Monday, October 21, 2024

ಪ್ರಾಯೋಗಿಕ ಆವೃತ್ತಿ

ಗಾಂಧಿ ಹುಟ್ಟಿದ ದಿನವಂತೆ….

ಶುಭಶ್ರೀ ಪ್ರಸಾದ್, ಮಂಡ್ಯ

ನಕ್ಕು ಬಿಡು ಚೆನ್ನೆ
ಇಂದಾದರೂ
ಗಾಂಧೀ ಹುಟ್ಟಿದ ದಿನವಂತೆ
ಮಧ್ಯ ರಾತ್ರಿಯಲ್ಲಿ ನಡು ಬೀದಿಯಲ್ಲಿ
ಹೆಣ್ಣು ತಂತಾನೆ ಬಿಡುಬೀಸಾಗಿ
ನಿರ್ಭಯದಿ ನಡೆದರೆ
ಅಂದೆ ನಮಗೆ ಸ್ವಾತಂತ್ರ್ಯ ಎಂದ
ಮಹನೀಯನ ದಿನವಂತೆ

ತಾನು ತುಂಡುಡುಗೆ ತೊಟ್ಟರೂ
ಜಗಕೆಸುಖವಿರಲಿ ಎಂದು ಬಯಸಿದವನಂತೆ
ನಾನೇನು ಕಂಡಿಲ್ಲ ಅವನನೆಂದೂ
ಚರಿತೆಯಲ್ಲಿ ಹೆಸರಿರಲು ಕುತೂಹಲದಿ ಓದಿದೆನಷ್ಟೇ
ಕರಿಯರ ನಾಡಿನಲ್ಲಿ
ತಾನುಂಡ ಕಷ್ಟಗಳ
ನಮ್ಮವರು ಅನುಭವಿಸಲೇಕೆ
ಎಂದು ಮರುಗಿದವನಂತೆ

ನಾವೆಲ್ಲ ಭಾಯಿ ಭಾಯಿ ಎಂದು
ಕೈಚಾಚಿ ಅಪ್ಪುಗೆಯ ನೀಡಿದವನಂತೆ
ಹುಲ್ಲು ಹಾಸಿನ ಮೇಲೆ ತುಂತುರು ಹನಿ ಮುತ್ತಾಗಿ
ಕಾಮನಬಿಲ್ಲು ಮೂಡಿದಂತೆ ಅವನಂತೆ

ಅರ್ಧ ಉಂಡು ಬಿಸುಡಿದ ಎಲೆಗಳಲ್ಲಿ
ಹಸಿದ ಚಿತ್ರದಲಿ ಅವ ಕಾಂಬನಂತೆ ”
ಹಾರು ಹಕ್ಕಿಯ ರೆಕ್ಕೆ ಮುರಿದು
ಸ್ವಾತಂತ್ರ್ಯದ ಕನಸ ಬೀಜ ಬಿತ್ತೆ
ಬಾಪು ಕಾಂಬನೇ?

ಶಿಲೆಯಾಗಿ ನಿಂತಿಹ ಇವ ಶಿಲೆಯಲ್ಲ
ಶಿಲೆಯೊಳಗಿನ ಧ್ಯಾನದ ಶಕುತಿ
ಯುದ್ಧದ ಗೆಲುವಿನ ಕಾಯಿಲೆಗೆ
ಗಾಂಧೀ ಎಂಬ ಹೆಸರೇ ಮದ್ದು

ಮೌನ, ಧ್ಯಾನ, ಸತ್ಯಾಗ್ರಹದ ಕೆಚ್ಚ ಜಗಕ್ಕೆ ತೋರಿದವನಂತೆ
ಹೆಸರು ಹಣ ಅಧಿಕಾರವೆಂದು
ಹಾರಾಡಿ ಹೋರಾಡುವವರಿಗೆ
ಗಾಂಧೀ ನಾಮದ ಬಲವೊಂದು ಊಡಲಿ ಹೊಸ ಸ್ಫೂರ್ತಿ

ಅವನ ಹೆಸರಿನಂಗಡಿಯ ಬಳಸುವರಿಗೆಚ್ಚರ ಮೂಡಲಿ
ಸಾಕಷ್ಟೇ ನಿನ್ನ ಹುಟ್ಟು ಹಬ್ಬಕ್ಕೆ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!