ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-275ರ ಕಾಮಗಾರಿ ಇನ್ನು ಪೂರ್ಣವಾಗಿಲ್ಲ, ಈ ಹೆದ್ದಾರಿಯಿಂದ ಮಂಡ್ಯನಗರ ಪ್ರವೇಶ ಮತ್ತು ನಿರ್ಗಮನದ ಹಾದಿ ನಿರ್ಮಾಣ ಮಾಡಿಲ್ಲ, ಆದರೆ ಆಗಲೇ ಚುನಾವಣೆಯ ಕಾರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹೆದ್ದಾರಿ ಉದ್ವಾಟನೆ ಮಾಡಲು ಮಂಡ್ಯಕ್ಕೆ ಆಗಮಿಸುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿರುವ ಮಂಡ್ಯ ಜಿಲ್ಲಾ ಯುವ ಕಾಂಗ್ರೆಸ್, ಒಂದು ವೇಳೆ ಮೋದಿ ಬಂದರೆ ಕಪ್ಪು ಬಾವುಟ ಪ್ರದರ್ಶನ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಈ ಕುರಿತು ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಡ್ಯ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯ್ ಕುಮಾರ್, ಹೆದ್ದಾರಿ ಕಾಮಗಾರಿ ಸಂಪೂರ್ಣವಾಗಿ ಮುಗಿಯದೇ ಉದ್ಘಾಟನೆ ಮಾಡಿ, ಟೋಲ್ ಸಂಗ್ರಹ ಮಾಡಲು ಬಿಜೆಪಿ ಸರ್ಕಾರ ಅನುವು ಮಾಡಿಕೊಡಲು ಮುಂದಾಗಿದೆ ಎಂದು ದೂರಿದರು.
ಕಾಂಗ್ರೆಸ್ ಪಕ್ಷದ ಪ್ಲೆಕ್ಸ್ ಗಳ ತೆರವು
ಮಂಡ್ಯ ನಗರಸಭೆ ವ್ಯಾಪ್ತಿಯಲ್ಲಿ ಕಾನೂನು ಬಾಹಿರವಾಗಿ ಬಿ.ಜೆ.ಪಿ.ಯವರು ಅಧಿಕಾರಿಗಳ ಮೂಲಕ ನಮ್ಮ ಕಾಂಗ್ರೆಸ್ ಪಕ್ಷದ ಪ್ಲೆಕ್ಸ್ಗಳನ್ನು ತೆರವುಗೊಳಿಸುತ್ತಿದ್ದಾರೆ. ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ರೈತರ ಸಾಲವನ್ನು ಲೋಕಸಭೆಯಲ್ಲಿ ವಿರೋಧಿಸಿದ್ದಾರೆ. ಮಂಡ್ಯ ನಗರ ಹೃದಯ ಭಾಗದಲ್ಲಿ 100ಕ್ಕೂ ಹೆಚ್ಚು ದಿನಗಳ ಕಾಲ ರೈತರು ಪ್ರತಿಭಟನಾ ನಿರತರಾಗಿದ್ದರೂ ಬಿ.ಜೆ.ಪಿ. ಸರ್ಕಾರವು ಕಬ್ಬು ಬೆಳೆಗಾರರಿಗೆ ಯಾವುದೇ ಭರವಸೆ ನೀಡಲಿಲ್ಲ. ಕರಾಳ ಕೃಷಿ ಕಾಯ್ದೆಗಳನ್ನು ರಾಜ್ಯ ಬಿ.ಜೆ.ಪಿ. ಸರ್ಕಾರವು ಇಲ್ಲಿಯವರೆಗೂ ಹಿಂಪಡೆದಿಲ್ಲ. ಜಿಲ್ಲೆಯಲ್ಲಿ ಉದ್ಯೋಗವನ್ನು ಹೆಚ್ಚಿಸಲು ನರೇಂದ್ರ ಮೋದಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದರು.
ಒಕ್ಕಲಿಗರನ್ನು ಕೆರಳಿಸಲು ಹುನ್ನಾರ
ಬಿಜೆಪಿ ನಾಯಕರು ಮಂಡ್ಯಕ್ಕೆ ಬಂದರೆ ಒಕ್ಕಲಿಗರನ್ನು ಕೆರಳಿಸುವ ಹೇಳಿಕೆ ನೀಡುತ್ತಿದ್ದಾರೆ, ಟಿಪ್ಪುವನ್ನು ಕೊಂದವರು ಉರಿಗೌಡ, ನಂಜೇಗೌಡ ಎಂದು ಹಸಿಸುಳ್ಳು ಹೇಳುವ ಮೂಲಕ ಇಡೀ ಒಕ್ಕಲಿಗ ಜನಾಂಗವನ್ನು ಕೊಲೆಗಡುಕರ ಸ್ಥಾನದಲ್ಲಿ ನಿಲ್ಲಿಸಲು ಹವಣಿಸುತ್ತಿದ್ದಾರೆ. ಮಂಡ್ಯಕ್ಕೆ ಅಮಿತ್ ಶಾ ಬಂದಾಗ ಉದ್ಯೋಗ, ಅಭಿವೃದ್ದಿಯ ಬಗೆಗೆ ಮಾತನಾಡಿಲ್ಲ, ಬದಲಾಗಿ ನಂದಿನಿ ಬ್ರಾಂಡ್ ಅನ್ನು ಅಮೂಲ್ ಜೊತೆ ವಿಲೀನ ಮಾಡುವ ವ್ಯಾಪಾರಿ ಬುದ್ದಿಯನ್ನು ಪ್ರದರ್ಶನ ಮಾಡಿದ್ದಾರೆ ಎಂದು ವಿಜಯ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ನರೇಂದ್ರ ಮೋದಿ ಮಂಡ್ಯಕ್ಕೆ ಬರುತ್ತಿದ್ದಾರೆ. ಒಂದು ರಾಷ್ಟ್ರೀಯ ಪಕ್ಷವಾಗಿ ಇದನ್ನು ವಿರೋಧಿಸುವುದು ಶೋಭೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿಜಯ್ ಕುಮಾರ್, ನರೇಂದ್ರಮೋದಿ ಅವರು ಇತ್ತೀಚೆಗೆ ಮಂಡ್ಯಕ್ಕೆ ಬಂದು ಹೋಗುತ್ತಿರುವುದು ರಾಜಕೀಯ ಲಾಭಕ್ಕಾಗಿಯೇ ವಿನಃ ಜಿಲ್ಲೆಯ ಅಭಿವೃದ್ಧಿಗಾಗಿ ಅಲ್ಲ. ಅಮಿತ್ ಶಾ ಬಂದು ಹೋದ ನಂತರ ಅವರದೇ ಪಕ್ಷದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡ್ಯಕ್ಕೆ ಯಾವ ಕೊಡುಗೆ ನೀಡಿದ್ದಾರೆ ಹೇಳಿ ಎಂದು ಮರುಪ್ರಶ್ನೆ ಹಾಕಿದರು.
ಗೋಷ್ಠಿಯಲ್ಲಿ ಮಂಡ್ಯ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಿ.ಡಿ. ಗಂಗಾಧರ್, ಮುಖಂಡರಾದ ಕೀಲಾರ ರಾಧಕೃಷ್ಣ, ನಹೀಂ, ಅಪ್ಪಾಜಿ, ಕೃಷ್ಣ, ನಿತಿನ್, ಹೀನಾ, ಶೀಲಾ ಮತ್ತಿತರರಿದ್ದರು.




