ಕೋಮುವಾದಿ ಮನಸ್ಥಿತಿಯ ಸಂಘ ಪರಿವಾರದ ಪ್ರೇರಿತ ವಿವಾದಾತ್ಮಕ ಪುಸ್ತಕ ‘ವಚನ ದರ್ಶನ’ದ ವಿರುದ್ಧ ಆ.20ರಂದು ಬೆಂಗಳೂರಿನಲ್ಲಿ ವಿಶ್ವಗುರು ಬಸವಣ್ಣ ಅವರ ಅನುಯಾಯಿಗಳ ಒಕ್ಕೂಟದಿಂದ ಹೋರಾಟ ಹಮ್ಮಿಕೊಳ್ಳಲಾಗಿದ್ದು, ಲಿಂಗಾಯತ ಸಮುದಾಯದ ಬಂಧುಗಳು ಈ ಹೋರಾಟದಲ್ಲಿ ಭಾಗವಹಿಸುವಂತೆ ಕೆಚ್ಚೆದೆಯ ಕನ್ನಡಿಗರ ವೇದಿಕೆ ರಾಜ್ಯ ಅಧ್ಯಕ್ಷ ಶ್ರೀನಿವಾಸ ಭದ್ರಣ್ಣವರ ಮನವಿ ಮಾಡಿದರು.
ಮಂಡ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಚನದರ್ಶನ ಪುಸ್ತಕವನ್ನು ಭಾರತದಾದ್ಯಂತ ವ್ಯಕ್ತಿಗತವಾಗಿ ಬಿಡುಗಡೆ ಮಾಡುತ್ತಿದ್ದಾರೆ. ಇದಕ್ಕೆ ನಮ್ಮ ತೀವ್ರ ಪ್ರತಿರೋಧವಿದೆ. ವಚನ ದರ್ಶನ ಕಳಪೆ ಪುಸ್ತಕವಾಗಿದೆ .ಬಸವ ತತ್ವವನ್ನು ಹಾಳು ಮಾಡುವ ಹುನ್ನಾರದಿಂದ ಈ ಪುಸ್ತಕವನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ದೂರಿದರು..
ಸ್ತ್ರೀ ಸಮಾನತೆ, ಕಾಯಕ ,ಜಾತಿ ಸಮಾನತೆಯನ್ನು ಒಪ್ಪದವರು ಗಂಡು ಶ್ರೇಷ್ಠ ಹೆಣ್ಣು ಕನಿಷ್ಠ ಎಂದು ಹೇಳುವವರು, ಚರಂಡಿ ಸ್ವಚ್ಛ ಮಾಡುವವರನ್ನು ಕೀಳಾಗಿ ಕಾಣುವವರು ಈ ರೀತಿ ಕುತಂತ್ರ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.
900 ವರ್ಷಗಳಿಂದ ವಚನದ ಮೇಲೆ ಇಲ್ಲದ ಪ್ರೀತಿ ಈಗ ಅವರಿಗೆ ಬಂದಿದೆ. ಹಿಂದು ಅನ್ನುವುದು ಧರ್ಮವೇ ಅಲ್ಲ, ಹೈಕೋರ್ಟ್ ಕೂಡ ತೀರ್ಪು ನೀಡಿದೆ .ನಾವು ಯಾವುದೇ ಧರ್ಮದ ವಿರೋಧಿಗಳಲ್ಲ. ಲಿಂಗಾಯತ ಸ್ವತಂತ್ರ ಧರ್ಮದವರಾಗಿದ್ದೇವೆ ಎಂದು ತಿಳಿಸಿದರು.
ವಚನ ಪುಸ್ತಕದ ವಿರುದ್ಧ ಆಗಸ್ಟ್ 20ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಿದ್ದು, ಆದ ಕಾರಣ ಬಸವಣ್ಣನವರ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ವಿಶ್ವಗುರು ಬಸವಣ್ಣನವರ ಅನುಯಾಯಿಗಳ ಒಕ್ಕೂಟದ ಅಧ್ಯಕ್ಷ ಓಂಕಾರ ಚೊಂಡಿ ಮಾತನಾಡಿ ,900 ವರ್ಷಗಳ ಕಾಲ ವಚನದ ಬಗ್ಗೆ ಇರದ ಪ್ರೀತಿ ಈಗೇಕೆ ಬಂದಿದೆ. ವಚನ ಅರಿಯದವರ ಮಾತು ಕೇಳಿ ಪುಸ್ತಕ ಬಿಡುಗಡೆ ಮಾಡಿದರೆ, ರಾಜ್ಯದ್ಯಂತ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಸರ್ಕಾರ ಘೋಷಿಸಿದೆ .ಇದನ್ನು ಕೆಲವರಿಗೆ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಇಂತಹ ಕುತಂತ್ರ ನಡೆಸಲಾಗುತ್ತಿದೆ ಎಂದು ದೂರಿದರು.
ಲಿಂಗಾಯತ ಧರ್ಮ ಎಲ್ಲರನ್ನು ಅಪ್ಪಿಕೊಳ್ಳುವ ಧರ್ಮವಾಗಿದೆ . ಇಲ್ಲಿ ಮೂಢನಂಬಿಕೆ, ಕಂದಾಚಾರ ಎನ್ನುವುದು ಇಲ್ಲ .ವಚನ ಸಾಹಿತ್ಯ ಬೆಳೆದರೆ ಮೂಡನಂಬಿಕೆ ಕಿತ್ತೊಗೆಯುತ್ತಾರೆ ಎನ್ನುವ ಹಿನ್ನೆಲೆಯಲ್ಲಿ ಕುತಂತ್ರ ನಡೆಸಲಾಗುತ್ತಿದೆ ಎಂದರು.
ಬಸವಣ್ಣ ಅವರನ್ನು ಗಡಿಪಾರು ಮಾಡಿದವರು, ಕೊಲೆ ಮಾಡಿದ ಸಮುದಾಯ ಈ ಕುತಂತ್ರದ ಹಿಂದಿದೆ .ಆರ್ ಎಸ್ ಎಸ್ ಅವರಿಗೆ ವಚನ ಸಾಹಿತ್ಯದ ಮೇಲೆ ಯಾಕೆ ಪ್ರೀತಿ ಬಂತು ಎನ್ನುವುದು ಪ್ರಶ್ನಾರ್ಥಕವಾಗಿದೆ. ಅವರಿಗೆ ವಚನದ ಬಗ್ಗೆ ಅರಿವಿದ್ದರೆ ಕುಂಕುಮ ಜನಿವಾರ ತೆಗೆದು, ಲಿಂಗ ದೀಕ್ಷೆ ಪಡೆದು ನಾನೊಬ್ಬ ಶರಣ ಎನ್ನಲಿ ಎಂದು ಸವಾಲು ಹಾಕಿದರು.
ಗೋಷ್ಠಿಯಲ್ಲಿ ಬೆಟ್ಟಳ್ಳಿ ಮಂಜುನಾಥ್, ಎಂ.ಎಸ್ ಮಂಜುನಾಥ್ ,ಶಂಭುಲಿಂಗಪ್ಪ, ಶಿವರುದ್ರಸ್ವಾಮಿ ,ಕುಮಾರ್ ಸೇರಿದಂತೆ ಇತರರಿದ್ದರು.




