ವಿಧಾನ ಪರಿಷತ್ತಿನ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಕೆ.ವಿವೇಕಾನಂದ ಅವರು ಭರ್ಜರಿ ಜಯ ಸಾಧಿಸಿದ್ದಾರೆ. ಮೊದಲ ಪ್ರಾಶಸ್ತ್ರದ ಮತಗಳಲ್ಲೇ ವಿವೇಕಾನಂದ ಅವರು ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ಅವರನ್ನು ಸೋಲಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮುಖಭಂಗ ಮಾಡಿದ್ದಾರೆ.
ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣಾ ಇತಿಹಾಸದಲ್ಲಿ ಮೊದಲ ಪ್ರಾಶಸ್ತ್ಯ ಮತದಲ್ಲಿಯೇ ವಿವೇಕಾನನಂದ ಗೆಲುವು ದಾಖಲಿಸಿದ್ದಾರೆ. ವಿವೇಕಾನಂದ 10,823 ಮತಗಳನ್ನು ಪಡೆದು, 4622 ಅಂತರದಲ್ಲಿ ಜಯಗಳಿಸಿದರೆ, ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡಗೆ 6,201 ಮತಗಳನ್ನು ಪಡೆದು ಪರಾಜಿತರಾದರು. ಪಕ್ಷೇತರ ಅಭ್ಯರ್ಥಿ ವಾಟಾಳ್ ನಾಗರಾಜ್ ಗೆ 84 ಮತಗಳನಷ್ಟೆ ಪಡೆದುಕೊಂಡಿದ್ದಾರೆ. ಇನ್ನೂ 1049 ಮತಗಳು ಕುಲಗೆಟ್ಟ ಮತಗಳಾಗಿವೆ.
ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಗೆಲುವಿನ ಸಂಭ್ರಮದಲ್ಲಿರುವ ಜೆಡಿಎಸ್‌ಗೆ ವಿವೇಕಾನಂದ ಅವರ ಗೆಲುವು ಮತ್ತಷ್ಟು ಖುಷಿ ತಂದರೆ,ಐದನೇ ಬಾರಿ ಪರಿಷತ್ತಿಗೆ ಕಾಲಿಡಲು ಮುಂದಾಗಿದ್ದ ಮರಿತಿಬ್ಬೇಗೌಡರ ಸೋಲು ಆಡಳಿತರೂಢ ಕಾಂಗ್ರೆಸ್ ಪಕ್ಷಕ್ಕೆ ಶಾಕ್ ನೀಡಿದೆ.
ಮೈಸೂರು- ಕೊಡಗು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಹಾಗೂ ಮಂಡ್ಯ ಕ್ಷೇತ್ರದಲ್ಲಿ ಸ್ಟಾರ್ ಚಂದ್ರು ಅವರು ಸೋಲುಂಡ ಬೆನ್ನಲ್ಲೇ ಈಗ ದಕ್ಷಿಣ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ಹೀನಾಯವಾಗಿ ಸೋಲು ಅನುಭವಿಸಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ,ಸಚಿವ ಚಲುವರಾಯಸ್ವಾಮಿ ಅವರಿಗೂ ತೀವ್ರ ಮುಜುಗರ ತಂದಿದೆ.
ಮತ ಎಣಿಕೆಯ ಆರಂಭದಿಂದಲೂ ವಿವೇಕಾನಂದ ಅವರು ಮುನ್ನಡೆ ಕಾಯ್ದುಕೊಂಡು ಬಂದಿದ್ದರು. ಗೆಲುವಿನ ಖೋಟಾ ತಲುಪಿದ ಕೂಡಲೇ ಅವರ ಜಯ ಅಧಿಕೃತವಾಗಿ ದಾಖಲಾಯಿತು. ಸತತವಾಗಿ ಶಿಕ್ಷಕರ ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತಿದ್ದ ಮರಿತಿಬ್ಬೇಗೌಡ ಅವರಿಗೆ ಈ ಸೋಲಿನಿಂದ ತೀವ್ರ ಮುಖಭಂಗವಾಗಿದೆ.
ಮೊದಲ ಬಾರಿಗೆ ಸ್ಪರ್ಧಿಸಿದ್ದ ವಿವೇಕಾನಂದ ಅವರು 3500ಕ್ಕೂ ಹೆಚ್ಚು ಬಹು ಮತಗಳಿಂದ ಗೆಲುವು ಸಾಧಿಸಿದ್ದು,ಜೆಡಿಎಸ್-ಬಿಜೆಪಿ ಒಟ್ಟಾಗಿ ಚುನಾವಣೆ ಎದುರಿಸಿದ್ದು,ಮರಿತಿಬ್ಬೇಗೌಡರ ಸೋಲಿಗೆ ಕಾರಣವಾಗಿದೆ.
ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಕ್ಷಕರೇ ಚಲಾಯಿಸಿದ್ದ ಮತಗಳ ಪೈಕಿ ಏಳು ನೂರಕ್ಕೂ ಹೆಚ್ಚು ಮತಗಳು ಅಸಿಂಧುವಾಗಿದ್ದು,ಶಿಕ್ಷಕರ ದಡ್ಡತನ ಬಹಿರಂಗವಾಗಿದೆ.




