ಒರಿಸ್ಸಾ ಸೇರಿದಂತೆ ದೇಶದ ಮೂಲೆ ಮೂಲೆಗಳಲ್ಲಿ ಭಕ್ತಾದಿಗಳನ್ನು ಹೊಂದಿರುವ ಪುರಿಯ ಜಗನ್ನಾಥ ದೇವರೇ ಮೋದಿಜೀಯ ಭಕ್ತ ಎಂದು ಸಂಬಿತ್ ಪಾತ್ರ ನೀಡಿರುವ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಒರಿಸ್ಸಾದಲ್ಲಿ ಸೋಮವಾರ ಪ್ರಧಾನಿ ಮೋದಿಯವರ ರೋಡ್ ಶೋ ನಡೆದಿತ್ತು. ಈ ಬಗ್ಗೆ ಪುರಿಯ ಲೋಕಸಭಾ ಅಭ್ಯರ್ಥಿ ಸಂಬಿತ್ ಪಾತ್ರ ಮಾಧ್ಯಮಗಳೊಂದಿಗೆ, ಮೋದಿಯನ್ನು ನೋಡಲು ಲಕ್ಷಗಟ್ಟಲೆ ಜನರು ಜಮಾಯಿಸಿದ್ದಾರೆ. ಜಗನ್ನಾಥನೇ ಮೋದಿಯವರ ಭಕ್ತ ಮತ್ತು ನಾವೆಲ್ಲರೂ ಪ್ರಧಾನಿ ಮೋದಿಯವರ ಕುಟುಂಬ. ನನ್ನ ಭಾವನೆಗಳನ್ನು ನಾನು ನಿಯಂತ್ರಿಸಲು ಸಾಧ್ಯವಿಲ್ಲ ಮತ್ತು ಇಂದು ಎಲ್ಲಾ ಒಡಿಯಾಸ್‌ಗಳಿಗೆ ಮಹತ್ವದ ದಿನ ಎಂದು ನಾನು ಭಾವಿಸುತ್ತೇನೆ” ಎಂದು ಸಂಬಿತ್ ಪಾತ್ರ ಹೇಳಿಕೆ ನೀಡಿದ್ದರು.
ಸಂಬಿತ್ ಪಾತ್ರನ ಹೇಳಿಕೆಯ ಬಗ್ಗೆ ಒರಿಸ್ಸಾ ಸೇರಿದಂತೆ ದೇಶದ ಎಲ್ಲಾ ಭಾಗಗಳ ಜನರು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನೆಟ್ಟಿಗರು ದೇವರಿಗೆ ಭಕ್ತರಿರುತ್ತಾರೆಯೇ ಹೊರತು, ಸ್ವತಃ ದೇವರೇ ಯಾವುದೇ ವ್ಯಕ್ತಿಯ ಭಕ್ತರಾಗಿರಲು ಸಾಧ್ಯವಿಲ್ಲ. ಚುನಾವಣೆಗಾಗಿ ದೇವರನ್ನು ಮನುಷ್ಯರ ಭಕ್ತನಾಗಿಸಬೇಡಿ ಎಂದು ಸಂಬಿತ್ ಪಾತ್ರರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಯಾವಾಗ ದೇಶದ ಎಲ್ಲೆಡೆಯಿಂದ ವ್ಯಾಪಕ ವಿರೋಧ ವ್ಯಕ್ತವಾಯಿತೋ, ನಂತರ ಸಂಬೀತ್ ಪಾತ್ರ ಕ್ಷಮೆ ಯಾಚಿಸಿ ನಾಲಿಗೆ ಸ್ಲಿಪ್ ಆಗಿದೆ ಎಂದು ಕ್ಷಮೆಯಾಚಿಸಿದ್ದಾರೆ.
ಮಹಾಪ್ರಭು ಶ್ರೀ ಜಗನ್ನಾಥ ಬ್ರಹ್ಮಾಂಡದ ಭಗವಂತ. ಇಂತಹ ಮಹಾಪ್ರಭುವನ್ನು ಇನ್ನೊಬ್ಬ ಮನುಷ್ಯನ ಭಕ್ತ ಎಂದು ಕರೆಯುವುದು .ಭಗವಂತನಿಗೆ ಮಾಡಿದ ಅವಮಾನ. ಇದು ಪ್ರಪಂಚದಾದ್ಯಂತ ಇರುವ ಕೋಟ್ಯಾಂತರ ಜಗನ್ನಾಥ ಭಕ್ತರು ಮತ್ತು ಒಡಿಯಾಗಳ ಭಾವನೆಗಳನ್ನು ಘಾಸಿಗೊಳಿಸಿದೆ’ ಎಂದು ಒರಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಖಂಡಿಸಿದ್ದಾರೆ.
ಹಾಗೆಯೇ ಕಾಂಗ್ರೆಸ್ ಸೇರಿದಂತೆ ಒರಿಸ್ಸಾದ ವಿರೋಧ ಪಕ್ಷಗಳು ಸಂಬಿತ್ ಪಾತ್ರ ಹೇಳಿಕೆ ಖಂಡಿಸಿವೆ. ಒಡಿಸ್ಸಾದ ಜನರ ದೇವರಾದ ಪುರಿ ಜಗನ್ನಾಥನನ್ನು ಮೋದಿಯ ಭಕ್ತ ಎನ್ನುವ ಮೂಲಕ ಹಿಂದೂಗಳಿಗೆ ಹಾಗೂ ಹಿಂದೂ ಧರ್ಮಕ್ಕೆ ಅವಮಾನ ಮಾಡಿದ್ದಾರೆ. ಒಡಿಸ್ಸಾ ಅಸ್ಮಿತೆ ಮೇಲೆ ಬಿಜೆಪಿ ದಾಳಿ ಮಾಡುತ್ತಿದೆ ಎಂದು ಆರೋಪಿಸಿವೆ.
ಸಂಬೀತ್ ಪಾತ್ರ ಸದಾ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗುವ ವ್ಯಕ್ತಿ. ಬಿಜೆಪಿ ಪಕ್ಷದ ವಕ್ತಾರನಾಗಿರುವ ಈತನನ್ನು ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಒರಿಸ್ಸಾದ ಪುರಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದೆ.




