Saturday, October 19, 2024

ಪ್ರಾಯೋಗಿಕ ಆವೃತ್ತಿ

ಮೊದಲ ಸಂಪುಟ ಸಭೆಯಲ್ಲೇ ರಾಜ್ಯದ ಸ್ಥಾನಮಾನಕ್ಕಾಗಿ ನಿರ್ಣಯ : ಉಮರ್ ಅಬ್ದುಲ್ಲಾ

ಜಮ್ಮು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ನೀಡುವಂತೆ ಆಗ್ರಹಿಸುವುದು ನಮ್ಮ ಸಂಪುಟ ಸಭೆಯ ಮೊದಲ ತೀರ್ಮಾನವಾಗಲಿದೆ ಎಂದು ನ್ಯಾಶನಲ್ ಕಾನ್ಫರೆನ್ಸ್ (ಎನ್‌ಸಿ) ಉಪಾಧ್ಯಕ್ಷ ಉಮರ್ ಅಬ್ದುಲ್ಲಾ ಬುಧವಾರ ಹೇಳಿದ್ದಾರೆ. ಈ ನಿರ್ಣಯವನ್ನು ಬಳಿಕ ಪ್ರಧಾನಿ ನರೇಂದ್ರ ಮೋದಿಯವರ ಬಳಿಕ ಒಯ್ಯಲಾಗುವುದು ಎಂದು ತಿಳಿಸಿದ್ದಾರೆ.

ಸಂವಿಧಾನದ 370ನೇ ವಿಧಿಯ ರದ್ದತಿ ಬಳಿಕ ಜಮ್ಮು ಕಾಶ್ಮೀರ ಕಳೆದುಕೊಂಡಿರುವ ರಾಜ್ಯದ ಸ್ಥಾನಮಾನವನ್ನು ಮರಳಿ ಕೊಡಬೇಕು ಎನ್ನುವುದು ನಮ್ಮ ದೀರ್ಘಕಾಲದ ಬೇಡಿಕೆ ಎಂದಿದ್ದಾರೆ.

“ನಮ್ಮ ಸಂಪುಟದ ಮೊದಲ ನಡಾವಳಿ ರಾಜ್ಯದ ಸ್ಥಾನಮಾನವನ್ನು ಮರಳಿ ನೀಡುವಂತೆ ಒತ್ತಾಯಿಸುವ ನಿರ್ಣಯವನ್ನು ಆಂಗೀಕರಿಸುವುದು. ಯಾರೇ ಮುಖ್ಯಮಂತ್ರಿಯಾದರೂ, ಆ ನಿರ್ಣಯದೊಂದಿಗೆ ದೆಹಲಿಗೆ ತೆರಳಿ, ತಮ್ಮ ಭರವಸೆಯನ್ನು ಈಡೇರಿಸುವಂತೆ ದೇಶದ ಹಿರಿಯ ನಾಯಕತ್ವವನ್ನು ಒತ್ತಾಯಿಸುವರು. ಜಮ್ಮು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಎನ್ನುವುದು ಇಡೀ ರಾಜ್ಯಕ್ಕೆ ನೀಡಿದ ಭರವಸೆ. ಯಾವುದೇ ಪಕ್ಷ ಅಥವಾ ಸರ್ಕಾರಕ್ಕೆ ನೀಡಿದ ಭರವಸೆಯಲ್ಲ” ಎಂದು ಉಮರ್ ಅಬ್ದುಲ್ಲಾ ಹೇಳಿದ್ದಾರೆ.

ಸಂವಿಧಾನದ 370ನೇ ವಿಧಿ ಬಗ್ಗೆ ಪ್ರಸ್ತಾವಿಸಿದ ಅವರು, “ನಾವು ತಕ್ಷಣಕ್ಕೆ ನೀಡಲಾಗದ ಭರವಸೆಯನ್ನು ನೀಡುವ ಮೂಲಕ ನಾವು ಜನರನ್ನು ಮೂರ್ಖರನ್ನಾಗಿಸುವುದಿಲ್ಲ. ಆದಾಗ್ಯೂ 370ನೇ ವಿಧಿ ಬಗ್ಗೆ ಮಾತುಕತೆ ಮುಂದುವರಿಸುತ್ತೇವೆ ಹಾಗೂ ರಾಷ್ಟ್ರಮಟ್ಟದಲ್ಲಿ ಭವಿಷ್ಯದ ಸರ್ಕಾರ, ಈ ವಿಚಾರದಲ್ಲಿ ನಮ್ಮ ಜೊತೆಗೆ ಇರಲು ಬಯಸಬಹುದು” ಎಂಬ ಆಶಯ ವ್ಯಕ್ತಪಡಿಸಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿದ ಬಳಿಕ ಸರ್ಕಾರ ರಚನೆಯ ಪ್ರಕ್ರಿಯೆ ಪ್ರಾರಂಭಿಸಲು ಉಮರ್ ಅಬ್ದುಲ್ಲಾ ಇಂದು ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ.

ವಿಧಾನಸಭೆ ಚುನಾವವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷ 42 ಮತ್ತು ಕಾಂಗ್ರೆಸ್ 6 ಸೇರಿ ಮೈತ್ರಿ ಒಟ್ಟು 48 ಸ್ಥಾನಗಳನ್ನು ಪಡೆದಿದ್ದು ಸರ್ಕಾರ ರಚಿಸಲು ಅಣಿಯಾಗಿದೆ. ಉಮರ್ ಅಬ್ದುಲ್ಲಾ ಅವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಅವರ ತಂದೆ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಘೋಷಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!