Friday, October 18, 2024

ಪ್ರಾಯೋಗಿಕ ಆವೃತ್ತಿ

ನಕ್ಬಾ – ಅಕ್ಟೊಬರ್ 7

“ಈ ಯುದ್ಧದಲ್ಲಿ ನೀನು
ಯಾರ ಪರ?”

ಸದಾ ಸಮರ ಸನ್ನದ್ಧರಾದ
ಗೆಳೆಯರೊಬ್ಬರು ಕೇಳಿದರು.

“ಯುದ್ಧ ನಡೆದರೆ ನಾನು
ಯುದ್ಧ ನಿಲ್ಲಿಸುವ ಪರ”
ಎಂದು ಕೂಡಲೇ ಉತ್ತರಿಸಿದೆ..

ನಂತರ ಕೇಳಿದೆ…

“ಆದರೆ ಗೆಳೆಯ ಯುದ್ಧ
ನಡೆಯುತ್ತಿರುವುದೆಲ್ಲಿ?”

“ಬಡಿವಾರದ ಮಾತು ಬೇಡ
ಸದ್ಯ ಯುದ್ಧ ನಡೆದಿಲ್ಲವೇ ಇಸ್ರೇಲಿನಲ್ಲಿ ..?
ನೀನು ಯಾವ ಬಣ?”

ಎಂದು ಅಬ್ಬರಿಸಿದರು.

ನಾನು ಹೇಳಿದೆ ತಣ್ಣಗೆ.

ದೇಶವೊಂದು ಮತ್ತೊಂದರ ಮೇಲೆ
ನಡೆಸುವುದು ಯುದ್ಧ.

ದೇಶವೊಂದು ಜನರ ಮೇಲೆ ನಡೆಸುವುದು
ಯುದ್ಧವಲ್ಲ… ಗೆಳೆಯ…

ಅದು
ಜನಾಂಗೀಯ ನರಮೇಧ
ಅನ್ಯಾಯದ ಅಶ್ವಮೇಧ
ಶುದ್ಧ ಯುದ್ಧಾಪರಾಧ ..

ಅಲ್ಲಿ ಬಣಗಳನ್ನು ಕಾರಣಗಳನ್ನು,
ನೆಪಗಳನ್ನು
ಹುಡುಕುವರು…
ಮನುಷ್ಯರಲ್ಲ ಗೆಳೆಯ…

ಅನ್ಯಾಯದ ಟ್ಯಾಂಕರುಗಳ
ವಾಲಂಟರಿ ಚಾಲಕರು….

ಕಾರಣವರಿಯದೆ
ಬಣದ ಕುರುಡು ಬೆಳೆಸುವುದು
ಕುಟಿಲ ರಾಜಕಾರಣ..

ಹೀಗಾಗಿ ಇದು ನನ್ನ
ಮಾನವೀಯ ಸಂವಿಧಾನ:

ದೇಶವೊಂದು ಜನರಮೇಲೆ
ಯುದ್ಧ ಹೂಡಿದರೆ
ನಾನು ಜನಗಳ ಬಂದೂಕಾಗುವೆ….

ಸಮುದಾಯಗಳ ನಡುವೆ
ಯುದ್ಧವಾದರೆ
ನಾನು ಎರಡೂ ಸಮುದಾಯಗಳ
ಸೇತುವೆಯಾಗುವೆ..

ಕುಟಿಲ ಅತಿಕ್ರಮಣಗಳು
ಶಾಂತಿಯ ಭಯೋತ್ಪಾದನೆ
ನಡೆಸಿದರೆ
ನಾನು
ನ್ಯಾಯದ ಬತ್ತಿ ಹಿಡಿದು ಬೆದರಿಸುವೆ……

ಕಬಳಿಸಿದ ನೆಲದಲ್ಲಿ
ನೆಲಸಿಗರು ಸುಳ್ಳುಗಳನ್ನು ಬಿತ್ತಿದರೆ…

ನಾನು
ನೆಲವ ಬಿರಿದು
ಸತ್ಯವಾಗಿ ಪಲ್ಲವಿಸುವೆ..

ಅಕ್ಟೋಬರ್ 7ರ ದಾಳಿಯೇ
ಫೆಲೆಸ್ತೀನಿನ ಇತಿಹಾಸ ಎನ್ನುವವರಿಗೆ..

ಎಪ್ಪತ್ತೈದು ವರ್ಷಗಳಾದರೂ ಮುಗಿಯದ
ನಕ್ಬಾ ದ ನರಕದ ಕಥೆ ಹೇಳುವೆ…

ಬಲಿಪಶುವಿನ ನಕಾಬು ಹಾಕಿರುವ ಬೇಟೆಗಾರನ ಬಯಲು ಮಾಡುವೆ ..

-ಶಿವಸುಂದರ್

( ನಕ್ಬಾ
-1948ರಲ್ಲಿ ಇಸ್ರೇಲಿ ಸರಕಾರ, ಉಗ್ರ ಜನಾಂಗೀಯವಾದಿ ಯೆಹೂದಿ ಜಿಯೋನಿಷ್ಟರು ಫೆಲೆಸ್ತೀನಿಯರು ವಾಸಿಸುತ್ತಿದ್ದ ಹಳ್ಳಿಗಳ ಮೇಲೆ ಸಶಸ್ತ್ರ ದಾಳಿ ನಡೆಸಿ ಕಗ್ಗೋಲೆ, ದರೋಡೆಗಳನ್ನು ನಡೆಸಿ ಕನಿಷ್ಠ 3 ಲಕ್ಷ ಫೆಲೆಸ್ತೀನಿಯರನ್ನು ಹೊರದಬ್ಬಿ ಅವರ ಹಳ್ಳಿ ನಗರಗಳನ್ನು ಇಸ್ರೇಲಿಗೆ ಸೇರಿಸಿಕೊಂಡರು…

ಫೆಲೆಸ್ತೀನಿಯರು ಇದನ್ನು ನಕ್ಖಾ – ವಿಪತ್ತು (catastrophe) ಎನ್ನುತ್ತಾರೆ…

ಅಂದು ಪ್ರಾರಂಭವಾದ ನಕ್ಬಾ ಕಳೆದ 75 ವರ್ಷಗಳಿಂದ ನಿರಂತರವಾಗಿ ನಡೆಯುತ್ತಲೇ ಇದೆ..ಈಗ ತಾರಕಕ್ಕೇರಿದೆ…ಇಸ್ರೇಲ್ ಇಡೀ ಗಾಜಾವನ್ನು ನೆಲಸಮ ಮಾಡಿದೆ… 42000 ಕ್ಕು ಹೆಚ್ಚಿ ಅಮಾಯಕರನ್ನು ಕೊಂದಿದೆ.. ಜಗತ್ತು ಮೌನವಾಗಿದೆ..)

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!