Saturday, October 19, 2024

ಪ್ರಾಯೋಗಿಕ ಆವೃತ್ತಿ

ಜಾತಿಗಣತಿ ಬಿಡುಗಡೆ ಮಾಡದಂತೆ ಸಿದ್ದರಾಮಯ್ಯ ಅವರನ್ನು ಹಿಡಿದುಕೊಂಡವರು ಯಾರು? ; ಹೆಚ್.ಡಿ.ಕುಮಾರಸ್ವಾಮಿ

ಮುಡಾ ಹಗರಣದಿಂದ ಜನರ ಗಮನ ಬೇರೆಡೆಗೆ ಸೆಳೆಯಲು ಜಾತಿಗಣತಿ ವಿಷಯವನ್ನು ಮುನ್ನಲೆಗೆ ತಂದು ನಾಟಕ ಆಡಲಾಗುತ್ತಿದೆ ಎಂದು ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್ ಡಿ ಕುಮಾರಸ್ವಾಮಿ ದೂರಿದರು.

ಬೆಂಗಳೂರಿನ ತಮ್ಮ ನಿವಾಸದ ಬಳಿ ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, “ಸರ್ಕಾರದ ವಿರುದ್ಧ ಗುರುತರ ಆರೋಪಗಳು ಕೇಳಿ ಬಂದಾಗಲೆಲ್ಲ ಜನರ ಗಮನ ಬೇರೆಡೆಗೆ ಹೊರಳಿಸಲು ತಂತ್ರಗಾರಿಕೆ ಮಾಡುತ್ತಿದ್ದಾರೆ. ಈಗ ಮುಡಾ ಹಗರಣದ ಮೂಲಕ ಜನರ ದಿಕ್ಕು ತಪ್ಪಿಸಲು ಜಾತಿಗಣತಿಯ ವಿಚಾರವನ್ನು ಮುಂದಕ್ಕೆ ತಂದಿದೆ” ಎಂದು ಆರೋಪಿಸಿದರು.

ಕಾಂತರಾಜು ಆಯೋಗ ರಚನೆ ಮಾಡಿದ್ದು 10 ವರ್ಷಗಳ ಹಿಂದೆ. ಈಗ ಆ ವರದಿಗೆ 10 ವರ್ಷ ಆಗಿ ಹೋಗಿದೆ. 10 ವರ್ಷಗಳಲ್ಲಿ ಅನೇಕ ಬೆಳವಣಿಗೆಗಳು ಆಗಿವೆ. ಹಳೆಯ ಜಾತಿಗಣತಿ ವರದಿಯನ್ನು ಇಷ್ಟು ದಿನ ಯಾಕೆ ಬಿಡುಗಡೆ ಮಾಡಿರಲಿಲ್ಲ’ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

‘ಕುಮಾರಸ್ವಾಮಿ ಜಾತಿಗಣತಿ ವರದಿಯನ್ನು ಬಿಡುಗಡೆ ಮಾಡಲು ಬಿಡಲಿಲ್ಲ ಎಂದು ನನ್ನ ಮೇಲೆ ಆರೋಪ ಮಾಡುತ್ತಲೇ ಇದ್ದಾರೆ. ಲೋಕಸಭೆ ಚುನಾವಣೆಗೆ ಮೊದಲೇ ಸಿದ್ದರಾಮಯ್ಯ ಅವರ ಕೈಗೆ ಜಾತಿಗಣತಿ ವರದಿ ಕೊಡಲಾಗಿದೆ ಅಲ್ಲವೇ? ಲೋಕಸಭೆ ಚುನಾವಣೆ ಮೊದಲೇ ವರದಿ ಪಡೆದರೂ ಇಷ್ಟು ದಿನಗಳವರೆಗೂ ಅದರ ಬಗ್ಗೆ ಸದ್ದೇ ಇರಲಿಲ್ಲ” ಎಂದು ಕೇಳಿದರು.

“ಜಾತಿಗಣತಿ ವರದಿ ಜಾರಿ ಮಾಡದಂತೆ ಸಿದ್ದರಾಮಯ್ಯ ಅವರನ್ನು ಹಿಡಿದುಕೊಂಡವರು ಯಾರು? ನನ್ನ ಬಗ್ಗೆ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ವರದಿ ಸ್ವೀಕಾರ ಮಾಡಿ ಎಷ್ಟು ದಿನವಾಯಿತು? ಇನ್ನೂ ಯಾಕೆ ಇಟ್ಟುಕೊಂಡು ಕೂತಿದ್ದಾರೆ? ಇಷ್ಟು ದಿನ ಸದ್ದುಗದ್ದಲ ಇರಲಿಲ್ಲ. ಈಗ ಈ ವಿಷಯ ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ’ ಎಂದರು.

ಜಾತಿ ಗಣತಿ ವರದಿ ಇಟ್ಟುಕೊಂಡು ಚುನಾವಣೆಗೆ ಹೋಗಿ

“ಜಾತಿಗಣತಿ ವರದಿ ಇಟ್ಟುಕೊಂಡು ರಾಜಕೀಯ ಮಾಡುತ್ತೀರಿ, ಈ ವಿಷಯ ಇಟ್ಟುಕೊಂಡು ಚುನಾವಣೆ ಹೋಗಿ ನೋಡೋಣ” ಎಂದು ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!