ಜಗದೀಶ್ ಕುಮಾರ್
ರಾಜಕೀಯ ಎಂಬುದು ವ್ಯಾಪಾರವಲ್ಲ. ಅದು ಯಾವುದೇ ಸಿದ್ಧಾಂತ, ವಿಚಾರಧಾರೆಯ ಪಕ್ಷವಾಗಿರಲಿ, ಅಲ್ಲಿ ಮುಖ್ಯವಾಗುವುದು ಐಡಿಯಾಲಜಿ ಮತ್ತು ಕಾರ್ಯಕರ್ತರು. ಆದರೆ ಕಳೆದ ಹತ್ತು ವರ್ಷಗಳ ದೇಶದ ರಾಜಕೀಯವನ್ನು ಅವಲೋಕಿಸಿದರೆ ಅಲ್ಲಿ ಕಂಡು ಬರುವುದು ವ್ಯಾಪಾರ, ವ್ಯಾಪಾರ ಮತ್ತು ವ್ಯಾಪಾರ ಅಷ್ಟೇ.
ಗುಜರಾತಿನ ಮಾರ್ವಾಡಿಗಳು ಒಂದೊಂದು ರೂಪಾಯಿಯನ್ನು ಸಹ ವ್ಯಾಪಾರದ ದೃಷ್ಟಿಯಿಂದ ನೋಡುತ್ತಾರೆ ಎನ್ನುವ ಮಾತೊಂದಿದೆ. ಅದೇ ರೀತಿ ದೇಶದಲ್ಲಿ ಅಧಿಕಾರಕ್ಕೆ ಬಂದ ಇಬ್ಬರು ಪ್ರಭಾವಶಾಲಿ ನಾಯಕರುಗಳು ದೇಶವನ್ನು, ಪಕ್ಷವನ್ನು, ಎಲ್ಲವನ್ನು ವ್ಯಾಪಾರಕ್ಕೆ ಇಟ್ಟುಬಿಟ್ಟರು. ದೇಶದ ವಿಮಾನ ನಿಲ್ದಾಣ, ಬಿಎಸ್ಎನ್ಎಲ್, ರೈಲ್ವೆ ಎಲ್ಲವೂ ಮಾರಾಟವಾಗುವ ಜೊತೆಗೆ, ಕಂಪನಿಗಳಿಂದ ಎಲೆಕ್ಟ್ರೋಲ್ ಬಾಂಡ್ ಮೂಲಕ ಚಂದಾ ವಸೂಲಾತಿ ಎಲ್ಲವೂ ನಡೆದು ಹೋಯಿತು.
ಐಟಿ, ಇಡಿ, ಸಿಬಿಐನಂತಹ ಸಂಸ್ಥೆಗಳು ಚಂದಾ ವಸೂಲಾತಿ ಮಾಡುವ ಮಿನಿ ರೌಡಿಗಳಾಗಿ ಪರಿವರ್ತನೆಯಾಗಿ ಬಿಟ್ಟವು. ಆದರೆ ಈ ಇಬ್ಬರೂ ಗುಜರಾತಿ ಮನುಷ್ಯರು ವ್ಯಾಪಾರ ಮಾಡುತ್ತ ಮಾಡುತ್ತ ಅದರಲ್ಲಿ ಎಷ್ಟು ಮಗ್ನರಾಗಿ ಬಿಟ್ಟಿದ್ದರು ಎಂದರೆ, ತಮ್ಮ ಸುತ್ತ ಪಿಆರ್ ಓ ಗಳು, ಕ್ಯಾಮೆರಾ ಮೆನ್ ಗಳು, ಆಸ್ಥಾನ ವಿದೂಷಕರಿಗೆ ತಾವು ಮಾಡುತ್ತಿರುವುದು ರಾಜಕೀಯ ಎಂಬುದೇ ಮರೆತೇ ಹೋಗಿತ್ತು ಎನ್ನಿಸುತ್ತದೆ.
ಯಾಕೆಂದರೆ ರಾಜಕಾರಣದಲ್ಲಿ ಕನಿಷ್ಟ ಪಕ್ಷದ ಮಾನವೀಯತೆ, ಕನಿಷ್ಟ ಪಕ್ಷದ ಸಾಮಾನ್ಯ ಜ್ಞಾನ, ವಿವೇಕ, ನಾಗರೀಕ ನಡವಳಿಕೆ ಇರಬೇಕಾಗುತ್ತೆ. ಆದರೆ ಇವುಗಳನ್ನೆಲ್ಲ ಕಳೆದುಕೊಂಡಿದ್ದ ಈ ವ್ಯಾಪಾರಿ ಮನುಷ್ಯರು ತಮ್ಮ ದುಡ್ಡಿನ ಮುಂದೆ ಮತ್ತು ತಾಕತ್ತಿನ ಮುಂದೆ ಏನು ಬೇಕಾದರೂ ಮಾಡಬಲ್ಲೆವು ಎನ್ನುವಂತಾಗಿದ್ದರು. ಅದರೆ ದೇಶದ ಮತದಾರ ಈ ಇಬ್ಬರೂ ಗುಜರಾತಿನ ವ್ಯಾಪಾರಿಗಳಿಂದ ಕೇವಲ ದೇಶವನ್ನಷ್ಟೆ ಅಲ್ಲ, ಸ್ವತಃ ಬಿಜೆಪಿ ಪಕ್ಷವನ್ನು ಕಾಪಾಡಿದ್ದಾನೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.




