Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಹಾಯುತಿ ಮೈತ್ರಿಕೂಟದಿಂದ ಅಜಿತ್ ಪವಾರ್ ಗೆ ಸಿಗಲಿದೆಯೇ ಗೇಟ್ ಪಾಸ್!

ಕಳೆದ ಲೋಕಸಭಾ ಚುನಾವಣೆ ನಂತರ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ನೋಡಿದರೆ ಮಹಾರಾಷ್ಟ್ರದ ಆಡಳಿತರೂಢ ಮಹಾಯುತಿ ಮೈತ್ರಿಕೂಟದಿಂದ ಅಜಿತ್ ಪವಾರ್ ಗೆ ಶೀಘ್ರ ಗೇಟ್ ಪಾಸ್ ಸಿಗಲಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ಶಿವಸೇನೆ(ಏಕನಾಥ್ ಶಿಂಧೆ) ಹಾಗೂ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಒಳಗೊಂಡ ಮಹಾಯುತಿ ಮೈತ್ರಿಕೂಟ 48 ಸ್ಥಾನಗಳ ಪೈಕಿ ಕೇವಲ 18 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಹೀನಾಯ ಸೋಲು ಅನುಭವಿಸಿದೆ. ಕಾಂಗ್ರೆಸ್, ಶಿವಸೇನೆ(ಉದ್ಧವ್ ಠಾಕ್ರೆ) ಎನ್‌ಸಿಪಿ (ಶರದ್ ಪವಾರ್) ಪಕ್ಷಗಳ ಮಹಾವಿಕಾಸ ಅಘಾಡಿ ಮೈತ್ರಿಕೂಟ 30 ಸ್ಥಾನಗಳಲ್ಲಿ ಜಯಗಳಿಸಿ ಬಿಜೆಪಿ ವಿರುದ್ಧ ಸೆಟೆದು ನಿಂತಿದೆ.

ಆಡಳಿತಾರೂಢ ಮಹಾಯುತಿ ಮೈತ್ರಿಕೂಟದ ಈ ಹಿನ್ನಡೆಗೆ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಜೊತೆ ಕೈ ಜೋಡಿಸಿದ್ದೇ ಕಾರಣ ಎಂಬ ಆರೋಪ ಹೊರಿಸಿ ಶೀಘ್ರದಲ್ಲಿಯೇ ಅಜಿತ್ ಪವಾರ್ ಅವರನ್ನು ಮಹಾಯುತಿ ಮೈತ್ರಿಕೂಟ ತೊರೆಯುವಂತೆ ಮಾಡುವ ಸಂಚು ಹೆಣೆಯಲಾಗಿದೆ.

ಆರ್ ಎಸ್ ಎಸ್ ಜೊತೆ ಗುರುತಿಸಿಕೊಂಡಿರುವ ವಿವೇಕ ಎಂಬ ಮರಾಠಿ ಪತ್ರಿಕೆ ಮುಂಬೈ,ಕೊಂಕಣ,ಪಶ್ಚಿಮ ಮಹಾರಾಷ್ಟ್ರದಲ್ಲಿ ಸುಮಾರು 200 ಕ್ಕೂ ಅಧಿಕ ಜನರಿಂದ ಅಭಿಪ್ರಾಯ ಸಂಗ್ರಹ ಮಾಡಿದ್ದು,ಈ ಸಮೀಕ್ಷೆಯಲ್ಲಿ ಪಾಲ್ಗೊಂಡವರು ಬಿಜೆಪಿ ಮತ್ತು ಅಜಿತ್ ಪವಾರ್ ನೇತೃತ್ವದ ಎನ್ ಪಿಯಿಂದ ಹಿನ್ನಡೆಯಾಯಿತು ಎಂಬ ಅಭಿಪ್ರಾಯ ದಾಖಲಿಸಿದ್ದಾರೆ.

ಬಿಜೆಪಿಯು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಜೊತೆಗೆ ಕೈ ಜೋಡಿಸಿದ್ದು ಜನರ ಭಾವನೆಗೆ ವಿರುದ್ಧವಾಗಿತ್ತು. ಬಿಜೆಪಿ ಪಕ್ಷದ ಸಂಘಟನೆಯಲ್ಲಿ ತೊಡಗಿರುವ ಮುಖಂಡರನ್ನು ಕಡೆಗಣಿಸಿ, ಇತರ ಪಕ್ಷಗಳ ಮುಖಂಡರಿಗೆ ಬಿಜೆಪಿ ಆದ್ಯತೆ ನೀಡುತ್ತಿದೆ ಎಂಬ ಭಾವನೆ ಜನರಲ್ಲಿ ದಟ್ಟವಾಗಿದ್ದರಿಂದ ಚುನಾವಣೆ ಫಲಿತಾಂಶದಲ್ಲಿ ತೀವ್ರ ಪರಿಣಾಮ ಬೀರಿತು ಎಂದು ಜನರು ಅಭಿಪ್ರಾಯ ಕೊಟ್ಟಿದ್ದಾರೆ ಎಂದು ವರದಿ ಮಾಡಿದೆ. ಇದನ್ನು ಮುಂದಿಟ್ಟುಕೊಂಡು ಮಹಾಯುತಿ ಮೈತ್ರಿಕೂಟದಿಂದ ಅಜಿತ್ ಪವಾರ್ ಅವರನ್ನು ಹೊರಗೆ ದೂಡುವ ಸಂಚು ಹೆಣೆಯಲಾಗುತ್ತಿದೆ ಎಂದೇ ಹೇಳಲಾಗುತ್ತಿದೆ.

ಮಹಾರಾಷ್ಟ್ರದ ಲೋಕಸಭಾ ಚುನಾವಣೆಯಲ್ಲಿ ಶರದ್ ಪವಾರ್ ನೇತೃತ್ವದ ಎನ್‌ಸಿಪಿ 10 ಸ್ಥಾನಗಳಲ್ಲಿ 8 ಸ್ಥಾನಗಳನ್ನು ಗೆದ್ದರೆ,ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ 4 ಸ್ಥಾನಗಳ ಪೈಕಿ ಕೇವಲ ಒಂದು ಸ್ಥಾನದಲ್ಲಿ ಜಯಗಳಿಸಿ, ಹೀನಾಯ ಸೋಲು ಅನುಭವಿಸಿದೆ. ಮಹಾರಾಷ್ಟ್ರದಲ್ಲಿ ಶರದ್ ಪವಾರ್ ಅವರ ಎನ್ಸಿಪಿಯನ್ನು ಇಬ್ಬಾಗ ಮಾಡಿರುವುದು ಜನರಿಗೆ ಸರಿ ಕಂಡಿಲ್ಲ.ಅಲ್ಲದೆ ಅಧಿಕಾರದಾಹಿ ಅಜಿತ್ ಪವಾರ್ ಅವರಿಗೆ ಮಹಾರಾಷ್ಟ್ರದ ಜನರು ಸರಿಯಾದ ಪಾಠ ಕಲಿಸಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳಿಂದ ಬೇಸತ್ತು ಅಜಿತ್ ಪವಾರ್ ಜೊತೆಗಿದ್ದರೆ,ಮುಂಬರುವ ಡಿಸೆಂಬರ್ ನಲ್ಲಿ ನಡೆಯುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಸೋಲು ಕಾಣುವುದು ಶತಸಿದ್ಧ ಎಂಬುದನ್ನು ಅರಿತಿರುವ ಎನ್ಸಿಪಿಯ ನಗರಪಾಲಿಕೆಯ ಹಲವು ಮಾಜಿ ಸದಸ್ಯರು,ವಿವಿಧ ಘಟಕಗಳ ಅಧ್ಯಕ್ಷರು ಅಜಿತ್ ಪವಾರ್ ಗೆ ರಾಜೀನಾಮೆ ಸಲ್ಲಿಸಿ ಶರದ್ ಪವಾರ್ ಎನ್‌ಸಿಪಿ ಸೇರಿದ್ದಾರೆ.ಇನ್ನೂ ಹಲವು ಶಾಸಕರು ಕೂಡ ಮರಳಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

ಮಹಾರಾಷ್ಟ್ರದಲ್ಲಿ ಈಗ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಶೀಘ್ರ ಮಹಾಯುತಿ ಮೈತ್ರಿಕೂಟದಿಂದ ಅಜಿತ್ ಪವಾರ್ ಗೆ ಶೀಘ್ರ ಗೇಟ್ ಪಾಸ್ ನೀಡುವುದು ಖಚಿತ ಎಂದೇ ರಾಜಕೀಯ ಪಂಡಿತರು ಹೇಳುತ್ತಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ