Friday, September 27, 2024

ಪ್ರಾಯೋಗಿಕ ಆವೃತ್ತಿ

ಸಿಬಿಐಗೆ ನೀಡಿದ್ದ ‘ಸಾಮಾನ್ಯ ಒಪ್ಪಿಗೆ’ ಹಿಂಪಡೆದ ಸರ್ಕಾರ 

ಕೇಂದ್ರ ತನಿಖಾ ದಳ (ಸಿಬಿಐ) ಗೆ ಪ್ರಕರಣಗಳ ತನಿಖೆ ನಡೆಸಲು ನೀಡಿದ್ದ ಸಾಮಾನ್ಯ ಒಪ್ಪಿಗೆಯನ್ನು ಹಿಂಪಡೆಯಲು ಗುರುವಾರ (ಸೆ.26) ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ನಿರ್ಧರಿಸಿದೆ.

ಆಪಾದಿತ ಮುಡಾ ನಿವೇಶನ ಹಂಚಿಕೆ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ದ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಜನ ಪ್ರತಿನಿಧಿಗಳ ನ್ಯಾಯಾಲಯ ಲೋಕಾಯುಕ್ತಕ್ಕೆ ಆದೇಶಿಸಿದ ಬೆನ್ನಲ್ಲೇ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಕರ್ನಾಟಕ ಈ ಹಿಂದೆಯೂ ಸಿಬಿಐಗೆ ನೀಡಿದ್ದ ಒಪ್ಪಿಗೆಯನ್ನು ವಾಪಸ್ ಪಡೆದಿದೆ ಮತ್ತು ಪುನಃಸ್ಥಾಪಿಸಿದೆ. ಸರ್ಕಾರಗಳನ್ನು ಅಧರಿಸಿ ಈ ಪ್ರಕ್ರಿಯೆ ನಡೆದಿದೆ.

1998ರಲ್ಲಿ, ಮುಖ್ಯಮಂತ್ರಿ ಜೆ.ಹೆಚ್ ಪಟೇಲ್ ಅವರ ಜನತಾ ದಳ ಸರ್ಕಾರವು ಸಿಬಿಐಗೆ ನೀಡಿದ್ದ ಸಾಮಾನ್ಯ ಒಪ್ಪಿಗೆಯನ್ನು ಹಿಂತೆಗೆದುಕೊಂಡಿತ್ತು. 1999ರಲ್ಲಿ ಅಧಿಕಾರ ವಹಿಸಿಕೊಂಡ ಎಸ್ ಎಂ ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ ಅದನ್ನು ಪುನಃಸ್ಥಾಪಿಸಿರಲಿಲ್ಲ. ಎಐಸಿಸಿಯ ಹಾಲಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಆಗ ರಾಜ್ಯದ ಗೃಹ ಸಚಿವರಾಗಿದ್ದರು.

ವಾಪಸ್‌ ಪಡೆದಿದ್ದ ಒಪ್ಪಿಗೆಯನ್ನು ಸುಮಾರು 8 ವರ್ಷಗಳ ಕಾಲ ಪುನಃಸ್ಥಾಪಿಸಿರಲಿಲ್ಲ. ಇದರಿಂದ ಸಿಬಿಐ ಕರ್ನಾಟಕದ ತನ್ನ ಕಚೇರಿಯನ್ನು ವಾಸ್ತವಿಕವಾಗಿ ಮುಚ್ಚಬೇಕಾಯಿತು ಎಂದು ಆಗ ಸಿಬಿಐನಲ್ಲಿದ್ದ ಅಧಿಕಾರಿಯೊಬ್ಬರು ಹೇಳಿದ್ದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಪ್ರಸ್ತುತ ಕರ್ನಾಟಕ ಮಾತ್ರವಲ್ಲದೆ, ಪಂಜಾಬ್, ಜಾರ್ಖಂಡ್, ಕೇರಳ, ಪಶ್ಚಿಮ ಬಂಗಾಳ, ತೆಲಂಗಾಣ, ಮೇಘಾಲಯ ಮತ್ತು ತಮಿಳುನಾಡು ರಾಜ್ಯಗಳು ಸಿಬಿಐಗೆ ನೀಡಿದ್ದ ಸಾಮಾನ್ಯ ಒಪ್ಪಿಗೆಯನ್ನು ಹಿಂಪಡೆದಿವೆ. ಇಷ್ಟು ರಾಜ್ಯಗಳ ಪೈಕಿ ಮೇಘಾಲಯ ಹೊರತುಪಡಿಸಿ, ಉಳಿದವುಗಳ ಆಡಳಿತ ಕೇಂದ್ರದಲ್ಲಿ ಪ್ರತಿಪಕ್ಷ ಬಣದಲ್ಲಿ ಗುರುತಿಸಿಕೊಂಡಿರುವ ಪಕ್ಷಗಳ ಕೈಯ್ಯಲಿದೆ.

ರಾಜಸ್ಥಾನ, ಆಂಧ್ರ ಪ್ರದೇಶ, ಮಿಜೋರಾಂ ಮತ್ತು ಛತ್ತೀಸ್‌ಗಢಗಳು ಕೂಡ ಈ ಹಿಂದೆ ಒಪ್ಪಿಗೆಯನ್ನು ಹಿಂಪಡೆದಿದ್ದವು. ಆದರೆ, ಸರ್ಕಾರದ ಬದಲಾವಣೆಯ ನಂತರ ಅದನ್ನು ಮರುಸ್ಥಾಪಿಸಿವೆ.

ಮೋದಿ ಸರ್ಕಾರ ಬಂದ ಬಳಿಕ ಹೆಚ್ಚು

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹೆಚ್ಚಿನ ರಾಜ್ಯಗಳು ಸಿಬಿಐಗೆ ನೀಡಿದ್ದ ಒಪ್ಪಿಗೆಯನ್ನು ಹಿಂಪಡೆದಿವೆ. ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿ ವಿರೋಧ ಪಕ್ಷಗಳ ನಾಯಕರನ್ನು ಹೆಣೆಯುತ್ತಿದೆ ಎಂಬ ಆರೋಪವನ್ನು ಇದು ಪುಷ್ಠೀಕರಿಸುತ್ತದೆ.

ಸಿಬಿಐಗೆ ನೀಡಿದ್ದ ಒಪ್ಪಿಗೆಯನ್ನು ವಾಪಸ್ ಪಡೆಯುವುದು ಹೊಸದೇನಲ್ಲ. ಸಿಬಿಐನ ಇತಿಹಾಸದಲ್ಲಿ ಅನೇಕ ಬಾರಿ ಸಿಕ್ಕಿಂ, ನಾಗಾಲ್ಯಾಂಡ್, ಛತ್ತೀಸ್‌ಗಢ ಮತ್ತು ಕರ್ನಾಟಕ ಈ ನಿರ್ಧಾರಗಳನ್ನು ಕೈಗೊಂಡಿದೆ.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಗಿಂತ ಸಿಬಿಐ ಭಿನ್ನವಾಗಿದೆ. ಎನ್‌ಐಎ ಕಾಯ್ದೆ-2008ರಡಿ ನಿಯಂತ್ರಿಸಲ್ಪಡುವ ಎನ್‌ಐಎ, ಭಾರತದಾದ್ಯಂತ ತನ್ನ ವ್ಯಾಪ್ತಿಯನ್ನು ಹೊಂದಿದೆ. ಆದರೆ, ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ (ಡಿಎಸ್‌ಪಿಇ) ಕಾಯ್ದೆ-1946 ರಿಂದ ನಿಯಂತ್ರಿಸಲ್ಪಡುವ ಸಿಬಿಐ, ದೆಹಲಿ ಹೊರತು ಇತರ ಯಾವುದೇ ರಾಜ್ಯಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಗೂ ಮುನ್ನ, ಆ ರಾಜ್ಯ ಸರ್ಕಾರ ಒಪ್ಪಿಗೆಯನ್ನು ಕಡ್ಡಾಯವಾಗಿ ಪಡೆಯಬೇಕಿದೆ. ಒಂದು ವೇಳೆ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳು ಆದೇಶ ಮಾಡಿದರೆ, ರಾಜ್ಯ ಸರ್ಕಾರದ ಒಪ್ಪಿಗೆಯಿಲ್ಲದೆ ತನಿಖೆ ಕೈಗೊಳ್ಳಬಹುದು.

ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದಲ್ಲಿ ಅಧಿಕಾರಕ್ಕೆ ಬಂದ ಬಳಿಕ, ಮೊದಲ ಬಾರಿಗೆ 2015ರಲ್ಲಿ ಮಿಝೋರಾಂ ರಾಜ್ಯ ಸರ್ಕಾರ ಸಿಬಿಗೆ ನೀಡಿದ್ದ ಸಾಮಾನ್ಯ ಒಪ್ಪಿಗೆ ಹಿಂಪಡೆದಿತ್ತು. ಆಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು, ಲಾಲ್ ಥನ್ಹಾವ್ಲಾ ಮುಖ್ಯಮಂತ್ರಿಯಾಗಿದ್ದರು.

2018ರಲ್ಲಿ,ಮಿಝೋರಾಂನಲ್ಲಿ ಎನ್‌ಡಿಎ ಒಕ್ಕೂಟದ ಪಕ್ಷ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್‌ಎಫ್) ಅಧಿಕಾರಕ್ಕೆ ಬಂತು. ಝೋರಂತಂಗಾ ಮುಖ್ಯಮಂತ್ರಿಯಾಗಿದ್ದರು. ಆದರೂ, ಸಿಬಿಗೆ ಒಪ್ಪಿಗೆ ಮರು ಸ್ಥಾಪಿಸಿರಲಿಲ್ಲ. ಬಳಿಕ ಬಂದ ಲಾಲ್ದುಹೋಮ ಸರ್ಕಾರದ ಅಡಿಯಲ್ಲಿ 2023ರ ಡಿಸೆಂಬರ್‌ನಲ್ಲಿ ಮರುಸ್ಥಾಪಿಸಲಾಯಿತು.

ನವೆಂಬರ್ 2018ರಲ್ಲಿ, ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು 1989ರಲ್ಲಿ ಎಡರಂಗ ಸರ್ಕಾರವು ಸಿಬಿಐಗೆ ನೀಡಿದ್ದ ಸಾಮಾನ್ಯ ಒಪ್ಪಿಗೆಯನ್ನು ಹಿಂತೆಗೆದುಕೊಂಡಿತ್ತು. ಆಗ ಆಂಧ್ರ ಪ್ರದೇಶದಲ್ಲಿ ಅಧಿಕಾರದಲ್ಲಿದ್ದ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಸರ್ಕಾರದ ನಿರ್ಧಾರವನ್ನು ಮಮತಾ ಸರ್ಕಾರ ಅನುಸರಿಸಿತ್ತು.

“ಚಂದ್ರಬಾಬು ನಾಯ್ಡು ಮಾಡಿರುವುದು ಸಂಪೂರ್ಣವಾಗಿ ಸರಿ ಇದೆ. ಬಿಜೆಪಿ ತನ್ನ ಸ್ವಂತ ರಾಜಕೀಯ ಹಿತಾಸಕ್ತಿ ಮತ್ತು ಸೇಡು ತೀರಿಸಿಕೊಳ್ಳಲು ಸಿಬಿಐ ಮತ್ತು ಇತರ ಏಜೆನ್ಸಿಗಳನ್ನು ಬಳಸುತ್ತಿದೆ” ಎಂದು ಮಮತಾ ಬ್ಯಾನರ್ಜಿ ಆ ಸಮಯದಲ್ಲಿ ಹೇಳಿದ್ದರು.

2019ರಲ್ಲಿ ಆಂಧ್ರದಲ್ಲಿ ವೈಎಸ್ ಜಗನ್ ಮೋಹನ್ ರೆಡ್ಡಿ ಸರ್ಕಾರ ಬಂದ ಬಳಿಕ, ಸಮ್ಮತಿಯನ್ನು ಮರುಸ್ಥಾಪಿಸಲಾಗಿತ್ತು. ಅದು ಪ್ರಸ್ತುತ ನಾಯ್ಡು ಆಡಳಿತದಲ್ಲೂ ಮುಂದುವರೆದಿದೆ, ಅವರ ಪಕ್ಷ ಈಗ ಎನ್‌ಡಿಎಯ ಭಾಗವಾಗಿದೆ.

ಛತ್ತೀಸ್‌ ಗಢದಲ್ಲಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಕಾಂಗ್ರೆಸ್ ಸರ್ಕಾರವು ಜನವರಿ 2019ರಲ್ಲಿ ಸಮ್ಮತಿಯನ್ನು ಹಿಂತೆಗೆದುಕೊಂಡಿತ್ತು. ಪಂಜಾಬ್, ಮಹಾರಾಷ್ಟ್ರ, ರಾಜಸ್ಥಾನ, ಕೇರಳ ಮತ್ತು ಜಾರ್ಖಂಡ್ 2020ರಲ್ಲಿ ಇದನ್ನು ಅನುಸರಿಸಿತ್ತು. 2022ರಲ್ಲಿ, ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನೇತೃತ್ವದ ತೆಲಂಗಾಣ ಸರ್ಕಾರ ಸಾಮಾನ್ಯ ಒಪ್ಪಿಗೆಯನ್ನು ಹಿಂತೆಗೆದುಕೊಂಡಿತ್ತು.

ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರ ಪತನಗೊಂಡು ಏಕನಾಥ್ ಶಿಂಧೆ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಮಹಾರಾಷ್ಟ್ರದಲ್ಲಿ 2022ರಲ್ಲಿ ಸಿಬಿಐಗೆ ಒಪ್ಪಿಗೆಯನ್ನು ಮರುಸ್ಥಾಪಿಸಲಾಗಿತ್ತು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಛತ್ತೀಸ್‌ಗಢದಲ್ಲಿ ಡಿಸೆಂಬರ್ 2023ರಲ್ಲಿ ಸಮ್ಮತಿಯನ್ನು ಮರುಸ್ಥಾಪಿಸಲಾಗಿದೆ. ಡಿಸೆಂಬರ್ 2023ರಲ್ಲಿ ಕಾಂಗ್ರೆಸ್‌ನ ಅಶೋಕ್ ಗೆಹ್ಲೋಟ್ ಸರ್ಕಾರವನ್ನು ಸೋಲಿಸಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜಸ್ಥಾನ ಕೂಡ ಈ ವರ್ಷದ ಜನವರಿಯಲ್ಲಿ ಸಮ್ಮತಿಯನ್ನು ಮರುಸ್ಥಾಪಿಸಿದೆ.

ಒಪ್ಪಿಗೆ ಹಿಂಪಡೆಯುವ ಸಮಯದಲ್ಲಿ, ಪ್ರತಿಪಕ್ಷಗಳನ್ನು ಅನ್ಯಾಯವಾಗಿ ಗುರಿಯಾಗಿಸಲು ಕೇಂದ್ರ ಸರ್ಕಾರವು ಸಿಬಿಐ ಅನ್ನು ಬಳಸುತ್ತಿದೆ ಎಂದು ಎಲ್ಲಾ ರಾಜ್ಯಗಳು ಆರೋಪಿಸಿದ್ದವು.

ಭ್ರಷ್ಟಾಚಾರ ತಡೆ ಕಾಯ್ದೆ-1988ಕ್ಕೆ 2018ರಲ್ಲಿ ತಿದ್ದುಪಡಿಗಳನ್ನು ತಂದ ಬಳಿಕ, ಸಿಬಿಐ ಮೇಲೆ ಆಡಳಿತಾತ್ಮಕವಾಗಿ ಮಾತ್ರವಲ್ಲದೆ, ಕಾನೂನಾತ್ಮಕವಾಗಿಯೂ ಕೇಂದ್ರ ಅಧಿಕಾರ ಚಲಾಯಿಸುತ್ತಿದೆ.

ಯಾವುದೇ ಸರ್ಕಾರಿ ನೌಕರನ ವಿರುದ್ಧ ಭ್ರಷ್ಟಾಚಾರದ ಪ್ರಕರಣವನ್ನು ದಾಖಲಿಸುವ ಮೊದಲು ಕೇಂದ್ರದ ಅನುಮತಿಯನ್ನು ಪಡೆಯುವುದನ್ನು ಸಿಬಿಐಗೆ ಕಡ್ಡಾಯಗೊಳಿಸುವ ಕಾಯ್ದೆಯ ಸೆಕ್ಷನ್ 17ಎ ಗೆ 2018ರಲ್ಲಿ ಸಂಸತ್ತಿನಲ್ಲಿ ತಿದ್ದುಪಡಿ ತಂದು ಜಾರಿಗೊಳಿಸಲಾಗಿದೆ. ಈ ಹಿಂದೆ, ಜಂಟಿ ಕಾರ್ಯದರ್ಶಿ ಮತ್ತು ಉನ್ನತ ಮಟ್ಟದ ಅಧಿಕಾರಿಗಳ ಪ್ರಕರಣದಲ್ಲಿ ಮಾತ್ರ ಅಂತಹ ಅನುಮತಿ ಅಗತ್ಯವಿದೆ ಎಂದು ಕೇಂದ್ರ ಆದೇಶಿಸಿತ್ತು. ಸರ್ಕಾರದ ನಿರ್ದೇಶನವನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದ ನಂತರ ಕಾಯ್ದೆಗೆ ತಿದ್ದುಪಡಿಗಳನ್ನು ತರಲಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!