ ಬೇರು ಗಟ್ಟಿಯಾಗಿ ತಳವೂರಿದೆ ಎಂದು ಹೇಳಿದರು.

ನಮ್ಮ ಸಂಸ್ಥಾನದ ಬಗ್ಗೆ ನಾವು ಮಾತನಾಡುವುದಕ್ಕಿಂತ ಜನತೆ ನಮ್ಮ ಸಂಸ್ಥಾನದ ಬಗ್ಗೆ  ಮಾತನಾಡಬೇಕು. ನಮ್ಮ ಸಂಸ್ಥಾನವನ್ನು ಕೃತಜ್ಞತಾ ಪೂರ್ವಕವಾಗಿ ಸ್ಮರಿಸುವಂತಹ ಕೆಲಸ ಮಾಡಿರುವ ನಮ್ಮ ಹಿರಿಯರ ಮಾದರಿ ಪ್ರಸ್ತುತದಲ್ಲಿ ಮೈಸೂರು ಬ್ರಾಂಡ್ ಆಗಬೇಕಿದೆ. ಮೈಸೂರಿನ ರಾಜರು ನಿರ್ಮಿಸಿದ ಸಂಸ್ಥೆಗಳು ಶತಮಾನೋತ್ಸವ ಕಂಡಿದೆ. ಹಾಗಾಗಿ ಮೈಸೂರಿನ ಸುವರ್ಣ ಯುಗ ಮತ್ತೆ ಮರುಕಳಿಸುವಂತೆ ನಾವುಗಳು ವರ್ತಮಾನದಲ್ಲಿ ನಾಲ್ವಡಿಯವರ ದೂರದೃಷ್ಠಿಯನ್ನು ಮಾದರಿಯಾಗಿಸಿಕೊಳ್ಳಬೇಕಿದೆ ಎಂದರು.

ಪ್ರಕೃತಿ ಸಂರಕ್ಷಿಸಿ

ಮುಂದಿನ ಪೀಳಿಗೆಗೆ ನಾವು ಕೊಡಬಹುದಾದ ಕೊಡುಗೆ ಬಗ್ಗೆ ನಾವು ಚಿಂತಿಸಬೇಕಿದೆ‌. ಇಂದು ನಮ್ಮ ಪ್ರಕೃತಿ ವಿಕೃತಿಯಾಗುತ್ತಿದೆ.ಮೈಸೂರಿನಿಂದ ಮಂಡ್ಯಕ್ಕೆ ಬರುವಾಗ ಹಸಿರಿನಿಂದ ಕಂಗೊಳಿಸುವ ಪ್ರಕೃತಿ ನೋಡುತ್ತೇವೆ.ಆದರೆ ಇಂದು ಪ್ಲಾಸ್ಟಿಕ್ ಬಳಕೆ ವಿಪರೀತವಾಗಿದೆ.ನೀರು ಕೂಡ ಪ್ಲಾಸ್ಟಿಕ್ ಬಾಟಲಿಯಲ್ಲಿ ಬರುತ್ತಿದೆ. ಮೈಕ್ರೋ ಪ್ಲಾಸ್ಟಿಕ್ ಮಣ್ಣಿನಲ್ಲಿ ಹೋಗಿ ಅಂತರ್ಜಲ ಕಲುಷಿತವಾಗಿದೆ.ಇದರಿಂದ ನಾವು ತಿನ್ನುವ ಆಹಾರ ಕೂಡ ವಿಷಯುಕ್ತವಾಗಿದೆ.ಅದಕ್ಕಾಗಿ ಪ್ರತಿಯೊಬ್ಬರೂ ನಮ್ಮ ಪೂರ್ವಿಕರಂತೆ ಬಟ್ಟೆ ಬ್ಯಾಗ್ ಬಳಸುವ ಮೂಲಕ ಪ್ಲಾಸ್ಟಿಕ್ ನಿರ್ಮೂಲನೆಗೆ ಕೈ ಜೋಡಿಸಬೇಕು.ಮೊದಲು ನಮ್ಮ ಮನೆಯಿಂದಲೇ ಪ್ಲಾಸ್ಟಿಕ್ ನಿರ್ಮೂಲನೆ ಆಗಲಿ ಎಂದು ಸಲಹೆ ನೀಡಿದರು.

ಸಾಹಿತಿ,ಚಿಂತಕ ಪ್ರೊ.ಎಂ.ಕೃಷ್ಣೇಗೌಡ ಮಾತನಾಡಿ, ಮನುಷ್ಯನಿಗೆ ಕೃತಜ್ಞತಾ ಭಾವ ಇಲ್ಲದಿದ್ದರೆ ಆ ಸಮಾಜ ಅವನತಿಯತ್ತ ಸಾಗುತ್ತದೆ. ಕೃತಜ್ಞತೆ ಉಳಿಸಿಕೊಂಡವರು ಮಾತ್ರ ಸುಸಂಸ್ಕೃತರಾಗುತ್ತಾರೆ ಎನ್ನುವುದಕ್ಕೆ ಮಂಡ್ಯ ಜಿಲ್ಲೆಯ ಜನರೇ ಸಾಕ್ಷಿ. ಜಿಲ್ಲೆಗೆ ನೀರು, ಬೆಳಕು ಕೊಟ್ಟ ನಾಲ್ವಡಿ ಹಾಗೂ ಸರ್ ಎಂ.ವಿಶ್ವೇಶ್ವರಯ್ಯನವರ ಭಾವಚಿತ್ರವನ್ನು ಮಂಡ್ಯದ ಪ್ರತಿ ಮನೆಯಲ್ಲೂ ಕಾಣಬಹುದು. ಇದು ಜನತೆಗಿರುವ ಕೃತಜ್ಞತಾ ಭಾವದ ಧ್ಯೋತಕ ಎಂದರು.

ಬೆಂಗಳೂರು ಲಾಭ ಮಾಡುವ ಕಾಸ್ಮೋಪಾಲಿಟನ್ ಸಿಟಿಯಾಗಿದೆ. ಅಲ್ಲಿ ಜೀವಂತಿಕೆ, ಸಾಂಸ್ಕೃತಿಕತೆಯನ್ನು ಕಾಣಲು ಸಾಧ್ಯವಿಲ್ಲ. ಅಲ್ಲಿರುವ ಎಲ್ಲರೂ ಬೇರೆ ಬೇರೆ ಊರಿನಿಂದ ಬಂದು ಬದುಕು ಕಟ್ಟಿಕೊಂಡವರೇ. ಆದರೆ, ರಾಯಲ್‍ಸಿಟಿ ಮೈಸೂರಿನಲ್ಲಿ ಅದರದೇ ಆದ ತೇಜಸ್ಸು ಹಾಗೂ ಘನತೆ ಇದ್ದು, ಅಲ್ಲಿನ ಒಂದೊಂದು ಬೀದಿ, ಒಂದೊಂದು ಕಟ್ಟಡವೂ ತನ್ನ ಭವ್ಯತೆಯನ್ನು ಸಾರುತ್ತದೆ ಎಂದು ವಿವರಿಸಿದರು.

ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಕೃತಿ ಕುರಿತು ಮಾತನಾಡಿ, ಮೀರಾ ಶಿವಲಿಂಗಯ್ಯ ಅವರು ದೇಶದ ರಾಜರುಗಳ ಎಲ್ಲ ವಿಚಾರಗಳನ್ನೂ ಮಂಥನ ಮಾಡಿ ಅದರಲ್ಲಿ ನಾಲ್ವಡಿಯವರ ಕೊಡುಗೆಯನ್ನು ತುಲನೆ ಮಾಡಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಷ್ಟು ವೈಜ್ಞಾನಿಕ ಮತ್ತು ಆಧ್ಯಾತ್ಮಿಕವಾಗಿ ಆಳ್ವಿಕೆ ಮಾಡಿದ ಮತ್ತೊಬ್ಬ ರಾಜನಿಲ್ಲ ಎಂಬುದನ್ನು ತಮ್ಮ ಗಹನ ಸಂಶೋಧನೆಯಲ್ಲಿ ಕಂಡುಕೊಂಡು ಪ್ರತಿಯೊಂದು ಹಂತವನ್ನೂ ಕೂಡ ಹಲವಾರು ನಿದರ್ಶನಗಳ ಮೂಲಕ ದಾಖಲಿಸುತ್ತಾ ಹೋಗಿದ್ದಾರೆ. ಪಾಶ್ಚಿಮಾತ್ಯ ವಿದ್ವಾಂಸರೇ ಒಪ್ಪಿದಂತೆ ಕೃಷ್ಣರಾಜಭೂಪ ಮನೆ ಮನೆಗೆ ದೀಪ ಎಂಬ ಮನೆ ಮಾತು ಈಗ ವರ್ತಮಾನಕ್ಕೆ ಅನ್ವಯಿಸುತ್ತಿದೆ. ಲಾರ್ಡ್ ಕರ್ಜನ್ ಅವರು 1902ರಲ್ಲಿ ಕೃಷ್ಣರಾಜ ಒಡೆಯರ್ ಅವರ ಪಟ್ಟಾಭಿಷೇಕದ ಸಂದರ್ಭದಲ್ಲಿ ಮಾಡಿದ್ದ ಭಾಷಣವನ್ನು ನಾವೆಲ್ಲರೂ ತಿಳಿಯಬೇಕು. ಅದರಲ್ಲೂ ವಿದ್ಯಾರ್ಥಿ ಯುವಜನತೆ ಅರಿಯಬೇಕಾದ ಅಗತ್ಯವಿದೆ ಎಂದರು.

ಖ್ಯಾತ ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಅಧ್ಯಕ್ಷ ಪ್ರೊ.ಬಿ.ಶಿವಲಿಂಗಯ್ಯ, ಮೀರಾ ಶಿವಲಿಂಗಯ್ಯ, ಡಾ.ಹೇಮಾ, ವಿಸ್ಮಯ ಬುಕ್‍ಹೌಸ್‍ನ ಪ್ರಕಾಶ್ ಚಿಕ್ಕಪಾಳ್ಯ, ಜಾನಪದ ಜನ್ನೆಯರು ಸಂಘಟನೆಯ ಡಾ.ಕೆಂಪಮ್ಮ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!