ಮೈಷುಗರ್ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ನಿರಂತರವಾಗಿ ಸಾಗಿದ್ದು,ಸಕಾಲದಲ್ಲಿ ಒಪ್ಪಿಗೆ ಕಬ್ಬನ್ನು ಕಟಾವು ಮಾಡಲಾಗುತ್ತಿದೆ. ಆದರೆ ಖಾಸಗಿ ಕಂಪನಿಗಳ ಜೊತೆ ಶಾಮೀಲಾಗಿರುವ ಬಿಜೆಪಿ ಪಕ್ಷದ ಕಾರ್ಯಕರ್ತರು ಎರಡು ದಿನ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ಸ್ಥಗಿತ ಮಾಡಿದ್ದನ್ನು ನೆಪ ಮಾಡಿಕೊಂಡು ಕಾರ್ಖಾನೆ ವಿರುದ್ಧ ಅಪಪ್ರಚಾರ ಮಾಡಿದ್ದಾರೆಂದು ಆರೋಪಿಸಿ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಕಿಸಾನ್ ಘಟಕದ ನೇತೃತ್ವದಲ್ಲಿ ಪ್ರತಿಭಟಿಸಿದ ಕಾರ್ಯಕರ್ತರು, ಮೈಷುಗರ್ ಉಳಿಸಿ ರೈತರ ಹಿತ ಕಾಪಾಡುವ ಮೂಲಕ ಕಾಂಗ್ರೆಸ್ ಸರ್ಕಾರ ಜಿಲ್ಲೆಗೆ ಸಿಹಿ ನೀಡಿದೆ ಎಂದು ಸಕ್ಕರೆ ತಿನ್ನುವ ಮೂಲಕ ಪ್ರತಿಭಟಿಸಿದರು.
ಬಿಜೆಪಿ ಕಾರ್ಯಕರ್ತರು ಪುಕ್ಕಟ್ಟೆ ಪ್ರಚಾರಕ್ಕಾಗಿ ಬೇವಿನ ಸೊಪ್ಪು ತಿಂದು ಪ್ರತಿಭಟನೆ ನಡೆಸಿದ್ದಾರೆ. ಈ ಮೂಲಕ ಜನರನ್ನು ದಿಕ್ಕು ತಪ್ಪಿಸಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೈಷುಗರ್ ಮುಚ್ಚಲು ಪ್ರಯತ್ನ
ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾರ್ಖಾನೆಯನ್ನು ಮುಚ್ಚಲು ಪ್ರಯತ್ನ ಮಾಡಿದ್ದರು, ಅಷ್ಟೇ ಅಲ್ಲದೆ ಖಾಸಗೀಕರಣ ಮಾಡುವ ಹುನ್ನಾರ ಮಾಡಿದ್ದರು. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ತಿಂಗಳೊಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯ 50 ಕೋಟಿ ಅನುದಾನ ನೀಡಿ ಕಾರ್ಖಾನೆ ಆರಂಭಕ್ಕೆ ನಾಂದಿ ಹಾಡಿದರು. ನಿರಂತರವಾಗಿ ಕಾರ್ಖಾನೆಗೆ ಅನುದಾನ ನೀಡುತ್ತಾ ಬಂದಿದ್ದಾರೆ, ಕಾರ್ಖಾನೆ ಅಭಿವೃದ್ಧಿಗೆ ಕಂಕಣಬದ್ಧರಾಗಿದ್ದಾರೆ, ಇದನ್ನು ಸಹಿಸದ ಬಿಜೆಪಿ ಅಪಪ್ರಚಾರದಲ್ಲಿ ನಿರತವಾಗಿದೆ ಎಂದು ಕಿಡಿಕಾರಿದರು.
₹ 121 ಕೋಟಿ ನುಂಗಿತ ಬಿಜೆಪಿ ಮುಖಂಡ ನಾಗರಾಜಪ್ಪ
2008ರಲ್ಲಿ ಬಿ.ಎಸ್ ಯಡಿಯೂರಪ್ಪಮುಖ್ಯಮಂತ್ರಿ ಆಗಿದ್ದಾಗ ಮೈಷುಗರ್ ಅಧ್ಯಕ್ಷರನ್ನಾಗಿ ಬಿಜೆಪಿ ಮುಖಂಡ ನಾಗರಾಜಪ್ಪನನ್ನು ನೇಮಕ ಮಾಡಲಾಯಿತು. ಆತ ಅಧ್ಯಕ್ಷನ್ನಾಗಿ 121 ಕೋಟಿ ಹಣವನ್ನು ನುಂಗಿ ಹಾಕಿದ್ದಾನೆ. ಇದರಲ್ಲಿ ಬಿಜೆಪಿ ನಾಯಕರು ಶಾಮೀಲಾಗಿದ್ಧಾರೆ. ಈ ಬಗ್ಗೆ ಲೋಕಾಯುಕ್ತ ತನಿಖೆ ಕೂಡ ಆಗಿದೆ, ಆ ಹಣವನ್ನು ಬಿಜೆಪಿ ನಾಯಕರು ವಸೂಲಿ ಮಾಡಿಕೊಡಲಿ ಎಂದು ಸವಾಲು ಹಾಕಿದರು.
ಕಾರ್ಖಾನೆಯನ್ನು ಮುಚ್ಚಿಹಾಕುವ ಹುನ್ನಾರವನ್ನು ಬಿಜೆಪಿ ನಿರಂತರವಾಗಿ ಮಾಡುತ್ತಾ ಬಂದಿದೆ. ಹಾಗಾಗಿ ಸಣ್ಣಪುಟ್ಟ ವಿಷಯದಲ್ಲಿ ಕಾರ್ಖಾನೆ ವಿರುದ್ಧ ಅಪಪ್ರಚಾರ ಮಾಡುತ್ತಾ ಬಂದಿದೆ, ನಿಜಕ್ಕೂ ಕಾಂಗ್ರೆಸ್ ಸರ್ಕಾರ ಐನೂರಕ್ಕೂ ಹೆಚ್ಚು ಕೋಟಿ ಅನುದಾನವನ್ನು ನೀಡುವ ಮೂಲಕ ಜಿಲ್ಲೆಯ ರೈತರ ಹಿತ ಕಾಪಾಡಿದೆ, ಇದನ್ನು ಸಹಿಸದೆ ಅಪಪ್ರಚಾರ ಮಾಡಿ ಸರ್ಕಾರಿ ಸ್ವಾಮ್ಯದ ಕಾರ್ಖಾನೆಯನ್ನು ಮುಚ್ಚಿ ಹಾಕಲು ಹುನ್ನಾರ ಮಾಡಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ದೇಶಹಳ್ಳಿ ಮೋಹನ್ ಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಮುಖಂಡರಾದ ಶಿವನಂಜು, ಸಿ ಎಂ ದ್ಯಾವಪ್ಪ, ಸುಂಡಹಳ್ಳಿ ಮಂಜುನಾಥ್, ಎಚ್.ಡಿ ಜಯರಾಮ್, ಚಂದಗಾಲು ವಿಜಯಕುಮಾರ್, ಪ್ರಕಾಶ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.




