ಹಿರಿಯ ಮುತ್ಸದ್ಧಿ,ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಇಳಿವಯಸ್ಸಿನಲ್ಲಿ ಹಾಸನದಿಂದ ತುಮಕೂರು ಕ್ಷೇತ್ರಕ್ಕೆ ಕಳಿಸಿ,ಅವರು ಸೋಲುವಂತೆ ಮಾಡುವ ಮೂಲಕ ಅವರ ಮಕ್ಕಳೇ ಅವರಿಗೆ ಶತ್ರುಗಳಾಗಿ ಪರಿಣಮಿಸಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ ತಿಳಿಸಿದರು.
ನಾಗಮಂಗಲ ಪಟ್ಟಣದ ಕಾಂಗ್ರೆಸ್ ಕಚೇರಿ ಬಳಿ ಮಾ.5 ರಂದು ಬೆಂಗಳೂರಿನಲ್ಲಿ ನಡೆಯಲಿರುವ ನಾಗಮಂಗಲ ಕ್ಷೇತ್ರದ ಮತದಾರರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು,ನನ್ನನ್ನು ದೇವೇಗೌಡರು ಶಾಸಕನಾಗಿ, ಸಚಿವನಾಗಿ, ಸಂಸದನಾಗಿ ಮಾಡಿದರು.ನಾನು ಅವರ ಜೊತೆ ಈಗಲೂ ಉತ್ತಮ ಬಾಂಧವ್ಯ ಹೊಂದಿದ್ದೇನೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರನ್ನು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಳಿಸಿದ್ದರೆ,ಅವರು ಸುಲಭವಾಗಿ ಗೆದ್ದು ಲೋಕಸಭೆ ಪ್ರವೇಶಿಸುತ್ತಿದ್ದರು.ಆದರೆ ದೇವೇಗೌಡರ ಮಕ್ಕಳು ತಮ್ಮ ಪುತ್ರರಿಗೆ ಅವಕಾಶ ಕಲ್ಪಿಸಲು ದೇವೇಗೌಡರನ್ನು ಹಾಸನ,ಮಂಡ್ಯದಲ್ಲಿ ಕಣಕ್ಕಿಳಿಸದೆ ತುಮಕೂರಿನಿಂದ ಕಣಕ್ಕಿಳಿಸಿ,ಸೋಲುವಂತೆ ಮಾಡಿ ನೋವು ನೀಡಿದರು.ದೇವೇಗೌಡರಿಗೆ ಶತ್ರು ನಾನಲ್ಲ,ಅವರ ಮಕ್ಕಳೇ ಶತ್ರುಗಳೆಂದು ಕಿಡಿಕಾರಿದರು.
ಬೆಂಗಳೂರಿನ ನಾಯoಡಹಳ್ಳಿ ಸಮೀಪದ ನಂದಿ ಸರ್ಕಲ್ ಬಳಿ ಮಾ.5 ರಂದು ನಾಗಮಂಗಲ ನಿವಾಸಿಗಳ ಸಭೆಯನ್ನ ಕಾಂಗ್ರೆಸ್ ಪಕ್ಷ ಆಯೋಜನೆ ಮಾಡಿದ್ದು ಹಾಗೂ ಮಾ. 13ರಂದು ಪ್ರಜಾಧ್ವನಿ ಯಾತ್ರೆ ನಾಗಮಂಗಲಕ್ಕೆ ಆಗಮಿಸಲಿದೆ. ಪ್ರಜಾಧ್ವನಿ ಯಾತ್ರೆ ಬೋಗಾದಿ ಗ್ರಾಮದಿಂದ ಬೈಕ್ ಜಾಥಾ ಮೂಲಕ ಪಟ್ಟಣಕ್ಕೆ ಆಗಮಿಸಲಿದೆ.ನಿಮ್ಮೆಲ್ಲರ ಒಮ್ಮತದ ಸಹಕಾರ ಇದ್ದರೆ ಮಾತ್ರ ಮಾಡೋಣ, ಇಲ್ಲವಾದರೆ ಸಭೆ ಮಾಡದೆ ಚುನಾವಣೆ ಮಾಡುತ್ತೇವೆ ಎಂದು ಹೇಳಿ ಬಿಡುತ್ತೇನೆ ಎಂದು ಕಾರ್ಯಕರ್ತರ ಮೇಲೆ ಬೇಸರ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯಕರ್ತರು, ನಾವೆಲ್ಲರೂ ಒಗ್ಗಟ್ಟಾಗಿ ಕೈ ಜೋಡಿಸುತ್ತೇವೆ,ನೀವು ಕಾರ್ಯಕ್ರಮ ಮಾಡಿ ಎಂದ ಕಾರ್ಯಕರ್ತರು,ಅಂದು ನಾವು ವಿಭಿನ್ನವಾಗಿ ಕಾರ್ಯಕ್ರಮವನ್ನ ಆಯೋಜನೆ ಮಾಡೋಣ ಎಂದು ಹೇಳಿದರು.
ಪ್ರತಿ ಮನೆಗೆ ಗ್ಯಾರಂಟಿ ಕಾರ್ಡನ್ನು ಪಕ್ಷಾತೀತವಾಗಿ ಹಂಚಿದ್ದೇವೆ. ಈ ಕಾರ್ಡ್ ನಿಂದ ಪ್ರತಿ ಮನೆಗೆ 2000 ರೂ ಹಣ, 200 ಯೂನಿಟ್ ವಿದ್ಯುತ್, ಪ್ರತಿ ವ್ಯಕ್ತಿಗೆ ಉಚಿತವಾಗಿ ತಲಾ 10 ಕೆ.ಜಿ. ಅಕ್ಕಿ ತಲುಪಿಸುವ ಉದ್ದೇಶ ನಮ್ಮದು.ಅಲ್ಲದೆ ಕಾಂಗ್ರೆಸ್ ಆಡಳಿತಕ್ಕೆ ಬಂದರೆ ಆಶ್ರಯ ಯೋಜನೆ, ಬೈಸಿಕಲ್ ವಿತರಣೆ,ಹಾಲಿನ ದರದ ಸಬ್ಸಿಡಿ ಜಾರಿ ಮಾಡುತ್ತೇವೆ. ಜೊತೆಗೆ ಮೂರು ಲಕ್ಷ ಹಣ ಸಾಲ ಮನ್ನ ಮಾಡುವುದಾಗಿ ಭರವಸೆ ನೀಡಿದರು.
ಯಶವಂತಪುರ,ರಾಜರಾಜೇಶ್ವರಿ ನಗರ ನಿವಾಸಿಗಳನ್ನು ಒಳಗೊಂಡಂತೆ ನಾಗಮಂಗಲ ನಿವಾಸಿಗಳ ಸಭೆಯನ್ನ ಜೆಡಿಎಸ್ ಪಕ್ಷ ಕೂಡ ಮಾಡುತ್ತಿದೆ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮಗೇಕೆ ಅವರ ಪಾಡು, ಅವರ ಬದಲಾಗಿ ನಮ್ಮ ಸಭೆ ನಡೆಸುವತ್ತ ಗಮನ ಹರಿಸೋಣ ಎಂದು ಕಾರ್ಯಕರ್ತರಿಗೆ ತಿಳಿಸಿದರು.
ಚೌಚೌ ಆಡಳಿತ
ಪಶ್ಚಿಮ ಬಂಗಾಳದಲ್ಲಿ ಮೋದಿಯವರು ಕೆಟ್ಟ ಚುನಾವಣೆ ಮಾಡಿದರು. ಒಬ್ಬ ಹೆಣ್ಣು ಮಗಳು ಮಮತಾ ಬ್ಯಾನರ್ಜಿಯನ್ನು ಸೋಲಿಸಲು ಆಗದ ಬಿಜೆಪಿ ದೇಶಾದ್ಯಂತ ನಮ್ಮ ಪಕ್ಷವೇ ಅಧಿಕಾರದಲ್ಲಿದೆ ಎಂದು ಹೇಳಿಕೊಳ್ಳುತ್ತಾ ಚೌಚೌ ಆಡಳಿತ ನಡೆಸುತ್ತಿದೆಯೇ ಹೊರತು ಅಭಿವೃದ್ಧಿ ಕೆಲಸ ಮಾಡುವಲ್ಲಿ ವಿಫಲವಾಗಿದೆ. ಅದಕ್ಕೆ ನಿದರ್ಶನ ಕೋವಿಡ್ ಬಂದಂಥ ಸಂದರ್ಭದಲ್ಲಿ ಕೊನೆ ಹಂತದಲ್ಲಿ ಕರ್ನಾಟಕದ ಜನತೆಗೆ ಲಸಿಕೆ ಕೊಡುವ ಕೆಲಸವನ್ನ ಮೋದಿ ಸರ್ಕಾರ ಮಾಡಿದೆ ಅಷ್ಟೇ. ಅಭಿವೃದ್ಧಿ ಕೆಲಸ ಮಾಡಿಕೊಂಡು ಬಂದಿರುವುದು ಕಾಂಗ್ರೆಸ್ ಸರ್ಕಾರವೇ ಹೊರತು ಬಿಜೆಪಿ,ಜೆಡಿಎಸ್ ಪಕ್ಷವಲ್ಲ ಎಂದರು.
ಅಭಿವೃದ್ಧಿ ಕುಂಠಿತ
ಶಾಸಕ ಸುರೇಶ್ ಗೌಡ ಆಡಳಿತದ ಅವಧಿಯಲ್ಲಿ ನಾಗಮಂಗಲ ಕ್ಷೇತ್ರ ಯಾವುದೇ ಅಭಿವೃದ್ಧಿ ಕಾರ್ಯದಲ್ಲಿ ಯಶಸ್ವಿಯಾಗಿಲ್ಲ. ನನ್ನ ಆಡಳಿತದ ಅವಧಿಯಲ್ಲಿ 100ಕ್ಕೂ ಹೆಚ್ಚು ಸೇತುವೆ ಮಾಡಿಸಿದ್ದೇನೆ. ಕೆ ಇ ಬಿ, ಆಸ್ಪತ್ರೆ, ಕಾಲೇಜು ಅಭಿವೃದ್ಧಿ, ಬಸ್ ಸ್ಟಾಂಡ್, ಆರ್ ಟಿ ಓ, ಒಳ ಚರಂಡಿ, ಸ್ಲಂಗಳ ಅಭಿವೃದ್ಧಿ, ನ್ಯಾಯಾಲಯ ಕಟ್ಟಡವನ್ನ ನನ್ನ ಅವಧಿಯಲ್ಲಿ ಕಟ್ಟಿದ್ದೇವೆ. ಅದನ್ನು ತೆರೆಯಲು ಇನ್ನು ಆಗಿಲ್ಲ. ದೇವಲಾಪುರದಲ್ಲಿ ಕಾಲೇಜು ಸ್ಥಾಪನೆ, ಅಗ್ನಿಶಾಮಕ ಕಚೇರಿ ಸೇರಿದಂತೆ ಇನ್ನೂ ಹಲವಾರು ಅಭಿವೃದ್ಧಿ ಕೆಲಸಗಳನ್ನು ನಾನು ಮಾಡಿದ್ದೇನೆ.ಹಾಲಿ ಶಾಸಕರು ಅವರ ಆಡಳಿತದ ಅವಧಿಯಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆ ಎಂದು ಪ್ರಶ್ನಿಸಿದರು?
ಬೆಂಗಳೂರಿನಲ್ಲಿರುವ ನಾಗಮಂಗಲ ನಿವಾಸಿಗಳಿಗೆ ಶಾಶ್ವತವಾಗಿ ನಾಗಮಂಗಲದಲ್ಲೇ ಸುಮಾರು 5000 ಜನರಿಗೆ ಉದ್ಯೋಗ ಅವಕಾಶವನ್ನ ಕಲ್ಪಿಸಿಕೊಡಬೇಕು ಎಂಬುದು ನನ್ನ ಗುರಿ. ನಿಮ್ಮ ಸೇವೆಯನ್ನು ಮಾಡಬೇಕು ಎಂಬ ದೃಢ ಸಂಕಲ್ಪ ಮಾಡಿದ್ದೇನೆ. ನನಗೊಂದು ಅವಕಾಶ ಕೊಡಿ. 60 ದಿನ ಶ್ರಮಿಸಿ 5 ವರ್ಷ ಉತ್ತಮ ಆಡಳಿತವನ್ನು ನಮ್ಮ ಸರ್ಕಾರ ಕೊಡುತ್ತದೆ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬಿನ್ನಾಭಿಪ್ರಾಯಗಳಿಲ್ಲ, ಬಿಜೆಪಿ ಪಕ್ಷದಲ್ಲಿ ತುಂಬಾ ಬಿನ್ನಾಭಿಪ್ರಾಯಗಳಿವೆ ಹೊರತು ನಮ್ಮಲ್ಲಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕು ಅಧ್ಯಕ್ಷ ರಾಜೇಶ್, ಮಾಜಿ ಅಧ್ಯಕ್ಷ ಕೃಷ್ಣೇಗೌಡ, ಜಿ. ಪಂ. ಮಾಜಿ ಸದಸ್ಯ ಪ್ರಸನ್ನ, ಗೀತಾ ಹಿರೇಗೌಡ, ತಾ. ಪಂ.ಮಾಜಿ ಅಧ್ಯಕ್ಷ ಕೋಣನೂರು ಹನುಮಂತ. ಮುಖಂಡರಾದ ಸೀನಪ್ಪ, ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.




