Thursday, November 19, 2026

ಪ್ರಾಯೋಗಿಕ ಆವೃತ್ತಿ

ಲೋಕಸಭಾ ಚುನಾವಣೆ: ಮೋದಿಯ ಸಪ್ತ ಅವತಾರಗಳು!!

ಲೋಕಸಭೆ, ವಿಧಾನಸಭೆಯಂತಹ ಯಾವುದೇ ಚುನಾವಣೆ ಇರಲಿ, ಆಡಳಿತ ಪಕ್ಷ ತಾನು ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲಿ ಮಾಡಿರುವಂತಹ ಅಭಿವೃದ್ಧಿ ಕಾರ್ಯಗಳು, ಜನರಿಗಾಗಿ ತಂದಂತಹ ಕಲ್ಯಾಣ ಕಾರ್ಯಕ್ರಮಗಳಂತಹ ಜನಪರ ವಿಚಾರಗಳನ್ನು ಜನರ ಮುಂದಿಟ್ಟು ಮತ ಪಡೆಯುವುದು ವಾಡಿಕೆ.

ಆದರೆ 2024ರ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಭಿವೃದ್ಧಿ ವಿಚಾರಗಳ ಮೇಲೆ ಮತವನ್ನೇ ಕೇಳಲಿಲ್ಲ.ಏಳು ಹಂತಗಳಲ್ಲಿ ನಡೆದ ಚುನಾವಣೆಯಲ್ಲಿ ಮೋದಿಯವರು ಮುಸ್ಲಿಂ, ಮಂಗಳಸೂತ್ರ, ಮಚಲಿ, ಮಟನ್, ಮುಜ್ರಾ ಎಂಬ ಕೋಮು ದ್ವೇಷದ ಹೇಳಿಕೆಗಳ ಮೂಲಕ ಹಿಂದೂ ಮತ್ತು ಮುಸ್ಲಿಮರ ನಡುವೆ ದ್ವೇಷದ ಬೀಜ ಬಿತ್ತಿ ಫಲ ಪಡೆಯಲು ಹೊರಟಿರುವುದನ್ನು ಕಂಡು ಸೌಹಾರ್ದ ಬಯಸುವ ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಕಳೆದ ಹತ್ತು ವರ್ಷಗಳ ಆಡಳಿತದ ಅವಧಿಯಲ್ಲಿ ತಾನು ಮಾಡಿದ ಅಭಿವೃದ್ಧಿ ಸಾಧನೆಗಳ ಮೇಲೆ ಮತ ಕೇಳದೆ ಪ್ರಧಾನಿಯೊಬ್ಬರು ಹಿಂದೂ-ಮುಸ್ಲಿಂ ಎಂದು ವಿಭಾಗಿಸಿ ಮತ ಕೇಳಿರುವುದು ಭಾರತದ ರಾಜಕೀಯ ಇತಿಹಾಸದಲ್ಲಿಯೇ ಇದೇ ಮೊದಲು ಎನ್ನಬಹುದು. ಸಪ್ತ ಅವತಾರಗಳು.

nudikarnataka.com

ಲೋಕಸಭಾ ಚುನಾವಣೆಯ ಏಳು ಹಂತಗಳಲ್ಲೂ ನರೇಂದ್ರ ಮೋದಿಯವರ ಸಪ್ತ ಅವತಾರಗಳನ್ನು ನೋಡಿದರೆ, ಈ ದೇಶ ಎತ್ತ ಸಾಗುತ್ತಿದೆ ಎಂಬುದು ತಿಳಿಯುತ್ತದೆ. ಸಬ್ ಕಾ ಸಾಥ್ ಸಬ್ ಕಾ ವಿಶ್ವಾಸ್ ಎಂದು ಹೇಳುತ್ತಿದ್ದ ಪ್ರಧಾನಿಯೇ ಕೋಮು ದ್ವೇಷದ ಭಾಷಣ ಮಾಡುತ್ತಾ ಹಿಂದೂ ಮತಗಳನ್ನು ಕ್ರೋಢೀಕರಿಸಲು ಸದಾ ಕೋಮು ದ್ವೇಷದ ಭಾಷಣ ಮಾಡಿದ್ದನ್ನು ಜಗತ್ತೇ ನೋಡಿದೆ.ಮೋದಿಯವರ ದ್ವೇಷ ಮತ್ತು ಎಡಬಿಡಂಗಿ ಭಾಷಣಗಳನ್ನು ಕಂಡು ಜಗತ್ತಿನ ಜನರೇ ದಿಗ್ಭ್ರಮೆ ಗೊಂಡಿದ್ದಾರೆ.

ಮೊದಲನೇ ಹಂತದಲ್ಲಿ ಮೋದಿಯವರು ಪ್ರಚಾರ ಸಭೆಯಲ್ಲಿ ಮೋದಿ ಕಿ ಗ್ಯಾರಂಟಿ ಜಾರಿಗೆ ಮತ ಕೊಡಿ.ಅಬ್ ಕಿ ಬಾರ್ ಚಾರ್ ಸೌ ಪಾರ್.ಎನ್‌ಡಿಎ ನಾಲ್ಕು ನೂರಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸುತ್ತದೆ ಎಂದು ಮಾತನಾಡಿದರು.

ಮೊದಲನೇ ಹಂತದ ಮತದಾನದಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿದೆ ಎಂಬ ವರದಿಗಳ ಬಂದವು.ಈ ಹಿನ್ನಲೆಯಲ್ಲಿ ಎರಡನೇ ಹಂತದಲ್ಲಿ ಅವರು ತಮ್ಮ ಮೋದಿ ಕೀ ಗ್ಯಾರಂಟಿ, ಅಭಿವೃದ್ಧಿ ಕಾರ್ಯಗಳ ಮೇಲೆ ಮತ ಕೇಳುವುದನ್ನು ಬಿಟ್ಟು ದೇಶದಲ್ಲಿ ಹಿಂದುಗಳು ಅಪಾಯದಲ್ಲಿದ್ದಾರೆ. ಕಾಂಗ್ರೆಸ್ ಪಕ್ಷ ಹಿಂದೂಗಳನ್ನು ಬಿಟ್ಟು ಮುಸ್ಲಿಮರನ್ನು ಓಲೈಸುತ್ತಿದೆ ಎಂದೆಲ್ಲ ಸುಳ್ಳು ಪ್ರಚಾರ ಮಾಡಿದರು.

ಮೂರನೇ ಹಂತದಲ್ಲಿ ಅವರ ಭಾಷಣದ ವೈಖರಿ ಮತ್ತಷ್ಟು ಬದಲಾಗಿ ಹೋಗಿತ್ತು.ಅಭಿವೃದ್ಧಿ, ಉದ್ಯೋಗ, ತಾವು ಮಾಡಿದ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಮಾತನಾಡದೆ, ಕಾಂಗ್ರೆಸ್ ಪಕ್ಷ ಹಿಂದೂ ಮಹಿಳೆಯರ ತಾಳಿಯನ್ನು ಕಿತ್ತು ಜಾಸ್ತಿ ಮಕ್ಕಳು ಹೆರುವವರಿಗೆ,ಅಂದರೆ ಮುಸ್ಲಿಮರಿಗೆ ಕೊಡುತ್ತಿದೆ. ಕಾಂಗ್ರೆಸ್ ಪ್ರಣಾಳಿಕೆ ಮುಸ್ಲಿಂ ಲೀಗ್ ಪ್ರಣಾಳಿಕೆಯಂತಿದೆ ಎಂದೆಲ್ಲ ಹೇಳುತ್ತಾ, ಹಿಂದೂ ಧರ್ಮೀಯರನ್ನು ಮುಸ್ಲಿಂ ಧರ್ಮೀಯರ ವಿರುದ್ಧ ಎತ್ತಿ ಕಟ್ಟಿದರು.

ನಾಲ್ಕನೇ ಹಂತದಲ್ಲಿ ಕಾಂಗ್ರೆಸ್ ಪಕ್ಷ ಓಬಿಸಿ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ಕೊಡುತ್ತಾರೆ ಎಚ್ಚರಿಕೆ ಎಂದು ಹೇಳುವ ಮೂಲಕ ಮೀಸಲಾತಿಯನ್ನು ಮುಂದಿಟ್ಟುಕೊಂಡು ಹಿಂದೂಗಳ ಮತವನ್ನು ಕ್ರೋಢೀಕರಿಸಲು ಮುಂದಾದರು.

ಐದನೇ ಹಂತದ ಸಂದರ್ಭದಲ್ಲಿ ನಾನು ಜೈವಿಕವಾಗಿ ಹುಟ್ಟಿಲ್ಲ. ನಮ್ಮ ತಾಯಿ ಬದುಕಿರುವವರೆಗೂ ನಾನು ಮನುಷ್ಯನೇ ಆಗಿದ್ದೆ. ಆದರೆ ಅವರ ನಿಧನದ ನಂತರ ನನ್ನನ್ನು ಆ ದೇವರೇ ಭೂಮಿಗೆ ಕಳಿಸಿ ಕೊಟ್ಟಿದ್ದಾನೆ ಎಂದು ಹೇಳುವ ಮೂಲಕ ನಾನೇ ದೇವರು ಎಂದು ಬಿಂಬಿಸಿಕೊಂಡರು.

ಆರನೇ ಹಂತದ ಸಂದರ್ಭದಲ್ಲಿ ನಾನು ಎಂದೂ ಮುಸ್ಲಿಮರ ವಿರುದ್ಧ ಮಾತನಾಡಿಲ್ಲ. ಮುಸ್ಲಿಮರಿಗೆ ಹಿಂದೂ ಮಹಿಳೆಯರ ತಾಳಿ ಕಸಿದು ಕೊಡುತ್ತಾರೆ ಎಂದು ಹೇಳಿಯೇ ಇಲ್ಲ. ನಾನು ಯಾವಾಗ ಹಿಂದೂ-ಮುಸ್ಲಿಂ ಅಂತ ಮಾತನಾಡುತ್ತೇನೆಯೋ ಆಗ ರಾಜಕೀಯದಲ್ಲಿ ಇರಲು ಯೋಗ್ಯನಲ್ಲ ಎಂದು ಹೇಳುವ ಮೂಲಕ ಶಾಕ್ ನೀಡಿದರು.

ಇನ್ನು 7ನೇ ಹಂತದ ಚುನಾವಣೆಯಲ್ಲಿ 1982ರಲ್ಲಿ ರಿಚರ್ಡ್ ಆಟೆನ್ ಬರೋ ನಿರ್ದೇಶನ ಬೆನ್ ಕಿಂಗ್ ಸ್ಲೇ ಗಾಂಧಿ ಪಾತ್ರದಲ್ಲಿ ಮಾಡಿದ ಸಿನಿಮಾದ ನಂತರವೇ ಮಹಾತ್ಮ ಗಾಂಧಿಯ ಬಗ್ಗೆ ಈ ಜಗತ್ತಿಗೆ ಗೊತ್ತಾಗಿದ್ದು ಎಂದು ಹೇಳಿ ಸಾಕಷ್ಟು ಟ್ರೋಲ್ ಗೆ ಒಳಗಾದರು.

ಗಾಂಧಿಯವರ ಬಗ್ಗೆ ಮೋದಿ ಮಾತನಾಡಿದ್ದನ್ನು ಕೇಳಿದ ಜಗತ್ತಿನ ಮಂದಿ ಹೌಹಾರಿದರು. ಅಲ್ಲದೆ ಕನ್ಯಾ ಕುಮಾರಿಯಲ್ಲಿ ವಿವೇಕಾನಂದ ಪ್ರತಿಮೆ ಬಳಿ 48 ಗಂಟೆಗಳ ಧ್ಯಾನ ಮಾಡುವ ಮೂಲಕ ಪ್ರಚಾರ ಅಂತ್ಯವಾಗಿದ್ದರೂ ಬೇರೊಂದು ರೀತಿಯಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಂಡರು.

ಒಟ್ಟಾರೆ ಮೋದಿಯವರು 206 ಪ್ರಚಾರ ಭಾಷಣಗಳಲ್ಲೂ, 81 ಮಾಧ್ಯಮಗಳೊಂದಿಗೆ ಸಂದರ್ಶನ ಕೂಡ ನೀಡಿದರು.ಆದರೆ ಇಲ್ಲೆಲ್ಲೂ ಕಪ್ಪು ಹಣ, ಉದ್ಯೋಗ ಸೃಷ್ಟಿ, ಪೆಟ್ರೋಲ್, ಡೀಸೆಲ್,ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಮೊದಲಾದವುಗಳ ಬಗ್ಗೆ ಚರ್ಚೆಯನ್ನೇ ಮಾಡಲಿಲ್ಲ.ಸಪ್ತ ಹಂತಗಳಲ್ಲಿ ನಡೆದ ಚುನಾವಣೆಯಲ್ಲಿ ಮೋದಿಯ ಸಪ್ತ ಅವತಾರಗಳನ್ನು ಕಂಡ ಜನರು ದಿಗ್ಭ್ರಾಂತಿಗೆ ಒಳಗಾಗಿದ್ದಾರೆ ಎನ್ನುವುದು ಜನಪರವಾಗಿರುವ ಮಾಧ್ಯಮಗಳು ಹೇಳುತ್ತಿರುವ ಸತ್ಯ ಸಂಗತಿ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ