Tuesday, November 24, 2026

ಪ್ರಾಯೋಗಿಕ ಆವೃತ್ತಿ

ವೈದ್ಯೆ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣ| ಮಂಡ್ಯದಲ್ಲೂ ಒಪಿಡಿ ಸೇವೆ ಸ್ಥಗಿತಗೊಳಿಸಿ ವೈದ್ಯರ ಪ್ರತಿಭಟನೆ

ಪಶ್ಷಿಮ ಬಂಗಾಳ ರಾಜ್ಯದ ಕೊಲ್ಕತ್ತಾದ ಆರ್. ಜಿ.ಕರ್ ಮೆಡಿಕಲ್ ಕಾಲೇಜಿನಲ್ಲಿ ಆಗಸ್ಟ್ 9ರಂದು ಮುಂಜಾನೆ ಕರ್ತವ್ಯ ನಿರತ ಸ್ನಾತಕೋತ್ತರ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ಮಂಡ್ಯದಲ್ಲಿ ವೈದ್ಯರು ಎಲ್ಲಾ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆ ಬಂದ್ ಮಾಡಿ ಮಂಡ್ಯ ಜಿಲ್ಲಾಸ್ಪತ್ರೆ ಎದುರು ಕಪ್ಪು ಪಟ್ಟಿ ಧರಿಸಿ ಶನಿವಾರ ಪ್ರತಿಭಟಿಸಿದರು

ಕೊಲ್ಕತ್ತಾದಲ್ಲಿ ನಡೆದ ವೈದ್ಯಕೀಯ ವಿದ್ಯಾರ್ಥಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ  ಈ  ದೇಶದ ವೈದ್ಯಕೀಯ ಸಮೂಹವನ್ನೇ ಆಘಾತಕ್ಕೀಡು ಮಾಡಿದೆ. ಇದು ನಡೆದ ದಿನದಿಂದಲೇ ಕಾಲೇಜಿನ ವೈದ್ಯ ವಿದ್ಯಾರ್ಥಿಗಳು ಮುಷ್ಕರ ನಡೆಸುತ್ತಿದ್ದಾರೆ. ಭಾರತೀಯ ವೈದ್ಯಕೀಯ ಸಂಘ ರಾಷ್ಟ್ರವ್ಯಾಪಿ ಪ್ರತಿಭಟನೆ ಕರೆ ನೀಡಿದೆ.

ಮೊದಲನೆಯ ದಿನವೇ ಕಾಲೇಜಿನ ಆಡಳಿತ ಮಂಡಳಿ ಹಾಗೂ ಪೊಲೀಸರು ಅಪರಾಧವನ್ನು ಸಮಗ್ರವಾಗಿ ತನಿಖೆ ನಡೆಸಿದ್ದರೆ, ಪ್ರಕರಣ ಹಾದಿ ತಪ್ಪುತ್ತಿರಲಿಲ್ಲ. ಕಲ್ಕತ್ತಾ ಹೈಕೋರ್ಟ್ ತನಿಖೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. ಆನಂತರ ಅಲ್ಲಿನ ಸರ್ಕಾರ ಸಿಬಿಐಗೆ ಪ್ರಕರಣವನ್ನು ವರ್ಗಾಯಿಸಿದೆ, ರಾಜ್ಯದ ಪೊಲೀಸ್ ಅಧಿಕಾರಿಗಳು ಸಾಕ್ಷಿಯನ್ನು ನಾಶಗೊಳಿಸುವ ಸಾಧ್ಯತೆಗಳಿವೆ ಎಂದು ಆರೋಪಿಸಿದರು.

ಆಗಸ್ಟ್ 15ರಂದು ದೊಡ್ಡ ಗುಂಪಿನಲ್ಲಿ ಜನರು ಆರ್.ಜಿ.ಕರ್ ಆಸ್ಪತ್ರೆಯ ಅವರಣವನ್ನು ಪ್ರವೇಶಿಸಿ ದಾಂಧಲೆ ಎಬ್ಬಿಸಿದ್ದು ಮಾತ್ರವಲ್ಲ, ಅಪರಾಧಿ ಓಡಾಡಿದ ಸ್ಥಳಗಳಲ್ಲಿ ಸಾಕ್ಷಿಗಳನ್ನು ನಾಶಪಡಿಸಿದಂತೆ ತೋರುತ್ತದೆ. ಪ್ರತಿಭಟನೆ ನಡೆಸಿದ ಕಿರಿಯ ವೈದ್ಯಾಧಿಕಾರಿಗಳ ಮೇಲು ದಾಳಿ ಮಾಡಿದ್ದಾರೆ. ಆಸ್ಪತ್ರೆ ಆವರಣದಲ್ಲಿ ವೈದ್ಯರಿಗೆ ರಕ್ಷಣೆ ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ, ಆದರೆ ಇದನ್ನು ನಿರ್ವಹಿಸಲು ಸರ್ಕಾರ ವಿಫಲವಾಗಿದೆ ಎಂದು ದೂರಿದರು.

ಆರ್ ಜಿ.ಕರ್ ಕಾಲೇಜಿನಲ್ಲಿ ನಡೆದ ಈ ಕ್ರೂರ ಘಟನೆಯ ಬಳಿಕ ಪ್ರತಿಭಟನೆ ನಡೆಸುತ್ತಿದ್ದ ವೈದ್ಯರ ಮೇಲೆ, ಸ್ವಾತಂತ್ರೋತ್ಸವದ ದಿನವೇ ನಡೆದ ಗುಂಡಾಗಿರಿಯನ್ನು ಪ್ರತಿಭಟಿಸಿ ಭಾರತೀಯ ವೈದ್ಯಕೀಯ ಸಂಘವು  ದೇಶದಾದ್ಯಂತ ಒಪಿಡಿ ಸೇವೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆಗೆ ಕರೆ ನೀಡಿದೆ ಎಂದರು.

ಪ್ರತಿಭಟನೆಯಲ್ಲಿ ಐಎಂಎ ಮಂಡ್ಯ ಶಾಖೆ ಅಧ್ಯಕ್ಷ ಮರೀಗೌಡ, ಕಾರ್ಯದರ್ಶಿ ವಿನಯ್ ಸೇರಿದಂತೆ ನೂರಾರು ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ