Friday, October 18, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು ಪುರಸಭೆ| ಕಾಮಗಾರಿಗಳಲ್ಲಿ ಅವ್ಯವಹಾರ ; ಲೋಕಾಯುಕ್ತ ತನಿಖೆಗೆ ಆಗ್ರಹ

ವರದಿ: ಪ್ರಭು ವಿ.ಎಸ್

ಪುರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಯು ಜಿ ಡಿ ಸಂಪರ್ಕ ಹಾಗೂ ಕುಡಿಯುವ ನೀರಿನ ಕಾಮಗಾರಿಯಲ್ಲಿ ಹಲವು ಅವ್ಯವಹಾರಗಳು ನಡೆದಿದ್ದು ಕೂಡಲೇ ಲೋಕಾಯುಕ್ತ ಸಂಸ್ಥೆಯ ಮೂಲಕ ತನಿಖೆ ನಡೆಸುವಂತೆ ಹಿರಿಯ ಸದಸ್ಯ ಎಂ. ಐ. ಪ್ರವೀಣ್ ಒತ್ತಾಯಿಸಿದರು.

ಪುರಸಭೆಯ ಎಸ್.ಎಂ.ಕೃಷ್ಣ ಸಭಾಂಗಣದಲ್ಲಿ ಅಧ್ಯಕ್ಷೆ ಕೋಕಿಲ ಅರುಣ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆ ವೇಳೆ ಮಾತನಾಡಿದ ಅವರು, ಮದ್ದೂರು ಪಟ್ಟಣ ವ್ಯಾಪ್ತಿಯಲ್ಲಿ ಕಳೆದ 4 ವರ್ಷಗಳಿಂದಲೂ 118 ಕೋಟಿ ರೂ ವೆಚ್ಚದ ಕುಡಿಯುವ ನೀರು ಯುಜಿಡಿ ಸಂಪರ್ಕ ಕಾಮಗಾರಿ ನಡೆಯುತ್ತಿದ್ದರು ಸಂಬಂಧಿಸಿದ ಅಧಿಕಾರಿಗಳು ಇದುವರೆಗೂ ಸಮರ್ಪಕ ಮಾಹಿತಿ ನೀಡುವಲ್ಲಿ ವಿಫಲರಾಗಿದ್ದು ಇದರಿಂದಾಗಿ ಸಾಕಷ್ಟು ಅವ್ಯವಾರ ನಡೆದಿರುವುದಾಗಿ ಆರೋಪಿಸಿದರಲ್ಲದೆ ಕೂಡಲೇ ಕಾಮಗಾರಿಯ ಬಗ್ಗೆ ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿ ತನಿಖೆ ಕೈಗೊಳ್ಳುವಂತೆ ‌ ಪ್ರವಿಣ್ ಸೇರಿದಂತೆ ಇತರೆ ಸದಸ್ಯರು ದನಿಗೂಡಿಸಿದರು.

‌ಇದುವರೆವಿಗೂ ಕಾಮಗಾರಿಯನ್ನು ಪೂರ್ಣಗೊಳಿಸದೆ ಅಧಿಕಾರಿಗಳು ನಿರ್ಲಕ್ಷ ದೋರಣೆ ಅನುಸರಿಸುತ್ತಿದ್ದು ರಸ್ತೆ, ಕುಡಿಯುವ ನೀರಿನ ಕಾಮಗಾರಿ ಅದ್ವಾನಗೊಂಡಿದ್ದು ಸ್ಥಳೀಯ ಸಾರ್ವಜನಿಕರು ಪ್ರತಿನಿತ್ಯ ಪರಿತಪಿಸುವಂತಾಗಿದ್ದು ಕೂಡಲೇ ಕಾಮಗಾರಿ ಪೂರ್ಣಗೊಳಿಸುವಂತೆ ಮತ್ತು ಸಮರ್ಪಕ ಮಾಹಿತಿ ನೀಡುವಂತೆ ತುರ್ತು ಸಭೆ ವಿಶೇಷ ಸಭೆಗಳಲ್ಲಿ ಸದಸ್ಯರು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಎ.ಇ.ಇ‌ ಬಾಬು ಸಾಬ್ ನದಾಪ್ ಅವರಿಗೆ ಮನವಿ ಸಲ್ಲಿಸಿದ್ದು ಇದುವರೆಗೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲವೆಂದು ದೂರಿದರಲ್ಲದೆ‌ ತಪ್ಪಿಸಸ್ಥ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಲೋಕಾಯುಕ್ತ ಸಂಸ್ಥೆ ಮೂಲಕ ತನಿಖೆ ಕೈಗೊಳ್ಳಬೇಕೆಂದು ಪಕ್ಷಾತೀತವಾಗಿ ಸದಸ್ಯರು ಒತ್ತಾಯಿಸಿದರು.

ತಪ್ಪಿಸಸ್ಥ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ

ಬಳಿಕ ಮಧ್ಯ ಪ್ರವೇಶಿಸಿದ ಶಾಸಕ ಕೆ.ಎಂ ಉದಯ್ ಈ ಹಿಂದೆ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳ ನಿರ್ಲಕ್ಷ ಧೋರಣೆಯಿಂದಾಗಿ ಕೆಲ ಲೋಪ ದೋಷಗಳು ಉಂಟಾಗಿದ್ದು ಮತ್ತು ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಕೂಡಲೇ ಅಧಿಕಾರಿಗಳು ಕಾಮಗಾರಿ ಬಗ್ಗೆ ಸಮರ್ಪಕ ಮಾಹಿತಿಯನ್ನು ಪ್ರತಿ ಸದಸ್ಯರಿಗೂ ತಲುಪಿಸುವಂತೆ ಮುಂದಿನ ದಿನಗಳಲ್ಲಿ ವಿಶೇಷ ಸಭೆ ಕರೆದು ಸಾಧಕ ಬಾದಕಗಳನ್ನು ಚರ್ಚಿಸುವುದಾಗಿ ಮತ್ತು ಯಾವುದೇ ಅವ್ಯವಹಾರಗಳು ನಡೆದಿದ್ದರೆ ಮುಕ್ತವಾಗಿ ತನಿಖೆ ನಡೆಸಿ ತಪ್ಪಿಸಸ್ಥ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಸಭೆಗೆ ತಿಳಿಸಿದರು.

ಪಟ್ಟಣ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರು ವಾರ್ಡ ಗಳಲ್ಲಿ ಗ್ಯಾಂಗ್ ಆಧಾರದ ಮೇಲೆ ಕರ್ತವ್ಯ ನಿರ್ವಹಣೆ ಮಾಡಲು ಪರ ವಿರೋಧ ಚರ್ಚೆ ಜರುಗಿತ್ತಲ್ಲದೆ ಪ್ರತಿ ವಾರ್ಡ್ ಗಳಿಗೆ ಪೌರಕಾರ್ಮಿಕರನ್ನು ನಿಯೋಜಿಸಿ ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡುವ ಜೊತೆಗೆ ಮೂರು ಪ್ರತ್ಯೇಕ ಗುಂಪುಗಳನ್ನಾಗಿ ರಚಿಸಿ ಪಟ್ಟಣವನ್ನು ಸುಂದರವನ್ನಾಗಿಸಲು ಯೋಜನೆ ರೂಪಿಸಿರುವುದಾಗಿ ಅಧ್ಯಕ್ಷೆ ಕೋಕಿಲ ಅರುಣ್ ಸಭೆಗೆ ತಿಳಿಸಿದರು,.

ಪಟ್ಟಣ ವ್ಯಾಪ್ತಿಯಲ್ಲಿ ಅಕ್ರಮವಾಗಿ ಅನಧಿಕೃತ ಅಂಗಡಿ ಮಳಿಗೆಗಳು ರಾತ್ರೋ ರಾತ್ರಿ ತಲೆ ಎತ್ತುತ್ತಿದ್ದು ಅಧಿಕ ಬಾಡಿಗೆ ವಸೂಲಿ ಮಾಡುವ ಜೊತೆಗೆ ಕೆಲ ಅಂಗಡಿ ಮಾಲೀಕರು ನೆಲ ಬಾಡಿಗೆ ಸುಂಕ ನೀಡದೆ ಪುರಸಭೆಗೆ ನಷ್ಟ ಉಂಟು ಮಾಡುತ್ತಿದ್ದು ಮತ್ತು ಕಳೆದ ನಾಲ್ಕು ವರ್ಷಗಳಿಂದಲೂ ನಂದಿನಿ ಮಾರಾಟ ಮಳಿಗೆಯವರು ನೆಲ ಬಾಡಿಗೆ ನೀಡದೆ ನಿರ್ಲಕ್ಷ ತೋರಿದ್ದು ಕೂಡಲೇ ಅಂತಹ ಅಂಗಡಿಗಳನ್ನು ಗುರುತಿಸಿ ಮತ್ತು ಮಾಲೀಕರೊಂದಿಗೆ ಚರ್ಚಿಸಿ ಕ್ರಮ ಜರುಗಿಸಬೇಕೆಂದು ಸದಸ್ಯರು ಒತ್ತಾಯಿಸಿದರು. ‌‌‌‌‌ ‌‌

ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಕೋಕಿಲ ಮುಂದಿನ ದಿನಗಳಲ್ಲಿ ಅನಧಿಕೃತ ಅಂಗಡಿಗಳ ತೆರವು ಕಾರ್ಯಾಚರಣೆ ಕೈಗೊಂಡು ಮತ್ತು ಪಟ್ಟಣ ವ್ಯಾಪ್ತಿಯಲ್ಲಿರುವ ಅಂಗಡಿ ಮಳಿಗೆಗಳ ಮಾಲೀಕರು ನೆಲ ಬಾಡಿಗೆ ಸುಂಕ ವಸೂಲಿ ನೀಡುವಂತೆ ಸೂಚಿಸುವುದಾಗಿ ಹೇಳಿದರು ಸ್ಥಾಯಿಸಮಿತಿ ಅಧ್ಯಕ್ಷರ ಆಯ್ಕೆ ‌ ವಾರ್ಡ್ ನಂ – 13 ಸಿದ್ದರಾಜು ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದರು ‌ ‌ . ನೂತನ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಸಿದ್ದರಾಜು ರವರನ್ನು ಶಾಸಕ ಕೆ. ಎಂ ಉದಯ್ ಅಧ್ಯಕ್ಷೆ ಕೋಕಿಲ ಅರುಣ್ ಉಪಾಧ್ಯಕ್ಷ ಟಿ ಆರ್ ಪ್ರಸನ್ನ ಕುಮಾರ್ ಅಭಿನಂದಿಸಿದರು.

ರಾಜಿನಾಮೆಗೆ ಅಗ್ರಹ

ಪುರಸಭೆ ಉಪಾಧ್ಯಕ್ಷ ಟಿ. ಅರ್. ಪ್ರಸನ್ನಕುಮಾರ್ ರವರ ರಾಜೀನಾಮೆಗೆ ಆಗ್ರಹಿಸಿ ಜೆಡಿಎಸ್ ಸದಸ್ಯರು ಬಿಗಿಪಟ್ಟು ಹಿಡಿದು, ಸಭಾತ್ಯಾಗ ಮಾಡಿದ ಘಟನೆ ಜರುಗಿತು

ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ವೇಳೆ ಅಧಿಕಾರ ದುರುಪಯೋಗಪಡಿಸಿಕೊಂಡು ಅಕ್ರಮ ಖಾತೆ ಮಾಡಿ ಕೊಂಡಿದ್ದು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಜೆಡಿಎಸ್ ಸದಸ್ಯರು ಒತ್ತಾಯಿಸಿದರು.

ಶಾಸಕರು ಹಾಜರಿದ್ದ ಸಭೆಯಲ್ಲಿ ‌ ಒತ್ತಾಯಿಸಿದ ಸದಸ್ಯರು ಉಪಾಧ್ಯಕ್ಷ ಪ್ರಸನ್ನ ಕುಮಾರ್ ರವರ ಮೇಲೆ ಪ್ರಕರಣ ದಾಖಲಾಗಿದ್ದು ಕೂಡಲೇ ತನಿಖೆ ನಡೆಸಿ ತಪ್ಪಿಸಸ್ಥ ಸದಸ್ಯರ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು,
ಜೆಡಿಎಸ್ ಸದಸ್ಯರಾದ ಎಸ್.ಮಹೇಶ್, ನಂದೀಶ್, ಆದಿಲ್ಆಲಿಖಾನ್, ಪ್ರಿಯಾಂಕಅಪ್ಪುಗೌಡ, ಮನೋಜ್ ರವರು ಇತರೆ‌ ವಿಷಯಗಳು ಬಂದ ಸಮಯದಲ್ಲಿ ಪ್ರಶ್ನಿಸಿದ ಸದಸ್ಯರು ಪ್ರಕರಣ ದಾಖಲಾಗಿರುವ ಪ್ರತಿಗಳನ್ನು ಸಭೆ ವೇಳೆ ಪ್ರದರ್ಶಿಸಿದರು. ಇತ್ತೀಚೆಗೆ ಪುರಸಭೆಯ ಉಪಾಧ್ಯಕ್ಷರಾಗಿರುವ ಟಿ ಆರ್ ಪ್ರಸನ್ನ ಕುಮಾರ್ ತಮ್ಮಗೆ ಸೇರಿದ ನಿವೇಶನ ಒಂದನ್ನ ಅಕ್ರಮವಾಗಿ ಖಾತೆ ಮಾಡಿಸಿಕೊಂಡಿದ್ದು ಮತ್ತು ಇದಕ್ಕೆ ಸಂಬಂಧ ಪಟ್ಟಂತೆ ಇತ್ತೀಚೆಗೆ ನಡೆದ ಪುರಸಭಾ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆಗೂ ಮುನ್ನ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅರೋಪಿಸಿದರು.

ಸ್ವತಃ ಪುರಸಭಾ ಉಪಾಧ್ಯಕ್ಷರೇ ಅಕ್ರಮವೆಸಗಿರುವುದರಿಂದ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಹಾಗೂ ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಒತ್ತಾಯಿಸಿದರು.

ಬಳಿಕ ಮಧ್ಯ ಪ್ರವೇಶಿಸಿದ ಶಾಸಕ ಕೆಎಂ ಉದಯ್ ಕಳೆದ ಹಲವಾರು ವರ್ಷಗಳಿಂದಲೂ ಪುರಸಭೆಯಲ್ಲಿ ಅಕ್ರಮ ಅವ್ಯವಾರಗಳು ನಡೆದಿದ್ದು ಅಕ್ರಮ ತನಿಖೆ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದು ಒಂದು ವೇಳೆ ಯಾರು ತಪ್ಪು ಮಾಡಿದ್ದರು ಸೂಕ್ತ ತನಿಖೆಯಾಗುತ್ತದೆ ಎಂದು ಸಮಜಾಯಿಸಿ ನೀಡಿದರು, ಪಟ್ಟಣ ವ್ಯಾಪ್ತಿಯಲ್ಲಿ ಇನ್ಯಾವುದೇ ಅಕ್ರಮವಾಗಿದ್ದರು ಕೂಡ ತನಿಖೆಯಾಗಲಿದೆ ಪ್ರಕರಣ ದಾಖಲಾದ ಬಳಿಕ ರಾಜೀನಾಮೆ ನೀಡುವ ಅವಶ್ಯಕತೆ ಏನಿದೆ ಎಂದು ಪ್ರಶ್ನಿಸಿದರಲ್ಲದೆ ಅಷ್ಟಕ್ಕೂ, ಇದಕ್ಕೆ ಏಕೆ ? ಉಪಾಧ್ಯಕ್ಷರು ರಾಜೀನಾಮೆ ಕೊಡಬೇಕೆಂದರು , ಆರೋಪಿಗಳಾಗಿರುವ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿ.ಎಸ್.ಯಡಿಯೂರಪ್ಪ ಅವರುಗಳ ಮೇಲೆ ಆರೋಪಗಳು ಇಲ್ಲವೆ ಎಂದು ಜೆಡಿಎಸ್ ಸದಸ್ಯರುಗಳನ್ನು ಪ್ರಶ್ನಿಸಿದರು.

ಇದಕ್ಕೆ ಒಪ್ಪದ ಜೆಡಿಎಸ್ ಸದಸ್ಯರು ಅಕ್ರಮವೆಸಗಿರುವ ಉಪಾಧ್ಯಕ್ಷ ಪ್ರಸನ್ನ ಅವರು ರಾಜೀನಾಮೆ ಕೊಡಲಿ ಎಂದು ಪಟ್ಟು ಹಿಡಿದು ಸಭೆಯನ್ನು ಬಹಿಷ್ಕರಿಸಿ ಸಭಾತ್ಯಾಗ ಮಾಡಿ ಸಭೆಯಿಂದ ಹೊರ ನಡೆದರು. ‌

ಸಭೆ ವೇಳೆ ಸದಸ್ಯರಾದ ಸಚಿನ್, ಬಸವರಾಜ್, ವೆಂಕಟೇಶ್, ವನಿತಾ, ಪ್ರಮೀಳಾ, ಬಿ.ಸಿ ಸರ್ವಮಂಗಳ, ಲತಾ, ರಾಮು, ರತ್ನಮ್ಮ, ಸುರೇಶ್ ಕುಮಾರ್, ಕಮಲ್ ನಾಥ್, ವೆಂಕಟೇಶ್, ನಂದೀಶ್, ಸುಮಿತ್ರ ರಮೇಶ್,ಶಬ್ರಿನ್ ತಾಜ್, ಮುಖ್ಯಧಿಕಾರಿ ಮೀನಾಕ್ಷಿ ಹಾಗೂ ಅಧಿಕಾರಿಗಳು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!