ಮನೆಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಅಂತರ ರಾಜ್ಯ ಕಳ್ಳನನ್ನು ಮಂಡ್ಯ ಪೂರ್ವ ಪೊಲೀಸ್ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದು, ಆತನಿಂದ ₹10 ಲಕ್ಷ ಮೌಲ್ಯದ ಚಿನ್ನಾಭರಣಗಳು ಹಾಗೂ ಒಂದು ಯಮಹ ಆರ್.15 ಮೋಟಾರ್ ಬೈಕನ್ನು ವಶಪಡಿಸಿಕೊಂಡಿದ್ದಾರೆ.
ಮೂಲತಃ ತಮಿಳುನಾಡಿನ ತಿರುಪತ್ತೂರು ಜಿಲ್ಲೆ ಅಂಬೂರ್ ತಾಲ್ಲೂಕಿನ ಉಡೆಯರಾಜ ಪಾಳ್ಯದ ರವಿ.ವಿ ಬಿನ್ ವೆಂಕಟಸ್ವಾಮಿ (29) ಬಂಧಿತನಾಗಿದ್ದಾನೆ. ಈತ ಭೋವಿ ಜನಾಂಗಕ್ಕೆ ಸೇರಿದ್ದು ಕೂಲಿ ಕೆಲಸ ಮಾಡುತ್ತಿದ್ದ. ಶಿವಮೊಗ್ಗ ಜಿಲ್ಲೆಉ ಭದ್ರಾವತಿ ತಾಲ್ಲೂಕಿನ ದೊಡೇರಿ ಗ್ರಾಮ ಹಾಗೂ ಬೆಂಗಳೂರು ನಗರದ ಅತ್ತಿಬೆಲೆಯಲ್ಲಿ ಹಾಲಿ ವಾಸವಿದ್ದ.
ಘಟನೆಯ ವಿವರ
ಕಳೆದ ಜೂ.26ರಂದು ಬೆಳಿಗ್ಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಹೆಲ್ಮೆಟ್ ಹಾಕಿಕೊಂಡು ಬೈಕ್ನಲ್ಲಿ ಮನೆಯ ಬಳಿಗೆ ಬಂದು, ನಾವು ವಾಟರ್ ಮೀಟರ್ ಚೆಕ್ ಮಾಡಲು ಬಂದಿದ್ದೇವೆ ಎಂದು ಹೇಳಿ, ವಾಟರ್ ಮೀಟರ್ ಅನ್ನು ತೋರಿಸಿ ಎಂದು ಚೆಕ್ ಮಾಡುವ ನೆಪದಲ್ಲಿ ಮನೆಯ ವಾಟರ್ ಟ್ಯಾಂಕ್ ಬಳಿಗೆ ಕರೆದೊಯ್ದಿದ್ದರು. ಅದೇ ಸಂದರ್ಭದಲ್ಲಿ ಮನೆಯ ಒಳಗಡೆ ನುಗ್ಗಿದ ಕಳ್ಳನೊಬ್ಬ ಬೀರುವಿನ ಲಾಕರ್ ನಲ್ಲಿ ಇಟ್ಟಿದ್ದ 50.000 ಹಣ, ಒಟ್ಟು180 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ. ಈ ಬಗ್ಗೆ ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈ ಪ್ರಕರಣದ ಆರೋಪಿಗಳ ಪತ್ತೆ ಹಚ್ಚಲು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ ತಿಮ್ಮಯ್ಯ, ಎಸ್.ಐ ಗಂಗಾಧರಸ್ವಾಮಿ, ಡಿವೈಎಸ್ಪಿ, ಎಲ್.ಕೆ ರಮೇಶ್ ಅವರ ಮಾರ್ಗದರ್ಶನದಲ್ಲಿ ಸಿಬಿಐ ಜಾಯ್ ಅಂತೋನಿಪೂರ್ವ ಪೊಲೀಸ್ ಠಾಣಿ ಪಿಎಸ್ಐ ಶೇಷಾದ್ರಿಕುಮಾರ್, ಸಿಬ್ಬಂದಿಗಳಾದ ಲಿಂಗರಾಜು, ಶ್ರೀನಿವಾಸ ಹೆಚ್.ಸಿ, ಆನಂದ ಜಿ.ಆರ್., ಮಹೇಶ್ ಕುಮಾರ್, ದಕ್ಷಿಣ ಮೂರ್ತಿ, ಸಿಡಿಆರ್ ವಿಭಾಗದ ಸಿಬ್ಬಂದಿಗಳಾದ ರವಿಕಿರಣ್, ಲೋಕೇಶ್ ಮತ್ತು ಚಾಲಕರಾದ ರಾಜೇಶ್ ಹಾಗೂ ಕೃಷ್ಣರವರನ್ನೊಳಗೊಂಡ ತಂಡ ರಚನೆ ಮಾಡಲಾಗಿತ್ತು.
ಈ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ. ಇದೇ ಆರೋಪಿಯ ಮೇಲೆ ರಾಜಸ್ಥಾನ, ಜೋಧಪುರ್, ಬಾಂಬೆ ರಾಜ್ಯಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಅಪರಾಧ ಪತ್ತೆ ಕಾರ್ಯದಲ್ಲಿ ತೊಡಗಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಯವರನ್ನು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಪ್ರಶಂಸಿಸಿ, ಶ್ಲಾಘಿಸಿದ್ದಾರೆ.




