ಜೆಡಿಎಸ್ ಪಕ್ಷದ ಶಾಸಕ ಎಚ್.ಡಿ.ರೇವಣ್ಣ ಕುಟುಂಬದ ಪಾಳೇಗಾರಿಕೆಗೆ ಹಾಸನದ ಮತದಾರರು ಬ್ರೇಕ್ ಹಾಕಿದ್ದಾರೆ ಎನ್ನುತ್ತಿದೆ ಲೋಕಸಭೆ ಫಲಿತಾಂಶ.
ಜೆಡಿಎಸ್ ಭದ್ರಕೋಟೆ ಹಾಸನದಲ್ಲಿ ಎರಡು ದಶಕಗಳ ನಂತರ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ 6,70, 599 ಮತಗಳನ್ನು ಪಡೆದು, ಜೆಡಿಎಸ್ ಅಭ್ಯರ್ಥಿ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು 43,756 ಮತಗಳ ಅಂತರದಿಂದ ಸೋಲಿಸುವ ಮೂಲಕ ಎಚ್. ಡಿ. ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣನ ಪಾಳೆಗಾರಿಕೆಗೆ ದೊಡ್ಡ ಪೆಟ್ಟು ನೀಡಿದ್ದಾರೆ.
ಪ್ರಜ್ವಲ್ ರೇವಣ್ಣ ಮಹಿಳೆಯರ ಮೇಲೆ ನಡೆಸಿದ್ದ ಲೈಂಗಿಕ ದೌರ್ಜನ್ಯದ ಪೆನ್ ಡ್ರೈವ್ ಚುನಾವಣೆಗೆ ಮೂರು ದಿನಗಳ ಮುಂದೆ ಸಾಕಷ್ಟು ಸದ್ದು ಮಾಡಿದ್ದರೂ, ಜೆಡಿಎಸ್ ನ ಸಾಂಪ್ರದಾಯಿಕ ಮತದಾರರು ಎಚ್.ಡಿ. ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ಮುಖ ನೋಡಿಕೊಂಡು ಪ್ರಜ್ವಲ್ ರೇವಣ್ಣನಿಗೆ 6, 26,843 ಮತಗಳನ್ನು ನೀಡಿದ್ದಾರೆ. ಕ್ಷೇತ್ರದಲ್ಲಿ ಪೆನ್ ಡ್ರೈವ್ ಗಿಂತ ಎಚ್.ಡಿ.ರೇವಣ್ಣ ಕುಟುಂಬದ ಪಾಳೇಗಾರಿಕೆ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿ ವಿರೋಧಿಸಿದ ಮಾಜಿ ಶಾಸಕ ಪ್ರೀತಂ ಗೌಡ ಮತ್ತವರ ಹಿಂಬಾಲಕರ ಒಳೇಟು ಕೂಡ ಪ್ರಜ್ವಲ್ ರೇವಣ್ಣ ಸೋಲಿಗೆ ಕಾರಣವಾಗಿದೆ.
ಪ್ರಜ್ವಲ್ ಸೋಲಿಗೆ ಪೆನ್ ಡ್ರೈವ್ ಕಾರಣವಾಗಿದೆ ಎನ್ನುವುದಾಗಿದ್ದರೆ, ಮತದಾನದ ಆರಂಭದಿಂದಲೇ ಪ್ರಜ್ವಲ್ ಹಿನ್ನಡೆ ಅನುಭವಿಸಬೇಕಿತ್ತು. ಆದರೆ ಆರಂಭಿಕ ಸುತ್ತಿನಿಂದಲೇ ಒಮ್ಮೆ ಪ್ರಜ್ವಲ್, ಮತ್ತೊಮ್ಮೆ ಶ್ರೇಯಸ್ ಮುನ್ನಡೆ ಸಾಧಿಸುತ್ತಾ ಬಂದು, ಅಂತಿಮವಾಗಿ ಕಾಂಗ್ರೆಸ್ ಪಕ್ಷದ ಶ್ರೇಯಸ್ ಪಟೇಲ್ ಗೆಲುವಿನ ನಗೆ ಬೀರಿದ್ದಾರೆ.ಶ್ರೇಯಸ್ ಪಟೇಲ್ ಗೆಲುವು ಎಚ್.ಡಿ.ರೇವಣ್ಣ ಕುಟುಂಬದ ಪಾಳೇಗಾರಿಕೆಗೆ ಪೆಟ್ಟು ನೀಡಿರುವುದು ಸ್ಪಷ್ಟ. ಬಿಜೆಪಿ ಶಾಸಕರಿರುವ ಕ್ಷೇತ್ರಗಳಲ್ಲಿ ಪ್ರಜ್ವಲ್ ಹೆಚ್ಚು ಮತ ಗಳಿಸಿದ್ದರೆ, ಜೆಡಿಎಸ್ ಶಾಸಕರಿರುವ ಕ್ಷೇತ್ರದಲ್ಲಿ ಕಡಿಮೆ ಮತ ಗಳಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೊಳೆನರಸೀಪುರದಲ್ಲಿ ಪ್ರಜ್ವಲ್ ತಂದೆ ಎಚ್.ಡಿ. ರೇವಣ್ಣ ಎದುರು ಶ್ರೇಯಸ್ ಪಟೇಲ್ ಕೇವಲ 3,000 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಈ ಸೋಲಿನ ಅನುಕಂಪ ಹಾಗೂ ಇವರ ತಾತ ಜಿ. ಪುಟ್ಟಸ್ವಾಮಿ ಗೌಡರ ನಂತರ ಚುನಾವಣೆ ಎದುರಿಸಿದ್ದ ಶ್ರೇಯಸ್ ಪಟೇಲ್ ತಾಯಿ ಅನುಪಮ ಪಟೇಲ್ ಎರಡು ಬಾರಿ ಸೋತಿರುವುದು ಕೂಡ ಅನುಕಂಪ ಸೃಷ್ಟಿಸಿತ್ತು.ಅಲ್ಲದೆ ಹಾಸನದಲ್ಲಿ ಎಚ್.ಡಿ.ರೇವಣ್ಣ ಕುಟುಂಬದ ದಬ್ಬಾಳಿಕೆ ಕಾರಣದಿಂದ ಹಾಸನದ ಮತದಾರರು ಬದಲಾವಣೆ ಬಯಸಿದ್ದರು.ಹಾಗಾಗಿ ಶ್ರೇಯಸ್ ಪಟೇಲ್ ಹಾಸನದ ಸಂಸದರಾಗಿ ಆಯ್ಕೆಯಾಗಿದ್ದಾರೆ.




