Saturday, October 19, 2024

ಪ್ರಾಯೋಗಿಕ ಆವೃತ್ತಿ

ಹದ್ದುಗಳೆಲ್ಲ ಎಲ್ಲಿ ಹೋದವು?

ಅರವಿಂದ ಪ್ರಭು

ಕಾಡಲ್ಲಿ ಒಂದು ಪ್ರಾಣಿ ಸತ್ತಾಗ ಕೆಲವೇ ನಿಮಿಷಗಳಲ್ಲಿ ಅದನ್ನು ಮುಗಿಸಿ ಬರೇ ಮೂಳೆಗಳು ಉಳಿಯುವಂತೆ ಮಾಡಿಬಿಡುವ ರಣಹದ್ದುಗಳು Scavenger Birds ಕುಟುಂಬಕ್ಕೆ ಸೇರಿದ ದೊಡ್ಡಹಕ್ಕಿಗಳು. ಹಾವನ್ನೂ ಕೊಂದುಬಿಡುತ್ತವೆ, ಇಲಿಗಳನ್ನೂ ಹಿಡಿದು ಭಕ್ಷಿಸಿ ರೈತರ ದವಸ ಧಾನ್ಯಗಳನ್ನು ಉಳಿಸುತ್ತವೆ.

ಇವುಗಳಲ್ಲಿ ಬ್ರಾಹ್ಮಿಣಿ ಕೈಟ್, ಪರಾಯಾ ಕೈಟ್ ಮುಖ್ಯವಾದವು. Brahmini Kite ಕತ್ತು ಮತ್ತು ಎದೆ ಬಿಳಿ ಬಣ್ಣದಲ್ಲಿರುತ್ತದೆ. ದೇಹ Rusty redನಿಂದ ಕಂಗೊಳಿಸುತ್ತದೆ. ದಕ್ಷಿಣ ಭಾರತದ ಸಮುದ್ರ ಮತ್ತು ನದಿತೀರಗಳಲ್ಲಿ ಹೆಚ್ಚಾಗಿ ಕಂಡುಬರುವ ಈ ಬ್ರಾಹ್ಮಿಣಿ ಗರುಡನ ಮರಿಗಳಲ್ಲಿ ಈ ಬಣ್ಣದ ವ್ಯತ್ಯಾಸ ಗೋಚರಿಸುವುದಿಲ್ಲ.

ಶ್ರೀರಂಗಪಟ್ಟಣದ ಕಾವೇರಿ ತೀರದಂಚಿನ ಊರುಗಳಲ್ಲಿ, ನಡುಗಡ್ಡೆಗಳಲ್ಲಿ ಅಕ್ಟೋಬರ್‌ನಿಂದ ಏಪ್ರಿಲ್‌ವರೆಗೆ ಕಳೆದ ದಶಕದವರೆಗೂ ಕಾಣಸಿಗುತ್ತಿದ್ದ ಈ ರಣಹದ್ದುಗಳು ಅತಿಯಾದ ಜಲಮಾಲಿನ್ಯ, ಕೈಗಾರಿಕಾ ತ್ಯಾಜ್ಯ ಮತ್ತು ಅಪಾಯಕಾರಿ ಕಳೆನಾಶಕ ಮತ್ತು ರಾಸಾಯನಿಕಗಳ ಬಳಕೆಯಿಂದ ಅಳಿವಿನ ಅಂಚಿಗೆ ತಲುಪಿ ಕಣ್ಮರೆಯಾಗುತ್ತಿವೆ.

ಮನುಷ್ಯರನ್ನೇ ಸರಿಯಾಗಿ ನಡೆಸಿಕೊಳ್ಳದ ಸರಕಾರಗಳಿಗೆ ಮತ್ತು ಅಧಿಕಾರಿ ವರ್ಗಕ್ಕೆ ಈ ಮೂಕ ಪಕ್ಷಿಗಳ ಅವಸಾನ ಯಾವ ವೇದನೆಯನ್ನೂ ಉಂಟು ಮಾಡದಿರುವುದು ದುರಂತ. ಹತ್ತು ವರ್ಷಗಳ ಕೆಳಗೆ ರಂಗನತಿಟ್ಟು, ಕೊಕ್ಕರೆ ಬೆಳ್ಳೂರಿನಲ್ಲಿ ಗುಂಪುಗುಂಪಾಗಿ ರಣಹದ್ದುಗಳ‌ ಸಮೂಹ ನಮಗೆ ಕಾಣಸಿಗುತ್ತಿತ್ತು. ಈಗ ಅಪರೂಪಕ್ಕೆಂಬಂತೆ ಒಂದೋ ಎರಡೋ ಪಕ್ಷಿಧಾಮಕ್ಕೆ ಬಂದು ಹೋಗುತ್ತಿವೆ.

ತನ್ನ ಸ್ವಾರ್ಥಕ್ಕೆ ಭೂಮಿಯನ್ನು ಪ್ರಕೃತಿಯನ್ನು ತನಗೆ ತೋಚಿದಂತೆ ದೋಚುತ್ತಿರುವ ನಮ್ಮ ದಾಹಕ್ಕೆ ಮಿತಿ ಹೇರಿಕೊಳ್ಳದಿದ್ದರೆ ಪ್ರಾಣಿ, ಪಕ್ಷಿ, ಗಿಡಮರಗಳಿಲ್ಲದ ಈ ಭೂಮಿಯಲ್ಲಿ ಕೊನೆಗೆ ಮನುಷ್ಯ ಒಬ್ಬನೇ ಉಳಿಯುತ್ತಾನೆ. ಮೂಕ ಪಕ್ಷಿಗಳನ್ನು ಕೊಂದ ಪಾಪಕ್ಕೆ ನಾವು ಕೃತಕ ಆಕ್ಸಿಜನ್ ಮೂಟೆಗಳನ್ನು ಹೆಗಲ ಮೇಲೆ ಹೊತ್ತುಕೊಂಡು ದಿನದೂಡುವ ಕಾಲ ಬರಲಿದೆ. ಹದ್ದುಗಳ ಅವಸಾನ ಮನುಷ್ಯನ ಅವನತಿಯ ಮುನ್ಸೂಚನೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!