ಮಂಡ್ಯದ ಕಾವೇರಿನಗರ 2ನೇ ಹಂತದ ಅನತಿ ದೂರದಲ್ಲಿರುವ ಸದ್ವಿದ್ಯಾ ಶಾಲೆಯ ಬಳಿ ಎರಡು ಕಾಡಾನೆಗಳು ಪತ್ಯಕ್ಷವಾಗಿರುವುದು ಸ್ಥಳೀಯರು ಭಯ ಭೀತರಾಗುವಂತೆ ಮಾಡಿದೆ.
ಇದೇ ಆನೆಗಳು ಶ್ರೀರಂಗಪಟ್ಟಣ ತಾಲೂಕಿನ ಹಲವು ಹಳ್ಳಿಗಳಲ್ಲಿಮ ರೈತರ ಜಮೀನಿಗೆ ಲಗ್ಗೆ ಇಟ್ಟು ಬೆಳೆ ಹಾನಿ ಮಾಡಿದ್ದವು. ಕಳೆದ ರಾತ್ರಿ ಮಂಡ್ಯ ನಗರದ ಕಲ್ಲಹಳ್ಳಿ ವಿವಿ ನಗರ ಭಾಗದಲ್ಲಿ ಅಡ್ಡಾಡಿದ್ದವು, ನಾಯಿ ಬೊಗಳುತ್ತಿರುವುದನ್ನು ಕಂಡ ಸ್ಥಳೀಯರು ನೋಡಲಾಗಿ ಆನೆಗಳು ಸಂಚರಿಸುತ್ತಿರುವುದನ್ನು ನೋಡಿದ್ದರು, ಮುಂಜಾನೆ ವೇಳೆಗೆ ಜಾಗ ಬದಲಾಯಿಸಿದ್ದ ಎರಡು ಆನೆಗಳು ಮಂಡ್ಯ – ಕಿರುಗಾವಲು ಮಾರ್ಗದ ಕಾವೇರಿನಗರ 2 ಹಂತದ ಸದ್ವಿದ್ಯಾ ಶಾಲೆ ಬಳಿಯ ಕಬ್ಬಿನ ಗದ್ದೆಯಲ್ಲಿ ಪ್ರತ್ಯಕ್ಷವಾಗಿವೆ. ಕಾರಸವಾಡಿ ಗ್ರಾಮದ ರೈತರ ಜಮೀನಿನಲ್ಲಿ ಆನೆಗಳು ನಡೆದಾಡಿರುವ ಹೆಜ್ಜೆ ಗುರುತುಗಳನ್ನು ಪತ್ತೆ ಹಚ್ಚಲಾಗಿದೆ.

ರೈತರ ಜಮೀನಿಗೆ ಲಗ್ಗೆ ಇಟ್ಟು ಅಡ್ಡಾಡುತ್ತಿರುವ ಎರಡು ಆನೆಗಳು ಕಂಡು ಬಂದ ಹಿನ್ನೆಲೆಯಲ್ಲಿ ಜನತೆ ನೋಡಲು ಮುಗಿಬಿದ್ದಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಮುನ್ನೆಚ್ಚರಿಕೆವಹಿಸಿ ಆನೆಗಳ ಸಮೀಪ ಜನತೆ ಸುಳಿಯದಂತೆ ಕಟ್ಟೆಚ್ಚರ ವಹಿಸಿದ್ದಾರೆ.
ಇಂದು ರಾತ್ರಿ ವೇಳೆಗೆ ಕಾರ್ಯಾಚರಣೆ ನಡೆಸಿ ಮುತ್ತತ್ತಿ ಅರಣ್ಯ ಪ್ರದೇಶಕ್ಕೆ ಅಟ್ಟಲು ಅರಣ್ಯ ಇಲಾಖೆ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.




