Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಕಂಬದ ನರಸಿಂಹಸ್ವಾಮಿ ಬ್ರಹ್ಮ ರಥೋತ್ಸವಕ್ಕೆ ಚಾಲನೆ

ಸುಮಾರು 800 ವರ್ಷಗಳ ಇತಿಹಾಸವಿರುವ ಪ್ರಸಿದ್ದ ಧಾರ್ಮಿಕ ಕ್ಷೇತ್ರ ಮಂಡ್ಯ ತಾಲ್ಲೂಕಿನ ಶ್ರೀಕಂಬದ ನರಸಿಂಹಸ್ವಾಮಿ ಬ್ರಹ್ಮ ರಥೋತ್ಸವ ಇಂದು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.

ಮಂಡ್ಯ ತಾಲ್ಲೂಕಿನ ಸಾತನೂರು ಬೆಟ್ಟದಲ್ಲಿರುವ ಶ್ರೀಕಂಬದ ನರಸಿಂಹಸ್ವಾಮಿಯ ಮೂರನೇ ವರ್ಷದ ಬ್ರಹ್ಮ ರಥೋತ್ಸವಕ್ಕೆ ಮಂಗಳವಾರ ಮಧ್ಯಾಹ್ನ 12.05 ಗಂಟೆಗೆ ಅಭಿಜಿತ್ ಲಗ್ನದಲ್ಲಿ ಧಾರ್ಮಿಕ ಕೈಂಕರ್ಯಗಳ ನಡುವೆ ವಿಶ್ವ ಮಾನವ ಕ್ಷೇತ್ರದ ಪೀಠಾಧ್ಯಕ್ಷ ಶ್ರೀ ಪುರಷೋತ್ತಮಾನಂದನಾಥಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಚಾಲನೆ ನೀಡಲಾಯಿತು.

ಪುರಾಣ ಪ್ರಸಿದ್ದ ಧಾರ್ಮಿಕ ಕ್ಷೇತ್ರವಾದ ಶ್ರೀಕಂಬದ ನರಸಿಂಹಸ್ವಾಮಿ ದೇವಾಲಯ ಶಿಥಿಲಗೊಂಡಿದ್ದನ್ನು ಮನಗಂಡ ಭಕ್ತ ಸಮೂಹ ಕಂಬದ ನರಸಿಂಹಸ್ವಾಮಿ ಸೇವಾ ಸಮಿತಿ ರಚಿಸಿ, 2014ರಲ್ಲಿ ದೇವಾಲಯವನ್ನು ನವೀಕರಣ ಮಾಡಿ, ವಿಶೇಷ ದಿನಗಳಲ್ಲಿ ಪೂಜಾ ಕೈಂಕರ್ಯ ನೆರವೇರಿಸಲಾಗುತ್ತಿದೆ.

ಕಳೆದ 17ರಂದು ಧಾರ್ಮಿಕ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಪ್ರತಿದಿನ ವಿಶೇ‍ಷ ಸೇವೆಗಳು ನರಸಿಂಹಸ್ವಾಮಿಗೆ ಸಲ್ಲಿಕೆಯಾಗುತ್ತಿವೆ, ಶೇಷ ವಾಹನ, ಗಜವಾಹನ, ಕಲ್ಯಾಣೋತ್ಸವ, ಬ್ರಹ್ಮರಥೋತ್ಸವ ಸೇವೆಗಳು ಮುಕ್ತಾಯಗೊಂಡಿದ್ದು, ನಾಳೆಯಿಂದ ಅಶ್ವವಾಹನ, ಗರುಡ ವಾಹನ, ಹನುಮೋತ್ಸವ ಸೇವೆಗಳು ನಡೆಯಲಿವೆ,

ವಿಶೇಷ ಹೂವಿನ ಅಲಂಕಾರ

ಇಂದು ಮಂಗಳವಾರ ಬ್ರಹ್ಮರಥೋತ್ಸವದ ಅಂಗವಾಗಿ ಸುಮಾರು 30 ಸಾವಿರ ಮಂದಿಗೆ ಅನ್ನ ದಾಸೋಹವನ್ನು ಆಯೋಜಿಸಲಾಗಿತ್ತು. ಬೆಂಗಳೂರು ಮೂಲದ ಉದ್ಯಮಿ ನರಹರಿ ಎಂಬುವವರು 12 ಲಕ್ಷ ರೂ.ವೆಚ್ಚದಲ್ಲಿ ವಿಶೇಷ ಹೂವಿನ ಅಲಂಕಾರ ನೆರವೇರಿಸಿ, ದೇವಾಲಯಕ್ಕೆ ಆಗಮಿಸಿದ ಭಕ್ತರ ಪ್ರಶಂಸೆಗೆ ಪಾತ್ರರಾದರು.

ದನಗಳ ಜಾತ್ರೆ

ಜಾತ್ರೆ ಆರಂಭವಾದ ಮೇ 17ರಿಂದ ದನಗಳ ಜಾತ್ರೆ ಆರಂಭವಾಗಿದ್ದು, ಸುಮಾರು 250ಕ್ಕೂ ಹೆಚ್ಚು ಹಳ್ಳಿಕಾರ್ ತಳಿಯ ದನ ಹಾಗೂ ಹಸುಗಳು ಜಾತ್ರೆಯಲ್ಲಿ ಭಾಗವಹಿಸಿ ಜಾತ್ರೆಗೆ ಕಳೆ ನೀಡಿದವು. ದೇವಾಲಯದ ಅಭಿವೃದ್ದಿ ಸಮಿತಿಯಿಂದ 5 ವಿಭಾಗಗಳ ರಾಸುಗಳಿಗೆ ಪ್ರಥಮ 15 ಸಾವಿರ, ದ್ವಿತೀಯ 10 ಸಾವಿರ ಹಾಗೂ ತೃತೀಯ 5 ಸಾವಿರ ರೂ.ಗಳ ಬಹುಮಾನ ಹಾಗೂ ಚಾಂಪಿಯನ್ ಪ್ರಶಸ್ತಿ ಪಡೆದ ರಾಸುಗಳಿಗೆ ವಿಶೇಷ ಬಹುಮಾನ ನೀಡಲಾಗುವುದೆಂದು ಸೇವಾ ಸಮಿತಿ ಅಧ್ಯಕ್ಷ ಎಸ್.ಪಿ.ಮಹೇಶ್ ತಿಳಿಸಿದರು.

ಬ್ರಹ್ಮ ರಥೋತ್ಸವ ಧಾರ್ಮಿಕ ಕಾರ್ಯದಲ್ಲಿ ಶಾಸಕ ರವಿಕುಮಾರ್ ಗಣಿಗ, ಉಪವಿಭಾಗಾಧಿಕಾರಿ ಮಹೇಶ್, ತಹಶೀಲ್ದಾರ್ ಶಿವಕುಮಾರ ಬಿರಾದಾರ್, ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್, ದಾನಿಗಳಾದ ನರಹರಿ, ನಟರಾಜ್, ಪಾಪಣ್ಣ, ಹೆದ್ದಾರಿ ಪ್ರಾಧಿಕಾರದ ಮುಖ್ಯ ಅಭಿಯಂತರ ರಮೇಂದ್ರ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ