Monday, October 21, 2024

ಪ್ರಾಯೋಗಿಕ ಆವೃತ್ತಿ

ಸಿಎಂ ಸಿದ್ದರಾಮಯ್ಯ ಬೆನ್ನಿಗೆ ನಿಂತ ದಳಪತಿ ; ಹೆಚ್.ಡಿ.ಕುಮಾರಸ್ವಾಮಿ ವಿರುದ್ದ ಗುಡುಗಿದ ಜಿ.ಟಿ.ದೇವೇಗೌಡ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ) ಬದಲಿ ನಿವೇಶನ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಬಿಜೆಪಿ-ಜೆಡಿಎಸ್ ನಾಯಕರು ಆಗ್ರಹಿಸಿದ್ದಾರೆ. ಆದರೆ, ಜೆಡಿಎಸ್ ಕೋರ್ ಕಮಿಟಿ ಸಂಚಾಲಕ, ಹಿರಿಯ ಶಾಸಕ ಜಿಟಿ ದೇವೇಗೌಡ ಅವರು ಸಿಎಂ ಬೆಂಬಲಕ್ಕೆ ನಿಂತಿದ್ದು, “136 ಸ್ಥಾನ ಗೆದ್ದು ಮುಖ್ಯಮಂತ್ರಿ ಆದವರು ರಾಜೀನಾಮೆ ಕೊಡಲು ಆಗುತ್ತಾ..? ಯಾರ ಯಾರ ಮೇಲೆ ಎಫ್‌ಐಆರ್ ಆಗಿದೆಯೋ ಅವರೆಲ್ಲರೂ ರಾಜೀನಾಮೆ ಕೊಡಿ” ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರಿಗೆ ಪರೋಕ್ಷ ತಿರುಗೇಟು ನೀಡಿದ್ದಾರೆ.

ಪ್ರಸ್ತುತ ರಾಜ್ಯದಲ್ಲಿ ಮುಡಾ ಪ್ರಕರಣ ಭಾರೀ ಸದ್ದು ಮಾಡುತ್ತಿದೆ. ಮೈಸೂರಿನ ದಸರಾ ಉದ್ಘಾಟನೆಯಲ್ಲಿ ಇಂದು ಮಾತನಾಡಿದ ಜೆ‌ಡಿ‌ಎಸ್ ನಾಯಕ ಜಿಟಿ ದೇವೇಗೌಡ, ಸ್ವಪಕ್ಷದ ವಿರುದ್ಧವೇ ಗುಡುಗಿದ್ದಾರೆ. ಇದೊಂದು ಸಣ್ಣ ಪ್ರಕರಣ ಎಂದು ಹೇಳಿರುವ ಅವರು, “ಎಫ್‌ಐಆರ್ ಆದೊರೆಲ್ಲಾ ರಾಜೀನಾಮೆ ಕೊಡಬೇಕು ಅಂದ್ರೆ, ಎಚ್‌ಡಿ ಕುಮಾರಸ್ವಾಮಿ ರಾಜೀನಾಮೆ ನಿಡ್ತಾರಾ..?” ಎಂದು ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ ಚಾಮುಂಡೇಶ್ವರಿ ತಾಯಿಯ ವರಪುತ್ರ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೊಗಳಿದ ಜಿಟಿಡಿ, ಅವರನ್ನು “ಚಾಮುಂಡೇಶ್ವರಿ ತಾಯಿಯ ವರಪುತ್ರ” ಎಂದು ಹೊಗಳಿದರು. “ಚಾಮುಂಡೇಶ್ವರಿ ಕ್ಷೇತ್ರಕ್ಕೆ ಕಾಲಿಟ್ಟ ವೇಳೆಯಿಂದಲೂ ಸಿದ್ದರಾಮಯ್ಯ ಸಚಿವರಾಗಿ, ಡಿಸಿಎಂ ಆಗಿ, ಎರಡು ಭಾರಿ ಸಿಎಂ ಆಗಿದ್ದಾರೆ ಎಂದರೆ ಅವರಿಗೆ ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ಮಾತ್ರವೇ ಸಾಧ್ಯ. ಕಠಿಣ ಸಂದರ್ಭದಲ್ಲಿಯೂ ತಾಯಿ ಚಾಮುಂಡೇಶ್ವರಿ ಅವರ ಪಾಲಿಗೆ ಇದ್ದಾರೆ” ಎಂದು ಹೇಳಿದರು.

“>

 

ಹಿಂದೆ ಉಪ ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸುವುದಕ್ಕೆ ನಾವು ತೀರ್ಮಾನಿಸಿದ್ದೆವು. ಆದರೆ, ಮುಖ್ಯಮಂತ್ರಿಗಳು ಆ ಚುನಾವಣೆಯಲ್ಲಿ ಗೆದ್ದರು. ಇದಕ್ಕೆ ಕಾರಣ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಅವರ ಮೇಲಿರುವುದು ಎಂದರು.

“ಸಿದ್ದರಾಮಯ್ಯ ಎಂದಿಗೂ ತಮ್ಮ ಕುಟುಂಬ ನೋಡಿದವರಲ್ಲ. ಈಗ ಎಲ್ಲರೂ ತಮ್ಮ ಗಾಜಿನ ಮನೆಯಲ್ಲಿ ಕೂತಿದ್ದಾರೆ. ಎಫ್‌ಐ‌ಆರ್ ಆದವರು ರಾಜೀನಾಮೆ ಕೊಡಬೇಕಾಗಿದ್ದರೆ ಜೆಡಿಎಸ್ ನಲ್ಲಿ ಇರೋರು ರಾಜೀನಾಮೆ ಕೊಡ್ತಾರಾ?” ಎಂದು ಪರೋಕ್ಷವಾಗಿ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದರು.

ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದು ನ್ಯಾಯಾಲಯ ಹೇಳಿದೆಯಾ?

“ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದು ನ್ಯಾಯಾಲಯ ಹೇಳಿದೆಯಾ? , ಕೇಂದ್ರದಲ್ಲಿ ಮಂತ್ರಿ ಆದವರಿಗೆ ಜವಾಬ್ದಾರಿ ಬೇಡ್ವಾ? ಕುಮಾರಸ್ವಾಮಿ ಗೆ ರಾಜೀನಾಮೆ ಕೊಡು ಅಂದರೆ ಕೊಡುತ್ತಾರಾ” ಎಂದು ನೇರವಾಗಿಯೇ ಅಸಮಾಧಾನ ಹೊರಹಾಕಿದರು.

“ಅವರು 136 ಸ್ಥಾನ ಗೆದ್ದು ಸಿಎಂ ಆಗಿದ್ದಾರೆ.. ಈಗ ರಾಜೀನಾಮೆ ಕೊಡಲು ಆಗುತ್ತಾ, ರಾಜೀನಾಮೆ ಕೊಡಿ ಅಂದರೆ ಕೊಡುವುದಕ್ಕೆ ಆಗುತ್ತಾ?, ಅತ್ಯಾಚಾರ, ಕೊಲೆ ನಡೆದರೆ ಮಾಧ್ಯಮಗಳು ಮೂರು ತಿಂಗಳು ತೋರಿಸುತ್ತವೆ. ಒಂದು ಎಫ್‌ಐಆರ್‌ ಅನ್ನು ಎಷ್ಟು ದಿನ ಅಂತ ತೋರಿಸುತ್ತಿರಾ” ಎಂದು ಮಾಧ್ಯಮಗಳನ್ನು ಪ್ರಶ್ನಿಸಿದ ಅವರು, “ಯಾರ್ಯಾರ ಮೇಲೆ ಎಫ್‌ಐಆರ್ ಆಗಿದೆಯೋ ಅವರೆಲ್ಲರೂ ರಾಜೀನಾಮೆ ಕೊಡಿ. ಎಲ್ಲರೂ ವಿಧಾನಸೌಧದ ಮುಂದೆ ಬಂದು ನಿಂತುಕೊಳ್ಳಿ. ಕೇಂದ್ರದಿಂದ ರಾಜ್ಯಕ್ಕೆ ಏನೂ ತರಬೇಕೋ ಅದರ ಕಡೆ ಗಮನ ಕೊಡಿ. ಅದನ್ನು ಬಿಟ್ಟು ಬರೀ ರಾಜೀನಾಮೆ ಕೇಳುತ್ತಾ ಕೂತರೆ ಹೇಗೆ” ಎಂದು ಜಿ‌ಟಿ ದೇವೇಗೌಡ ವಾಗ್ದಾಳಿ ನಡೆಸಿದರು.

ದಸರಾ ಉದ್ಘಾಟನೆ ಭಾಷಣದುದ್ದಕ್ಕೂ ತಮ್ಮನ್ನು ಹಾಡಿಹೊಗಳಿದ ಜಿಟಿ ದೇವೇಗೌಡರ ಭಾಷಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಸಗೊಂಡರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!