Thursday, October 24, 2024

ಪ್ರಾಯೋಗಿಕ ಆವೃತ್ತಿ

ಬೆಂಗಳೂರು – ಚಾಮರಾಜನಗರ ರೈಲುಮಾರ್ಗ ಕಾಮಗಾರಿ ಶೀಘ್ರ ಆರಂಭವಾಗಲಿ: ಕೆ.ಅನ್ನದಾನಿ

ಬೆಂಗಳೂರು, ಕನಕಪುರ, ಮಳವಳ್ಳಿ, ಚಾಮರಾಜನಗರ ವರೆಗಿನ ರೈಲು ಮಾರ್ಗಕ್ಕೆ ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಅಂಗೀಕಾರ ನೀಡಿ,ಶೀಘ್ರವಾಗಿ ಕಾಮಗಾರಿ ಆರಂಭಿಸಬೇಕೆಂದು ಮಾಜಿ ಶಾಸಕ ಕೆ. ಅನ್ನದಾನಿ ಒತ್ತಾಯಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಈ ಬಜೆಟ್ ನಲ್ಲಿ ರೈಲ್ವೆ ಮಾರ್ಗಕ್ಕೆ ಅಗತ್ಯವಾದ ಹಣಕಾಸು ಮಂಜೂರು ನೀಡಿ,ಕೆಲಸ ಆರಂಭಿಸಬೇಕೆಂದು ಈಗಾಗಲೇ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಪತ್ರ ಸಲ್ಲಿಸಿ ಇದರ ಅಗತ್ಯತೆಯ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ನಮ್ಮ ಪಕ್ಷದ ನಾಯಕ,ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೂ ಮನವಿ ಪತ್ರ ನೀಡಿದ್ದು,ಈಗಾಗಲೇ ಅವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಜೊತೆ ಚರ್ಚೆ ಮಾಡಿದ್ದಾರೆ. ಸಚಿವ ವಿ. ಸೋಮಣ್ಣ ಅವರು ಕೂಡ ಯೋಜನಾ ವರದಿ ಡಿಪಿಆರ್ ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದರು.

1996-97 ರಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ಕನಕಪುರ ಸಂಸದರಾಗಿದ್ದ ಸಂದರ್ಭದಲ್ಲಿ ಬೆಂಗಳೂರಿನಿಂದ ಚಾಮರಾಜನಗರ ರೈಲ್ವೆ ಮಾರ್ಗಕ್ಕೆ ಆಗ್ರಹಿಸಲಾಗಿತ್ತು. ಇದಾಗಿ 28 ವರ್ಷಗಳ ನಂತರ ರೈಲ್ವೆ ಮಾರ್ಗದ ಬಗ್ಗೆ ಕುಮಾರಸ್ವಾಮಿಯವರು ಚರ್ಚೆ ನಡೆಸಿದ್ದು, ಶೀಘ್ರದಲ್ಲಿ ಈ ಯೋಜನೆ ಪ್ರಾರಂಭವಾಗುವ ಆಶಾಭಾವನೆ ಮೂಡಿಸಿದೆ ಎಂದರು.

ಈ ರೈಲು ಮಾರ್ಗದ ನಿರ್ಮಾಣದಿಂದ ರಾಮನಗರ, ಮಂಡ್ಯ, ಚಾಮರಾಜನಗರ ಮೂರು ಜಿಲ್ಲೆಗಳ ಜನರ ಹಲವು ದಶಕಗಳ ಕನಸು ಈಡೇರಲಿದೆ. ರೈಲು ಮಾರ್ಗ ನಿರ್ಮಾಣದಿಂದ ಈ ಭಾಗದ ಜನರು ಆರ್ಥಿಕವಾಗಿ ಶೈಕ್ಷಣಿಕವಾಗಿ ಹೆಚ್ಚು ಅಭಿವೃದ್ಧಿ ಹೊಂದುತ್ತಾರೆ. ಈ ಯೋಜನೆಗೆ 1723 ಎಕರೆ ಜಮೀನು ಬೇಕಾಗಿದ್ದು, 142 ಕಿ.ಮೀ ಅಂತರದ ಈ ಯೋಜನೆಗೆ 2013ರಲ್ಲಿ 1382.78 ಕೋಟಿ ಹಣ ವೆಚ್ಚವಾಗಲಿದೆ ಎಂದಿದ್ದು, ಈಗ ಇನ್ನು ಹೆಚ್ಚಾಗಲಿದೆ ಎಂದರು.

ಈ ರೈಲು ಮಾರ್ಗಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲಾ ಶೇ.50ರಷ್ಟು ಹಣ ವಿನಿಯೋಗಿಸಬೇಕಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಭಾಗದ ಜನರು ಆರ್ಥಿಕವಾಗಿ ಬಲಗೊಳ್ಳಲು ಈ ಯೋಜನೆಗೆ ಅಗತ್ಯವಾದ ಹಣಕಾಸು ಮತ್ತು ಭೂಮಿಯನ್ನು ನೀಡುವ ಮೂಲಕ ಆದಷ್ಟು ತ್ವರಿತವಾಗಿ ಈ ಕೆಲಸ ಆರಂಭವಾಗಲು ಪ್ರಯತ್ನ ಮಾಡಬೇಕು ಎಂದು ಮನವಿ ಮಾಡಿದರು.

ಕೆಂಗೇರಿ-ಹೆಜ್ಜಾಲ- ಹಾರೋಹಳ್ಳಿ- ಕನಕಪುರ- ಮಳವಳ್ಳಿ- ಕೊಳ್ಳೇಗಾಲ- ಚಾಮರಾಜನಗರ ತಲುಪುವ ರೈಲು ಮಾರ್ಗ ನಿರ್ಮಾಣವಾದರೆ ಈ ಭಾಗಗಳು ಎಲ್ಲಾ ರೀತಿಯಲ್ಲೂ ಅಭಿವೃದ್ಧಿ ಹೊಂದುತ್ತದೆ.ಆದ್ದರಿಂದ ಈ ಯೋಜನೆಗೆ ಅಗತ್ಯವಿರುವ ಹಣಕಾಸನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುವ ಮೂಲಕ ಈ ಯೋಜನೆಯನ್ನು ತ್ವರಿತವಾಗಿ ಆರಂಭಿಸಿ, ಜನರಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕು ಎಂದರು.

ಅನುಮಾನ ಮೂಡಿಸಿದೆ

ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಎಸ್ಸಿ,ಎಸ್ಟಿ ವರ್ಗಕ್ಕೆ ಮೀಸಲಾಗಿದ್ದ 11 ಸಾವಿರ ಕೋಟಿ ಹಣವನ್ನು ವರ್ಗಾವಣೆ ಮಾಡಿರುವುದು, ಈ ವರ್ಗದ ಜನರಿಗೆ ಮಾಡಿರುವ ಮಹಾದ್ರೋಹ. ನಮ್ಮ ಸಮುದಾಯಕ್ಕೆ ಮೀಸಲಾಗಿದ್ದ ಈ ಹಣ ಎಲ್ಲಿಗೆ ಹೋಯಿತು. ಈ 11,000 ಕೋಟಿ ರೂ.ಗಳ ಬಗ್ಗೆ ಸದನ ಸಮಿತಿಯ ಸದಸ್ಯರಾದ ಶಾಸಕ ನರೇಂದ್ರಸ್ವಾಮಿ ಅವರು ಏಕೆ ಮಾತನಾಡುತ್ತಿಲ್ಲ.ಅವರಿಗೆ ಇದರಲ್ಲಿ ಪಾಲುದಾರಿಕೆ ಇದೆಯಾ? ಅವರ ನಡೆ ಅನುಮಾನ ಮೂಡಿಸುತ್ತಿದೆ ಎಂದರು. ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ಹಣವನ್ನು ತೆಲಂಗಾಣ ಚುನಾವಣೆಗಾಗಿ ಉದ್ಯಮಿಗಳು, ಮದ್ಯ ವ್ಯಾಪಾರಿಗಳ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಣಕಾಸು ಸಚಿವರಾಗಿದ್ದು, ಅವರ ಗಮನಕ್ಕೆ ಬರದೆ ಈ ಹಣ ವರ್ಗಾವಣೆಯಾಗುವಂತಿಲ್ಲ.ತೆಲಂಗಾಣ ಚುನಾವಣೆಗಾಗಿಯೇ ಈ ಹಣ ಉಪಯೋಗವಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಮೌನವಾಗಿರುವುದು ಸರಿಯಲ್ಲ.ಮುಖ್ಯಮಂತ್ರಿಗಳು ಈ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂದರು.

ಜೆಡಿಎಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ಜಯರಾಮ್, ಮುಖಂಡರಾದ ಪುಟ್ಟರಾಮು, ನಂದಕುಮಾರ್, ಕಂಸಾಗರ ರವಿ, ಕಾಂತರಾಜು, ಮೆಹಬೂಬ್ ಪಾಷಾ, ಶ್ರೀಧರ್, ಸಿದ್ದಚಾರಿ, ಸಾತನೂರು ಜಯರಾಮ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!