Friday, October 18, 2024

ಪ್ರಾಯೋಗಿಕ ಆವೃತ್ತಿ

ರೈಲು ಅಪಘಾತ| ಇನ್ನೆಷ್ಟು ಕುಟುಂಬಗಳು ಬಲಿಯಾಗಬೇಕು ; ರಾಹುಲ್ ಗಾಂಧಿ ವಾಗ್ದಾಳಿ

ತಮಿಳುನಾಡಿನಲ್ಲಿ ಸಂಭವಿಸಿದ ರೈಲು ಅಪಘಾತಕ್ಕೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶನಿವಾರ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಹಲವಾರು ಅಪಘಾತಗಳಲ್ಲಿ ಅನೇಕ ಜೀವಗಳನ್ನು ಕಳೆದುಕೊಂಡಿದ್ದರೂ, ಯಾವುದೇ ಪಾಠ ಕಲಿತಿಲ್ಲ. ಇನ್ನೂ ಎಷ್ಟು ಕುಟುಂಬಗಳು ಬಲಿಯಾಗಬೇಕು? ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಜವಾಬ್ದಾರಿಯು ಮೇಲ್ಭಾಗದಿಂದ (ಕೇಂದ್ರದಿಂದ) ಪ್ರಾರಂಭವಾಗುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದು, ರೈಲು ಅಪಘಾತಗಳು ಸಂಭವಿಸಿದಾಗ ಅದನ್ನು ಕೆಳ ಹಂತದ ಸಿಬ್ಬಂದಿಯ ತಲೆಗೆ ಕಟ್ಟಬೇಡಿ ಎಂದಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ರಾಹುಲ್ ಗಾಂಧಿ, “ಮೈಸೂರು-ದರ್ಭಾಂಗ ರೈಲು ಅಪಘಾತವು ಭೀಕರವಾದ ಬಾಲಸೋರ್ ಅಪಘಾತವನ್ನು ಪ್ರತಿಬಿಂಬಿಸುತ್ತದೆ. ಒಂದು ಪ್ಯಾಸೆಂಜರ್ ರೈಲು ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಹಲವಾರು ಅಪಘಾತಗಳಲ್ಲಿ ಅನೇಕ ಜೀವಗಳನ್ನು ಕಳೆದುಕೊಂಡರೂ, ಕೇಂದ್ರ ಸರ್ಕಾರ ಯಾವುದೇ ಪಾಠಗಳನ್ನು ಕಲಿತಿಲ್ಲ. ಉತ್ತರದಾಯಿತ್ವವು ಮೇಲ್ಭಾಗದಿಂದ ಪ್ರಾರಂಭವಾಗುತ್ತದೆ. ಈ ಸರ್ಕಾರವು ಎಚ್ಚೆತ್ತುಕೊಳ್ಳುವ ಮೊದಲು ಇನ್ನೂ ಎಷ್ಟು ಕುಟುಂಬಗಳು ಬಲಿಯಾಗಬೇಕು? ಎಂದು ಬರೆದುಕೊಂಡಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ರೈಲು ಅಪಘಾತಕ್ಕೆ ಸಂಬಂಧಿಸಿದಂತೆ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

“ರೈಲು ಅಪಘಾತಗಳು ದೇಶದಲ್ಲಿ ತುಂಬಾ ಸಾಮಾನ್ಯವಾಗಿದೆ. ಒಂದರ ನಂತರ ಒಂದರಂತೆ ಸಂಭವಿಸುತ್ತಿದ್ದರೂ, ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ. ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ” ಎಂದು ಅವರು ತಮ್ಮ ವಾಟ್ಸಾಪ್ ಚಾನೆಲ್‌ನಲ್ಲಿ ಹಿಂದಿಯಲ್ಲಿ ಪೋಸ್ಟ್ ಮಾಡಿದ್ದಾರೆ.

“ಸುರಕ್ಷಿತ ರೈಲು ಪ್ರಯಾಣದ ಹೊಣೆಗಾರಿಕೆಯ ಬಗ್ಗೆ ಸರ್ಕಾರ ತಲೆ ಕೆಡಿಸಿಕೊಳ್ಳದ ಕಾರಣ, ದೇಶದ ಕೋಟಿಗಟ್ಟಲೆ ಜನ ಸಾಮಾನ್ಯರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಭಯ ಮತ್ತು ಅವ್ಯವಸ್ಥೆಯ ಚಕ್ರಗಳ ಮೇಲೆ ಓಡುವ ರೈಲುಗಳಲ್ಲಿ ಪ್ರಯಾಣಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಮತ್ತೊಮ್ಮೆ, ತಮಿಳುನಾಡಿನಲ್ಲಿ ಮೈಸೂರು-ದರ್ಭಾಂಗ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬಾಲಸೋರ್‌ನಂತಹ ಅಪಘಾತ ಸಂಭವಿಸಿದೆ” ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ಚೆನ್ನೈ ಸಮೀಪದ ಕವರೈಪೆಟ್ಟೈ ರೈಲು ನಿಲ್ದಾಣದ ಬಳಿ ನಿಂತಿದ್ದ ಗೂಡ್ಸ್ ರೈಲಿಗೆ ಮೈಸೂರು-ದರ್ಭಾಂಗ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ 19 ಪ್ರಯಾಣಿಕರು ಗಾಯಗೊಂಡಿದ್ದಾರೆ.

ನಿನ್ನೆ(ಅ.11) ರಾತ್ರಿ 8:30ರ ಸುಮಾರಿಗೆ ಚೆನ್ನೈ-ಗುಡೂರು ವಿಭಾಗದ ಪೊನ್ನೇರಿ ಮತ್ತು ಕವರೈಪ್ಪೆಟ್ಟೈ ನಡುವೆ ಸಂಭವಿಸಿದ ಈ ಅಪಘಾತದಲ್ಲಿ ಪ್ಯಾಸೆಂಜರ್ ರೈಲಿನ 12 ರಿಂದ 13 ಬೋಗಿಗಳು ಹಳಿ ತಪ್ಪಿವೆ.

ರೈಲ್ವೆ ಅಧಿಕಾರಿಗಳ ಪ್ರಕಾರ, ಗಂಟೆಗೆ 75 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದ ಎಕ್ಸ್‌ಪ್ರೆಸ್ ರೈಲು, ಮುಖ್ಯ ಮಾರ್ಗದ ಬದಲಿಗೆ ಲೂಪ್ ಲೈನ್ ಅನ್ನು ತಪ್ಪಾಗಿ ಪ್ರವೇಶಿಸಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಗೂಡ್ಸ್‌ ರೈಲಿನಲ್ಲಿದ್ದ ಪಾರ್ಸೆಲ್ ವ್ಯಾನ್‌ಗೆ ಬೆಂಕಿ ಹೊತ್ತಿಕೊಂಡಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!