Friday, October 18, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ ಜಿಲ್ಲೆಯು ವೈವಿಧ್ಯಮಯ ಕಲೆಗಳ ನೆಲ: ಪತ್ರಕರ್ತ ಯೋಗೇಶ್

ಮಂಡ್ಯ ಜಿಲ್ಲೆಯು ರಾಜಕಾರಣವಷ್ಟೇ ಅಲ್ಲದೇ ಜಾನಪದ, ರಂಗಭೂಮಿ, ಪೌರಾಣಿಕ ಕಲೆಗಳು ಜೀವಂತವಾಗಿರುವ ನೆಲವಾಗಿದೆ ಎಂದು ಪತ್ರಕರ್ತ ಎಂ.ಎಸ್.ಯೋಗೇಶ್ ಅಭಿಪ್ರಾಯಪಟ್ಟರು.

ಮಂಡ್ಯನಗರ ವಿವೇಕಾನಂದ ರಂಗಮಂದಿರದಲ್ಲಿ ನೆಲದನಿ ಬಳಗ ಆಯೋಜಿಸಿದ್ದ ‘ತಿಂಡಿಗೆ ಬಂದ ತುಂಡೇರಾಯ’ ನಾಟಕ ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಮಂಡ್ಯ ಜಿಲ್ಲೆಯಲ್ಲಿ ಸುಮಾರು7 ವರ್ಷಗಳ ಕಾಲ ಪ್ರಜಾವಾಣಿ ವರದಿಗಾರನಾಗಿ ಕಾರ್ಯನಿರ್ವಹಿಸಿದ ಸಂದರ್ಭದಲ್ಲಿ ಮಂಡ್ಯದ ಬಗ್ಗೆ ಹಲವು ವಿಚಾರಗಳು ಗಮನಕ್ಕೆ ಬಂದಿವೆ. ನಾನು ವಿವಿಧ ವರದಿಗಳನ್ನು ಮಾಡಿದಾಗ ಅವುಗಳನ್ನು ಓದಿ, ಪ್ರೋತ್ಸಾಹಿಸಿ, ಅಭಿನಂದಿಸಿದ ಜನರನ್ನು ಕಂಡಿದ್ಧೇನೆ, ನೇರವಾಗಿ ನನ್ನ ಪರಿಚಯ ಇಲ್ಲದವರು, ನನ್ನನ್ನು ಅಭಿನಂದಿಸಿರುವುದು ಇಲ್ಲಿನ ಜನರ ಗುಣವನ್ನು ಎತ್ತಿ ತೋರಿಸುತ್ತದೆ ಎಂದು ಸ್ಮರಿಸಿದರು.

ಎಂ.ಎಸ್.ಯೋಗೇಶ್ ಅವರ ಪರಿಚಯ

ಮಂಡ್ಯ ಜಿಲ್ಲೆ, ಕೆ.ಆರ್. ಪೇಟೆ ತಾಲ್ಲೂಕು, ಸಂತೇಬಾಚಹಳ್ಳಿ ಹೋಬಳಿ, ಮಾರೇನಹಳ್ಳಿ ಗ್ರಾಮದ ಇವರು ನಿವೃತ್ತ ಮುಖ್ಯ ಶಿಕ್ಷಕ ಡಿ.ಎಂ. ನಂಜಪ್ಪ ಹಾಗೂ ನಾಗಮ್ಮ ದಂಪತಿಯ ಪುತ್ರ. ಯೋಗೇಶ್ ಮಾರೇನಹಳ್ಳಿ ಓದಿದ್ದು ಕಾನೂನು ಸ್ನಾತಕೋತ್ತರ ಪದವಿ, ಕೋಟು ಧರಿಸುವ ಬದಲು ಹಿಡಿದದ್ದು ಪೆನ್ನು ಕೆಲಕಾಲ ಕಾನೂನು ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ಅವರು ‘ವೀಕ್ ಎಂಡ್ ಡೈರಿ’ ಇಂಗ್ಲಿಷ್ ವಾರಪತ್ರಿಕೆಯ ಮೂಲಕ ಪತ್ರಿಕೋದ್ಯಮ ಪ್ರವೇಶಿಸಿದರು. ನಂತರ ‘ಸಂಜೆನುಡಿ’ಯಲ್ಲಿ ಒಂದು ವರ್ಷ, ‘ಉದಯವಾಣಿ’ ಯಲ್ಲಿ 6 ವರ್ಷ ಕೆಲಸ ಮಾಡಿದರು. ಉದಯವಾಣಿಯಲ್ಲಿ ಸಂವಹನ, ಸಮ್ಮುಖ, ಬಾನಿಗೆ ಏಣಿ ಅಂಕಣಗಳ ಮೂಲಕ ಪ್ರಸಿದ್ದಿ ಪಡೆದರು. 2010ರಲ್ಲಿ ಉಪ ಸಂಪಾದಕರಾಗಿ ‘ಪ್ರಜಾವಾಣಿ’ ಸೇರಿದ ಯೋಗೇಶ್ ಹುಬ್ಬಳ್ಳಿಯಲ್ಲಿ 6 ವರ್ಷ ಕೆಲಸ ಮಾಡಿದರು.

ಹುಬ್ಬಳ್ಳಿಯಿಂದ ಬರೆಯುತ್ತಿದ್ದ ಏನ್ ಸಮಾಚಾರ, ನೋಡಿರೇನು ಇವ್ರನ್ನ, ಬಾನುಲಿ ಭಿತ್ತಿಯಿಂದ ಅಂಕಣಗಳು ಅವರಿಗೆ ಹೆಸರು ತಂದುಕೊಟ್ಟವು. ಧಾರವಾಡ ಆಕಾಶವಾಣಿ ಹಾಗೂ ಧಾರವಾಡ ಜಿಲ್ಲಾ ಕಸಾಪ ಇವರ ‘ಭಾನುಲಿ ಬಿತ್ತಿಯಿಂದ’ ಪುಸ್ತಕ ಪ್ರಕಟಿಸಿದೆ.

ಮಳವಳ್ಳಿಯ ಕಲ್ಮನೆ ಕಾಮೇಗೌಡ ಪರಿಸರ ಸೇವೆಗೆ ‘ಜೀವಸೆಲೆ ಕಾಮೇಗೌಡ’ಪುಸ್ತಕ ರೂಪ ಕೊಟ್ಟಿದ್ದಾರೆ. ಈ ಪುಸ್ತಕ ಮಂಡ್ಯ ವಿವಿಯ ಪಠ್ಯವೂ ಆಗಿದೆ.

ರಂಗಭೂಮಿ ಹಿನ್ನೆಲೆ ಹೊಂದಿರುವ ಯೋಗೇಶ್ ಮೈಸೂರು ರಂಗಾಯಣದ ‘ಭಾರತೀಯ ರಂಗಶಿಕ್ಷಣ ಕೇಂದ್ರ’ದಲ್ಲಿ ತರಬೇತಿ ಪಡೆದಿದ್ದಾರೆ. ರಂಗಾಯಣದ ‘ಜತೆಗಿರುವನು ಚಂದಿರ’ ನಾಟಕದಲ್ಲಿ ಅಭಿನಯಿಸಿದ್ದಾರೆ. ‘ನಟನ’ ಸಂಸ್ಥೆಯ ಸಾಂಬಶಿವ ಪ್ರಹಸನ, ಒಂದು ಸೈನಿಕ ವೃತ್ತಾಂತ, ನಮ್ಮಪ್ಪ, ಏಕಲವ್ಯ, ‘ಅಮರ ಕಲಾಸಂಘ’ದ ತುಘಲಕ್, ಸೂರ್ಯ ಶಿಕಾರಿ, ಉದ್ಭವ, ‘ಕದಂಬ ರಂಗವೇದಿಕೆ’ಯ ಆಷಾಡದ ಒಂದು ದಿನ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಉಡುಪಿಯ ‘ರಂಗಭೂಮಿ’ ಸಂಸ್ಥೆಯ ಪ್ರಶಸ್ತಿಯನ್ನೂ ಪಡೆದಿದ್ದಾರೆ.

ಕಲೆ, ರಂಗಭೂಮಿ, ಸಂಗೀತದ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಯೋಗೇಶ್ ಪ್ರಜಾವಾಣಿಗೆ ನೂರಾರು ಲೇಖನ ಬರೆದಿದ್ದಾರೆ. ಜಿಲ್ಲಾ ವರದಿಗಾರರಾಗಿ ಮಂಡ್ಯ ಜಿಲ್ಲೆಯ ರಾಜಕಾರಣ, ಸಾಮಾಜಿಕ ಸಮಸ್ಯೆ, ಅಭಿವೃದ್ಧಿ ವಿಚಾರಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಮಂಡ್ಯದಲ್ಲಿ 7 ವರ್ಷ ಕರ್ತವ್ಯ ನಿರ್ವಹಿಸಿ ಈಗ ಚಿತ್ರದುರ್ಗದಲ್ಲಿ ಹಿರಿಯ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ.

ಅವರಿಗೆ ಡಾ.ಅರ್ಜುನಪುರಿ ಅಪ್ಪಾಜಿಗೌಡ ಪ್ರಶಸ್ತಿ, ಕಸಾಪ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಬಿ.ಪಿ.ಮಂಡಲ್, ಪಟೇಲ್ ಭೈರಹನುಮಯ್ಯ ಮಾನವೀಯ ವರದಿ ಪ್ರಶಸ್ತಿ, ಕರ್ನಾಟಕದ ಸಂಘದ ಪ್ರಶಸ್ತಿಗಳು ಸಂದಿವೆ. ಇವರ ಸಮಾಜಮುಖಿ ಸೇವೆ ಮಾಡುತ್ತಿರುವುದನ್ನು ಮನಗಂಡು ‘ನೆಲದನಿ ಬಳಗ’, ಮಂಗಲ, ಮಂಡ್ಯ, ಇವರ ವತಿಯಿಂದ ಶ್ರೀಯುತರನ್ನು ಗೌರವಪೂರ್ವಕವಾಗಿ ಅಭಿನಂದಿಸಲಾಗಿದೆ.

ಸಾಂಸ್ಕೃತಿಕವಾಗಿಯೂ ಜೀವಂತವಾಗಿರುವ ಮಂಡ್ಯ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸಿದ್ದಕ್ಕೆ ಸಂತೋಷವಿದೆ, ಇಲ್ಲಿನ ಜನರ ಪ್ರೀತಿಗೆ ಅಭಿನಂದಿಸುತ್ತೇನೆ, ನಾನು ಇಲ್ಲಿಂದ ವರ್ಗವಾಗಿ ಹೋದ 4 ತಿಂಗಳ ನಂತರವು ನನ್ನನ್ನು ನೆನಪಿಸಿಕೊಂಡು ಕರೆಸಿ ಅಭಿನಂದಿಸುತ್ತಿರುವುದಕ್ಕೆ ನೆಲದನಿ ಬಳಗಕ್ಕೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.

ಕೊಬ್ಬರಿ- ಬೆಲ್ಲ ತಿನ್ನುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ವೇದಿಕೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು,ಅಲಯನ್ಸ್ ಸಂಸ್ಥೆ ಅಧ್ಯಕ್ಷ ಕೆ ಟಿ ಹನುಮಂತು, ನಾಲ್ವಡಿ ಕೃ‍ಷ್ಣರಾಜ ಒಡೆಯರ್ ಟ್ರಸ್ಟ್ ಅಧ್ಯಕ್ಷ ತಗ್ಗಳ್ಳಿ ವೆಂಕಟೇಶ್, ಸಮಾನ ಮನಸ್ಕರ ವೇದಿಕೆಯ ಅಧ್ಯಕ್ಷ ಮುಕುಂದ, ಕೋಮಲ್ ಕುಮಾರ್, ವಿನಯ್ ಕುಮಾರ ಹಾಗೂ ಉಮಾ ನರೇಂದ್ರಬಾಬು, ನೆಲದನಿ ಬಳಗದ ರುಕ್ಮಿಣಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!